ನೇತಾಜಿ ಕಡತ ಬಹಿರಂಗದ ಶುಭಾರಂಭ, ಹೊರಬರಬೇಕಿನ್ನೂ ಸಂಪೂರ್ಣ ನಿಜ, ಅಲ್ಲೀವರೆಗೆ ಕದಮ್ ಕದಮ್ ಬಡಾಯೆ ಜಾ…

ಡಿಜಿಟಲ್ ಕನ್ನಡ ಟೀಮ್

 ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಈ ಮೊದಲು ಮಾತು ನೀಡಿದ್ದಂತೆ ರಹಸ್ಯ ಕಡತಗಳ ಬಹಿರಂಗ ಪ್ರಕ್ರಿಯೆಗೆ ಶನಿವಾರ ಚಾಲನೆ ನೀಡಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 100 ಕಡತಗಳನ್ನು ಡಿಜಿಟಲ್ ಸ್ವರೂಪದಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಹಾಜರಿದ್ದ ನೇತಾಜಿ ಕುಟುಂಬ ಈ ಕ್ರಮವನ್ನು ಭಾವೋತ್ಕರ್ಷದಿಂದ ಸ್ವಾಗತಿಸಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮಾತ್ರ, ಇದು ನೆಹರು ಅವರನ್ನು ಕೆಟ್ಟದಾಗಿ ತೋರಿಸುವುದಕ್ಕೆ ಮೋದಿ ಸರ್ಕಾರ ಪ್ರಾರಂಭಿಸಿರುವ ಅಭಿಯಾನ ಅಂತ ಆರೋಪಿಸಿದೆಯಲ್ಲದೇ, ಈ ನಿಟ್ಟಿನಲ್ಲಿ ಸರ್ಕಾರ ನಕಲಿ ದಾಖಲೆಗಳನ್ನೂ ಸೃಷ್ಟಿಸುತ್ತಿದೆ ಅಂತ ಕಾಂಗ್ರೆಸ್ ನ ಆನಂದ್ ಶರ್ಮ ಪತ್ರಿಕಾಗೋಷ್ಟಿಯಲ್ಲಿ ದೂರಿದ್ದಾರೆ.

ಈ ಎಲ್ಲ ರಾಜಕೀಯ ಅಂಶಗಳನ್ನು ಬದಿಗಿರಿಸಿ ಈಗ ಬಹಿರಂಗವಾಗಿರುವ ಕಡತಗಳಿಂದ ನೇತಾಜಿ ಸಾವಿನ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿದೆಯಾ? ಸದ್ಯಕ್ಕಿಲ್ಲ. ಹಾಗಾದರೆ ಕಡತ ಬಹಿರಂಗ ಪ್ರಕ್ರಿಯೆಯಿಂದ ತಿಳಿಯಬಹುದಾದ ಮುಖ್ಯಾಂಶಗಳಿಷ್ಟು.

  • ಈಗ ಬಹಿರಂಗಗೊಳಿಸಿರುವ ಕಡತಗಳು ನೇತಾಜಿ ಸಾವಿನ ನಂತರ ನೇಮಿಸಿದ್ದ ಆಯೋಗಗಳು ಏನೆಲ್ಲ ವರದಿ ಕೊಟ್ಟಿದ್ದವು ಎಂಬುದನ್ನು ವಿವರಿಸುವ ಹಲವು ದಾಖಲೆಗಳನ್ನು ಹೊಂದಿದೆ. ಹೀಗಾಗಿ ನೇತಾಜಿಯವರ ಸಾವು ವಿಮಾನ ಅಪಘಾತದಲ್ಲೇ ಆಗಿದ್ದು ಹೌದೇ ಎಂಬ ಬಗ್ಗೆ ನಿಖರ ಉತ್ತರಗಳೇನೂ ಸಿಕ್ಕಿಲ್ಲ. ಬೋಸರ ಎನ್ ಐಎ ಗೆ ಸೇರಿದ ಪೆಟ್ಟಿಗೆಯನ್ನು 1978ರಲ್ಲಿ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿದ ತಂಡದಲ್ಲಿ ಯಾರಿದ್ದರು, ಆ ಪೆಟ್ಟಿಗೆಯಲ್ಲಿ ಏನೆಲ್ಲ ಇತ್ತು ಎಂಬ ದೀರ್ಘ ವಿವರಗಳೆಲ್ಲ ಇವೆ. ಇವೆಲ್ಲ ಅಂಶಗಳನ್ನು ಕನೆಕ್ಟ್ ದಿ ಡಾಟ್ ಎಂಬಂತೆ ಒಂದಕ್ಕೊಂದು ಪೇರಿಸಿ ನಿಜ ಚಿತ್ರಣ ಸಿಗಬೇಕಾದರೆ ಇನ್ನೂ ಸಾಕಷ್ಟು ಕಡತಗಳು ಹೊರಗೆ ಬರಬೇಕಿವೆ.
