ಯಾವ ದೇಶದ್ರೋಹಿಯ ತಂದೆ-ತಾಯಿ ತಾನೇ ತನ್ನ ಮಗ ಕೆಟ್ಟವನು ಅಂತಾರೆ ಹೇಳಿ..!

ಡಿಜಿಟಲ್ ಕನ್ನಡ ವಿಶೇಷ

ನೀವು ಕುಖ್ಯಾತ ರಂಗಾ-ಬಿಲ್ಲಾ, ವೀರಪ್ಪನ್ ಅವರಂಥವರಿಂದ ಹಿಡಿದು ವಿಕೃತ ಕಾಮಿ-ಹಂತಕ ಉಮೇಶ್ ರೆಡ್ಡಿ, ತಂಗಂ, ನಿರ್ಭಯಾ ಹಂತಕರು, ಕೊನೆಗೆ ದಾವೂದ್ ಇಬ್ರಾಹಿಂ ಅಪ್ಪ-ಅಮ್ಮನವರೆಗೂ ಯಾವುದೇ ಅಪರಾಧಿಯ ಪೋಷಕರನ್ನು ಕೇಳಿ-ನೋಡಿ, ಅವರೆಲ್ಲ ಹೇಳೋದು ಒಂದೇ ಉತ್ತರ – ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ನನ್ನ ಮಗ ದೇಶದ್ರೋಹಿ ಅಲ್ಲ, ಪಾಪ, ಅವನಿಗೇನೂ ಗೊತ್ತೇ ಇಲ್ಲ.

ಈಗ ರಾಷ್ಟ್ರೀಯ ತನಿಖಾ ದಳ, ಭಯೋತ್ಪಾದನೆ ನಿಗ್ರಹ ದಳದವರು ಅರೆಸ್ಟ್ ಮಾಡಿರುವ ಇಸಿಸ್ ಉಗ್ರಗಾಮಿ ಸಂಘಟನೆ ಬೆಂಬಲಿಗರ ಪೋಷಕರು ಹೇಳ್ತಾ ಇರೋದು ಅದನ್ನೇ ಮತ್ತು ಹೇಳುವುದೂ ಅದನ್ನೇ. ಹೆತ್ತ ಕರುಳು ಅದನ್ನು ಬಿಟ್ಟು ಬೇರೇನು ತಾನೇ ಹೇಳಲು ಸಾಧ್ಯ. ಅದ್ಯಾವ ದೇಶದ್ರೋಹಿಯ ತಂದೆ-ತಾಯಿ ತಾನೇ ನನ್ನ ಮಗ ತಪ್ಪು ಮಾಡಿದ್ದಾನೆ, ಅವನನ್ನು ಎಳೆದುಕೊಂಡು ಹೋಗಿ, ಶಿಕ್ಷೆ ಕೊಡಿ ಅಂತಾ ಹೇಳ್ತಾರೆ ಹೇಳಿ.

ಯಾವ ಮಕ್ಕಳು ಕೂಡ ಅಪ್ಪ-ಅಮ್ಮಂಗೆ ಹೇಳ್ಕೊಂಡು ತಪ್ಪು ಮಾಡೋದಿಲ್ಲ. ತಪ್ಪು ಮಾಡಿದ್ರೂ ಅವರಿಗೆ ತಿಳಿಯೋ ಹಾಗೆ ಮಾಡುವುದಿಲ್ಲ. ಅದೇ ರೀತಿ ಯಾವ ತಂದೆ-ತಾಯಿನೂ ಮಕ್ಕಳು ತಪ್ಪು ಮಾಡೋದನ್ನ ಸಹಿಸೋದಿಲ್ಲ, ತಪ್ಪು ಮಾಡೋಕು ಬಿಡೋದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಮುಚ್ಚಿಟ್ಟುಕೊಂಡೇ ತಪ್ಪು ಮಾಡುತ್ತಾರೆ. ಒಂದು ವೇಳೆ ವಿಷಯ ಅಪ್ಪ-ಅಮ್ಮನಿಗೆ ಗೊತ್ತಿದೆ ಎನ್ನುವುದಾದರೆ ಅವರೆಲ್ಲ ಸಂಘಟಿತರಾಗಿಯೇ ತಪ್ಪು ಮಾಡುತ್ತಿದ್ದಾರೆ ಎಂದೇ ಅರ್ಥ. ಹಾಗೆಂದು ಮಕ್ಕಳು ಪೊಲೀಸರಿಗೆ ಸಿಕ್ಕಾಕಿಕೊಂಡರೇ ಯಾವ ತಂದೆ-ತಾಯಿಯೂ ಆತನ ತಪ್ಪು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಇದು ಲೋಕ ಸಹಜ ಗುಣ. ಎಲ್ಲೋ ಒಂದೆರಡು ಅಪವಾದ ಇರಬಹುದು.

