ಸ್ವಂತ ಸಂಗಾತಿಗಳೊಂದಿಗಿನ ಭ್ರಮ ನಿರಸನವೇ ರೋಹಿತ್ ಸಾವಿಗೆ ಕಾರಣವೇ? ಆತ್ಮಹತ್ಯೆ ಪತ್ರದ ಹೊಡೆದುಹಾಕಿದ ಪ್ಯಾರಾಗಳಲ್ಲಿ ಏನಿದೆ?

 

ಡಿಜಿಟಲ್ ಕನ್ನಡ ಟೀಮ್

ರೋಹಿತ್ ವೆಮುಲ ಆತ್ಮಹತ್ಯೆಯನ್ನು ಎದುರಿಗಿರಿಸಿಕೊಂಡು ದಲಿತ ಕಾರ್ಡ್ ಹೂಡುತ್ತಿರುವವರಿಗೆಲ್ಲಆಘಾತ ಎದುರಾಗುವ ಸಾಧ್ಯತೆ ಇದೆ. ಏಕೆಂದರೆ ರೋಹಿತ್ ವೆಮುಲ ಬರೆದಿಟ್ಟ ಸಾವಿನ ಪತ್ರದಲ್ಲಿ, ಪೂರ್ತಿ ಪ್ಯಾರಾವೊಂದನ್ನು ಚಿತ್ ಕಾಟು ಮಾಡಿ ಹೊಡೆದು ಹಾಕಲಾಗಿತ್ತು. ಅದರಲ್ಲಿ ರೋಹಿತ್ ತಮ್ಮ ಸಂಘಟನೆಯನ್ನೇ ದೂರಿರುವ ಬಗ್ಗೆ ಸುಳಿವು ಸಿಗುತ್ತಿದೆ.

ರೋಹಿತ್ ವೆಮುಲ ಡೆತ್ ನೋಟ್ ಅನ್ನು ಈಗ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ತನಿಖೆಯಲ್ಲಿರುವ ಪೊಲೀಸರು ಹೇಳಿದ್ದಾರೆ. ರೋಹಿತ್ ಬರೆದಿದ್ದ ಮನಕಲಕುವ ಪತ್ರದಲ್ಲೇ ಒಂದು ಭಾಗ ಇದಾಗಿತ್ತು. ಆದರೆ ಕೊನೆಕ್ಷಣದಲ್ಲಿ ರೋಹಿತ್ ವೆಮುಲ ಅದನ್ನು ಹೊಡೆದುಹಾಕುವ ನಿರ್ಣಯ ಕೈಗೊಂಡು, ಕೊನೆಯಲ್ಲಿ ಪ್ರತ್ಯೇಕವಾಗಿ- ಈ ಭಾಗ ಹೊಡೆದುಹಾಕಿರುವವನು ನಾನೇ- ಎಂದು ಬರೆದು ಸಹಿ ಹಾಕಿದ್ದಾರೆ.

sucide letter

ಚಿತ್ತಾದ ಭಾಗದಲ್ಲಿ ಏನು ಬರೆಯಲಾಗಿತ್ತು ಎಂಬುದನ್ನು ಟೈಮ್ಸ್ ಆಫ್ ಇಂಡಿಯಾ ಹಾಗೂ ಹಿಂದುಸ್ತಾನ್ ಟೈಮ್ಸ್ ಅಂತರ್ಜಾಲ ತಾಣಗಳು ವರದಿ ಮಾಡಿವೆ. ಆ ಪ್ರಕಾರ- ‘ಎ ಎಸ್ ಎ, ಎಸ್ ಎಫ್ ಐ ಅಥವಾ ಇನ್ಯಾವುದೇ ಸಂಘಟನೆಗಳಿರುವುದು ಅವಕ್ಕಾಗಿ ಮಾತ್ರ. ಈ ಸಂಘಟನೆಗಳು ಮತ್ತು ಅಲ್ಲಿ ಕೆಲಸ ಮಾಡುವವರ ಹಿತಾಸಕ್ತಿಗಳು ಹೆಚ್ಚಿನ ಬಾರಿ ಸರಿಹೊಂದುವುದೇ ಇಲ್ಲ. ಅಧಿಕಾರಕ್ಕಾಗಿಯೋ ಅಥವಾ ಪ್ರಸಿದ್ಧಿ ಪಡೆಯೋದಕ್ಕೋ, ಇಲ್ಲವೇ ಒಂದು ವಲಯದ ಒಳಗೆ ನಮಗೆ ಪ್ರಾಮುಖ್ಯ ಗಳಿಸಿಕೊಳ್ಳುವುದಕ್ಕೋ, ವ್ಯವಸ್ಥೆಯನ್ನು ಬದಲಾಯಿಸುತ್ತಿದ್ದೇವೆ ಎಂಬ ಯೋಚನೆ ಹೊಂದುವುದಕ್ಕೋ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಕಾರ್ಯಗಳನ್ನು ವೈಭವೀಕರಿಸಿಕೊಂಡು ತೃಪ್ತಿ ಹೊಂದುತ್ತೇವೆ. ಇಷ್ಟಾಗಿಯೂ ನನಗೆ ಅದ್ಭುತ ಸಾಹಿತ್ಯ ಮತ್ತು ವ್ಯಕ್ತಿಗಳಿಗೆ ಪರಿಚಯಿಸಿದ ಈ ಎರಡು ಗುಂಪುಗಳಿಗೆ ಧನ್ಯವಾದ ಹೇಳಬೇಕು.’

