ಡಿಜಿಟಲ್ ಕನ್ನಡ ಟೀಮ್
ಪ್ರೀತಿ- ಪ್ರೇಮ ಎಲ್ಲ ಕಾಲಕ್ಕೂ ಉನ್ಮಾದಗೊಳಿಸುವ ಸಬ್ಜೆಕ್ಟೇ ಬಿಡಿ. ಈ ನಶೆ ಆವರಿಸಿಕೊಳ್ಳುವ ಯೌವನ ಪರ್ವದಲ್ಲೇ ಮತ್ತೊಂದು ಗುಂಗೂ ಬಹುತೇಕರಿಗೆ ಹತ್ತಿಕೊಳ್ಳುತ್ತದೆ. ಅದೆಂದರೆ ಆದರ್ಶ- ಕ್ರಾಂತಿಗಳ ವ್ಯಾಮೋಹ.
ಇಂದು ಬಿಡುಗಡೆ ಆಗಿರುವ ರಿಕ್ಕಿ ಚಿತ್ರದ ಟ್ರೈಲರ್ ನೋಡಿದರೆ ಇವೆರಡನ್ನೂ ಒಟ್ಟಿಗಿಟ್ಟು, ಲಾಲ್ ಸಲಾಮ್ ಎನ್ನುತ್ತ ಕತೆ ಹೇಳುವುದಕ್ಕೆ ಹೊರಟಂತಿದೆ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ. ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ ಮುಖ್ಯ ತಾರಾಗಣದಲ್ಲಿದ್ದಾರೆ.
ಪ್ರಾದೇಶಿಕ ಸೊಗಡಿಲ್ಲದೇ ಸುಮ್ಮನೇ ನಾಯಕ- ನಾಯಕಿಯನ್ನು ಮರ ಸುತ್ತಿಸಿ, ಗುಡ್ಡ ಹತ್ತಿಳಿಸಿ ಕತೆ ಸುತ್ತುವ ಜಾಯಮಾನ ಈ ತಂಡದ್ದಲ್ಲ ಎಂಬುದನ್ನು ಈ ತಂಡ ‘ಉಳಿದವರು ಕಂಡಂತೆ’ ಚಿತ್ರದಲ್ಲೇ ಸಾಬೀತು ಮಾಡಿದೆ. ಹೀಗಾಗಿಯೇ ಭರವಸೆ. ಎಸ್ ವಿ ಪ್ರೊಡಕ್ಷನ್ ನ ಯೂಟ್ಯೂಬ್ ಚಾನೆಲ್ ಗೆ ಹೋಗಿ ನೀವು ರಿಕ್ಕಿಯ ಟ್ರೈಲರ್ ನೋಡಬಹುದು.
—
ಇಂದು ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಬಾಲಿವುಡ್ ಚಿತ್ರ ಏರ್ಲಿಫ್ಟ್. ರಾಜಾ ಕೃಷ್ಣ ಮೆನನ್ ನಿರ್ದೇಶನದ ಚಿತ್ರ ಅಕ್ಷಯ್ ಕುಮಾರ್ ಮತ್ತು ನಿಮೃತ್ ಕೌರ್ ಅವರನ್ನು ಮುಖ್ಯ ತಾರಾಗಣದಲ್ಲಿ ಹೊಂದಿದೆ.
1990ರ ಆಗಸ್ಟ್ 2 ರಂದು ಕುವೈತ್ ಮೇಲೆ ಇರಾಕ್ ದಾಳಿ ಮಾಡಿತು. ಸದ್ದಾಂ ನಿರ್ದೇಶನದಂತೆ ಯುದ್ಧ ಸಾರಿದ ಇರಾಕಿಗಳು ಕುವೈತ್ ನಲ್ಲಿ ಲೂಟಿ, ಅತ್ಯಾಚಾರಗಳಲ್ಲಿ ತೊಡಗಿಕೊಂಡರು. ಬರೋಬ್ಬರಿ 1,70,000 ಭಾರತೀಯರಿಗೆ ಕರ್ಮಭೂಮಿಯಾಗಿತ್ತು ಕುವೈತ್. ಇವರೆಲ್ಲರ ಬದುಕು ಏಕಾಏಕಿ ಸಂಕಷ್ಟಕ್ಕೆ ಸಿಲುಕಿಬಿಟ್ಟಿತು. ಆಗಲೇ ಭಾರತ ಸರ್ಕಾರವು ಸೇನೆ ಮತ್ತು ಏರ್ ಇಂಡಿಯಾ ಸಹಯೋಗದೊಂದಿಗೆ ಮನುಕುಲದ ಇತಿಹಾಸದಲ್ಲೇ ಅತಿದೊಡ್ಡದಾದ ತೆರವು ಕಾರ್ಯಾಚರಣೆಗೆ ಇಳಿಯಿತು. ಮುಂದಿನ 59 ದಿನಗಳಲ್ಲಿ 488 ಬಾರಿ ಸಂಘರ್ಷಗ್ರಸ್ಥ ನೆಲದಲ್ಲಿಳಿದ ಏರ್ ಇಂಡಿಯಾ ವಿಮಾನಗಳು ಪ್ರತೀ ಭಾರತೀಯನನ್ನೂ ಅಲ್ಲಿಂದ ರಕ್ಷಿಸಿ ತಂದವು!
ಆ ವೇಳೆಗೆ ಕುವೈತ್ ನ ಶ್ರೀಮಂತ ಭಾರತೀಯ ವ್ಯಾಪಾರಿಯಾಗಿದ್ದ ರಂಜಿತ್ ಕತ್ಯಾಲ್ ಈ ತೆರವು ಕಾರ್ಯಾಚರಣೆಯಲ್ಲಿ ವಹಿಸಿದ ಪಾತ್ರ ಅನನ್ಯ. ಒಬ್ಬ ಉದ್ಯಮಿಯಾಗಿ ಹಣದ ಲೆಕ್ಕಾಚಾರವನ್ನೇ ಪ್ರಧಾನವಾಗಿರಿಸಿಕೊಂಡ ವ್ಯಕ್ತಿ, ಅಂಥ ದೃಷ್ಟಿಕೋನವನ್ನೇ ತೊರೆದು ಈ ಕಾರ್ಯಾಚರಣೆಗೆ ಹೇಗೆಲ್ಲ ಸಹಕರಿಸುತ್ತಾನೆ ಎಂಬ ಕತೆ ಇದೆ. ಈ ಪಾತ್ರವನ್ನು ಅಕ್ಷಯ್ ನಿರ್ವಹಿಸಿದ್ದಾರೆ.
ರಂಜನೆ ಜತೆ ತಿಳಿವಳಿಕೆ, ಅರಿವಿನ ವಿಸ್ತಾರ ಇವೆಲ್ಲವೂ ಇರಲಿ ಅಂತ ಬಯಸುವವರಿಗೆ ಇದು ಶುಭ ಶುಕ್ರವಾರ. ವಾರಾಂತ್ಯದಲ್ಲಿ ಚಿತ್ರಮಂದಿರಗಳಿಗೆ ಹೋಗೋಣ ಎಂಬುದಕ್ಕೆ ಈ ಎರಡೂ ಚಿತ್ರಗಳೂ ಕಾರಣ ಕೊಡುತ್ತಿವೆ.