ಬೆಂಗಳೂರಿನ ಬನಶಂಕರಿ ಇಲಿಯಾಸ್ ನಗರದಲ್ಲಿ ಅರೆಸ್ಟ್ ಆದ ಮೌಲ್ವಿ ಸೈಯದ್ ಅನ್ವರ್ ಖಾಸ್ಮಿ ಷಾ ಕೊಟ್ಟ ಮಾಹಿತಿ ಮೇರೆಗೆ ಎನ್ ಐಎ ಈ ಐಸಿಸ್ ಬೆಂಬಲಿಗರನ್ನು ಬಂಧಿಸಿದೆ. ಅದೂ ಅವರ ಆರೇಳು ತಿಂಗಳ ಚಟುವಟಿಕೆಗಳನ್ನು ಕೂಲಂಕಷವಾಗಿ ಪರಾಮರ್ಶೆ ನಡೆಸಿದ ನಂತರ. ಏನೋ ಲೋಕಲ್ ಪೊಲೀಸರು ಎಳೆದುಕೊಂಡು ಹೋದರೂ ಅಂದ್ರೆ ಅವರು ಯಾವುದೇ ಪ್ರಭಾವಕ್ಕೆ ಒಳಗಾಗಿರಬಹುದು, ಯಾವನೋ ಪುಢಾರಿ ಮಾತು ಕೇಳಿರಬಹುದು ಅನ್ನಬಹುದಿತ್ತೇನೋ. ಆದರೆ ಕೇಂದ್ರ ತನಿಖಾ ದಳದ ಕಾರ್ಯಾಚರಣೆಯಲ್ಲಿ ಅಂತಹುದನ್ನು ಹುಡುಕಲು ಸಾಧ್ಯವೇ? ಹಾಗಿದ್ದರೆ ದೇಶಾದ್ಯಂತ ನಿರ್ದಿಷ್ಟ ಪ್ರದೇಶದ ನಿರ್ದಿಷ್ಟ ವ್ಯಕ್ತಿಗಳನ್ನೇ ಯಾಕೆ ಕರೆದುಕೊಂಡು ಹೋಗಬೇಕಿತ್ತು? ಕತೆ ಸೃಷ್ಟಿಸಲು ಅವರು ಕೆಲಸ ಮಾಡುವ ಪ್ರದೇಶದಲ್ಲೇ ಜನ ಸಿಗುತ್ತಿರಲಿಲ್ಲವೇ?

