ರೋಹಿತ್ ವೆಮುಲ ಆತ್ಮಹತ್ಯೆ: ಎಬಿವಿಪಿ ಸುಶೀಲ್ ಕುಮಾರ್ ಹೇಳಿದ್ದೇನು?

ಚಿತ್ರ- ಜೀ ವಾಹಿನಿ ಸ್ನ್ಯಾಪ್ ಶಾಟ್

ಡಿಜಿಟಲ್ ಕನ್ನಡ ಟೀಮ್

ಹೈದರಾಬಾದ್ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ರೋಹಿತ್ ವೆಮುಲ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ರಾಜಕೀಯ ಪ್ರದರ್ಶನಗಳು ಮುಂದುವರಿದಿವೆ. ಆಪ್, ಕಾಂಗ್ರೆಸ್, ಬಿಎಸ್ಪಿ, ಸಿಪಿಎಂ, ಎಮ್ ಐ ಎಮ್ ಎಲ್ಲ ಪಕ್ಷಗಳೂ ಇದನ್ನು ದಲಿತ ಬಿಕ್ಕಟ್ಟನ್ನಾಗಿ ಬಿಂಬಿಸುವ ಪ್ರಯತ್ನವನ್ನು ಢಾಳಾಗಿಯೇ ಮಾಡುತ್ತಿವೆ.

ಈ ಹಂತದಲ್ಲಿ ವಿವಿಯ ಎಬಿವಿಪಿ ವಿದ್ಯಾರ್ಥಿ ಸಂಘಟನೆ ನಾಯಕ ಸುಶೀಲ್ ಕುಮಾರ್, ಗುರುವಾರ ಹಲವು ರಾಷ್ಟ್ರೀಯ ವಾಹಿನಿಗಳೊಂದಿಗೆ ಮಾತನಾಡಿ, ರೋಹಿತ್ ವೆಮುಲ ಆತ್ಮಹತ್ಯೆ ವಿಚಾರದಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಂದಿರಿಸಿದ್ದಾರೆ. ಎಬಿವಿಪಿ ಜತೆಗಿನ ಸಂಘರ್ಷವೇ ರೋಹಿತ್ ಸಾವಿಗೆ ಕಾರಣವಾಯ್ತು ಎಂಬ ವಾದಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಸುಶೀಲ್ ಕುಮಾರ್, ತಾವು ಹಾಗೂ ಸಂಘಟನೆ ವಿರುದ್ಧ ಎದ್ದಿದ್ದ ಪ್ರಶ್ನೆಗಳನ್ನು ಎದುರುಗೊಂಡಿರುವುದು ಹೀಗೆ.

  •  ರೋಹಿತ್ ವೆಮುಲ ಆತ್ಮಹತ್ಯೆ ಸುದ್ದಿ ಕೇಳುತ್ತಲೇ ನಾನೂ ಖಿನ್ನನಾದೆ. ಕ್ಯಾಂಪಸ್ ನಲ್ಲಿ ನಮ್ಮ ರಾಜಕೀಯ ಸಂಘರ್ಷಗಳು ಇದ್ದೇ ಇದ್ದವು. ಆದರೆ ಇಲ್ಲೆಲ್ಲ ಅಷ್ಟು ಆಕ್ರಮಣಕಾರಿಯಾಗಿದ್ದ ರೋಹಿತ್, ಆತ್ಮಹತ್ಯೆ ಮಾಡಿಕೊಳ್ಳುವುದು ಊಹಿಸಲಾಗದ್ದು. ಹೀಗಾಗಿ ರೋಹಿತ್ ಆತ್ಮಹತ್ಯೆಗೆ ನಿಜ ಕಾರಣ ತನಿಖೆಯಾಗಲೆಂದು ನಾನೂ ಆಗ್ರಹಿಸುತ್ತೇನೆ. ಈ ನಿಟ್ಟಿನಲ್ಲಿ ಯಾವುದೇ ತನಿಖೆ ನಡೆದರೂ ಸಹಕಾರ- ಸ್ವಾಗತವಿದೆ.
