ದೇಶಾದ್ಯಂತ ಎನ್ ಐಎ, ಎಟಿಎಸ್ ಏಕಕಾಲಿಕ ದಾಳಿ; ಕರ್ನಾಟಕದಲ್ಲೂ ಆರು ಶಂಕಿತ ಇಸಿಸ್ ಉಗ್ರರ ಸೆರೆ

ಡಿಜಿಟಲ್ ಕನ್ನಡ ಟೀಮ್

ರಾಷ್ಟ್ರೀಯ ತನಿಖಾ ದಳವು (ಎನ್ ಐಎ) ಕರ್ನಾಟಕ ಸೇರಿದಂತೆ ದೇಶದ ನಾನಾ ಕಡೆ ಶುಕ್ರವಾರ ಮುಂಜಾನೆ ಏಕಕಾಲಿಕ ಕಾರ್ಯಾಚರಣೆ ನಡೆಸಿ 25 ಕ್ಕೂ ಹೆಚ್ಚು ಇಸಿಸ್ ಬೆಂಬಲಿಗ ಶಂಕಿತ ಉಗ್ರರನ್ನು ಬಂಧಿಸಿದ್ದು, ಇವರು ಗಣರಾಜ್ಯೋತ್ಸವ ವೇಳೆ ನಡೆಸಲು ಉದ್ದೇಶಿಸಿದ್ದ ದಾಳಿ ತಂತ್ರವನ್ನು ಬೇಧಿಸಿದೆ.

ಬಂಧಿತರು ಇಸಿಸ್ ಉಗ್ರಗಾಮಿ ಸಂಘಟನೆ ಜತೆ ಸಂಪರ್ಕ ಹೊಂದಿದ್ದು, ಭಯೋತ್ಪಾದನೆ ಚಟುವಟಿಕೆ ಮೂಲಕ ಜಗತ್ತಿನ ಮೇಲೆ ಇಸ್ಲಾಂ ಪ್ರಭುತ್ವ ಸಾಧನೆ ಉದ್ದೇಶದ ಇಸಿಸ್ ಉಗ್ರಗಾಮಿ ಸಂಘಟನೆ ಭಾರತದಲ್ಲಿ ತನ್ನ ಸಂಪರ್ಕ ಜಾಲವನ್ನು ತ್ವರಿತಗತಿಯಲ್ಲಿ ವಿಸ್ತರಿಸುತ್ತಿರುವ ಆತಂಕದ ವಿಚಾರ ಇದರಿಂದ ಬೆಳಕಿಗೆ ಬಂದಿದೆ.

ಎನ್ ಎಎ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಜತೆ ಕರ್ನಾಟಕ ಪೊಲೀಸರ ನೆರವಿನೊಂದಿಗೆ ಬೆಂಗಳೂರಿನಲ್ಲಿ ನಾಲ್ವರು, ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ತಲಾ ಒಬ್ಬರು ಉಗ್ರರನ್ನು ಗುರುವಾರ ಮುಂಜಾನೆ ವಶಕ್ಕೆ ತೆಗೆದುಕೊಂಡಿದ್ದು, ಎ.ಕೆ. 47 ಸೇರಿದಂತೆ ಅಪಾರ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಬೆಂಗಳೂರಲ್ಲಿ ಮೂರು ಕಡೆ ಹಾಗೂ ಹುಬ್ಬಳ್ಳಿಯಲ್ಲಿ ಒಂದು ಕಡೆ ದಾಳಿ ಮಾಡಲು ಯೋಜನೆ ರೂಪಿಸಿದ್ದರು. ದಾಳಿ ಸ್ಥಳಗಳನ್ನು ಗುರುತು ಹಾಕಿಕೊಂಡಿದ್ದ ನಕ್ಷೆ ಕೂಡ ಸಿಕ್ಕಿದೆ.

ಎಟಿಎಸ್ ಬೆಂಗಳೂರಿನಲ್ಲಿ ಇತ್ತೀಚೆಗೆ ಬಂಧಿಸಿದ್ದ ಮೌಲ್ವಿ ಸೈಯದ್ ಅನ್ಸರ್ ಖಾಸ್ಮಿ ಶಾ ನೀಡಿದ ಮಾಹಿತಿ ಮೇರೆಗೆ ಕರ್ನಾಟಕದಲ್ಲಿ ಆರು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ಜಕ್ಕಸಂದ್ರದ ಮೊಹ್ಮದ್ ಸೋಹೆಲ್, ಸಾರಾಯಿಪಾಳ್ಯದ ಮಹಮ್ಮದ್ ಅಪ್ಜಲ್, ಪೆನ್ಸನ್ ಮೊಹಲ್ಲಾದ ಆಸೀಫ್, ಥಣಿಸಂದ್ರದ ಅಹಾದ್, ಮಂಗಳೂರಿನ ಬಜ್ಪೆ ಬಳಿ ಪೆರ್ಮುದೆಯ ನಜಮ್ ಉಲ್-ಹುದಾ, ತುಮಕೂರಿನ ಪುರಸ್ ಕಾಲೋನಿಯ ಸೈಯದ್ ಮುಜಾಹಿದ್ ಬಂಧಿತರು. ಇವರೆಲ್ಲರೂ ಇಸಿಸ್ ಸಂಘಟನೆ ಜತೆ ಸತತ ಸಂಪರ್ಕ ಹೊಂದಿದ್ದು, ದೇಶಾದ್ಯಂತ ಯುವಕರು, ಅದರಲ್ಲೂ ವಿದ್ಯಾರ್ಥಿಗಳನ್ನು ಸಂಘಟನೆ ಸೇರಲು ಪ್ರೇರೇಪಿಸುತ್ತಿದ್ದರು. ಅಲ್ಲದೇ ಗಣರಾಜ್ಯೋತ್ಸವ ದಿನದಂದು ದಾಳಿ ನಡೆಸಲು ತಂತ್ರ ರೂಪಿಸುತ್ತಿದ್ದರು ಎಂದು ಗೊತ್ತಾಗಿದೆ.