ಹುಳುಕು ಹುಡುಕಬೇಕಾದ, ತಲೆ ಕೆಡಿಸಿಕೊಳ್ಳಬೇಕಾದ ವಿಷಯ ಇದಲ್ಲ. ವಿಧ್ವಂಸಕ ಕೃತ್ಯಗಳಿಂದಲೇ ಇಸ್ಲಾಂ ಜಗತ್ತು ಕಟ್ಟಲು ಹೊರಟಿರುವವರ ಹಿಂದೆ ಈ ಯುವ ಸಮುದಾಯ ಹೊರಟಿದೆಯಲ್ಲ ಎಂಬುದು. ಹಿಂದೆ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಅಪರಾಧ, ಸಮಾಜ ವಿರೋಧಿ, ಉಗ್ರಗಾಮಿ ಚಟುವಟಿಕೆಗಳಲ್ಲಿ ನಿರತರಾಗಿರುವುದು ಕಂಡುಬಂದರೆ ಅದರ ಸಮಜಾಯಿಷಿಗೆ ತಥಾಕತಿತ ವಾದವೊಂದಿತ್ತು. ಅವರು ಬಡತನದಿಂದ ಉಗ್ರರಾಗಿದ್ದಾರೆ, ಶಿಕ್ಷಣದ ಕೊರತೆಯಿಂದ ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು. ವೋಟ್ ಬ್ಯಾಂಕ್ ರಾಜಕೀಯಕ್ಕೆ ಇದನ್ನೇ ಸಾರ್ವತ್ರಿಕ ಸತ್ಯವಾಗಿರಿಸಿಕೊಂಡಿದ್ದರು. ಆದರೆ ಈಗ ಅರೆಸ್ಟ್ ಆಗಿರುವವರಲ್ಲಿ ವಿದ್ಯಾವಂತರು, ಬುದ್ದಿವಂತರು, ಹಣಕಾಸಿಗೆ ಕೊರತೆ ಇಲ್ಲದವರು ಸೇರಿದ್ದಾರೆ. ಮಂಗಳೂರಿನಲ್ಲಿ ಬಂಧಿತನಾಗಿರುವ ನಜಮ್ ಉಲ್-ಹುದಾ ಏಷ್ಯಾದಲ್ಲಿಯೇ ಪ್ರತಿಷ್ಠಿತ ಎನಿಸಿರುವ ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಕೆಮಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದವನು. ಅನಕ್ಷರಸ್ಥರು ಎಂಜಿನಿಯರಿಂಗ್ ಮಾಡಲು ಸಾಧ್ಯವೇ? ಅದೇ ರೀತಿ ಮಹಮದ್ ಅಫ್ಜಲ್ ಸಾಫ್ಟ್ ವೇರ್ ಕಂಪನಿ ಉದ್ಯೋಗಿ. ಸೈಯದ್ ಮುಜಾಹಿದ್ ತಂದೆ ನಿವೃತ್ತ ರೆವಿನ್ಯೂ ಇನ್ಸ್ ಪೆಕ್ಟರ್, ತಾಯಿ ನಿವೃತ್ತ ಶಿಕ್ಷಕಿ. ಮುಜಾಯಿದ್ ಮಂಡಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ. ಇವರೆಲ್ಲ ಕಲಿತವರು. ಆರ್ಥಿಕವಾಗಿ ದುರ್ಬಲರೇನೂ ಅಲ್ಲ. ಹೀಗಿದ್ದಾಗಿಯೂ ಇವರು ಭಯೋತ್ಪಾದನೆ ದಾರಿ ತುಳಿದಿದ್ದು ಏಕೆ? ಈ ದಾರಿಗೆ ಪ್ರೇರಣೆ ಏನು? ಇದನ್ನು ಯಾರಾದರೂ ದೇಶಭಕ್ತಿ ಕೆಲಸ ಎನ್ನುತ್ತಾರಾ..?

ಇನ್ನು ಇವರೆಲ್ಲರಿಗೂ ಗುರುವಿನ ಸ್ಥಾನದಲ್ಲಿರುವ, ಇವರೆಲ್ಲರಿಗೂ ಮುಂಚೆ ಬಂಧಿತನಾಗಿರುವ ಮೌಲ್ವಿ ಅನ್ವರ್ ಖಾಸ್ಮಿ ಧರ್ಮಬೋಧನೆ ಸ್ಥಾನದಲ್ಲಿದ್ದವರು. ಆದರೆ ಮಾಡುತ್ತಿದ್ದುದು ಮಾತ್ರ ಕೋಮು ಸೌಹಾರ್ದವನ್ನೇ ದಮನ ಮಾಡುವಂಥ ಚಟುವಟಿಕೆಗಳನ್ನು. ಅವರ ಪ್ರಚೋದನಾಕಾರಿ ಭಾಷಣಗಳ ತೀಕ್ಷ್ಣತೆ ಎಷ್ಟಿತ್ತೆಂದರೆ ಅವರ ಸಮುದಾಯದ ಪ್ರಜ್ಞಾವಂತರು ಅವರಿಂದ ಅಂತರ ಕಾಯ್ದುಕೊಂಡಿದ್ದರು. ಹಾಗೆಂದು ಈ ಮೌಲ್ವಿ ಅರೆಸ್ಟ್ ಆದಾಗ ಅವರೇ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಬಡತನ, ಅನಕ್ಷರತೆ, ಮೌಢ್ಯದ ಹೆಸರಲ್ಲಿ ದೇಶದ್ರೋಹದ ಕೆಲಸಗಳಿಗೆ ವಿನಾಯಿತಿ ಪಡೆಯುವ ಅಥವಾ ನೀಡುವ ಕಾಲ ಇದಲ್ಲ. ಇದನ್ನು ಆಳ್ವಿಕೆ ನಡೆಸುವವರು ಅರಿಯಬೇಕು. ಅದೇ ರೀತಿ ತಪ್ಪು ಮಾಡಿದ ಮಕ್ಕಳನ್ನು ಸಮರ್ಥಿಸಿಕೊಳ್ಳುವ ಪೋಷಕರೂ ತಿಳಿಯಬೇಕು. ಮಕ್ಕಳನ್ನು ದೇಶದ ಪ್ರಜೆಗಳನ್ನಾಗಿ ಮಾಡಿದರೆ ಸಾಲದು, ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವ ಹೊಣೆಯೂ ಅವರದೇ..