  • ರೋಹಿತ್ ವೆಮುಲ ಕೊನೆ ಪತ್ರವನ್ನು ನಾನೂ ನೂರು ಬಾರಿ ಓದಿದ್ದೇನೆ. ಅಲ್ಲಿ ಯಾವ ಸಂಘಟನೆಯ ಮೇಲೆ ದೂರಿದ್ದಾನೆ ಎಂದು ಪ್ರತಿಭಟಿಸುತ್ತಿರುವವರೇ ಹೇಳಲಿ.
  • ಮರಣದಂಡನೆ ಬೇಡ ಎಂಬ ಅಭಿಪ್ರಾಯ ಹೊಂದಿದ್ದ ಎ ಎಸ್ ಎ ಸಂಘಟನೆಯನ್ನು ಎಬಿವಿಪಿಗೆ ಸಹಿಸಲಾಗಲಿಲ್ಲ ಎಂದು ಟೀಕಿಸಲಾಗುತ್ತಿದೆ. ವಿಷಯ ಅಷ್ಟು ಸರಳವಾಗಿಲ್ಲ. ಯಾಕೂಬ್ ಮೆಮನ್ ಗೆ ಗಲ್ಲು ವಿರೋಧಿಸಿ ಪ್ರತಿಭಟನೆ ಮಾಡಿದ ಎ ಎಸ್ ಎ ಕೇವಲ ಮರಣದಂಡನೆ ವಿಚಾರದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನಷ್ಟೇ ಹೊಂದಿರಲಿಲ್ಲ. ಅವರು ಕ್ಯಾಂಪಸ್ಸಿನಲ್ಲಿ, ‘ಯಾಕೂಬ್ ನನ್ನು ಗಲ್ಲಿಗೇರಿಸಿದರೆ ಅವನಂಥ ನೂರು ಯೋಧರು ಬರುತ್ತಾರೆ’ ಎಂದೆಲ್ಲ ಘೋಷಣೆ ಮೊಳಗಿಸಿದರು. ಗಲ್ಲುಶಿಕ್ಷೆ ನಂತರ ನಮಾಜ್ ಸಲ್ಲಿಸಿದರು. ಇದನ್ನೇ ನಾವು ವಿರೋಧಿಸಿದೆವು.
  • ನಿಜ. ರೋಹಿತ್ ವೆಮುಲ ಮತ್ತವರ ಗುಂಪು ಈ ಬಗೆಯ ಪ್ರತಿಭಟನೆಗಳಲ್ಲಿ ನಿರತವಾಗಿರುವುದನ್ನು ಉಲ್ಲೇಖಿಸಿ ನಾನು ಫೇಸ್ ಬುಕ್ ನಲ್ಲಿ ಅವರನ್ನು ‘ಗೂಂಡಾ’ಗಳೆಂದು ಕರೆದೆ. ಇದಕ್ಕೆ ಪ್ರತಿಯಾಗಿ 30-40 ಮಂದಿ ಗುಂಪು ಕಟ್ಟಿಕೊಂಡು ನನ್ನ ಕೊಠಡಿಗೆ ಬಂದ ಅವರು ನನ್ನನ್ನು ಸೆಕ್ಯುರಿಟಿ ಕೋಣೆಗೆ ಎಳೆದೊಯ್ದು, ಅಲ್ಲಿ ಇಂಟರ್ನೆಟ್ ತೆಗೆಸಿ ಬಲವಂತವಾಗಿ ಕ್ಷಮಾಪಣೆ ಬರೆಸಿದರು. ನಂತರ ನಾನು ವಿರೋಧಾಭಾಸ ಇರಬಾರದೆಂದು ಖಾತೆಯನ್ನೇ ಡಿಲೀಟ್ ಮಾಡಿದೆ. ನಾನು ಅವರನ್ನು ಗೂಂಡಾಗಳೆಂದು ಸಂಬೋಧಿಸಿದ್ದು ತಪ್ಪು ಎಂದಾದರೆ ಹಾಗೆ ಹಲ್ಲೆ ಮಾಡಬೇಕಿತ್ತೇ? ಇವರು ನಮ್ಮನ್ನು ಕೇಸರಿ ಭಯೋತ್ಪಾದಕರು, ಫ್ಯಾಸಿಸ್ಟ್ ಗಳು ಅಂತ ಏನೆಲ್ಲ ಶಬ್ದಗಳಲ್ಲಿ ಜರೆದಿಲ್ಲವೇ?
