ಹ್ಯಾಪಿ ಟು ಬ್ಲೀಡ್ ಎಂಬ ಘೋಷಣೆ, ದೇವಸ್ಥಾನಕ್ಕೆ ಹೋಗಿಯೇ ಸಿದ್ಧ ಎಂಬ ಪ್ರತಿಪಾದನೆಗಳಿಂದ ಸಾಧ್ಯವೇ ಸಮಾನತೆ?

author-geethaFacebookನಲ್ಲಿ ಹದಿನೈದಿಪ್ಪತ್ತು ದಿನದ ಕೆಳಗೆ “happy to bleed” ಅಂತ ಸ್ಲೋಗನ್ನು ಹಲವು ಮಹಿಳೆಯರ wall ಮೇಲೆ ರಾರಾಜಿಸುತ್ತಿತ್ತು. ಮೊದಲು ಅರ್ಥವಾಗಲ್ಲಿಲ್ಲ. ಏನು happy to bleed ಅಂದರೆ..? ಸೇನೆಗೆ ಸೇರಿ, ಯುದ್ಧದಲ್ಲಿ ಹೋರಾಡಿ ರಕ್ತ ಹರಿಸಲು ಈ ಹೆಣ್ಣು ಮಕ್ಕಳು ಪಣ ತೊಡುತ್ತಿದ್ದಾರೆಯೇ ಎಂಬ  ಆಲೋಚನೆ ಅರೆಕ್ಷಣ ಬಂದು ಹೋಯಿತು. ಪೂರ ಓದಿದಾಗ ತಿಳಿಯಿತು, ಇದು ಮುಟ್ಟಿನ ರಕ್ತಸ್ರಾವದ ಬಗ್ಗೆ ಎಂದು.

ಶಬರಿಮಲೈ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರೊಬ್ಬರು ತಲೆ ಕೆಟ್ಟು ಹೇಳಿಕೆಯೊಂದನ್ನು ಕೊಟ್ಟಿದ್ದರು. ದೇವಸ್ಥಾನದ ಆವರಣ ಪ್ರವೇಶಿಸುವಲ್ಲಿ ಒಂದು ಯಂತ್ರವನ್ನು ಇಟ್ಟು ಮುಟ್ಟಾಗಿರುವ ಮಹಿಳೆಯರನ್ನು ಗುರುತಿಸಿ ಆವರು ಪ್ರವೇಶಿಸದಂತೆ ತಡೆಯುತ್ತೇವೆ ಎಂಬುದೇ ಆ ಹೇಳಿಕೆ.

ಋತುಮತಿಯಾಗದ ಹೆಣ್ಣು ಮಕ್ಕಳು, ಮೆನೋಪಾಸ್ ಆಗಿರುವ ಮಹಿಳೆಯರು ಮಾತ್ರ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗಬಹುದು ಎಂಬುಂದು ಅಲ್ಲಿಯ ಲಿಖಿತ ಅಥವಾ ಅಲಿಖಿತ ಶಾಸನ. ಮಾರು ಬಿಡು ಅಂದರೆ ಮೈಲಿ ಬಿಡುವ ನನ್ನಂತವರಿಗೆ ಇದು ಸ್ವಾಭಿಮಾನದ ಪ್ರಶ್ನೆ. ನಾನು ಬೇಡ ಎನ್ನುವ ಕಡೆ ನನ್ನ ನೆರಳೂ ಹೋಗಲು ಬಿಡುವುದಿಲ್ಲ. ಆದರೆ ಸಮಾನತೆಯ ಕೂಗು ಜ್ವಲಂತವಾಗಿರುವ ಈ ಕಾಲದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಅಂದೆಡೆ ಹೋಗಲೇಬೇಕು ಎಂಬ ತುಡಿತ, ಮುಟ್ಟಿನ ಮಹಿಳೆಯರು ಬರಬೇಡಿ ಎಂದಾಗ ಮುಟ್ಟಾದಾಗಲೇ ಹೋಗಬೇಕು ಎನ್ನುವ ನಿರ್ಧಾರ, ಹಠ ನಾನು ಒಪ್ಪದಿದ್ದರೂ ಅರ್ಥ ಮಾಡಿಕೊಳ್ಳಬಲ್ಲೆ, ಬೇಡ ಎಂದಿದ್ದನ್ನು ಮಾಡುವ ತವಕ ಸಾಮಾನ್ಯ.

