ಬಸಿರಾಗೋದಿಲ್ಲ ಅನ್ನೋದು ಬಿಟ್ರೆ ಅಪ್ಪನಾದವನ ಹೊಣೆ ಕಡಿಮೆ ಏನಲ್ಲ

 

author-shamaಮನೆಗೊಂದು ಕಂದ ಬರುವುದೆಂದರೆ ಅಮ್ಮನಿಗಿರುವಷ್ಟೇ ಖುಷಿ, ಜವಾಬ್ದಾರಿ ಅಪ್ಪನಿಗೂ ಇರಬೇಕು. ಬದಲಾಗುತ್ತಿರುವ ಈ ದಿನಮಾನದಲ್ಲಿ ಅಪ್ಪಂದಿರ ಗತ್ತು ಗೈರತ್ತುಗಳು ಬದಲಾಗಿ ಆ ಜಾಗಕ್ಕೆ ಮಮತೆ ಮಮಕಾರಗಳು ಅಡಿಯಿಡುತ್ತಿವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಮಗು ಹುಟ್ಟುವ ಮುಂಚಿನ ದಿನಗಳಲ್ಲೂ ಇವು ಕಾಣಬೇಕಿದೆ. ಗರ್ಭಿಣಿಯ ಬಹಳ ಸಮೀಪವಿರುವ ಜೀವವೆಂದರೆ ಗಂಡನೇ ಆಗಿದ್ದು ಅವನು ಕೂಡ ಅವಳಷ್ಟೇ ಶ್ರದ್ಧೆಯಿಂದ ಅಪ್ಪನಾಗುವ ತಯಾರಿ ನಡೆಸಬೇಕು. ಬಯಕೆಗಳಿರುವುದಿಲ್ಲ, ವಾಂತಿಯಾಗುವುದಿಲ್ಲ ಅನ್ನೋದು ಅವನ ಅದೃಷ್ಟ. ಉಳಿದಂತೆ ಮಗುವನ್ನ ಬರಮಾಡಿಕೊಳ್ಳುವ ಎಲ್ಲ ತಯಾರಿಗೆ ಅವನೂ ಸಾಥ್ ಕೊಟ್ಟರೆ ಅದು ತಾಯಿ ಮತ್ತು ಮಗು ಇಬ್ಬರ ಮೇಲೂ ಬಹಳ ಪರಿಣಾಮ ಬೀರಬಲ್ಲದು.

 ಅಪ್ಪನಾಗಲಿರುವ ಗಂಡಸರೇ ಇಲ್ಕೇಳಿ : ನೀವು ಬಸುರಿಯಲ್ಲ ಅನ್ನೋ ಒಂದೇ ಕಾರಣಕ್ಕೆ ಗೂಳಿ ಗುಂಡನ ಥರ ಇರಬೇಡಿ. ಅಪ್ಪ ಆಗೋದು ಅಂದ್ರೆ ನಿಮ್ಮ ಹೆಂಡತಿ ಹೆರೋದು, ನಿಮ್ಮ ಜೀನ್ಸ್^ಗಳನ್ನ ಮುಂದುವರಿಸೋದಷ್ಟೇ ಅಲ್ಲ. ಕೂಸು ನಿಮ್ಮ ಕನಸಿನ ಮುಂದುವರಿಕೆ. ಬದುಕಲ್ಲಿ ಮತ್ತೆ ಮತ್ತೆ ಬಾರದ ಈ ಸವಿ ಘಳಿಗೆಯನ್ನು ರಸಘಳಿಗೆಯಾಗಿಸುವಲ್ಲಿ ನಿಮ್ಮ ಪಾತ್ರವೂ ಮಹತ್ವದ್ದು.

