ಮಾಹಿತಿ ತಂತ್ರಜ್ಞಾನದ ಸಾಧನಗಳು ಮಹಿಳೆಯರನ್ನು ಶೋಷಿಸುತ್ತಿರೋದಕ್ಕೆ ತಡೆ ಇಲ್ಲವೇ?

author-vasundaraಆಧುನಿಕ ತಂತ್ರಜ್ಞಾನದ ಕೂಸಾದ ಮಾಹಿತಿ ತಂತ್ರಜ್ಞಾನದ ಬುನಾದಿಯೇ ಅಂತರ್ಜಾಲ ಅಥವಾ ಇಂಟರ್ನೆಟ್. ಬ್ಲೂಫಿಲಂ ಹಾಗೂ ಅಶ್ಲೀಲ ತಾಣಗಳು (ಪೋರ್ನ್ ಸೈಟ್) ಮುಕ್ತವಾಗಿ ಹರಿದಾಡುತ್ತಿವೆ. ಇಂದು ಆಂಡ್ರಾಯ್ಡ್ ಫೋನ್‍ಗಳು ಮಾರುಕಟ್ಟೆಗೆ ಬಂದ ನಂತರವಂತೂ ಈ ತಾಣಗಳ ಬಳಕೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.

ಹೆಣ್ಣನ್ನು ಕೇವಲ ಕಾಮುಕ ದೃಷ್ಟಿಯಲ್ಲಿ ನೋಡುವಂತಹ ಧೋರಣೆಗೆ ಅಕ್ರಮಣಕಾರಿ ಪೋರ್ನ್ ಸೈಟ್ ಗಳ ಮಿತಿಯಿಲ್ಲದ ವೀಕ್ಷಣೆಯೂ, ಅದಕ್ಕೆ ಬುನಾದಿಯಾಗಿರುವ ಸಮಾಜದ ಪುರುಷಾಧಿಪತ್ಯದ ವ್ಯವಸ್ಥೆಯೂ, ಸಮರ್ಪಕ ಲೈಂಗಿಕ ಶಿಕ್ಷಣದ ಕೊರತೆಯೂ ಕಾರಣ ಎನ್ನಬಹುದಾಗಿದೆ. ಹೆಣ್ಣಿನ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿರುವುದಕ್ಕೆ ಇವೆಲ್ಲವುದರ ಪಾಲಿದೆ ಎಂಬುದನ್ನು ಮರೆಯುವಂತಿಲ್ಲ. ಕಳೆದ ವಿಧಾನಸಭೆಯಲ್ಲಿ ತ್ರಿಮೂರ್ತಿ ಸಚಿವರೇ ವಿಧಾನಸಭಾಧಿವೇಶನ ನಡೆಯುವ ಸಂದರ್ಭದಲ್ಲೂ ತಮ್ಮ ಕರ್ತವ್ಯಪ್ರಜ್ಞೆಯನ್ನೂ ಮರೆತು ಬ್ಲೂಫಿಲಂ ನೋಡುತ್ತಾ ಸಿಕ್ಕಿ ಹಾಕಿಕೊಂಡದ್ದನ್ನು ನೆನಪಿಸಿಕೊಂಡರೆ ಇದರ ವ್ಯಾಪಕತೆ ಎಷ್ಟಿರಬಹುದೆಂದು ಊಹಿಸಬಹುದು!

ಅಸಮಾನ ಮತ್ತು ಶೋಷಣೆಯುಕ್ತ ಸಮಾಜದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಚರರಾಗೇ ಆಗಮಿಸಿರುವ ಇವುಗಳನ್ನು ನಿಯಂತ್ರಿಸುವ ಜವಾಬ್ದಾರಿ ಮತ್ತು ಹೊಣೆಗಾರಿಕೆ ಸರ್ಕಾರದ್ದಾಗಿರುತ್ತದೆ. ವ್ಯವಸ್ಥೆಯದ್ದಾಗಿರುತ್ತದೆ. ಇಲ್ಲವಾದರೆ ಈ ಪುರುಷಪ್ರಾಧಾನ್ಯತೆಯ ಶ್ರೇಣೀಕೃತ ಸಮಾಜದಲ್ಲಿ ಮೊದಲೇ ಅತ್ಯಂತ ಕೆಳಗೆ ತಳ್ಳಲ್ಪಟ್ಟಿರುವ ಮಹಿಳೆ ಇನ್ನಷ್ಟು ನೋವನ್ನು ಎದುರಿಸಬೇಕಾಗುತ್ತದೆ.

