ಕತೆ ನೋಡಿ, ಈ ತಾತಪ್ಪ ಸಿಎಂ ಭೇಟಿ ಮಾಡೋದಿಕ್ಕೆ ಕೋರ್ಟ್ ಅದೇಶ ತರಬೇಕಾಯ್ತು..!

ಡಿಜಿಟಲ್ ಕನ್ನಡ ಟೀಮ್

ವಿಪರ್ಯಾಸ ನೋಡಿ…

ಈ ತಾತಪ್ಪನಿಗೆ ಮಹಾತ್ಮ ಗಾಂಧೀಜಿ ಅವರ ಜತೆ ಸೇರಿಕೊಂಡು ಸ್ವಾತಂತ್ರ ಹೋರಾಟ ಮಾಡುವಾಗ ಮುಂದೊಂದು ದಿನ ತಾನಿರುವ ನಾಡಿನ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಅದಕ್ಕಿಂತಲೂ ಮಿಗಿಲಾದ ಹೋರಾಟ ಮಾಡಬೇಕಾಗುತ್ತದೆ, ನ್ಯಾಯಾಲಯದಿಂದ ಆದೇಶ ತರಬೇಕಾಗುತ್ತದೆ ಎಂಬ ಲವಲೇಶ ಕಲ್ಪನೆಯೂ ಇರಲಿಲ್ಲ ಎಂದು ಕಾಣುತ್ತದೆ.

ಆದರೇನು ಮಾಡುವುದು? ಆತನ ಹಣೆಬರಹ ಸರಿಯಾಗಿರಲಿಲ್ಲ. ತಿಂಗಳುಗಟ್ಟಲೆ ಅಲೆದಾಡಿ, ಎಂಟು ಬಾರಿ ಪಾಸ್ ತೆಗೆದುಕೊಂಡು ವಿಧಾನಸೌಧಕ್ಕೆ ಬಂದರೂ ಭಾವನೆಗಳೇ ಇಲ್ಲದ, ಸಂವೇದನೆ ಎಂದರೇನೆಂಬುದೇ ಗೊತ್ತಿರದ ಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಎಷ್ಟು ಗೋಗರೆದರೂ ಈ ತಾತಪ್ಪನ ಗೋಳು ಅವರ ದಪ್ಪ ಚರ್ಮಕ್ಕೆ ಇಳಿಯಲೇ ಇಲ್ಲ. ಕೊನೆಗೇ ಈ ತಾತ ಹೇಕೋರ್ಟ್ ನಿಂದ ಅದೇಶ ತಂದು, ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಯೇ ಬಿಟ್ಟರು. ಇವತ್ತು  ನೇತಾಜಿ ಸುಭಾಷ್ ಚಂದ್ರಬೋಸ್ ಜಯಂತಿ ಎಂಬುದು ಕಾಕತಾಳೀಯ ಅಷ್ಟೇ.

ಸುಕ್ಕುಗಟ್ಟಿದ ಮುಖದಲ್ಲಿ ಹೆಪ್ಪುಗಟ್ಟಿದ ಚಿಂತೆಗಳನ್ನು ಹೊತ್ತು ಸಿದ್ದರಾಮಯ್ಯ ಅವರನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ 92 ವಯಸ್ಸಿನ ಈ ಹಿರಿಯ ಜೀವದ ಹೆಸರು ಉಮಾಪತಿ ಶಾಸ್ತ್ರಿ ಎಂದು. ಊರು ತುಮಕೂರು. ಹೈಕೋರ್ಟ್ ನೀಡಿದ್ದ ಆದೇಶದ ಅನ್ವಯ ಈ ಭೇಟಿ ಏರ್ಪಾಟಾಗಿತ್ತು. ಬಹುಶಃ ಕರ್ನಾಟಕದ ಇತಿಹಾಸದಲ್ಲೇ ಕೋರ್ಟ್ ಆದೇಶದ ಮೇರೆಗೆ ಮುಖ್ಯಮಂತ್ರಿ ಭೇಟಿ ಪ್ರಕರಣ ಇದೇ ಮೊದಲಿರಬೇಕು.