ಗರ್ಭಗುಡಿಯೊಳಗಿನ ಕಂದನಿಗೆ ಅಮ್ಮನ ಮಾತಿನಷ್ಟೇ ಸ್ಪಷ್ಟವಾಗಿ ಅಪ್ಪನ ಮಾತೂ ಕೇಳುತ್ತದೆ. ಅಮ್ಮನ ಜತೆ ನೀವು ಸಂತಸವಾಗಿದ್ದರೆ ಮಗುವೂ ಆನಂದ… ಲವ ಕುಶರಂಥ ಮಕ್ಕಳು ಬೇಕಾದರೆ ಲವ್, ಖುಷ್ ಕೂಡ ಇರಬೇಕು. ಹಾಗಂತ ಅಣ್ಣಾವ್ರು ಎತ್ತಿದ ಹಾಗೆ ಎತ್ಕೊಂಡು “ನಿನ್ನಂಥ ಮಗುವಾಗಲಿ” ಅಂತ ಹಾಡಿ ಡಾನ್ಸ್ ಮಾಡಿಸಬೇಡಿ. ಬಹಳ ಸೂಕ್ಷ್ಮವಾದ ಹೊತ್ತು. ರೆಪ್ಪೆ ಕಣ್ಣನ್ನು ಕಾದಂತೆ ಕಾಯಬೇಕು. ಅವಳ ಕನಸುಗಳಿಗೆ ಕಿವಿಯಾಗಿ. ನಿಮ್ಮ ಕನಸುಗಳೊಂದಷ್ಟನ್ನು ಕೂಡಿಸಿ. ನೋವುಗಳಿದ್ದರೆ ಕಳೆದು ಒಗೀರಿ. ಬಸುರಿ ಬಯಕೆಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಪೂರೈಸಿ. ಧೂಮಪಾನ ಮದ್ಯಪಾನಗಳನ್ನು ನೀವೂ ಬಿಟ್ಟು ಬಿಡಿ. ಮಗುವನ್ನು ಇಂಜಿನಿಯರ್, ಡಾಕ್ಟರ್ ಮಾಡಬೇಕು ಎಂಬ ಚರ್ಚೆಗಿಂತ ಮಗು ಮಡಿಲಿಗೆ ಬಂದ ಮೇಲೆ ಮಗುವಿನ ಜತೆ ಏನೇನು ಆಡುತ್ತೀರಿ, ಹೇಗೆಲ್ಲ ಕುಣೀತೀರಿ ಅನ್ನೋದರ ಚರ್ಚೆ ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ ಸಂಶೋಧಕರು. ಎಲ್ಲಕ್ಕೂ ಹೆಚ್ಚಾಗಿ ತುಂಬ ಸಂಭ್ರಮದಿಂದ ಮಗುವಿನ ಬರುವಿಕೆಯನ್ನು ಸ್ವಾಗತಿಸಿ. ದಂಪತಿಗಳಿಬ್ಬರೂ ಎಷ್ಟು ಹೆಚ್ಚು ಸಮಯ ಜತೆಯಾಗಿರುತ್ತೀರೋ ಮಗುವಿಗೆ ಅಷ್ಟು ಒಳ್ಳೆಯದು. ಇದೇ ಸಂತೋಷ ತಾಯಿಯೊಳಕ್ಕೆ ರವಾನೆಯಾಗಿ ಮಗುವಿನ ಪ್ರಮುಖ ಅಂಗವಾದ ಮೆದುಳು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಮತ್ತು ಹುಟ್ಟಿನ ನಂತರ ಇಂಥ ಮಕ್ಕಳ ಕ್ಷಮತೆಯೂ ಹೆಚ್ಚಿರುತ್ತದೆ ಎನ್ನುತ್ತಾರೆ ತಜ್ಞರು. ಅಮ್ಮನ ದನಿಯಷ್ಟೇ ಅಪ್ಪನ ದನಿಗೂ ಒಲುಮೆಗೂ ಮಗು ಸ್ಪಂದಿಸುತ್ತದೆ. ತಾನು ಇವರಿಗೆ ಬೇಕಾಗಿದ್ದೇನೆ ಎಂಬ ಭಾವವೇ ಮಗುವಿಗೆ ನಿಮ್ಮ ಮಮತೆಯ ಬಿಸುಪನ್ನು ನೀಡುತ್ತದೆ. ಶಿಕಾಗೋ ವಿಶ್ವವಿದ್ಯಾಲಯದಲ್ಲಿನ ಪ್ರಸವಪೂರ್ವ ಸಂಗೀತ ಮತ್ತು ಸಂಶೋಧನೆ ತಜ್ಞರಾದ ಜಾನೆಲಿನ್ ಹಟೆನ್^ಲಾಕರ್ ಅವರ ಅಭಿಪ್ರಾಯದಂತೆ “ಅಪ್ಪ ಅಮ್ಮ ಇಬ್ಬರೂ ನಿರಂತರ ಗರ್ಭದೊಳಗಿನ ಕೂಸಿನೊಡನೆ ಗರಿಷ್ಟ ಸಂಭಾಷಣೆ ಮಾಡಿದರೆ ಅಂಥ ಮಕ್ಕಳು ಓದು ಮತ್ತು ಗಣಿತದಲ್ಲಿ ಮುಂದಿರುತ್ತಾರೆ. ಜತೆಗೇ ಹಾಡುವುದು, ಕಥೆ ಹೇಳುವುದು ಭಾಷಾ ಕಲಿಕೆಯನ್ನು ಉದ್ದೀಪಿಸುತ್ತದೆ.”

