ಬೈಎಲೆಕ್ಷನ್ಗೆ ದಿಗ್ವಿಜಯ್ ಓಡ್ಬಂದವ್ರೆ, ಮೇನ್ ಎಲೆಕ್ಷನ್ಗೆ ಸೋನಿಯಾ ಫ್ಯಾಮಿಲಿನೇ ಬರಬೇಕೇನೋ..?!

ಇಂಟರ್ನೆಟ್ ಚಿತ್ರ

ಡಿಜಿಟಲ್ ಕನ್ನಡ ವಿಶೇಷ

ಪರಿಸ್ಥಿತಿ ಎಲ್ಲಿಗೆ ಬಂತು ನೋಡಿ. ಇರೋ ಮೂರು ಟಿಕೆಟ್ ಫೈನಲೈಸ್ ಮಾಡೋಕೆ ಕಾಂಗ್ರೆಸ್  ಹೈಕಮಾಂಡೇ ಬೆಂಗಳೂರಿಗೆ ಬಂದು ಕೂತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿರಬಹುದು, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಾಗಿರಬಹುದು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಾಗಿರಬಹುದು, ಇಲ್ಲಿರೋ ಮುಖಂಡರಿಗೆ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡೋ ತಾಕತ್ತಿಲ್ಲ ಅಂತ ಖುದ್ದು ಕಾಂಗ್ರೆಸ್ ವರಿಷ್ಠ ದಿಗ್ವಿಜಯ್ ಸಿಂಗ್ ಅವರೇ ಇಂದೋರ್ ನಿಂದ ಬೆಂಗಳೂರಿಗೆ ಬಂದು, ಕುಮಾರಕೃಪದಲ್ಲಿ ಕ್ಯಾಂಪ್ ಮಾಡಿದ್ದಾರೆ.

ನಡೀತಾ ಇರೋದು ಬೈ ಎಲೆಕ್ಷನ್. ಇಡೀ ವಿಧಾನಸಭೆ ಚುನಾವಣೆ ಏನೂ ಅಲ್ಲ. ಅದೂ ಉಳಿದಿರೋ ಎರಡುಕಾಲು ವರ್ಷ ಅವಧಿಗೆ. ಆದ್ರೂ ಟಿಕೆಟ್ಟಿಗೆ ಅದೇನ್ ಪೈಪೋಟಿ? ಟಿಕೆಟ್ ತಗೊಳ್ಳೋಕೂ  ಪೈಪೋಟಿ, ಟಿಕೆಟ್ ಕೊಡೋಕೂ ಪೈಪೋಟಿ! ಏನ್, ಈ ರಾಜ್ಯ ನಾಯಕರು ಬಿಟ್ಟಿದ್ದೇ ಬಿಟ್ಟಿದ್ದು, ಮೈಲುದ್ದ ಬಂಡೀನಾ. ‘ನಮ್ಮಲ್ಲಿ ಸಿಕ್ಕಾಪಟ್ಟೆ ಒಗ್ಗಟ್ಟಿದೆ, ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಅಂತ. ಕಳೆದೊಂದು ವಾರದಿಂದ ಬರೀ ಹೆಬ್ಬಾಳ ಟಿಕೆಟ್ ಒಂದನ್ನ ಪೈಸಲು ಮಾಡ್ಲಿಕ್ಕೆ ಇಲ್ಲಿರೋ ನಾಯಕರೆಲ್ಲ ಇಡೀ ಹೆಬ್ಬಾಳ ಕೆರೆಯಷ್ಟು ನೀರು ಕುಡಿದಿದ್ರೂ ಸಮಸ್ಯೆ ಬಗೆಹರಿದಿಲ್ಲ. ಬರೀ ಇಷ್ಟೇ ಆಗಿದ್ರೆ ಪರವಾಗಿರಲಿಲ್ಲ. ಒಬ್ಬೊಬ್ಬ ನಾಯಕರು ಒಂದೊಂದು ದಿಕ್ಕಿಗೆ ಡಿಸೈನ್, ಡಿಸೈನ್ ಆಗಿ ಮುಖ ಊದಿಸ್ಕೊಂಡು ಕುಂತಿರೋದ್ರಲ್ಲಿ ತುಂಬಿ ತುಳುಕಾಡ್ತಿರೋ ‘ಒಗ್ಗಟ್ಟು’ ಕಂಡು ಕಾರ್ಯಕರ್ತರು ಕಿಸಕಿಸಾ ಅಂತ ನಗ್ತಿದ್ದಾರೆ. ಈ ಒಗ್ಗಟ್ಟಿನ ಖುಷಿ ತಾಳದೇ ದಿಗ್ವಿಜಯ್ ಸಿಂಗ್ ‘ಒಬ್ಬಟ್ಟು’ ಉಂಡೋಗಕ್ಕೆ ಬಂದವ್ರೆ ಅಂತ.