ಕೆಲವು ದಶಕಗಳ ಹಿಂದೆ ಅಂತಗ್ರ್ರಾಮಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಶ್ಲೀಲ ಸಾಹಿತ್ಯವು (ಪೋರ್ನೋಗ್ರಫಿ) ಇಂದು ಮುಕ್ತವಾಗಿ ಬೃಹತ್ ಉದ್ಯಮವಾಗಿ ಹೊರಬಂದಿರುವುದೂ ಉದಾರೀಕರಣದ ಪ್ರಭಾವವೆಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಒಂದು ಸಮೀಕ್ಷೆಯ ಪ್ರಕಾರ ಜಗತ್ತಿನಾದ್ಯಂತ ಇಂಟರ್ನೆಟ್‍ನ ಶೇ. 30ರಷ್ಟು ಸಂಚಾರ ಅಶ್ಲೀಲ ತಾಣಗಳಿಗೇ ಮೀಸಲಿದ್ದರೆ, ಅಮೆರಿಕ ಈ ಅಶ್ಲೀಲತಾಣಗಳ ರಾಜನಂತೆ, ಅಂದರೆ ಶೇ. 60ರಷ್ಟು ತಾಣಗಳು ಅಲ್ಲಿಂದಲೇ ಪೋಷಿಸಲ್ಪಡುತ್ತದಂತೆ! ಇವುಗಳ ವಾರ್ಷಿಕ ಆದಾಯ ಎಲ್ಲಾ ಉನ್ನತ ತಂತ್ರಜ್ಞಾನ ಕಂಪನಿಗಳ ಆದಾಯವನ್ನೂ ಮೀರುವುದೆಂದು ವರದಿಯೊಂದು ಹೇಳುತ್ತದೆ. ಈ ಅಶ್ಲೀಲ ತಾಣಗಳಲ್ಲಿ ಶೇ. 88ರಷ್ಟು ಮಹಿಳೆಯ ಮೇಲೆ ದೈಹಿಕ ಹಿಂಸೆ ಮತ್ತು ಬಲಾತ್ಕಾರ ಇದೆ ಎಂಬುದನ್ನು ಮತ್ತೊಂದು ಅಧ್ಯಯನ ತಿಳಿಸುತ್ತದೆ. ಅಲ್ಲದೆ ಜಗತ್ತಿನಾದ್ಯಂತ ಶೇ. 51ರಷ್ಟು ಕಂಪ್ಯೂಟರ್ ಗಳಲ್ಲಿ ಮತ್ತು ಶೇ. 49ರಷ್ಟು ಸ್ಮಾರ್ಟಫೋನ್‍ಗಳಲ್ಲಿ ಈ ಅಶ್ಲೀಲ ವೀಡಿಯೊಗಳು ಹರಿದಾಡುತ್ತಿರುವುದನ್ನು ಅಂದಾಜಿಸಲಾಗಿದೆ. ಈ ವೀಡಿಯೊಗಳಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವುದು ಅತ್ಯಂತ ದುರದೃಷ್ಟಕರ. ಇಂತಹ ತಾಣಗಳನ್ನು ವೀಕ್ಷಿಸುವ ಕ್ರೂರ ಮನಸ್ಥಿತಿಯುಳ್ಳ, ಸಮಾನತೆಯ ಪದದ ಅರ್ಥವನ್ನೇ ಅರಿಯದ ಪುರುಷ ಹೆಣ್ಣಿನ ಮೇಲೆ ತನ್ನ ‘ಪೌರುಷ’ವನ್ನು ಮೆರೆಯಲು ಎಂತಹ ದುಸ್ಸಾಹಸಕ್ಕೂ ಕೈಹಾಕುವ ಪ್ರೇರಣೆ ದೊರೆತಂತಾಗುತ್ತದೆ. ಆದ್ದರಿಂದಲೇ ಈ ವರದಿಗಳೆಲ್ಲವನ್ನೂ ಗಮನಿಸಿದರೆ ಇಂದು ಹೆಣ್ಣಿನ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಹಿಂಸೆಗೆ ಇವು ಪ್ರಚೋದನಕಾರಿ ಎಂದು ಹೇಳಬಹುದು. ಬಾಲಕಿಯರನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗುವಂತಹ ಕ್ರೂರ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟು ವಿಕೃತ ಸುಖವನ್ನು ಅನುಭವಿಸುತ್ತಿರುವರೆಂದರೆ ಸಮಾಜದ ಮನಸ್ಥಿತಿ ಎಷ್ಟು ಕೀಳು ಮಟ್ಟದಲ್ಲಿರಬಹುದು, ನವತಂತ್ರಜ್ಞಾನದ ಸಾಧನಗಳನ್ನು ಅದಕ್ಕೆ ಎಷ್ಟು ಪೂರಕವಾಗಿ ಬಳಸಿಕೊಳ್ಳುತ್ತಿರಬಹುದು? ಇವು ಅಸಹ್ಯ ಮತ್ತು ದಿಗ್ಭ್ರಮೆ ಹುಟ್ಟಿಸುತ್ತವೆ.