ಕೆಲಸ ಕಾರ್ಯ ಬಿಟ್ಟು ಮನೇಲಿರಿ ಅಂತಲ್ಲ; ಈ ದಿನಗಳಲ್ಲಿ ಬೇರೆಲ್ಲದಕ್ಕಿಂತ ಹೆಚ್ಚಿನ ಆದ್ಯತೆ, ಪ್ರಾಮುಖ್ಯತೆ ಇದೇ ಆಗಿರಲಿ. ಗರ್ಭಿಣಿ ಮಡದಿಯ ಜತೆ ಕೂತು ಸುಮ್ಮನೇ ಹರಟುವುದು, ಕನಸುವುದು ಮಗುವಿಗೆ ಧನಾತ್ಮಕ ಸಂದೇಶ ರವಾನಿಸುತ್ತದೆ. ಮನೆಗೆ ಬೇಗ ಬಂದಾಗೆಲ್ಲ ಮಾರು ದೂರ ಜತೆಯಾಗಿ ವಾಕಿಂಗ್, ಕಷ್ಟವಾದರೆ ಒಂದೊಳ್ಳೆ ಓದು ಯಾ ಸಂಗೀತ, ಒಬ್ಬರಿಗೊಬ್ಬರು ಆತು ಕೂತು ಕಾಮಿಡಿ ಮೂವಿ ಎಲ್ಲ ಚೆಂದ. ಇವು ಬೋರ್ ಅನಿಸಿದರೆ ಸುಡೊಕು, ಪದಬಂಧ ಬಿಡಿಸುವಂಥ ಜಾಯಿಂಟ್ ವೆಂಚರ್, ಆಕೆಗಿಷ್ಟವಾಗುವ ತಿಂಡಿ ತಯಾರಿಯೂ ಸೈ. ಅದೂ ಸಾಕಾದಾಗ ಚೆಸ್, ಪಗಡೆಯ0ಥ ಮೈಂಡ್ ಗೇಮ್ಸ್ ಆಡಿ ಆಕೆಯನ್ನೇ ಗೆಲ್ಲಿಸಿ. ಹೇಗೂ ಯಾವತ್ತೋ ನಿಮಗೆ ಸೋತಿದ್ದಾಳಲ್ಲ ಹುಡುಗಿ!

ಎಂಥ ಭಿನ್ನಾಭಿಪ್ರಾಯ, ಸಮಸ್ಯೆಗಳು ಎದುರಾದರೂ ಈ ಹೊತ್ತಿನಲ್ಲಿ ಜಗಳ, ವಾಗ್ವಾದ, ಹೊಡೆದಾಟಗಳು ಸುತಾರಂ ಕೂಡದು. ಇದು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಲವಲೇಶ ಸಂಶಯವಿಲ್ಲ. ಇಂಥವುಗಳನ್ನ ಕೇಳಿ ಜನಿಸಿದ ಮಗುವಿಗೆ ನಿದ್ರಾಹೀನತೆ, ಖಿನ್ನತೆ, ಉದ್ವೇಗಗಳಂಥ ಅಸ್ವಸ್ಥತೆ ಕಾಡುವುದು ಬಹುತೇಕ ಖಚಿತ. ಇನ್ನೂ ಭೂಮಿಗೆ ಬಾರದ ಕಂದನಿಗೆ ಈ ಕೊಡುಗೆ ಕೊಡಬೇಡಿ. ಜಗತ್ತಿಗೆ ತೆರೆದುಕೊಳ್ಳುವ ವಿಸ್ಮಯವೊಂದು ಹೊರ ಬರುವ ಮೊದಲೇ ವಿಕೃತಿಗಳನ್ನ ಕಾಣಬಾರದು. ಅದು ದೇಹಕ್ಕೂ ಒಳ್ಳೆಯದಲ್ಲ; ದೇಶಕ್ಕೂ ಒಳ್ಳೆಯದಲ್ಲ. ಮುಂದೆ ನಿಮ್ಮದೇ ಮನೆಯ ಗರುಡಗಂಭವಾಗಲಿರುವ ಜೀವ, ಹುಟ್ಟಿನಲ್ಲೇ ಗಟ್ಟಿಯಾಗಿಸುವುದು ನಿಮ್ಮಿಂದಷ್ಟೇ ಸಾಧ್ಯ ಮತ್ತು ಇದು ಸಾಧನೆಯೂ ಹೌದು ನೆನಪಿರಲಿ. Happy ಅಪ್ಪನಾಗಿ.

2 COMMENTS

  1. ಹೇಳುವ ವಿಚಾರವನ್ನು (rather ಚುಚ್ಚಿ ಹೇಳುವ ಇಲ್ಲವೇ ಒತ್ತುಕೊಟ್ಟು ವಿಚಾರವನ್ನೂ) ವಿನೋದಲಹರಿಯಲ್ಲಿ ಹೇಳುವ ರೀತಿ ಅಪ್ಯಾಯಮಾನವಾದದ್ದು. ವೆರಿಗುಡ್

  2. ನಿಮ್ಮ ಪ್ರತಿಕ್ರಿಯೆಯೇ ನಮ್ಮ ಚಾಲಕ ಶಕ್ತಿ. ಧನ್ಯವಾದ

Leave a Reply