  • ಹಾಗಾದರೆ ಈಗಿನ ಕಡತಗಳು ಯಾವ ಹೊಸ ವಿಷಯ ಹೇಳಿವೆ? ಅಂಥ ಸ್ಫೋಟಕ ಮಾಹಿತಿಗಳನ್ನೇನೂ ಹಸಿ ಹಸಿಯಾಗಿ ತೆರೆದಿರಿಸಿಲ್ಲ. ಮೊದಲ ನೂರು ಕಡತದಲ್ಲೇ ಸ್ಪಷ್ಟ ಚಿತ್ರಣ ಸಿಗಬೇಕೆಂದು ನಿರೀಕ್ಷಿಸುವುದು ಅಪೇಕ್ಷಣೀಯವೂ ಅಲ್ಲ. ಯಾವುದೇ ವಿಷಯ ಪರಿಣತರಿಗೆ ಈಗ ಸಿಕ್ಕಿರುವ ಮಾಹಿತಿಗಳನ್ನು ವಿಶ್ಲೇಷಿಸುವುದಕ್ಕೆ ಸಮಯ ಬೇಕಾಗುತ್ತದೆ.
  • ಈಗ ಬಹಿರಂಗವಾಗಿರುವ ಕಡತಗಳಲ್ಲಿ ಹೆಚ್ಚಿನವು ಪ್ರಧಾನಿ ಕಾರ್ಯಾಲಯದಿಂದ ಬಂದ ದಾಖಲೆಗಳು. ಆದರೆ ನೈಜ ಚಿತ್ರಣಗಳು ಸಿಗುವುದು ಗೂಢಚಾರಿಕೆ ವಿಭಾಗದ ರಾ, ಮತ್ತು ಅದು ಇತರ ವಿದೇಶಿ ಗುಪ್ತಚರ ಸಂಸ್ಥೆಗಳೊಂದಿಗೆ ನೇತಾಜಿ ವಿಚಾರದಲ್ಲಿ ನಡೆದಿರುವ ಪತ್ರವ್ಯವಹಾರಗಳು ಇವೆಲ್ಲವೂ ಬಹಿರಂಗಗೊಳ್ಳಬೇಕಾಗುತ್ತದೆ. ಹೀಗಾಗಿ ಇಂದಿನ ಕಡತ ಬಹಿರಂಗ ಪ್ರಕ್ರಿಯೆ ಒಂದು ಆರಂಭಿಕ ಪ್ರಕ್ರಿಯೆ ಮಾತ್ರ. ಇನ್ನು ಮುಂದೆ ಪ್ರತೀ ತಿಂಗಳು 35 ಕಡತಗಳನ್ನು ಬಹಿರಂಗಗೊಳಿಸುತ್ತ ಹೋಗುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
  • ನೇತಾಜಿ ಸಾವು ಹೇಗಾಯ್ತು, ಅದನ್ನು ಪ್ರೇರೇಪಿಸಿದ ಸಂಗತಿಗಳು ಯಾವವು ಎಂಬುದು ನಿರ್ಧಾರವಾಗಬೇಕಿದ್ದರೆ, ನೇತಾಜಿಯವರು ರಷ್ಯಾ, ಜಪಾನ್, ಜರ್ಮನಿ ಹೀಗೆ ವಿದೇಶಿ ನೆಲಗಳಲ್ಲಿದ್ದಾಗ ಅಲ್ಲಿನ ಗುಪ್ತಚರ ವಿಭಾಗಗಳು ಏನೆಲ್ಲ ದಾಖಲೆಗಳನ್ನು ಹೊಂದಿದ್ದವು ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. ರಷ್ಯದ ಗೂಢಚಾರ ಸಂಸ್ಥೆ ಕೆಜಿಬಿಯ ಕಡತಗಳು ನೇತಾಜಿ ಬದುಕಿನ ಸೂಕ್ಷ್ಮಗಳನ್ನು ಬಿಟ್ಟುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನಲಾಗಿದೆ. ಹೀಗೆಲ್ಲ ವಿದೇಶಿ ಏಜೆನ್ಸಿಗಳನ್ನು ದಾಖಲೆಗಳಿಗೆ ಒತ್ತಾಯಿಸುವಾಗ ಮೊದಲು ದೇಶೀಯವಾಗಿ ಲಭ್ಯವಿರುವ ದಾಖಲೆಗಳನ್ನು ಬಹಿರಂಗಗೊಳಿಸಬೇಕಾಗುತ್ತದೆ. ಅದಿಲ್ಲದೇ ನಿಮ್ಮ ದಾಖಲೆ ನಮಗೆ ಬೇಕು ಎಂದು ಕೇಳುವಲ್ಲಿ ನೈತಿಕತೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಮೋದಿ ಸರ್ಕಾರದ ನಡೆ ಮಹತ್ವದ ಪ್ರಾರಂಭಿಕ ಪ್ರಯತ್ನವಾಗಿದೆ.