ರೋಹಿತ್ ವೆಮುಲ ಆತ್ಮಹತ್ಯೆ ಎದುರಿಟ್ಟುಕೊಂಡು ಕಲ್ಲು ತೂರಾಟ, ಪ್ರತಿಭಟನೆಗಳಲ್ಲಿ ತಮ್ಮ ಐಡೆಂಟಿಟಿ ಗಟ್ಟಿ ಮಾಡಿಕೊಳ್ಳುತ್ತಿರುವ ಸಂಘಟನೆಗಳೆಲ್ಲ ರೋಹಿತ್ ಆಶಯಕ್ಕೆ ನಿಜವಾಗಿಯೂ ಗೌರವ ತೋರುತ್ತಿರುವರೇ ಎಂಬ ಪ್ರಶ್ನೆ ಹುಟ್ಟುತ್ತಿದೆ. ಈ ಚಿತ್ತಾದ ಭಾಗವನ್ನು ಪರಿಗಣಿಸದಿದ್ದರೂ ರೋಹಿತ್ ಅಂತಿಮ ಪತ್ರದಲ್ಲಿ ಢಾಳಾಗಿ ಕಾಣುತ್ತಿರುವುದು ಭ್ರಮನಿರಸನದ ಅಂಶವೇ. ಈ ಬಗ್ಗೆ ಯಾರ ಕಾಳಜಿಯೂ ಇಲ್ಲದಿರುವುದು ರೋಹಿತ್ ಪತ್ರದ ಸಾಲಿನಲ್ಲಿ ಬಂದಿರುವ, ‘ಮನುಷ್ಯನನ್ನು ಕೇವಲ ವಸ್ತುವಾಗಿ ನೋಡುತ್ತಿದ್ದೇವೆ’ ಎಂಬುದನ್ನು ಎಲ್ಲರೂ ಸೇರಿ ದೃಢಪಡಿಸುತ್ತಿರುವಂತಿದೆ.

ಈ ಪ್ರಕರಣದಲ್ಲಿ ಇತರ ಬೆಳವಣಿಗೆಗಳು-

  • ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ರೋಹಿತ್ ಆತ್ಮಹತ್ಯೆ ಪ್ರಕರಣವನ್ನು ತನಿಖೆಗೆ ಒಳಪಡಿಸಲು ನ್ಯಾಯಾಂಗ ಆಯೋಗವನ್ನು ನೇಮಕ ಮಾಡಿದೆ. ಮೂರು ತಿಂಗಳ ಒಳಗೆ ಇದು ತನ್ನ ವರದಿಯನ್ನು ಸಲ್ಲಿಸಲಿದೆ.
  • ಲಕ್ನೋ ದ ಅಂಬೇಡ್ಕರ್ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ರೋಹಿತ್ ಆತ್ಮಹತ್ಯೆ ಪ್ರಕರಣವನ್ನು ಉಲ್ಲೇಖಿಸುತ್ತ ನೋವು ವ್ಯಕ್ತಪಡಿಸಿದರು. ‘ಪ್ರಕರಣದ ಕುರಿತ ವಾದಗಳೇನೇ ಇರಲಿ, ಅಲ್ಲಿನ ರಾಜಕೀಯ ಏನೇ ಇರಲಿ… ಕೊನೆಗೂ ತಾಯಿಯೊಬ್ಬಳು ಮಗನನ್ನು ಕಳೆದುಕೊಂಡಳು ಎಂಬುದೇ ಸತ್ಯ. ಆ ದುಃಖವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ’ ಎಂದಿದ್ದಾರೆ.

1 COMMENT

Leave a Reply