ಎನ್ ಐಎ ಸತತ ಏಳು ತಿಂಗಳಿಂದ ಇವರ ಚಟುವಟಿಕೆಗಳ ಮೇಲೆ ನಿಗಾ ವಹಿಸಿತ್ತು. ಇವರ ದೂರವಾಣಿ ಕರೆಗಳು, ಬ್ಯಾಂಕ್ ಖಾತೆಗಳು, ಇ-ಮೇಲ್ ಗಳನ್ನು ಸತತ ಪರಿಶೀಲನೆಗೆ ಒಳಪಡಿಸಿತ್ತು. ಇವರ ಮೊಬೈ ಲ್ಗೆ ಹೆಚ್ಚು ವಿದೇಶಿ ಕರೆಗಳು ಬಂದಿದ್ದು, ಅದೇ ರೀತಿ ಬ್ಯಾಂಕ್ ಖಾತೆಗಳಿಗೂ ವಿದೇಶಿ ಮೂಲಗಳಿಂದ ಹಣ ಜಮಾ ಆಗಿದೆ. ಇ-ಮೇಲ್, ಸ್ಕೈಪ್, ಫೇಸ್ ಬುಕ್ ಮೂಲಕ ಇಸಿಸ್ ಸಂಘಟನೆ ಸದಸ್ಯರ ಜತೆ ಸತತ ಸಂಪರ್ಕ ಸಾಧಿಸಿದ್ದರು. ‘ಡಾಕ್ಟರ್ ಮೆಡಿಸಿನ್ ಲೀಕ್ ಕರೇಗಾ’ ರಹಸ್ಯ ಸಂಕೇತದಡಿ ಕಾರ್ಯಾಚರಣೆ ನಡೆಸುತ್ತಿದ್ದರು.

ಮಂಗಳೂರಿನಲ್ಲಿ ಬಂಧಿತನಾಗಿರುವ ನಜಮ್ ಉಲ್-ಹುದಾ ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಿಂದೆ ಕೆಮಿಕಲ್ ಎಂಜಿನಿಯರ್ ವಿದ್ಯಾರ್ಥಿ ಆಗಿದ್ದು, ಎರಡು ವರ್ಷಕ್ಕೆ ವ್ಯಾಸಂಗ ಮೊಟಕುಗೊಳಿಸಿದ್ದ. ಅಲ್ಲಿಂದ ಮಂಗಳೂರಿಗೆ ತೆರಳಿ ಚಟುವಟಿಕೆ ನಡೆಸಿದ್ದ. ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಮಾರಂಭಗಳಲ್ಲಿ ಮಾಡಿರುವ ಭಾಷಣಗಳ ವಿಡಿಯೋ ಸಿಕ್ಕಿದೆ.

ಎನ್ ಐಎ ಗುರುವಾರ ಮಧ್ಯಾಹ್ನವಷ್ಟೇ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬೆಂಗಳೂರು, ತುಮಕೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಕಾರ್ಯಾಚರಣೆಗೆ ಸಹಕಾರ ಬೇಕು ಎಂದು ಮಾಹಿತಿ ನೀಡಿದ್ದರು. ಅತ್ಯಂತ ಗೌಪ್ಯವಾಗಿ ಕಾರ್ಯಾಚರಣೆ ನಡೆದಿದೆ. ರಾಜ್ಯ ಪೊಲೀಸರು ಹೊರಗಿನಿಂದ ಅವರಿಗೆ ಸಹಕಾರ ನೀಡಿದರಾದರೂ ಒಟ್ಟಾರೆ ಕಾರ್ಯಾಚರಣೆ ಬಗ್ಗೆ ವಿಸ್ತೃತ ಮಾಹಿತಿ ಇರಲಿಲ್ಲ.

ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಂಡ ನಂತರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ಗೃಹ ಇಲಾಖೆಗೆ ಎಸ್‍ಐಟಿ ಮಾಹಿತಿ ನೀಡಿದೆ.

ಕರ್ನಾಟಕ ಅಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಉತ್ತರಖಂಡ್, ರಾಜಸ್ತಾನ, ದೆಹಲಿಯಲ್ಲೂ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

Leave a Reply