ಹಿಂದೆ ಗಾಂಧೀಜಿ ಜತೆ ಹೋರಾಟ ಮಾಡಿ ಜೈಲು ಸೇರಿದ್ದೆ. ಕ್ವಿಟ್ ಇಂಡಿಯಾ ಚಳವಳಿಯಲ್ಲೂ ಭಾಗವಹಿಸಿದ್ದೆ. ಹೋರಾಟಕ್ಕಾಗಿ ಮನೆಮಠ ಕಳೆದುಕೊಂಡಿದ್ದು, ನಾನೀಗ ಅಕ್ಷರಶಃ ಬೀದಿಗೆ ಬಿದ್ದಿದ್ದೇನೆ. ಹಿಂದೆ-ಮುಂದೆ ಯಾರೂ ಇಲ್ಲ. ಮುಪ್ಪಿನಲ್ಲಿ ನನ್ನ ಸ್ಥಿತಿ ಚಿಂತಾಜನಕವಾಗಿದೆ. ದಯವಿಟ್ಟು ನನಗೊಂದು ಆಶ್ರಯ ಕಲ್ಪಿಸಿ, ಸೂರಿಗೊಂದು ನಿವೇಶನ ಕೊಡಿ ಸಿಎಂ ಬಳಿ ಅಲವತ್ತುಕೊಂಡ ಸನ್ನಿವೇಶಕ್ಕೆ ಸಚಿವ ಡಿ.ಕೆ. ಶಿವಕುಮಾರ್, ಶಾಸಕ ರೋಷನ್ ಬೇಗ್ ಸಾಕ್ಷಿಯಾಗಿದ್ದರು.

ಸರಕಾರಕ್ಕೆ ನನ್ನ ಗೋಳು ಅರಿಕೆ ಮಾಡಿಕೊಳ್ಳೋಕೆ, ನಿಮ್ಮನ್ನು ತಲುಪೋಕೆ ಬಹಳಷ್ಟು ಪ್ರಯತ್ನಪಟ್ಟೆ. ಆದರೆ ಅದ್ಯಾವುದೂ ಫಲ ಕೊಡದೇ ಹೋದಾಗ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಯಿತು. ದಯವಿಟ್ಟು ಅನ್ಯತಾ ಭಾವಿಸಬೇಡಿ. ನನ್ನ ಕಣ್ಣೀರಿಗೆ ಕರಗಿದ ನ್ಯಾಯಾಲಯ ನಿಮ್ಮ ಭೇಟಿಗೆ ಅವಕಾಶ ಮಾಡಿಕೊಟ್ಟಿದೆ. ನನ್ನ ಜೀವನಕ್ಕೊಂದು ದಾರಿ ಮಾಡಿಕೊಡಿ. ಪಕ್ಷದಲ್ಲೊಂದು ಕೆಲಸ ಕೊಡಿ, ಯಾವುದೇ ಕೆಲಸ ಆದರೂ ಮಾಡ್ತೇನೆ ಎಂದಾಗ ಎಂಥವರಿಗಾದರೂ ಮನ ಕರಗುವಂತಿತ್ತು.

ಅಷ್ಟೋತ್ತಿಗಾಗಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ ಸಿದ್ದರಾಮಯ್ಯನವರು ಸಮಸ್ಯೆಗೆ ತಕ್ಷಣ ಸ್ಪಂದಿಸುವಂತೆ ಅಲ್ಲೇ ಆದೇಶಿಸಿ, ಹಿರಿಯ ಜೀವಕ್ಕೆ ಚಹಾ ಕೊಟ್ಟು ಕಳುಹಿಸಿದ್ದಾರೆ.

1 COMMENT

Leave a Reply