ಸುದ್ದಿಸಂತೆ: ಬೆಂಗಳೂರಲ್ಲಿ ಮತ್ತೊಬ್ಬ ಉಗ್ರನ ಸೆರೆ, ಅಂತೂ ಭಾರತಕ್ಕೆ ಗೆಲವು, ಪಠಾಣ್ ಕೋಟ್ ಸಲ್ವಿಂದರ್ ಬಚಾವ್, ಹಿಟ್ ಅಂಡ್ ರನ್ ಸೊಹ್ರೆಬ್ ತಪ್ಪೊಪ್ಪಿಗೆ

 

ಡಿಜಿಟಲ್ ಕನ್ನಡ ಟೀಮ್

ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಹಾಗೂ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಆಧಿಕಾರಿಗಳು ಶನಿವಾರವೂ ಕಾರ್ಯಾಚರಣೆ ಮುಂದುವರಿಸಿದ್ದು  ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಐಸಿಸ್ ಬೆಂಬಲಿಗ ಉಗ್ರನನ್ನು ಬಂಧಿಸಿದೆ.

ಎನ್ ಐಎ ನಿನ್ನೆ ಬಂಧಿಸಿದ್ದ ಶಂಕಿತ ಉಗ್ರರು ನೀಡಿದ ಮಾಹಿತ ಮೇರೆಗೆ ಆಂಧ್ರ-ತೆಲಾಂಗಣ ವಿಭಾಗದ ಎಟಿಎಸ್ ಅಧಿಕಾರಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರದ ವಿನಾಯಕನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ರಫೀಕ್ ಎಂಬಾತನನ್ನು ಬಂಧಿಸಿದೆ. ತನ್ನನ್ನು ಬಂಧಿಸಲು ಬಂದ ಅಧಿಕಾರಿಗಳ ಕೈಗೆ ಚಾಕುವಿನಿಂದ ಇರಿದು ಪರಾರಿಯಗಾಲು ಯತ್ನಿಸಿದ ಈತನನ್ನು ಸಾರ್ವಜನಿಕರ ನೆರವಿನೊಂದಿಗೆ ಸೆರೆ ಹಿಡಿಯಲಾಯಿತು.

ಆರು ತಿಂಗಳ ಹಿಂದಷ್ಟೇ ಯಾಸೀನ್ ಬಾನು ಎಂಬುವರನ್ನು ವಿವಾಹವಾಗಿದ್ದ ರಫೀಕ್ ವಿನಾಯಕನಗರದ ಆಶ್ರಫ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದ. ಈತ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲಿ. ರಾತ್ರಿ ವೇಶೆ ಮಾತ್ರ ಮನೆಯಿಂದ ಹೊರಗೆ ಹೋಗುತ್ತಿದ್ದ ಎಂದು ವಿಚಾರಣೆಯಿಂದ ಗೊತ್ತಾಗಿದೆ. ಎನ್ ಐಎ ಹಾಗೂ ಎಟಿಎಸ್ ಅಧಿಕಾರಿಗಳು ನಿನ್ನೆ ಬೆಂಗಳೂರು, ತುಮಕೂರು ಹಾಗೂ ಮಂಗಳೂರಿನಲ್ಲಿ ಆರು ಶಂಕಿತ ಉಗ್ರರನ್ನು ಬಂಧಿಸಿದ್ದರು.

ಅಂತೂ ಭಾರತ ಗೆದ್ದೇ ಬಿಡ್ತು

ಅಂತೂ ಇಂತೂ ಭಾರತ ಗೆಲ್ತು. ಆಸ್ಟ್ರೇಲಿಯ ವಿರುದ್ಧ 5 ಏಕದಿನ ಸರಣಿಯಲ್ಲಿ ಸತತ ನಾಲ್ಕು ಪಂದ್ಯ ಸೋತಿದ್ದ ಭಾರತ ಅಂತೂ-ಇಂತೂ ಕೊನೇ ಪಂದ್ಯ ಗೆದ್ದು, ಸ್ವಲ್ಪ ಮಟ್ಟಿಗೆ ಮರ್ಯಾದೆ ಉಳಿಸಿಕೊಂಡಿದೆ. ಅಸಿಸ್ ತಂಡಕ್ಕೆ ಕ್ಲೀನ್ ಸ್ವೀಪ್ ಅವಕಾಶ ಕೊಡದೇ ಹೋದದ್ದಷ್ಟೇ ನೆಮ್ಮದಿ ವಿಚಾರ.

