ಡಿಜಿಟಲ್ ಕನ್ನಡ ಟೀಮ್
ಇಡೀ ವಾರ ರೋಹಿತ್ ವೆಮುಲರ ಆತ್ಮಹತ್ಯೆ ಸುತ್ತಲೇ ವಿಶ್ಲೇಷಣೆಗಳಾದವು. ಸಾವಿನ ಸುತ್ತಲಿನ ರಾಜಕೀಯ ಚರ್ಚೆ, ಸೈದ್ಧಾಂತಿಕ ವಾದ- ಪ್ರತಿವಾದಗಳ ಆಚೆ, ಸಣ್ಣ ಧ್ವನಿಯಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿ ರಾಜಕಾರಣಕ್ಕೆ ಅವಕಾಶ ಇರಬೇಕೆ ಅಂತಲೂ ಪ್ರಶ್ನೆಗಳು ಎದ್ದವು. ಆದರೆ ಉಳಿದೆಲ್ಲ ವಾದಗಳ ನಡುವೆ ಅದೇನೂ ಪ್ರಾಮುಖ್ಯ ಪಡೆದುಕೊಂಡಿಲ್ಲ.
ಗುಲಾಲ್ ಎಂಬ ಹಿಂದಿ ಚಿತ್ರ ಕ್ಯಾಂಪಸ್ ರಾಜಕಾರಣದ ಸುತ್ತಲೇ ಹೆಣೆದಿರುವಂಥದ್ದು. ಅದಕ್ಕೆ ಪಿಯೂಷ್ ಮಿಶ್ರ ಅವರು ಒಂದು ಉತ್ಕರ್ಷ ಸೂಸುವ ಹಾಡು ಬರೆದಿದ್ದಾರೆ. ಯುದ್ಧ ಕಹಳೆಯೊಂದಿಗೆ ಪ್ರಾರಂಭವಾಗುವ ಹಾಡಿಗೆ ಕೇಳಿಸಿಕೊಳ್ಳುವ ಗುಣ ಮಾತ್ರ ಉತ್ತಮವಾಗಿ ಮೈಗೂಡಿದೆ. ಇದರಲ್ಲಿ ಪಿಯೂಷ್ ಮಿಶ್ರ ಕೇವಲ ಒಂದು ಪಂಥವನ್ನು ಟಾರ್ಗೆಟ್ ಮಾಡಿದ್ದಾರಾ- ಅಂತ ಪ್ರಶ್ನೆ ಹಾಕಿಕೊಂಡರೆ ಹೌದೆಂಬ ಅನುಮಾನಗಳು ಕಾಡುತ್ತವೆ. ಆದರೆ ತನ್ನಲ್ಲಿ ಮುಳುಗಿಸಿಕೊಳ್ಳುತ್ತಲೇ ಕ್ಯಾಂಪಸ್ ರಾಜಕಾರಣದ ತೀವ್ರತೆಯನ್ನು ಚೆನ್ನಾಗಿ ಕಟ್ಟಿಕೊಟ್ಟಿರುವ ಹಾಡಿದು. ಹಾಗೆ ನೋಡಿದರೆ ಇದನ್ನೊಂದು ವ್ಯಂಗ್ಯವಾಗಿ ಬರೆದಿದ್ದಾರೆ ಮಿಶ್ರ. ಜಿಸ್ ಕವೀಕೆ ಕಲ್ಪನಾ ಮೇ ಎಂಬ ಸಾಲುಗಳಲ್ಲಿ, ‘ಯಾವ ಕವಿಯ ಕಲ್ಪನೆಯಲ್ಲಿ ಬದುಕೆಂಬುದು ಪ್ರೇಮಗೀತೆಯಾಗಿದೆಯೋ ಅಂಥ ಕವಿಯನ್ನಿಂದು ನಿರಾಕರಿಸಿಬಿಡು,’ ಎಂಬಲ್ಲಿ ಕವಿಯ ವ್ಯಂಗ್ಯ ಸ್ಪಷ್ಟವಾಗಿದೆ. ಅಷ್ಟಾಗಿಯೂ ಹೆಚ್ಚಿನವರು ಮಿಶ್ರ ಅವರ ಈ ಕವಿತೆ ನಮ್ಮಲ್ಲೊಂದು ರಣೋತ್ಕರ್ಷವನ್ನು ತುಂಬಲೆಂದೇ ಬರೆದಿದ್ದು ಅಂತ ನಂಬಿದ್ದಾರೆ ಹಾಗೂ ಸಂಗೀತ ಮತ್ತು ಹಾಡಿನ ಧೌಡೂ ಅಂತ ಭಾವನೆ ಕಟ್ಟಿಕೊಡುತ್ತದೆ. ‘ಕೃಷ್ಣನ ಕರೆಯೂ ಅದೇ, ಭಾಗವತದ ಸಾರವೂ ಅದೇ… ಯುದ್ಧ ಮಾಡಬಲ್ಲವನು ಮಾತ್ರ ವೀರನೆಂಬುದೇ..’ ಎನ್ನುವಲ್ಲಿ, ‘ಮರಣ ಕೊನೆಯಲ್ಲವೆಂದ ಮೇಲೆ ಏಕೆ ಅದಕೆ ಹೆದರಿಕೆ, ಆಗಸಕೆ ಚಿಮ್ಮಿ ಹಾಕಿಬಿಡು ರಣಕೇಕೆ’ ಎಂಬರ್ಥದ ಸಾಲುಗಳು ಸಿನಿಕರನ್ನೂ, ತೀವ್ರ ಸಂವೇದನೆ ಹೊಂದಿರುವವರನ್ನೂ, ಪ್ರಚೋದನೆ ಇಷ್ಟಪಡೋರನ್ನೂ ಬೇರೆ ಬೇರೆ ಧ್ವನಿ ಹೊಮ್ಮಿಸಿ ಸೆಳೆದಿರೋದು ಈ ಹಾಡಿನ ವಿಶೇಷ.
ವಾರಾಂತ್ಯದಲ್ಲಿ ನೀವು ನೋಡುತ್ತ, ಕೇಳಿಸಿಕೊಳ್ಳಬೇಕಿರುವ ಹಾಡಿದು.