ತನ್ನ ಸುಖಕ್ಕಾಗಿ ಹೆಣ್ಣನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಯಾವುದೇ ರೀತಿಯಲ್ಲಿ ಒತ್ತಾಯ ಪೂರಕವಾಗಿ ಬಳಸಿಕೊಳ್ಳುವುದೂ ಸಹ ಅದು ಅವಳ ಮೇಲೆ ನಡೆಸುವ ದೌರ್ಜನ್ಯವೇ ಸರಿ. ಇತ್ತೀಚಿನ ಕೌಟುಂಬಿಕ ವಿವಾದಗಳ ಅಂತರಾಳವನ್ನು ಕೆದಕಿದರೆ ಅಶ್ಲೀಲ ತಾಣಗಳ ಪ್ರಭಾವದಿಂದ ಉಂಟಾದ ಲೈಂಗಿದ ದೌರ್ಜನ್ಯಗಳು, ಬಲಾತ್ಕಾರಗಳು ಬೆಳಕಿಗೆ ಬರುತ್ತವೆ. ವೈವಾಹಿಕ ಬದುಕಿನಲ್ಲಿ ಹೆಣ್ಣು ಸ್ವಾತಂತ್ರ್ಯವಿಲ್ಲದೆ, ತನ್ನ ಇಚ್ಛೆಗೆ ವ್ಯತಿರಿಕ್ತವಾಗಿ ಬದುಕಲು ಅಸಾಧ್ಯವಾಗುತ್ತಾ, ಬಿಸಿತುಪ್ಪದಂತೆ ಉಗಿಯಲೂ ಆಗದೆ ಉಗುಳಲೂ ಆಗದೆ ಪರಿತಪಿಸುತ್ತ ಮಾನಸಿಕಳಾಗಿ ಜರ್ಝರಿತಳಾಗುವುದನ್ನು ಕಾಣುತ್ತಿದ್ದೇವೆ. ಇದು ಪುರುಷಪ್ರಧಾನ ವ್ಯವಸ್ಥೆಯ ಭದ್ರಬುನಾದಿಯ ಮೇಲೆ ಸವಕಲಾಗುತ್ತಿರುವ ಊಳಿಗಮಾನ್ಯ ಮೌಲ್ಯಗಳನ್ನು ತೊರೆಯಲು ಯತ್ನಿಸುತ್ತಿರುವ ಹೆಣ್ಣಿನ ಮೇಲಿನ ಬಂಡವಾಳಶಾಹಿ ನಡೆಸುತ್ತಿರುವ ಆಕ್ರಮಣವಾಗಿದೆ. ಅತಿಯಾದ ಲಾಭಕ್ಕಾಗಿ, ಹಣದ ದುರಾಸೆಗಾಗಿ, ಬಂಡವಾಳಶಾಹಿಯು ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ಮಹಿಳೆಯ ಮೇಲಿನ ಹಿಂಸೆಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಉದಾರೀಕರಣ ಹೆಣ್ಣಿನ ಮೇಲೆ ಉದಾರವಾಗಿ ತೋರುತ್ತಿರುವ ಕ್ರೌರ್ಯದ ಪರಿಯಿದು.