1 COMMENT

  1. …. ಇಂತಹ ಸಂದರ್ಭಗಳಲ್ಲಿ ನನ್ನ ಮಗ ಸಂಭಾವಿತ, ನನ್ನ ಗಂಡ ಅಮಾಯಕ ಅಂತ ಹೇಳುವವರ ಸಂಖ್ಯೆಯಂತೂ ಹೆಚ್ಚು. ಜೊತೆಗೆ ಈ ತರಹದಲ್ಲಿ ಬಂಧಿಸಲಾದವರನ್ನು ಕುರಿತಾಗಿ ಒಂದು ಪಡೆ “ಅಮಾಯಕರಿಗೆ ಕಾಲವಿಲ್ಲ” ಎಂಬಂತೆ ಮಾತನಾಡುವುದೂ ತಪ್ಪು. ನಮ್ಮ ನ್ಯೂಸ್ ಚಾನೆಲ್ ಗಳು ಬಂಧಿತ ಆತೋಪಿಗಳ ಕುಟುಂಬಗಳಿಗೆ ದನಿಯಾಗುತ್ತೇವೆಂದು ನಡೆಸುವ ಚರ್ಚೆಗಳೂ ಕೊನೆಗೆ ನಿಲ್ಲುವುದು “ಎಲ್ಲಾ ಮುಸಲ್ಮಾನರನ್ನು ಸುಖಾ ಸುಮ್ಮನೆ, ವಿನಾ ಕಾರಣ ಗುರಿ ಮಾಡಲಾಗಿದೆ” ಎಂದು; ಬಂಧಿತ ಆರೋಪಿಗಳು ಮುಂದೊಂದು ದಿನ ಬಾಂಬ್ ಸಿಡಿಸುತ್ತಿದ್ದರೋ ಅಥವಾ ಬಾಂಬ ಸಿಡಿಸುವ ಧೈರ್ಯ ಮಾಡದೇ, ಮತ್ತ್ಯಾರೋ ಸಮಾಜದ್ರೋಹಿಗಳಿಗೆ ಕೇವಲ ಹೊರಗಿನಿಂದ ಸಹಾಯ ಮಾಡುತ್ತಾರೋ ಎರಡೂ ತಪ್ಪೇ ಅಲ್ಲವೇ? ವಿಚಾರಣೆ ನಡೆಯುತ್ತದೆ. ವಿಚಾರಣೆಯಿಂದ ಭಯೋತ್ಪಾದನೆಯ ಕೃತ್ಯದಲ್ಲಿ ಇವರ ಪಾತ್ರವಿಲ್ಲ ಎಂದಾದರೆ ಹೊರ ಬರಲೇಬೇಕು. ಆಗಲೇ ತಮ್ಮ ಅಳಲು ತೋಡಿಕೊಳ್ಳಲಿ. ಅದೇಕೆ ಜನರೆಲ್ಲರೂ ಎಂದಿಗೂ ಇವರ ವಿರುದ್ಧವಾಗಿಯೇ ಇರುತ್ತಾರೆಂದು ಪೂರ್ವಗ್ರಹಪೀಡಿತರಾಗಿರುತ್ತಾರೋ ಕಾಣೆ.

    ನಮ್ಮ ಜನರ ಸ್ವಭಾವವೂ ಸ್ವಲ್ಪ ವಿಚಿತ್ರ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆದಲ್ಲಿ ಅದನ್ನು ಖಂಡಿಸುತ್ತಾರೆ. ಅಸುರಕ್ಷಿತ ದೇಶ ನಮ್ಮದು ಎಂಬಂತೆ ಬೊಬ್ಬೆ ಇಡುತ್ತಾರೆ. ಅದೇ ಭಯೋತ್ಪಾದಕ ಚಟುವಟಿಕೆಯನ್ನು ತಡೆಗಟ್ಟುವ ಸಲುವಾಗಿ ನಡೆವ ಇಂಥಾ ಬಂಧನಗಳನ್ನೂ ಆಕ್ಷೇಪಿಸುತ್ತಾರೆ. ಹಾವು ಸಾಯಬೇಕು, ಕೋಲು ಮುರಿಯಬಾರದು ಎಂಬ ನೀತಿ..

Leave a Reply