ದೇವರನ್ನೇ ನಂಬದ, ಸಾಮಾನ್ಯವಾಗಿ ದೇವಸ್ಥಾನಕ್ಕೇ ಹೋಗದ ಮಹಿಳೆಯರೇ ‘ಮುಟ್ಟಾದ ದಿನಗಳಲ್ಲಿಯೇ ದೇವಾಸ್ಥನಕ್ಕೆ ಹೋಗುತ್ತೇವೆ.. ಕೇಳಲು ನೀವು ಯಾರು ? ಮಲಿನ ಎನ್ನುವುದು ನಿಮ್ಮ ತಲೆಯಲ್ಲಿದೆ. ದೇವಸ್ಥಾನದ ಮಡಿ, ದೇವರ ನಿಷ್ಠೆ ಮುಟ್ಟಾದ ಮಹಿಳೆಯಿಂದ ನಾಶವಾಗುವುದಾದರೆ ಅದ್ಯಾವ ಮಹಾನ್ ಮಡಿ? ಅದೆಂತಹ ಅಪಕ್ವ ನಿಷ್ಠೆ?’ ಎಂದು ಪ್ರಶ್ನಿಸುತ್ತಿದ್ದಾರೆ.

‘ವಸ್ತು ಸ್ಥಿತಿ ನಿಮಗೆ ಗೊತ್ತಿಲ್ಲ.. ಇದು ದೇವರ ಮುಡಿ ಮೈಲಿಗೆಯ ಪ್ರಶ್ನೆಯಲ್ಲ. ಶಬರಿಮಲೈಗೆ ಹೋಗುವ ದಾರಿ ದುರ್ಗಮವಾಗಿದೆ. ಈಗ ಎಷ್ಟೋ ವಾಸಿ. ಆದರೂ ತುಂಬಾ ಕಷ್ಟದ ಹಾದಿ. ಮಹಿಳೆಯರಿಗೆ ಕ್ರಮಿಸುವುದು ಕಷ್ಟ. ಜೊತೆಗೆ ಗಂಡಸರು ಹೆಚ್ಚು ಮಂದಿ ಇರುತ್ತಾರೆ. ಹೆಣ್ಣು ಮಕ್ಕಳ ಮೇಲೆ ಆಕ್ರಮಣ ಮಾಡಿದರೆ ಕಷ್ಟ. ಅದಕ್ಕೆ ಹೆಣ್ಣು ಮಕ್ಕಳು ಬೇಡ.. ಅವರು ಹಾಯಾಗಿ ಮನೆಯಲ್ಲೇ ಪೂಜೆ ಮಾಡಿಕೊಂಡು ಇರಲಿ.. ವ್ರತ ಹಿಡಿದು ಹೋಗಿ ಬರುವ ಅವರ ಪತಿಯ ಸೇವೆ ಮಾಡಿದರೆ ಸಾಕು.. ಪುಣ್ಯದ ಫಲ ದಕ್ಕುತ್ತದೆ..’ ಎಂದು ಉದ್ದಕ್ಕೆ ಸಮಜಾಯಿಷಿ ಯಾರಿಗೆ ಬೇಕು.?

ಆದರೆ ‘ಹ್ಯಾಪಿ ಟು ಬ್ಲೀಡ್’ ಯಾಕೆ ? ‘ಬಿ ಸ್ಯಾಡ್ ಟು ಬ್ಲೀಡ್’ ಅಂತ ಯಾರು ಹೇಳಿದ್ರು? ‘ಅವಳು ಹ್ಯಾಪಿ ಟು ಬ್ಲೀಡ್ ಅಂತ ಹಾಕಿಕೊಂಡಳಲ್ಲ.. ಅದನ್ನು ಓದಿ ಅವಳ ಬಾಯ್ ಫ್ರೆಂಡ್ಸ್ ಎಲ್ಲಾ ಹ್ಯಾಪಿ ಆದ್ರು.. ಏನೂ ಅವಘಡ ಸಂಭವಿಸಿಲ್ಲವಲ್ಲ ಅಂತ’ ಎಂದು ನನ್ನ ಬಳಿಯೇ ಒಬ್ಬರೂ ವ್ಯಂಗ್ಯವಾಗಿ ಅಂದರು.. ‘ಓ..  ಹ್ಯಾಪಿ ಟು ಬ್ಲೀಡ್ ಅಂತೆ … ಆಕೆಯ ಮುಟ್ಟು ನಿಂತೇ ಹತ್ತು ವರ್ಷವಾಗಿರಬೇಕು..’ ಇನ್ನೊಬ್ಬಾಕೆ inboxನಲ್ಲಿ ವ್ಯಂಗ್ಯವಾಗಿ ಮೆಸೇಜ್ ಮಾಡಿದ್ದರು.

