ಸುದ್ದಿಸಂತೆ: ಹೈದರಾಬಾದ್ ವಿವಿ ಪ್ರಕರಣದಲ್ಲೇನಾಯ್ತು?, ಪಂಜಾಬ್ ನಲ್ಲಿ ನುಸುಳುಕೋರರ ಬಲಿ, ಫರ್ಹಾನ್ ಅಖ್ತರ್ ದಾಂಪತ್ಯ ಅಂತ್ಯ…

ಫರ್ಹಾನ್ ಅಖ್ತರ್- ಅಧುನಾ

ರೋಹಿತ್ ಪ್ರಕರಣ: ವಿದ್ಯಾರ್ಥಿಗಳ ಅಮಾನತು ವಾಪಸ್, ಉಪನ್ಯಾಸಕರ ರಾಜೀನಾಮೆ

ಹೈದರಾಬಾದ್ ಸೆಂಟ್ರಲ್ ವಿವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೆಮುಲ ಅವರ ನಾಲ್ವರು ಸಹಪಾಠಿಗಳ ಮೇಲಿದ್ದ ಅಮಾನತನ್ನು ವಿವಿ ಗುರುವಾರ ತೆರವುಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ನೀಡಿದ್ದ ಹೇಳಿಕೆಯನ್ನು ಖಂಡಿಸಿ ವಿವಿಯ 10ಕ್ಕೂ ಹೆಚ್ಚು ಎಸ್.ಸಿ, ಎಸ್.ಟಿ ಸಮುದಾಯದ ಉಪನ್ಯಾಸಕರು ತಮ್ಮ ಆಡಳಿತಾತ್ಮಕ ಹುದ್ದೆಗಳಿಗೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇರಾನಿ ಅವರು ಬುಧವಾರ ಪತ್ರಿಕಾಗೋಷ್ಟಿ ಕರೆದು ರೋಹಿತ್ ವೆಮುಲ ಅತ್ಮಹತ್ಯೆ ಪ್ರಕರಣವನ್ನು ದಲಿತ ವರ್ಸಸ್ ದಲಿತೇತರ ಎಂದು ವರ್ಗಿಸುತ್ತಿರುವುದು ರಾಜಕೀಯ ಪ್ರೇರಿತ ಎಂದಿದ್ದರು.

ಇನ್ನುಳಿದಂತೆ ಪ್ರಕರಣದ ರಾಜಕೀಯ ಲಾಭ ಪಡೆಯುವ ಕೆಲಸ ಮುಂದುವರಿದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕ್ಯಾಂಪಸ್ ಗೆ ಭೇಟಿ ನೀಡಿ ಸರ್ಕಾರದ ವಿರುದ್ಧ ಆಕ್ರೋಶದ ಭಾಷಣ ಮಾಡಿದರು.

ದೇಶದ ನಾನಾ ಭಾಗಗಳಲ್ಲಿ ಈ ಪ್ರಕರಣದ ಸುತ್ತ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಬೆಂಗಳೂರಿನಲ್ಲಿ ಇದೇ ಪ್ರಕರಣವನ್ನಿಟ್ಟುಕೊಂಡು ಎಬಿವಿಪಿ ಕಚೇರಿ ಮೇಲೆ ದಾಳಿ ಮಾಡಿರುವ ಕಾಂಗ್ರೆಸ್ ನ ವಿದ್ಯಾರ್ಥಿ ಘಟಕ ಎನ್ ಎಸ್ ಯು ಐ ಕಾರ್ಯಕರ್ತರು ಗೂಂಡಾಗಿರಿ ಮೆರೆದಿದ್ದಾರೆ. ಎಬಿವಿಪಿಯ ಭವೇಶ್ ಕೋರೆ ಮೇಲೆ ಹಲ್ಲೆಯೂ ಆಗಿದೆ. ಈ ಸಂಬಂಧ ಐವರ ಬಂಧನವಾಗಿದ್ದು, ಅತಿಕ್ರಮ ಪ್ರವೇಶದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಬಿಗ್ ಬಿ, ಪ್ರಿಯಾಂಕ ಇನ್ ಕ್ರೆಡಿಬಲ್ ಇಂಡಿಯಾ ರಾಯಭಾರಿಗಳು

ಪ್ರವಾಸೋದ್ಯಮ ಇಲಾಖೆಯ ಇನ್ ಕ್ರೆಡಿಬಲ್ ಇಂಡಿಯಾದ ರಾಯಭಾರಿಗಳಾಗಿ ನಿರೀಕ್ಷೆಯಂತೆ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಆಯ್ಕೆಯಾಗಿದ್ದಾರೆ. ಆಶ್ಚರ್ಯದ ವಿಚಾರವೆಂದರೆ ಬಿಗ್ ಬಿ ಜೊತೆಗೆ ಪ್ರಿಯಾಂಕ ಚೋಪ್ರ ಕೂಡ ಆಯ್ಕೆಯಾಗಿರುವುದು. ಇನ್ನೂ ಈ ಇಬ್ಬರು “ಅತಿಥಿ ದೇವೊಭವ” ದ ರಾಯಭಾರಿಗಳಾಗಿ ಕಾರ್ಯನಿರ್ವಹಿಸಲಿದ್ದು ಅಧಿಕೃತ ಪ್ರಕಟಣೆ ಹೊರಬಿಳಬೇಕಷ್ಟೇ. ಬಾಲಿವುಡ್ ನಟ ಅಮೀರ್ ಖಾನ್ ಕಳೆದ 10 ವರ್ಷಗಳ ಕಾಲ ರಾಯಭಾರಿಯಾಗಿದ್ದರು. ಇವರು ಜಾಹಿರಾತು ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ನೂತನ ರಾಯಭಾರಿಗಳ ಆಯ್ಕೆಯಾಗಿದೆ.

