ಸಿದ್ರಾಮಯ್ಯ ಪಡೆಗೇ ಟಿಕೆಟ್, ಚಿನ್ನ ಠೇವಣಿಗೆ ಚಿನ್ನವೇ ಬಡ್ಡಿ, ಜೇಟ್ಲಿಗೆ ರಕ್ಷಣಾ ಖಾತೆ?, ವೆಮುಲ ಕುಟುಂಬಕ್ಕೆ 8 ಲಕ್ಷ ಪರಿಹಾರ

ಡಿಜಿಟಲ್ ಕನ್ನಡ ಟೀಮ್

ಮರುಚುನಾವಣೆ ನಡೆಯುತ್ತಿರುವ ಮೂರೂ ವಿಧಾನಸಭೆ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಬಯಸಿದವರಿಗೇ ಟಿಕೆಟ್ ಅಂತಿಮವಾಗಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡ ಜಾಫರ್ ಷರೀಪ್ ಒತ್ತಡದ ನಡುವೆಯೂ ಹೆಬ್ಬಾಳದಲ್ಲಿ ಭೈರತಿ ಸುರೇಶ್, ಬೀದರ್ ನಲ್ಲಿ ರಹೀಮ್ ಖಾನ್ ಹಾಗೂ ದೇವದುರ್ಗದಲ್ಲಿ ಸಾವಿತ್ರಿದೇವಿ ಅವರಿಗೇ ಟಿಕೆಟ್ ಸಿಗುವಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಜತೆ ಶುಕ್ರವಾರ ಮಧ್ಯಾಹ್ನ ಸಮಾಲೋಚನೆ ನಡೆಸಿದ ಸಿಎಂ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಈ ಸಂದರ್ಭದಲ್ಲಿ ಹಾಜರಿದ್ದರು. ಇದಕ್ಕೂ ಮೊದಲು ಕುಮಾರಕೃಪದಲ್ಲಿ ಹಲವು ಆಕಾಂಕ್ಷಿಗಳು ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಆಹವಾಲು ಸಲ್ಲಿಸಿದರು.

ಇನ್ನು ಚಿನ್ನ ಠೇವಣಿಗೆ ಚಿನ್ನವೇ ಬಡ್ಡಿ

ಅಲ್ಪಾವಧಿ ಬ್ಯಾಂಕ್ ಠೇವಣಿ (ಎಸ್ ಟಿ ಬಿ ಡಿ) ಯೋಜನೆಯಡಿ ಠೇವಣಿ ಇಡುವ ಚಿನ್ನಕ್ಕೆ ಬಡ್ಡಿ ಇನ್ನು ಮುಂದೆ ಹಣದ ಬದಲು ಚಿನ್ನದ ರೂಪದಲ್ಲೇ ಸಿಗಲಿದೆ. ಇದಕ್ಕೆ ಆರ್ ಬಿ ಐ ಮಾರ್ಗಸೂಚಿ ನಿಯಮಗಳಿಗೆ ಕೆಲ ತಿದ್ದುಪಡಿ ತಂದಿದೆ. ಇದರಿಂದ 1 ರಿಂದ 3 ವರ್ಷ ಅಲ್ಪಾವಧಿಗೂ ಚಿನ್ನವನ್ನು ಠೇವಣಿ ಇಡಬಹುದಾಗಿದೆ.

5 ರಿಂದ 7 ವರ್ಷಗಳ ಮಧ್ಯಮ ಮತ್ತು 11 ರಿಂದ 15 ವರ್ಷಗಳ ಧೀರ್ಘಾವಧಿ ಚಿನ್ನದ ಠೇವಣಿಗಳಿಗೂ ಬಡ್ಡಿ ನಿಗದಿಗೊಳಿಸಿದ್ದು, ಅದೂ ಹಣದ ರೂಪದಲ್ಲೇ ಸಿಗಲಿದೆ. ಕೇಂದ್ರ ಸರ್ಕಾರ ಕಳೆದ ಸೆಪ್ಟಂಬರ್ ನಲ್ಲಿ ಘೋಷಿಸಿದ್ದ ಚಿನ್ನದ ಠೇವಣಿ ಮೇಲೆ ಬಡ್ಡಿ ಪಡೆವ ಯೋಜನೆ ಇದಾಗಿದೆ.

ಅರುಣ್ ಜೇಟ್ಲಿಗೆ ರಕ್ಷಣಾ ಖಾತೆ?

ಕೇಂದ್ರ ಸರ್ಕಾರ ಸಚಿವ ಸಂಪುಟ ಪುನಾರಚಿಸುವ ಸಾಧ್ಯತೆಯಿದ್ದು, ವಿತ್ತ ಖಾತೆ ಸಚಿವ ಅರುಣ್ ಜೇಟ್ಲಿ ಅವರಿಗೆ ರಕ್ಷಣಾ ಖಾತೆ ಸಿಗುವ ಸಂಭವವಿದೆ. ಪ್ರಸ್ತುತ ರಕ್ಷಣಾ ಖಾತೆ ಸಚಿವರಾಗಿರುವ ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರನ್ನು ಮತ್ತೆ ರಾಜ್ಯ ರಾಜಕಾರಣಕ್ಕೆ ಕಳುಹಿಸುವ ಸೂಚನೆ ಸಿಕ್ಕಿದೆ. ಆರ್ಥಸ್ಥಿತಿ ಸುಧಾರಣೆಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸಮರ್ಥ ಹೊಸಬರಿಗೆ ವಿತ್ತ ಖಾತೆ ನೀಡುವ ಸಾಧ್ಯತೆ ಇದೆ.

ರೋಹಿತ್ ವೆಮುಲ ಕುಟುಂಬಕ್ಕೆ 8 ಲಕ್ಷ ಪರಿಹಾರ

ಆತ್ಮಹತ್ಯೆ ಮಾಡಿಕೊಂಡ ಸಂಶೋಧನ ವಿದ್ಯಾರ್ಥಿ ರೋಹಿತ್ ವೆಮುಲ ಕುಟುಂಬಕ್ಕೆ ಹೈದರಾಬಾದ್ ಕೇಂದ್ರ ವಿವಿ 8 ಲಕ್ಷ ರುಪಾಯಿ ಪರಿಹಾರ ಘೋಷಿಸಿದೆ. ಕೇಂದ್ರ ಸರಕಾರದ ವಿರುದ್ದ ದೇಶಾದ್ಯಂತ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ರೋಹಿತ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ವಿವಿಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ರೋಹಿತ್ ಜತೆ ನಾಲ್ವರ ಮೇಲೆ ಹೇರಿದ್ದ ಅಮಾನತ್ತನ್ನು ವಿವಿ ಗುರುವಾರ ಹಿಂಪಡೆದಿದ್ದು, ಮುಂದುವರೆದ ಭಾಗವಾಗಿ ವಿವಿ ಶುಕ್ರವಾರ ಪರಿಹಾರ ಘೋಷಿಸಿದೆ.

Leave a Reply