ಮುಟ್ಟಾದ ಮಹಿಳೆಯನ್ನು ಮನೆಯಿಂದ ಆಚೆ ಕೂಡಿಸುವ ಕಾಲವೂ ಇತ್ತು. ಅವಳ ಮನೆಯ ಅಡುಗೆ ಮನೆ, ದೇವರ ಮನೆ, ಅವಳ ಕೋಣೆಗೇ ಅವಳಿಗೆ ಪ್ರವೇಶವಿರಲ್ಲಿಲ್ಲ. (ಈಗಲೂ ಹಲವಾರು ಮನೆಗಳಲ್ಲಿ ಈ ಪದ್ಧತಿ ಇದೆ) ಕಾರಣವೇನೋ ಗೊತ್ತಿಲ್ಲ. ಆದರೆ ಗೊತ್ತಿಲ್ಲ ಎಂದು ಹೇಳಲು ಇಷ್ಟವಿಲ್ಲದೆ ಅದಕ್ಕೆ ಹಲವಾರು justificationಗಳನ್ನು ಕೊಡುತ್ತಾರೆ. ಅವಳಿಗೆ ಆರಾಮ ಕೊಡುವ ಉದ್ದೇಶ ಅಂದರು. ಹೆಣ್ಣಿನ ದೇಹದ ಟೆಂಪರೇಚರ್ ಹೆಚ್ಚಿರುತ್ತೆ (ಮುಟ್ಟಾದ ದಿನಗಳಲ್ಲಿ) ಹಾಗಾಗಿ ಅವಳು ಅಡಿಗ ಮಾಡಿದರೆ ಅದು ಬೇಗ ಕೆಡುತ್ತದೆ ಎಂದು ಇನ್ನೊಂದು ಕಾರಣ ಕೊಡುತ್ತಾರೆ. ‘ನಮ್ಮ ಸಂಸ್ಕೃತಿ ಅಷ್ಟೇ ಅಲ್ಲ.. ಹಲವು ವಿದೇಶಿ ಸಂಸ್ಕೃತಿಗಳಲ್ಲಿಕೂಡ ಈ ಪದ್ಧತಿ ಇದೆ’ ಎಂಬುದು ಮತ್ತೊಂದು ಸಮಜಾಯಿಷಿ!

ಒಪ್ಪದವರಿಗೆ ಇದ್ಯಾವುದೂ ಕಾರಣವೇ ಅಲ್ಲ. ಒಪ್ಪುವವರಿಗೆ ಕಾರಣವೇ ಬೇಕಿಲ್ಲ. ಮುಟ್ಟಾಗುವುದು ನಾಚಿಕೆಯ ವಿಚಾರವೇ ಆಗಿರಲಿಲ್ಲ. ವಠಾರದಲ್ಲಿ ವಾಸಿಸುವ ಹೆಂಗಸರು ಮನೆಯ ಆಚೆ, ಮನೆಯ ಮಾಳಿಗೆಯ ಮೇಲೆ ಕುಳಿತು ತಾವು ಮುಟ್ಟಾಗಿರುವುದರ ಬಗ್ಗೆ ಹಿಂಜರಿಕೆಯಿಲ್ಲದೆ ಸಾರುತ್ತಿದ್ದರು. ಹೋಗಲು ಇಷ್ಟವಿಲ್ಲದ ಸಮಾರಂಭಕ್ಕೆ ತಪ್ಪಿಸಿಕೊಂಡು ತಾವು ಮುಟ್ಟಾಗಿದ್ದೆವೆಂದು ಕಾರಣ ಕೂಡ ಕೊಡುತ್ತಿದ್ದರು ಮಹಿಳೆಯರು. ಮುಂದೆ ಮುಟ್ಟು ಅಂದರೆ ಗುಟ್ಟು ಮಾಡಬೇಕು ಎಂಬ ಕಾಲ. ಮುಟ್ಟು ಅಸಹ್ಯ.. ಯಾರಿಗೂ ಗೊತ್ತಾಗಬಾರದು. ಗಂಡಸರಿಗೆ ಅದರ ಸುಳಿವೇ ಸಿಗಬಾರದು ಎಂದು ಮುಚ್ಚಿಡಲು ಪ್ರಯತ್ನಿಸಿದಷ್ಟು ಜಾಹಿರಾತುಗಳ ಮೂಲಕ ಬಟ್ಟಾಬಯಲಾಗುತ್ತಾ ಹೋಯಿತು.