  • ದಾಳಿಗೊಳಗಾಗಿದ್ದು ನಿಜವಾದರೆ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಾಗದೇ ಖಾಸಗಿ ಆಸ್ಪತ್ರೆಗೆ ಹೋಗಿದ್ದೇಕೆ ಎಂದು ಪ್ರಶ್ನಿಸಲಾಗುತ್ತಿದೆ. ಅವತ್ತು ಎ ಎಸ್ ಎ ಗುಂಪಿನವರು ವಿವಿ ಬಾಗಿಲಲ್ಲೇ ನಿಂತು ಒಳಗೆ ಹೇಗೆ ಬರ್ತೀಯಾ ನೋಡ್ತೀವಿ ಎಂದು ಹೇಳುತ್ತಿರುವಾಗ ಗೇಟು ದಾಟಿ ಅಲ್ಲಿನ ಆಸ್ಪತ್ರೆಗೆ ಹೋಗೋದು ಹೇಗೆ? ಅಲ್ಲದೇ ವಿಶ್ವವಿದ್ಯಾಲಯದ ಮುಖ್ಯಸ್ಥರ ಎದುರು ದೂರು ತಂದ ನನ್ನ ಅಮ್ಮನನ್ನು ಅದೇ ಕೊಠಡಿಯಲ್ಲೇ ಎ ಎಸ್ ಎ ಗುಂಪಿನವರು ನಿಂದಿಸಿದರು. ಹೀಗಿರುವಾಗ ವಿಶ್ವವಿದ್ಯಾಲಯದಲ್ಲೇ ಚಿಕಿತ್ಸೆ ಪಡೆಯುವ ಮಾತೆಲ್ಲಿ?
  • ಮರುದಿನ ಶಿಸ್ತು ಸಮಿತಿ ಮುಂದೆ ಹಾಜರಾಗಲಿಲ್ಲ, ದಾಳಿಯಾಗಿದ್ದಕ್ಕೆ ಸಾಬೀತು ಒದಗಿಸಲಿಲ್ಲ ಎಂಬ ಆರೋಪ ಹೊರೆಸಲಾಗುತ್ತಿದೆ. ಹೌದು. ಏಕೆಂದರೆ ನಾನು ಆಸ್ಪತ್ರೆಯಲ್ಲಿದ್ದೆ. ಆ ಬಗ್ಗೆ ಎಲ್ಲ ಸಾಕ್ಷ್ಯಗಳಿವೆ. ಅಲ್ಲಿಂದ ಬಂದ ನಂತರವಷ್ಟೇ ನಾನು ನನ್ನ ಮೇಲಾದ ದಾಳಿಗೆ ಸಾಬೀತು ನೀಡುವುದಕ್ಕೆ ಸಾಧ್ಯವಾಗಿದ್ದು. ಇದೇ ಆಧಾರದಲ್ಲಿ ರೋಹಿತ್ ವೆಮುಲ ಮತ್ತು ಸಹಪಾಠಿಗಳಿಗೆ ಹಾಸ್ಟೆಲ್ ನಿಂದ ಹೊರಹೋಗುವ ಶಿಸ್ತುಕ್ರಮ ವಿಧಿಸಲಾಯಿತು. ಫೇಸ್ಬುಕ್ ನಲ್ಲಿ ನನ್ನ ಟೀಕೆಯನ್ನು ವಿವಿ ಆಡಳಿತದ ಎದುರು ಪ್ರಶ್ನಿಸದೇ, ನೇರವಾಗಿ ಹಿಂಸಾಮಾರ್ಗ ತುಳಿದಿದ್ದಕ್ಕೆ ವಿಶ್ವವಿದ್ಯಾಲಯದಿಂದಲೇ ಹೊರಹಾಕುವ ಪ್ರಸ್ತಾಪವಿತ್ತು. ನಂತರ ಆ ಶಿಕ್ಷೆಯನ್ನು ಹಾಸ್ಟೆಲ್ ವ್ಯವಸ್ಥೆ ರದ್ದುಗೊಳಿಸುವ ಮಟ್ಟಿಗಷ್ಟೇ ಇಳಿಸಲಾಯಿತು. ಈ ಶಿಕ್ಷೆ ಇಳಿತವನ್ನು ನಾವ್ಯಾರೂ ಪ್ರಶ್ನಿಸಲಿಲ್ಲ. ಏಕೆಂದರೆ ಎ ಎಸ್ ಎ ದೌರ್ಜನ್ಯದ ವಿರುದ್ಧ ನಮ್ಮ ಪ್ರತಿಭಟನೆ ಇತ್ತೇ ಹೊರತು ಅವರನ್ನು ಮಟ್ಟ ಹಾಕಿಬಿಡಬೇಕೆಂಬ ಉದ್ದೇಶಗಳು ನಮ್ಮಲ್ಲಿರಲಿಲ್ಲ. ಅಲ್ಲದೇ ಈ ವಿಷಯದಲ್ಲಿ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ಈ ಕಾರಣಕ್ಕಾಗಿಯೇ ವಿಶ್ವವಿದ್ಯಾಲಯ ಶಿಸ್ತುಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಐದು ವರ್ಷಗಳ ಹಿಂದೆ ಎಬಿವಿಪಿ ಸದಸ್ಯರೂ ಹಲ್ಲೆ ಸಂಬಂಧ ಅಮಾನತು ಎದುರಿಸಿದ್ದರು. ನಂತರ ಅಂಥ ಯಾವ ಆರೋಪಗಳೂ ನಮ್ಮ ಮೇಲಿಲ್ಲ. ವೈಚಾರಿಕ ಭಿನ್ನತೆಗೆ ಹಲ್ಲೆ ಮಾಡುವುದು… ಅದು ಯಾರಿಂದಲೇ ಆದರೂ ತಪ್ಪೇ.
  • ಬಂಡಾರು ದತ್ತಾತ್ರೇಯ ಅವರಿಗೆ ಎಬಿವಿಪಿ ಕಡೆಯಿಂದ ಮನವಿ ಸಲ್ಲಿಸಿದ್ದು ಹೌದು. ಅದೇ ರೀತಿ, ಎ ಎಸ್ ಎ ನವರೂ ಅವರ ಮುಖಂಡರಿಗೆ ನಮ್ಮ ವಿರುದ್ಧ ದೂರು ಸಲ್ಲಿಸುತ್ತಲೇ ಬಂದಿದ್ದರು. ಕ್ಯಾಂಪಸ್ ನಲ್ಲಿ ಎಬಿವಿಪಿಯ ಯಾವ ಪೋಸ್ಟರುಗಳೂ ಕಾಣದಂತೆ ಹರಿದುಹಾಕುತ್ತಿದ್ದ ರೋಹಿತ್ ವೆಮುಲ. ಸಹಜವಾಗಿಯೇ ಕ್ಯಾಂಪಸ್ ಪೊಲಿಟಿಕ್ಸ್ ನ ತಿಕ್ಕಾಟಗಳು ನಮ್ಮಲ್ಲಿದ್ದವು. ಎರಡೂ ಬಣದವರೂ ಆ ಕ್ಷಣದ ಉತ್ಕರ್ಷದಲ್ಲಿ ಮಾಡಿರುವ ವಾದ- ಪ್ರತಿವಾದಗಳು ಅವು. ಇದೇ ರೋಹಿತ್ ವೆಮುಲ ಆತ್ಮಹತ್ಯೆಗೆ ಕಾರಣ ಎಂಬುದನ್ನು ಒಪ್ಪುವುದಿಲ್ಲ. ಹೈಕೋರ್ಟ್ ವಿಚಾರಣೆ ಎರಡು ದಿನ ಇದೆ ಎಂದಿರುವಾಗ ರೋಹಿತ್ ಖಿನ್ನತೆಗೆ ಜಾರುವಂಥದ್ದು ಏನಾಯಿತು? ಅವನ ಜತೆಗಿರುವವರು ನಮಗಿವತ್ತು ಉಪನ್ಯಾಸ ಕೊಡುತ್ತಿದ್ದಾರೆ. ಆದರೆ ರೋಹಿತ್ ಹತಾಶೆಗೆ ಜಾರುತ್ತಿರುವುದನ್ನು ಗುರುತಿಸುವುದಕ್ಕೆ ಅವರಿಗೆ ಪುರಸೊತ್ತಿರಲಿಲ್ಲವೇ?

Leave a Reply