  • ಆಗಸ್ಟ್ 18, 1945ರಲ್ಲಿ ತೈಪೆಯಲ್ಲಿ ಸಂಭವಿಸಿದ ವಿಮಾನ ದುರ್ಘಟನೆಯಲ್ಲಿ ನೇತಾಜಿ ಮೃತಪಟ್ಟಿದ್ದರು ಎಂಬುದು ಅವರ ಸಾವಿನ ಕುರಿತು ತನಿಖೆಗೆ ನಿಯೋಜನೆ ಆಗಿದ್ದ ಮೊದಲೆರಡು ತನಿಖಾ ಆಯೋಗಗಳು ಸಲ್ಲಿಸಿದ್ದ ವರದಿ. ಮೂರನೇ ತನಿಖಾ ಆಯೋಗದ ವರದಿಯಲ್ಲಿ ಮಾತ್ರ ಈ ಬಗ್ಗೆ ಸಂಶಯಗಳು ವ್ಯಕ್ತವಾಗಿದ್ದವು ಮತ್ತು ಸುಭಾಷರ ಕುಟುಂಬದವರು ಮತ್ತು ಪರಿಚಯಸ್ಥರು ವಿಮಾನ ದುರಂತ ಪ್ರಕರಣವನ್ನು ನಿರಾಕರಿಸಿದ್ದರು. ಈಗ ಬಹಿರಂಗಗೊಂಡಿರುವ ಕಡತಗಳಲ್ಲಿ ಮೊದಲೆರಡು ಆಯೋಗಗಳು ನೀಡಿದ್ದ ವರದಿ ಏನಾಗಿತ್ತು, ಈ ನಿಟ್ಟಿನಲ್ಲಿ ಏನೆಲ್ಲ ಪತ್ರ ವ್ಯವಹಾರವಾಗಿತ್ತು ಎಂಬ ಉಲ್ಲೇಖಗಳೇ ಹೆಚ್ಚಿರುವುದರಿಂದ ನೇತಾಜಿ ಸಾವಿನ ಕುರಿತ ಯಾವುದೇ ಪ್ರಶ್ನೆಗಳಿಗೆ ಉತ್ತರ ಸ್ಪಷ್ಟವಾಗಿಲ್ಲ.
  • ನೇತಾಜಿ ವಿಮಾನ ದುರಂತದಲ್ಲಿ ಮೃತಪಟ್ಟರೆಂಬುದರ ಬಗ್ಗೆ ಅವರ ಕುಟುಂಬದಲ್ಲೇ ಭಿನ್ನಾಭಿಪ್ರಾಯಗಳಿವೆ. ದುರಂತದ ನಂತರವೂ ನೇತಾಜಿಯವರು ‘ಗುಮ್ನಾನಿ ಬಾಬಾ’ ಮಾರುವೇಷದಲ್ಲಿ ಉತ್ತರ ಪ್ರದೇಶದಲ್ಲಿ ಬದುಕಿದ್ದರೆಂಬ ಪ್ರತಿಪಾದನೆಗಳನ್ನು ನಾನ್ ಸೆನ್ಸ್ ಅಂತ ತಳ್ಳಿಹಾಕುವ ನೇತಾಜಿ ಪುತ್ರಿ ಅನಿತಾ ಬೋಸ್, ತಮ್ಮ ತಂದೆ ವಿಮಾನ ಅವಘಡದಲ್ಲೇ ಮೃತಪಟ್ಟಿರುವುದಾಗಿ ತಾವು ನಂಬುವುದಾಗಿ ಹೇಳುತ್ತಾರೆ. ನೇತಾಜಿ ಸೋದರ ಸಂಬಂಧದ ಮೊಮ್ಮಗ ಚಂದ್ರ ಬೋಸ್ ತಾವು ಈ ವಿಮಾನಾಪಘಾತ ಸಿದ್ಧಾಂತ ಒಪ್ಪುವುದಕ್ಕೆ ಸಿದ್ಧರಿಲ್ಲ ಅಂತ ಪ್ರತಿಪಾದಿಸುತ್ತಿದ್ದಾರೆ. ಕುಟುಂಬದ ಹಲವರು ಇದೇ ಅಭಿಪ್ರಾಯ ಹೊಂದಿದ್ದಾರೆ.