‘ಮುಟ್ಟಾದಾಗ ಹೋಗುವ ರಕ್ತ ನೀಲಿಯೇನೇ? ಇದ್ಯಾಕೆ ಹೀಗೆ ತೋರಿಸುತ್ತಾರೆ?’ ಎಂದು ಅಜ್ಜಿ ಪ್ರಶ್ನಿಸಿದಾಗ ನಗಬೇಕೋ ಅಳಬೇಕೋ ತಿಳಿಯದೆ ಬೆಪ್ಪಾದೆ. ಈ ಸ್ಯಾನಿಟರಿ ಪ್ಯಾಡ್ ಗಳ ಜಾಹಿರಾತಿನ ಬಿರುಗಾಳಿಯಲ್ಲಿ ಮುಟ್ಟಿನ ಗುಟ್ಟು ರಟ್ಟಾಯಿತು. ಈಗ ‘ಹ್ಯಾಪಿ ಟು ಬ್ಲೀಡ್’ ಮುಜುಗರ, irritation, ಹೊಟ್ಟೆನೋವು ಅನುಭವಿಸುವ ಮಹಿಳೆಯರಿಗೆ ಈ ಬ್ಲೀಡಿಂಗ್ ಹ್ಯಾಪಿಯೇನು ಅಲ್ಲ. ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿ ಇರುವ ಮಹಿಳೆಯರಿಗೆ ಇದು ಸಂಕಟದ ಸಂಗತಿ. ಯಾವುದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂಬುದು ಎಷ್ಟು ಮುಖ್ಯವೋ, ಹೇಗೆ ವಿರೋಧ ವ್ಯಕ್ತಪಡಿಸುತ್ತೇವೆ ಎಂಬುದು ಕೂಡ ಮುಖ್ಯ. ಸುದ್ದಿಯಲ್ಲಿ ಇರಬೇಕು, ರಾಚಿದಂತೆ ವಿರೋಧ ವ್ಯಕ್ತಪಡಿಸಬೇಕು ಎಂಬ ತುಡಿತ ಏಕೋ ಅರಿಯಲಾರೆ.

ದೇವಸ್ಥಾನಕ್ಕೆ ಹೋಗುವುದು ಹೊರಗೆ ಸಿಗದ ನೆಮ್ಮದಿಗಾಗಿ.. ಹೊರ ಜಗತ್ತಿಗೆ ಏನನ್ನೋ ಸಾಬೀತುಪಡಿಸಲು ಪಡಿಸಲು ಅಲ್ಲ. ಸಮಾನತೆಯನ್ನು ಬಿಂಬಿಸಲು ಖಂಡಿತಾ ಅಲ್ಲ.

3 COMMENTS

  1. ಅಂಕಣ ಸಮಯೋಚಿತ. ಸಮಾಜದ ವ್ಯವಸ್ಥೆಯನ್ನು ಪ್ರಶ್ನಿಸಬೇಕು ನಿಜ. ಆದರೆ ಹಾಗೆ ಪ್ರಶ್ನಿಸುವ ದಾಟಿಯಲ್ಲಿ ಅಥವಾ ವಾದ ಮಣಿಸುವ ರೀತಿಯಲ್ಲಿ ಅಭಾಸಗಳು ಇರಕೂಡದು. ಅಹಂಕಾರ ಇರಕೂಡದು. ನಾನು ತಿಳಿದಿದ್ದೇ ಸರಿ ಎಂಬ ಮನೋಭಾವ ಇರಕೂಡದು. ಒಂದು ಸಂಸ್ಕಾರವಂತ ಮನಸ್ಸು ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಹೊಸ ಆಲೋಚನೆಗೆ ಪ್ರೆರೇಪಿಸುವಂಥ ಬರಹ ಪ್ರಕಟಿಸಿದ್ದಕ್ಕೆ ಡಿಜಿಟಲ್ ಕನ್ನಡಕ್ಕೆ ಅಭಿನಂದನೆ.

Leave a Reply