ಕನ್ನಡದ ಮನಸುಗಳು ತಪ್ಪಿಸಿಕೊಳ್ಳಬಾರದ ಭಾನುವಾರದ ಈ ಕಾರ್ಯಕ್ರಮ

ಜನವರಿ 24ರಂದು ಬೆಳಿಗ್ಗೆ 10.30ರಿಂದ ಸಂಜೆ 3.30ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ಚಿತ್ರಪ್ರದರ್ಶನವೊಂದನ್ನುಬನವಾಸಿ ಬಳಗ ಹಮ್ಮಿಕೊಂಡಿದೆ. ಭಾರತದ ಇವತ್ತಿನ ಭಾಷಾ ನೀತಿ, ಅದರಲ್ಲಿನ ತೊಡಕುಗಳು, ಅದರಿಂದಾಗಿ ಸಾಮಾನ್ಯ ಜನರಿಗೆ ಆಗುತ್ತಿರುವ ತೊಂದರೆಗಳು, ಆಗಬೇಕಿರುವ ಬದಲಾವಣೆಗಳನ್ನು ಬಿಂಬಿಸುವ ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತಪ್ರವೇಶವಿದೆ.

ಚಿತ್ರಪ್ರದರ್ಶನದ ಉದ್ದೇಶ- ಬನವಾಸಿ ಬಳಗದವರು ಹೇಳುವಂತೆ: ಕಳೆದ ಅರವತ್ತು ವರ್ಷಗಳಿಂದಲೂ ಕೇಂದ್ರ ಸರ್ಕಾರ ತನ್ನ ಆಡಳಿತಕ್ಕೆಂದು ನಿಗದಿ ಮಾಡಿಕೊಂಡು ಬಳಸುತ್ತಿರುವ ಭಾಷಾ ನೀತಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಎರಡೇ ಭಾಷೆಗಳಿಗೆ ಮಾನ್ಯತೆ ಕಲ್ಪಿಸಿದೆ.  ಹೀಗೆ ಎರಡೇ ಭಾಷೆಗೆ ಆದ್ಯತೆ ಕೊಡುವ ನಿಲುವು ಹಂತ ಹಂತವಾಗಿ ಇನ್ನುಳಿದ ಎಲ್ಲ ಭಾಷೆಗಳಿಗೂ ಅವುಗಳ ಮೂಲ ಸ್ಥಾನದಲ್ಲೇ ಕೊಡಲಿಯೇಟು ಹಾಕುವ ಕೆಲಸ ಮಾಡುತ್ತಿದೆ.

ಭಾರತೀಯರನ್ನೆಲ್ಲ ಹಿಂದಿ/ಇಂಗ್ಲಿಷ್ ಮೂಲಕವೇ ತಲುಪುತ್ತೇವೆ ಅನ್ನುವುದು ಮೂರ್ಖತನವೇ ಸರಿ. ಯಾಕೆ ಅಂತೀರಾ? ಕೇಂದ್ರ ಸರ್ಕಾರ ಇಂದು ಅಂಚೆ, ಬ್ಯಾಂಕು, ವಿಮೆ, ಪಿಂಚಣಿ, ತೆರಿಗೆ, ರೈಲು, ವಿಮಾನ ಸೇವೆ, ಹೆದ್ದಾರಿ, ತೈಲೋತ್ಪನ್ನಗಳು ಹೀಗೆ ಹತ್ತಾರು ಬಗೆಯ ನಾಗರೀಕ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಈ ಎಲ್ಲ ಸೇವೆಗಳು ಸರಿಯಾಗಿ, ಪ್ರಾಮಾಣಿಕವಾಗಿ ಭಾರತದ ಬೇರೆ ಬೇರೆ ಭಾಷಿಕರನ್ನು ತಲುಪಲು ಅವರ ಭಾಷೆಯಲ್ಲಿ ಈ ಸೇವೆಗಳನ್ನು ಒದಗಿಸಬೇಕು ಅನ್ನುವ ಸಣ್ಣ ತಿಳುವಳಿಕೆಯನ್ನು ಕೈ ಬಿಟ್ಟು ಎಲ್ಲೆಡೆ ಹಿಂದಿ/ಇಂಗ್ಲಿಷ್ ಮಾತ್ರ ಬಳಕೆ ಮಾಡುತ್ತಿದೆ. ಇದು ಹಿಂದಿಯೇತರ ಭಾಷಿಕರಿಗೆ ತೀವ್ರ ತೊಂದರೆಯನ್ನುಂಟು ಮಾಡಿರುವುದಲ್ಲದೇ ಸರ್ಕಾರದ ಯೋಜನೆಗಳು ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಪಡೆಯದಂತೆ ತಡೆ ಹಿಡಿದಿವೆ.

ಕರ್ನಾಟಕದ ವಿಷಯಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ನಗರ, ಪಟ್ಟಣ, ಹಳ್ಳಿಯೆನ್ನದೇ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ಕೇಂದ್ರ ಸರ್ಕಾರಿ ನೌಕರಿ ಪಡೆಯಲು ಹಿಂದಿ/ಇಂಗ್ಲಿಷ್ ಗೊತ್ತಿದ್ದರೆ ಸಾಕು ಅನ್ನುವ ನಿಲುವಿನಿಂದಾಗಿ ಕರ್ನಾಟಕದೊಳಗಿನ ಕೆಲಸಗಳಲ್ಲಿ ಕನ್ನಡವೇ ಗೊತ್ತಿಲ್ಲದ ಜನರು ದೊಡ್ಡ ಮಟ್ಟದಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಹಿಂದಿ/ಇಂಗ್ಲಿಷ್ ಎರಡೇ ಭಾಷೆಯಲ್ಲಿ ಆಡಳಿತ ಅನ್ನುವ ನಿಲುವಿನಿಂದಾಗಿ ಈ ಎಲ್ಲ ಕಚೇರಿಗಳು “ಕನ್ನಡ ಮುಕ್ತ” ವಾಗುತ್ತಿವೆ. ಒಬ್ಬ ಹಳ್ಳಿಯ ರೈತ ಬ್ಯಾಂಕಿಗೆ ಬಂದರೆ ಏನು ತಿಳಿಯದೇ ಕಕ್ಕಾಬಿಕ್ಕಿಯಾಗುವಂತಹ ಬೆಳವಣಿಗೆ ಬಹುತೇಕ ಊರುಗಳಲ್ಲಿ ಕಾಣುತ್ತಿದ್ದೇವೆ. ಈ ಬಗ್ಗೆ ದನಿಯೆತ್ತದೇ ಹೋದರೆ ಇನ್ನು ಹತ್ತು ಹದಿನೈದು ವರ್ಷದಲ್ಲಿ ಕರ್ನಾಟಕದ ಕೇಂದ್ರ ಸರ್ಕಾರಿ ಸಂಸ್ಥೆಗಳೆಲ್ಲದರಲ್ಲಿ ಕನ್ನಡ ಪೂರ್ತಿ ಮಾಯವಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಭಾರತದ ಭಾಷೆಗಳ ಉಳಿವು, ಬೆಳೆವಿನ ಬಗ್ಗೆ ಕಾಳಜಿಯುಳ್ಳ ಎಲ್ಲರೂ ಪಾಲ್ಗೊಂಡು ಭಾಷಾ ಸಮಾನತೆಗೆ ದನಿಗೂಡಿಸಬೇಕಾಗಿ ಕೋರಿಕೆ.

Leave a Reply