ಮೊಬೈಲ್ ಕಂಪನಿಗಳು ಸಂದೇಶಗಳ ಮೂಲಕ ‘ವೇಶ್ಯಾವಾಟಿಕೆ’ಯ ಬೃಹತ್ ಜಾಲಕ್ಕೆ ಅನುಕೂಲ ಕಲ್ಪಿಸಿ ತನ್ನಷ್ಟಕ್ಕೆ ಮಲಗಿರುವ ‘ಪುರುಷ’ನೆಂಬ ಹಾವನ್ನು ಕೆಣಕುವ ಕೆಲಸಕ್ಕೆ ಕೈ ಹಾಕುತ್ತಿವೆ. ಈ ವೇಶ್ಯಾವಾಟಿಕೆಯ ‘ಉದ್ಯಮ’ಕ್ಕೆ ಲಾಭವನ್ನು ಸೃಷ್ಟಿಸಲು ಅದೆಷ್ಟು ಮುಗ್ಧ ಹೆಣ್ಣು ಮಕ್ಕಳು ತಮಗೆ ಅರಿವಿಲ್ಲದೆಯೇ ಬಲಿಯಾಗುತ್ತಿರುವರೋ? ಬದುಕಿ ಬಾಳಬೇಕಾದ ಅದೆಷ್ಟು ಬಾಲೆಯರು ಅತಿ ಸಣ್ಣ ವಯಸ್ಸಿನಲ್ಲೇ ಲೈಂಗಿಕ ಹಿಂಸೆಗೆ ಬಲಿಯಾಗಿ, ರಕ್ಷಣೆಯಿಲ್ಲದೆ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗಿ ನರಳಿ ಸಾವಿಗೀಡಾಗುತ್ತಿರುವರೋ? ಇಂತಹ ರಕ್ತ ಹೀರುವ ‘ಉದ್ಯಮ’ವನ್ನು ನಡೆಸುವ ಮಧ್ಯವರ್ತಿಗಳ ಕೂಪಕ್ಕೆ ತಿಳಿದೋ ತಿಳಿದಿಲ್ಲದೆಯೋ ಬೀಳುವ ಹೆಣ್ಣುಮಕ್ಕಳಿಗೆ ಮೊಬೈಲ್‍ಫೋನ್ ಒಂದು ಸಾಧನವಾಗಿ ಮಾರ್ಪಟ್ಟಿದೆ. ಇಂದು ವೇಶ್ಯಾವಾಟಿಕೆಯ ಬೃಹತ್ ಜಾಲವು ವಿಶ್ವದಾದ್ಯಂತ ವ್ಯಾಪಿಸಿದೆ. ಈ ಅರ್ಥದಲ್ಲಂತೂ ಜಾಗತೀಕರಣ ನಡೆಯುತ್ತಿರುವುದು ಸತ್ಯ! ಒಂದು ಅಂದಾಜಿನ ಪ್ರಕಾರ ವರ್ಷವೊಂದಕ್ಕೆ ಫೋನ್ ಸೆಕ್ಸ್ ‘ಉದ್ಯಮ’ವು ಸುಮಾರು 750 ದಶಲಕ್ಷದಿಂದ 1 ಶತಕೋಟಿ ಡಾಲರ್ ನಷ್ಟು ಆದಾಯವನ್ನು ಉತ್ಪತ್ತಿ ಮಾಡುತ್ತಿದೆ ಎಂದು ಹೇಳಲಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ಅನಗತ್ಯ ಸಂದೇಶಗಳನ್ನು TRAI (ಟೆಲಿಫೋನ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ತಡೆಯಲು ಸಾಧ್ಯವಿಲ್ಲವೇ? ಯುವಜನತೆಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ನಿಲ್ಲಿಸಬೇಕಾಗಿದೆ. ಹೆಣ್ಣಿನ ರಕ್ತಮಾಂಸವನ್ನು ಹೀರಿ ಮೂರನೆಯವರು ಹಣ ಗಳಿಸು ಇಂತಹ ‘ಉದ್ಯಮ’ ಯಾವ ಪುರುಷಾರ್ಥಕ್ಕಾಗಿ?

ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ‘ಪುರುಷ’ನ ವಿಕೃತ ಮನಸ್ಸು ಮಹಿಳೆಯರ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದಿದೆ. ಸಿಸಿ ಕ್ಯಾಮೆರಾಗಳನ್ನು, ಮೈಕ್ರೋ ಕ್ಯಾಮೆರಾಗಳನ್ನು ಉಪಯೋಗಿಸಿಕೊಂಡು ಮಹಿಳೆಯರ ಖಾಸಗಿ ವಿಷಯಗಳನ್ನು ಕಳ್ಳತನದಲ್ಲಿ ಸೆರೆಹಿಡಿದು ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದೆ. ಹೀಗಾದಲ್ಲಿ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಹೇಗೆ ಸಾಧ್ಯ?

(ಅಂಕಣಕಾರ್ತಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕರ್ನಾಟಕ ವಿಜ್ಞಾನ ಪರಿಷತ್ ಗೌರವಾಧ್ಯಕ್ಷೆ, ಆಯುರ್ವೇದ ತಜ್ಞರು. ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.)

 

Leave a Reply