ಡಿಜಿಟಲ್ ಕನ್ನಡ ಟೀಮ್
ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲೇ ನಗರಲ್ಲಿರುವ ಫ್ರಾನ್ಸ್ ರಾಯಭಾರಿ ಕಚೇರಿಯನ್ನು ಉಡಾಯಿಸುವುದಾಗಿ ಇಸಿಸ್ ಉಗ್ರರು ಬೆದರಿಕೆ ಹಾಕಿದ್ದಾರೆ.
ಬೆಂಗಳೂರಿನ ಮೌಂಟ್ಕಾರ್ಮಲ್ ಕಾಲೇಜು ಸಮೀಪವಿರುವ ಫ್ರಾನ್ಸ್ ರಾಯಭಾರ ಕಚೇರಿ ಮೇಲೆ ದಾಳಿ ನಡೆಸುವುದಾಗಿ ಐಸಿಸ್ ಉಗ್ರರು ಉರ್ದುವಿನಲ್ಲಿ ಬರೆದಿರುವ ಪತ್ರ ಬುಧವಾರ ರಾಯಭಾರ ಕಚೇರಿಗೆ ಬಂದಿದೆ. ಇದನ್ನು ಚೆನ್ನೈನಿಂದ ರವಾನಿಸಲಾಗಿದೆ.
ಪತ್ರದಲ್ಲಿರುವ ವಿಳಾಸ ನಕಲಿ ಎಂದು ಗೊತ್ತಾಗಿದೆ. ಆದರೂ ರಾಯಭಾರ ಕಚೇರಿಗೆ ಭದ್ರತೆ ಒದಗಿಸಲಾಗಿದೆ. ಜತೆಗೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಮೇಘರಿಕ್ ತಿಳಿಸಿದ್ದಾರೆ. ಪಠಾಣ್ಕೋಟ್ ವಾಯುನೆಲೆ ಮೇಲೆ ದಾಳಿ ಮಾದರಿ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿ ಉಗ್ರಗಾಮಿ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್ ಬೆದರಿಕೆ ಹಾಕಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
1 ರಿಂದ ಪಿಯುವರೆಗೂ ಕೇಂದ್ರ ಪಠ್ಯಕ್ರಮ
2017-18 ನೇ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಪಿಯುಸಿವರೆಗೆ ಕೇಂದ್ರ ಪಠ್ಯಕ್ರಮ ಜಾರಿಗೆ ಬರಲಿದೆ. ದೇಶಾದ್ಯಂತ ಏಕಸ್ವರೂಪ ಶಿಕ್ಷಣ ಜಾರಿ ಉದ್ದೇಶಕ್ಕೆ ಅನುಗುಣವಾಗಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿಯು ಮುಂದಿನ ಸೆಪ್ಟೆಂಬರ್ ವೇಳೆಗೆ ಪಠ್ಯಕ್ರಮ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸಲಿದೆ.
ಬರಗೂರು ಸಮಿತಿ ಪರಿಷ್ಕರಣೆಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಲಾಗುವುದು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಾಹಿತಿಗಳಿರುತ್ತವೆ. ವಿಜ್ಞಾನ, ಗಣಿತ, ಇಂಗ್ಲೀಷ್ ಮತ್ತಿತರ ಎಲ್ಲ ಪಠ್ಯಗಳು ಕೇಂದ್ರ ಪಠ್ಯಕ್ರಮದ ಮಾದರಿಯಲ್ಲಿರುತ್ತವೆ. ಪರಿಷ್ಕೃತ ಪಠ್ಯಪುಸ್ತಕಗಳನ್ನು ಸರ್ಕಾರವೇ ಮುದ್ರಿಸಿ ಶಾಲಾ-ಕಾಲೇಜುಗಳಿಗೆ ವಿತರಿಸಲಿದೆ.
ಎಲ್ಕೆಜಿಯಿಂದಲೇ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಜಾರಿಗೆ ಬರಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಆರಂಭವಾಗುವ ತರಗತಿಯಿಂದಲೇ ಆರ್ಟಿಇ ಅಡಿ ಪ್ರವೇಶ ನೀಡಬೇಕು. ಈ ವಿಚಾರದಲ್ಲಿ ಸರಕಾರದ ನಿಲುವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸುದ್ದಿಗಾರರಿಗೆ ಗುರುವಾರ ತಿಳಿಸಿದರು.
ನೇತಾರರ ಭಾವಚಿತ್ರಕ್ಕೆ ಆಯೋಗ ಕಡಿವಾಣ
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ಜಾಹೀರಾತುಗಳಷ್ಟೇ ಅಲ್ಲದೆ ಮಾರಾಟ ಸರಕುಗಳ ಮೇಲೂ ರಾಜಕೀಯ ನಾಯಕರ ಭಾವಚಿತ್ರ ಇರುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.
ಫೆ. 13 ಹಾಗೂ 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ. 24 ರವರೆಗೆ ಮಾದರಿ ನಡಾವಳಿ ಸಂಹಿತೆ ಜಾರಿಗೊಳಿಸಿ ಆಯೋಗ ಸಮಗ್ರ ಸುತ್ತೋಲೆ ಹೊರಡಿಸಿದೆ. ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಸರ್ಕಾರಿ ವಾಹನಗಳ ಮೇಲೂ ರಾಜಕೀಯ ಮುಖಂಡರ ಭಾವಚಿತ್ರ, ಪೋಸ್ಟರ್ ಗಳನ್ನು ಹಾಕುವಂತಿಲ್ಲ. ರಾಜಕೀಯ ಮುಖಂಡರ ಭಾವಚಿತ್ರವಿರುವ ಭಿತ್ತಿಪತ್ರ, ಬ್ಯಾನರ್, ಕಟೌಟ್, ಫಲಕಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ.
ಚುನಾವಣೆ ಮುಗಿಯುವವರೆಗೂ ಮಂತ್ರಿಗಳು, ಶಾಸಕರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಸುವಂತಿಲ್ಲ. ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಕಾಮಗಾರಿ ಅನುಷ್ಠಾನ ಹಾಗೂ ಪ್ರಕೃತಿ ವಿಕೋಪ ಪರಿಹಾರ ವಿತರಣೆಗೆ ನೀತಿ-ಸಂಹಿತೆ ಅಡ್ಡಿಯಾಗದು. ಆದರೆ ಇಂತಹ ಸಮಾರಂಭಗಳಲ್ಲಿ ರಾಜಕೀಯ ನಾಯಕರು ಇರುವಂತಿಲ್ಲ ಎಂದು ಆಯೋಗ ಹೇಳಿದೆ.