ಒಮನ್ ಎಂಬ ಮುಸ್ಲಿಂ ರಾಷ್ಟ್ರದ ಹಿಂದು ಶೇಖ್ ಯಶೋಗಾಥೆ, ಇದು ತಲೆಮಾರುಗಳ ಬೆವರಿನ ಚರಿತೆ!

ಒಮನ್ ನ ಬೃಹತ್ ಉದ್ಯಮ ಸಂಸ್ಥೆ ಖಿಮ್ಜಿ ರಾಮ್ದಾಸ್ ನಿರ್ಮಾಣ ವಲಯದಲ್ಲೂ ತೊಡಗಿಸಿಕೊಂಡಿದೆ.

authors-rangaswamyನಾನೀಗ ಹೇಳ ಹೊರಟದ್ದು ಕಥೆಯಲ್ಲ. ಆದರೆ ಬದುಕ ಅರಸಿ ಹೊರಟ ವ್ಯಾಪಾರಸ್ಥ ಕುಟುಂಬ ಸವೆಸಿದ ಹಾದಿ, ಬವಣೆಯಿಂದ ಬದುಕು ಹಸನಾಗುವವರೆಗೆ ಸವೆಸಿದ ಹಾದಿ ಕಥೆ ಎನ್ನಿಸಿದರೆ ಅಚ್ಚರಿಯಲ್ಲ.