  • ಸಮಸ್ಯೆ ಏನೆಂದರೆ, ಇಂದು ಬಿಡುಗಡೆಯಾಗಿರುವ ದಾಖಲೆಗಳೂ ಸೇರಿದಂತೆ ಯಾವ ಮಾಹಿತಿಗಳೂ ವಿಮಾನಾಪಘಾತದ ನಿಖರ ವಿದ್ಯಮಾನವನ್ನು ಕಟ್ಟಿಕೊಡುವುದಿಲ್ಲ. ಇಂದು ಬಿಡುಗಡೆ ಆಗಿರುವ ದಾಖಲೆಗಳಲ್ಲೇ 1962ರಲ್ಲಿ ನೇತಾಜಿ ಕುಟುಂಬದ ಸುರೇಶ್ ಬೋಸ್ ಅವರಿಗೆ ಬರೆದ ಪತ್ರವಿದೆ. ಇಲ್ಲೂ ನೆಹರು ಹೇಳಿರುವುದು- ನೇತಾಜಿಯವರು ವಿಮಾನಾಪಘಾತದಲ್ಲಿ ತೀರಿಕೊಂಡರೆಂಬುದಕ್ಕೆ ನಮ್ಮ ಬಳಿ ಸಾಂದರ್ಭಿಕ ಸಾಕ್ಷ್ಯಗಳು ಮಾತ್ರ ಇವೆ, ನಿಖರ ಪುರಾವೆ ಕೊಡುವುದಕ್ಕೆ ಏನೂ ಇಲ್ಲ ಎಂದೇ.
  • ಈವರೆಗಿನ ಸರ್ಕಾರಗಳು, ಅದರಲ್ಲೂ ಕೇಂದ್ರದಲ್ಲಿ ಹೆಚ್ಚಿನ ಅವಧಿಗೆ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕಡತ ಬಹಿರಂಗ ಪ್ರಕ್ರಿಯೆಗೆ ನಿರಂತರವಾಗಿ ಹಿಂದೇಟು ಹಾಕಿಕೊಂಡು ಬಂದಿದ್ದರ ಹಿನ್ನೆಲೆಯಲ್ಲಿ, ಮೋದಿ ಸರ್ಕಾರದ ಶುರುವಾತು ಪ್ರಶಂಸನೀಯ. ಆದರೆ ಹಲವು ಸಾವಿರ ದಾಖಲೆಗಳಲ್ಲಿ ಹರಡಿಕೊಂಡಿರುವ ಚುಕ್ಕಿಗಳೆಲ್ಲ ಸೇರಿ ಸತ್ಯದ ರಂಗೋಲಿ ಅರಳುವುದಕ್ಕೆ ವರ್ಷಗಳೇ ಬೇಕು. ಅಲ್ಲಿಯವರೆಗೆ ಆಗೀಗ ಬಹಿರಂಗವಾಗುವ ದಾಖಲೆಗಳಲ್ಲಿ ನೇತಾಜಿ ಕುರಿತು ಅಂದಿನ ಸಮಕಾಲೀನ ರಾಜಕೀಯ ನಾಯಕರು ಹೇಳಿದ್ದ ಚರ್ಚೆಗಳನ್ನು ಪರ- ವಿರೋಧದ ನೆಲೆಯಲ್ಲಿ ಚರ್ಚಿಸಿಕೊಂಡಿರಬಹುದಷ್ಟೆ. ‘ಖುಷಿಯ ಗೀತೆ ಹಾಡಿಕೊಂಡು ಒಂದೊಂದೇ ಹೆಜ್ಜೆ ಮುಂದಿಡೋಣ’ ಎಂಬ ಸುಭಾಷರ ಸೇನೆಯ ಸ್ಫೂರ್ತಿಗೀತವನ್ನುಸದ್ಯಕ್ಕೆ ನೆಚ್ಚಿಕೊಂಡು ಸತ್ಯಕ್ಕಾಗಿ ನಿರೀಕ್ಷಿಸಬಹುದು.

Leave a Reply