ಉದ್ಯಮಿ ನಾಸಿಮ್ ಗೆ ಜೀವಾವಧಿ ಜೈಲು

ಕಾವಲುಗಾರನ ಮೇಲೆ ಕಾರು ಹಾಯಿಸಿ ಸಾಯಿಸಿದ್ದ ಕೇರಳದ ಬೀಡಿ ಉದ್ಯಮಿ ಮಹ್ಮದ್ ನಾಸಿಮ್ ಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 70 ಲಕ್ಷ ದಂಡ ವಿಧಿಸಿ ಆದೇಶ ನೀಡಿದೆ. ನಾಸಿಮ್ ನ ತನ್ನ ಕಾರಿನಲ್ಲಿ ಕಾವಲುಗಾರ ಚಂದ್ರಬೋಸ್ ಗೆ ಗುದ್ದಿದ್ದ! ಆಗ ತೀವ್ರವಾಗಿ ಗಾಯಗೊಂಡು 48 ದಿನಗಳ ಜೀವನ್ಮರಣ ಹೋರಾಟ ನಡೆಸಿ ಬೋಸ್ ಸಾವನಪ್ಪಿದನು. ಈ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಬೋಸ್ ಪತ್ನಿ ಆರೋಪಿಗೆ ಮರಣ ದಂಡನೆ ವಿಧಿಸಿ 5 ಕೋಟಿ ಪರಿಹಾರ ಕೋರಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ಬುಧವಾರ ದೋಷಿ ಎಂದು ಪರಿಗಣಿಸಿ ಶಿಕ್ಷೆಯ ಘೋಷಣೆಯನ್ನು ಗುರುವಾರಕ್ಕೆ ಮುಂದೂಡಿತ್ತು. ಈಗ ಜೀವಾವಧಿ ಶಿಕ್ಷೆ ವಿಧಿಸಿ ಸಂತ್ರಸ್ತನ ಕುಟುಂಭಕ್ಕೆ 50 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪಿತ್ತಿದೆ.

ಪಂಜಾಬ್ ನಲ್ಲಿ ನುಸುಳುಕೋರರ ಹತ್ಯೆ, ಎಸ್ಪಿ ನಿವಾಸ ತಪಾಸಣೆ

ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿಯ ನಂತರ ಭದ್ರತಾ ವ್ಯವಸ್ಥೆ ಚುರುಕಾಗಿರುವುದು ಸ್ಪಷ್ಟವಾಗಿದೆ. ಗುರುವಾರ ಮುಂಜಾನೆ ಪಾಕಿಸ್ತಾನದಿಂದ ಗಡಿಯೊಳಗೆ ನುಸುಳಲು ಪ್ರಯತ್ನಿಸಿದ ಮೂವರನ್ನು ಗಡಿ ಭದ್ರತಾ ಪಡೆಯ ಯೋಧರು ಕೊಂದಿದ್ದಾರೆ. ಇನ್ನೊಂದೆಡೆ, ಗುರುದಾಸ್ಪುರ ಮತ್ತು ಅಮೃತಸರದ ನಾಲ್ಕು ಪ್ರದೇಶಗಳ ಮೇಲೆ ರಾಷ್ಟ್ರೀಯ ತನಿಖಾ ದಳ ತಪಾಸಣಾ ದಾಳಿ ಮಾಡಿದೆ. ಮಾದಕ ದ್ರವ್ಯ ಜಾಲವನ್ನು ಗುರಿಯಾಗಿರಿಸಿಕೊಂಡು ನಡೆದಿರುವ ದಾಳಿ, ಇದರೊಂದಿಗೆ ಬೆಸೆದುಕೊಂಡಿರುವ ಉಗ್ರರ ನಂಟನ್ನು ಪರೀಕ್ಷಿಸಲಿದೆ ಎನ್ನಲಾಗಿದೆ. ಅಲ್ಲದೇ, ಉಗ್ರದಾಳಿ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದ ಗುರುದಾಸ್ಪುರ ಎಸ್ ಪಿ ವಿಚಾರಣೆ ಮುಂದುವರಿದಿದೆ. ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ಆಗಿದೆ.

ಫರ್ಹಾನ್ ಅಖ್ತರ್ ಮದುವೆ ಮುರಿದು ಬಿತ್ತು

ಬಾಲಿವುಡ್ ನಟ- ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಸಂಗಾತಿ ಅಧುನಾ ಅವರೊಂದಿಗಿನ 15 ವರ್ಷಗಳ ದಾಂಪತ್ಯ ಕೊನೆಗೊಳಿಸಿದ್ದಾರೆ. ‘ಪರಸ್ಪರ ಒಪ್ಪಿಗೆಯಿಂದ ಸಂಬಂಧ ಕೊನೆಗೊಳಿಸಿಕೊಳ್ಳುತ್ತಿದ್ದೇವೆ. ಇದರ ಪರಿಣಾಮ ಮಕ್ಕಳ ಮೇಲಾಗದಂತೆ ಆದ್ಯತೆ ವಹಿಸುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು ದಾಂಪತ್ಯದ ಕತೆಯಾದರೆ, ಬಾಲಿವುಡ್ ನಲ್ಲಿ ಸಂಬಂಧಗಳ ಮುರಿತ ಮಾಮೂಲು ಎನಿಸಿದೆ. ಜತೆವಾಸದಲ್ಲಿದ್ದ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಸಹ ಬೇರೆಯಾಗಿದ್ದಾರೆ ಎಂಬ ವದಂತಿ ದಟ್ಟವಾಗಿದೆ.

Leave a Reply