ಇಂದಿಗೆ 145 ವರ್ಷಗಳ ಹಿಂದೆ ರಾಮದಾಸ್ ಥಕ್ಕೆರ್ಸಿ (Ramdas  Thackersay), ಗುಜರಾತ್ ನ ಕಡಲ ತೀರದ ಮಾಡ್ವಿ ಬಿಟ್ಟು ಒಮನ್ ದೇಶದ ಮಸ್ಕಟ್ ಗೆ ತಮ್ಮ ವಾಸ ಬದಲಿಸಲು ನಿರ್ಧರಿಸಿದ್ದು ತನ್ನ ಹೆಚ್ಚುತ್ತಿರುವ ವ್ಯಾಪಾರ ನಿರ್ವಹಣೆಗಾಗಿ. ಮಸ್ಕಟ್ ರಾಮದಾಸ್ ವ್ಯಾಪಾರ ವಹಿವಾಟು ವೃದ್ಧಿಗೆ ಸರಿಯಾದ ನೆಲೆಯಾಗಿತ್ತು. ಹಿಂದೆ ಸಮುದ್ರದ ಮೂಲಕವೇ  ವ್ಯಾಪಾರ ನಡೆಯುತ್ತಿತ್ತು. ಮಸ್ಕಟ್ ನಿಂದ ವ್ಯವಹಾರ ನಿರ್ವಹಣೆ ವೇಗ ಹೆಚ್ಚಿಸಬಹುದು ಎನ್ನುವುದು ಅವರು ನೆಲೆ ಬದಲಿಸಲು ಪ್ರಮುಖ ಕಾರಣ. ಹಾಗೆ ನೋಡಿದರೆ ರಾಮದಾಸ್ ಪೂರ್ವಜರು 1800 ನೆ ಇಸವಿಯಿಂದ ಮಸ್ಕಟ್ ನೊಂದಿಗೆ ವ್ಯಾಪಾರ ಮಾಡುತ್ತ ಬಂದ ದಾಖಲೆ ಇದೆ.
ಭಾರತದಿಂದ ಟೀ ತೆಗೆದುಕೊಂಡು ಹೋಗಿ ಮಾರುವುದು, ಅಲ್ಲಿಂದ ಖರ್ಜೂರ, ಒಣಗಿದ ನಿಂಬೆ ತರುವುದು ಇವರ ಮೊದಲ ವಹಿವಾಟು. ರಾಮದಾಸ್ ಥಕ್ಕೆರ್ಸಿ ಮಗ ಖಿಮ್ಜಿ ರಾಮದಾಸ್ ಅಪ್ಪನ ದಾರಿಯಲ್ಲಿ ಸಾಗಿ ಒಮಾನ್ ದೇಶದ ಅತಿ ದೊಡ್ಡ ಸಂಸ್ಥೆ ತೆಗೆಯುವಲ್ಲಿ ಯಶಸ್ವಿ ಆದದ್ದು ಜಾಗತೀಕರಣದಿಂದ. ನಂತರ ಖಿಮ್ಜಿ ಯ ಮಗ ಗೋಕುಲದಾಸ್ ನ ಕೈಗೆ ಕಿಮ್ಜಿ ರಾಮದಾಸ್ ಗ್ರೂಪ್ ಆಫ್ ಕಂಪನೀಸ್ ಆಡಳಿತ ಸಿಗುತ್ತದೆ. ಈತ ಕೂಡ ವ್ಯಪಾರ ವೃದ್ಧಿ ಮಾಡಿ, ತನ್ನ ಮಗ  ಕನಕ್ಸಿ ಖಿಮ್ಜಿ (ರಾಮದಾಸ್ ಥಕ್ಕೆರ್ಸಿಯ  ಮರಿ ಮೊಮ್ಮಗ )ಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡಿರುವ ಕನಕ್ಸಿ ಖಿಮ್ಜಿ ತನ್ನ ಹೊಸ ಆಲೋಚನೆ ನಿರ್ಧಾರಗಳಿಂದ ಇಂದು ಕಂಪನಿಯ ವಹಿವಾಟು ವಾರ್ಷಿಕ ಒಂದು ಬಿಲಿಯನ್ ಡಾಲರ್ಗೂ ಮೀರಿ ಬೆಳೆಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಜಗತ್ತಿನ 400ಕ್ಕೂ ಹೆಚ್ಚು ಬ್ರಾಂಡ್ ಗಳು ಇವರ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿವೆ.
70 ವರ್ಷಗಳ ಹಿಂದೆ ಹಡಗುಗಳಿಗೆ ಯಂತ್ರ ಜೋಡಣೆ ಮಾಡಿದ್ದೂ ಖಿಮ್ಜಿ ಮನೆತನಕ್ಕೆ ಸೇರುತ್ತದೆ. ಒಮಾನ್ ದೇಶದ ಮೊದಲ ಬ್ಯಾಂಕ್ HSBC. ಅದು ಪ್ರಾರಂಭವಾಗಲು ಮತ್ತು ಅದರ ನಿರ್ವಹಿಸಲು ಬೇಕಾಗುವ ಕಟ್ಟಡ ಕಟ್ಟಿದ್ದು ಖಿಮ್ಜಿ ರಾಮದಾಸ್ ಗ್ರೂಪ್. ಮಸ್ಕಟ್ ನ ಪ್ರಥಮ ಇಂಗ್ಲಿಷ್ ಮೀಡಿಯಂ ಸ್ಕೂಲ್ ತೆರೆದದ್ದು ಖಿಮ್ಜಿ. ಇಂದಿಗೆ 19 ಶಾಲೆಗಳಿವೆ, 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿಇಂದು ಓದುತ್ತಿದ್ದಾರೆ.
ಇಂದಿನ ಮಸ್ಕಟ್ ನ ರುವಿ ಏರ್ಪೋರ್ಟ್ ಕಟ್ಟಿದ್ದು ಕೂಡ ಇವರೇ. 1969 ರಲ್ಲಿ ಮೊತ್ತ ಮೊದಲ ಫೋರ್ಡ್ ಕಾರು ಮಾರುವ ಶೋ ರೂಂ ತೆಗೆದದ್ದು ಇದೇ ಕಂಪನಿ. ಒಮಾನ್ ದೇಶದ ಸುಲ್ತಾನ ಇವರ ಮೊದಲ ಗ್ರಾಹಕ!
kanaksikhiji.jpgಒಮಾನ್ ದೇಶಕ್ಕೆ ಇವರ ಮೆನೆತನದ ಸೇವೆ ಗಮನಿಸಿ, ಒಮನ್ ದೇಶದ ಸುಲ್ತಾನ ಕ್ವಾಬೂಸ್ , ಕನಕ್ಸಿ ಖಿಮ್ಜಿ ಗೆ ‘ಶೇಖ್’ ಪದವಿ ನೀಡಿ ಗೌರವಿಸಿದ್ದಾರೆ.  ಒಮನ್ ಒಳಗೊಂಡಂತೆ ಮಧ್ಯ ಪ್ರಾಚ್ಯದಲ್ಲಿ ಕನಕ್ ಭೈ ಎಂದೇ ಇವರು ಪ್ರಸಿದ್ಧಿ.
‘ಇಂದು ಸಿಕ್ಕಿರುವ ಒಮನ್ ಪೌರತ್ವ, ಶೇಖ್ ಪದವಿ ಇವೆಲ್ಲಾ ನಾನು ಮಾಡಿದ ಸಾಧನೆಗೆ ಸಿಕ್ಕದ್ದಲ್ಲ. ನನ್ನ ವಂಶಸ್ಥರು ಮಾಡಿಕೊಂಡ ಬಂದ ಒಳ್ಳೆಯ ಕಾರ್ಯಗಳಿಗೆ ನನಗೆ ಬಹುಮಾನ ನೀಡಿದ್ದಾರೆ’ ಎಂದು ವಿನಮ್ರರಾಗಿ ಹೇಳುವ ಕನಕ್  ಭೈ ಗೆ  ಇದೆ ಫೆಬ್ರವರಿ ಗೆ 80 ತುಂಬಲಿದೆ ( ಫೆಬ್ರುವರಿ ೧೯೩೬ ).