ಮೂರು ಕ್ಷೇತ್ರದ ಪೈಕಿ ದೇವದುರ್ಗ ಅಷ್ಟು ಸಮಸ್ಯೆ ಇಲ್ಲ. ದಿವಂಗತ ವೆಂಕಟೇಶ್ ನಾಯಕ್ ಕುಟುಂಬಕ್ಕೆ ಕೊಡ್ಬೇಕು ಅಂತ ಆಗಿದೆ. ಕುಟುಂಬದಲ್ಲಿ ಯಾರಿಗೇ ಅನ್ನೋದಷ್ಟೇ ಪ್ರಶ್ನೆ. ಬೀದರ್ ಸ್ಪಲ್ಪ ಪ್ರಾಬ್ಲಮ್ ಇದೆ. ರಹೀಮ್ ಖಾನ್ ಗೋ, ಅವರ ವಿರುದ್ಧ ಪ್ರತಿಭಟನೆಗೆ ಇಳಿದಿರೋ ಗುಂಡಪ್ಪ ವಕೀಲ್ ಗೋ ಅಥವಾ ಇನ್ಯಾರಿಗೋ ಅಂತ. ಆದರೆ ಯದ್ವಾತದ್ವಾ ಸಮಸ್ಯೆ ಆಗಿರೋದು ಬೆಂಗಳೂರಿನ ಹೆಬ್ಬಾಳದ್ದು. ದಿಗ್ವಿಜಯ್ ಸಿಂಗ್ ಅವರನ್ನು ಇಲ್ಲೀವರ್ಗೂ ಎಳ್ಕೋಂಡು ಬಂದಿರೋದು ಇದೇ ಕ್ಷೇತ್ರ!

ಹಿಂದೆ-ಮುಂದೆ ಕಷ್ಟಕ್ಕಾಗಿರೋ ಭೈರತಿ ಸುರೇಶ್ ಗೇ ಟಿಕೆಟ್ ಕೊಡೋದು ಅಂತ ಸಿದ್ರಾಮಣ್ಣ, ಬಿಲ್ ಕುಲ್ ಅವರಿಗೆ ಕೊಡ್ಬಾರ್ದು ಅಂತ ಖರ್ಗೆ ಮತ್ತು ಷರೀಫ್ ಒಟ್ಟಾಗಿ ಪಟ್ಟು ಹಿಡಿದಿರೋದ್ರಿಂದ ಸಮಸ್ಯೆ ಶಾನೆ ಬಿಗಡಾಯಿಸಿದೆ. ತಮ್ಮ ಮೊಮ್ಮಗ ರೆಹಮಾನ್ ಷರೀಫ್ ಗೆ ಕೊಡಿಸ್ಬೇಕು ಅಂತ ಷರೀಫ್ ವರಾತ ಹಿಡಿದಿದ್ರೆ, ಭೈರತಿ ಸುರೇಶ್ ಬಿಟ್ಟು ಯಾವನ್ಗಾದ್ರೂ ಕೊಡಿ ಅಂತ ಖರ್ಗೆ ಹಠಕ್ಕೆ ಬಿದ್ದಿದ್ದಾರೆ. ಇವರ ಮಾತು ಕೇಳಿದ್ರೆ ಮುಂದಿನ ಚುನಾವಣೇಲಿ ದುಡ್ಡು ಕೊಡೋರು ಯಾರು ಅನ್ನೋದು ಸಿದ್ರಾಮಣ್ಣನ ಪ್ರಶ್ನೆ. ಹಿಂಗಾಗಿ ಸಮಸ್ಯೆ ಬಗೆಹರಿಸೋಕೆ ಸಾಕ್ಷಾತ್ ‘ಹೈಕಮಾಂಡ್ ಇಂಡಿಕೇಟರ್’ ದಿಗ್ವಿಜಯ್ ಸಿಂಗ್ ಇಲ್ಲಿಗೆ ಬಂದಿದ್ದಾರೆ.

ಅಲ್ಲ, ಸಿಎಮ್ಮೋ, ಪಕ್ಷದ ರಾಜ್ಯಾಧ್ಯಕ್ಷರೋ ಒಟ್ನಲ್ಲಿ ಇಲ್ಲಿನ ನಾಯಕರು ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿಕೊಂಡು ದಿಲ್ಲಿಗೆ ಹೋಗಿ ಫೈನಲೈಸ್ ಮಾಡ್ಕೊಂಡ್ ಬರೋದು ವಾಡಿಕೆ. ಆದ್ರೆ ವರಿಷ್ಠರೇ ಇಲ್ಲಿಗೆ ಬರ್ತಾರೆ ಅಂದ್ರೆ ಹೆಬ್ಬಾಳದ ತಾಕತ್ತು, ಭೈರತಿ ಸುರೇಶ್ ಮುಲಾಕತ್ತು ಹೆಂಗಿರಬೇಡ? ಬೈಎಲೆಕ್ಷನ್ ಕತೆನೇ ಹಿಂಗಾದ್ರೆ, ಮುಂದೆ ವಿಧಾನಸಭೆ ಚುನಾವಣೆ ಸ್ಥಿತಿ ಏನಾಗಬೇಡ? ಟಿಕೆಟ್ ಹಂಚೋಕೆ ಸಾಕ್ಷಾತ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಬೆಂಗಳೂರಲ್ಲಿ ಕುಟುಂಬ ಸಮೇತ ಕ್ಯಾಂಪ್ ಮಾಡ್ಬೇಕಾಗುತ್ತೋ ಏನೋ, ಯಾರಿಗೆ ಗೊತ್ತು..?!

Leave a Reply