ಇಂದು ಜಗತ್ತು ನಿಬ್ಬೆರಗಾಗುವಂತೆ ಬೆಳೆದು ನಿಂತು ವಿಶ್ವದ ಮೊದಲ ಹಿಂದೂ ಶೇಖ್ ಎನ್ನುವ ಪಟ್ಟ ಪಡೆಯುವ ಹಾದಿ ಎಲ್ಲಾ ಸಾಧಕರಿಗೂ ಎದುರಾಗುವಂತೆ ಮುಳ್ಳಿನದೇ. 70 ರ ದಶಕದಲ್ಲಿ ವಿದ್ಯುತ್ ಇಲ್ಲದೆ, ಸುಟ್ಟು ಹೋಗುವ ಬಿಸಿಲಿನ ಜಳದಲ್ಲಿ ಒಂದಲ್ಲ ಮೂರು ತಲೆಮಾರಿನ ಬೆವರ ಕಥೆ ಅಡಗಿದೆ. ಸ್ನಾನಕ್ಕಾಗಿ ತೆರೆದ ಬಾವಿಗಳ  ಹುಡುಕಾಟ, ಇಂಥ ಶ್ರಮಗಳು ಒಂದೇ ಎರಡೇ… ಇಷ್ಟೆಲ್ಲ ವೈರುಧ್ಯಗಳ ನಡುವೆ ಮುಖಕ್ಕೆ ಮಣ್ಣೆರೆಚುವ ಮರಳಿನಲ್ಲಿ ಮರೆಯಾಗದೆ ಹೆಜ್ಜೆ ಗುರುತು ಉಳಿಸಲು ಕೆಚ್ಚೆದೆ ಬೇಕು.
ಇಂತಹ ಸಾಧನೆ ಮಾಡಿದವನು ಭಾರತೀಯ ಎನ್ನುವುದು, ಇನ್ನಷ್ಟು ಭಾರತೀಯರಿಗೆ ಪ್ರೇರಣೆ ಆಗುವುದು ಸುಳ್ಳಲ್ಲ.

ಇಷ್ಟವಾಗ್ತಿದೆಯೇ ಸುದ್ದಿಯ ಸೀಳುನೋಟ? ಹಾಗಾದ್ರೆ ಈ ಲಿಂಕಿನಲ್ಲಿ ಡಿಜಿಟಲ್ ಕನ್ನಡ ಆ್ಯಪ್ ಡೌನ್ಲೋಡ್ ಮಾಡ್ಕೋಳಿ.

1 COMMENT

Leave a Reply