ಆತಿಥೇಯ ತಂಡ ನೀಡಿದ್ದ 330 ರನ್ ಗಳ ಬೃಹತ್ ಗುರಿ ಬೇಧಿಸಿದ ಭಾರತಕ್ಕೆ ರೋಹಿತ್ ಶರ್ಮಾ (99) ಮತ್ತು ಶಿಖರ್ ಧವನ್ (78) ಆರಂಭಿಕ ಜೋಡಿ ಉತ್ತಮ  ಬುನಾದಿ ಹಾಕಿಕೊಟ್ಟಿತು. ಜತೆಗೆ ಕೆಳ ಕ್ರಮಾಂಕದ ಕನ್ನಡಿಗ ಮನೀಷ್ ಪಾಂಡೆ ಆಜೇಯ 104 ರನ್ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಗಳಿಸಿದ 34 ರನ್ ಭಾರತವನ್ನು ಗೆಲುವಿನ ದಡ ಮುಟ್ಟಿಸಿತು.

ಇನಿಂಗ್ಸ್ ಪ್ರಾರಂಭಿಸಿದ ಆಸಿಸ್ ತಂಡದ ಡೇವಿಡ್ ವಾರ್ನರ್ ಗಳಿಸಿದ 122 ಮತ್ತು ಮಿಚೇಲ್ ಮಾರ್ಸ್ ರ ಅಜೇಯ 102 ರನ್ ಶತಕದಾಟ, ಸ್ಟೀವನ್ ಸ್ಮಿತ್ 28, ಮ್ಯಾಥ್ಯೂವಾಡ್ 36 ರನ್ ಗಳ ಆಟದಿಂದ ತಂಡ 331 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಸ್ಕೋರ್ ವಿವರ: ಆಸೀಸ್ 50 ಓವರ್ ಗಳಿಗೆ 330/7. ಭಾರತ 49.5 ಓವರ್ ಗಳಿಗೆ 331/4. ಸರಣಿ ಶ್ರೇಷ್ಠ : ರೋಹಿತ್ ಶರ್ಮಾ. ಪಂದ್ಯ ಪುರುಷೋತ್ತಮ : ಮನೀಷ್ ಪಾಂಡೆ.

ಪಠಾಣ್ ಕೋಟ್ ಎಸ್ಪಿ ಸಲ್ವಿಂದರ್ ಬಚಾವ್

ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯಲ್ಲಿ ಪಂಜಾಬ್ ನ ಹಿರಿಯ ಪೊಲೀಸ್ ಅಧಿಕಾರಿ ಸಲ್ವಿಂದರ್ ಸಿಂಗ್ ಅವರ ಕೈವಾಡ ಇಲ್ಲ
ಎಂಬುದು ರಾಷ್ಟ್ರೀಯ ತನಿಖಾ ತಂಡ (ಎನ್ ಐಎ) ನಡೆಸಿದ ಸುಳ್ಳು ಪತ್ತೆ ಪರೀಕ್ಷೆಯಿಂದ ಶೃತಪಟ್ಟಿದೆ. ಉಗ್ರರು ದಾಳಿಗೆ ಮುನ್ನಾದಿನ ಸಿಂಗ್ ಅವರನ್ನು ಅಪಹರಿಸಿ ನಂತರ ಬಿಡುಗಡೆ ಮಾಡಿದ್ದರು. ಆದರೆ ಸಿಂಗ್ ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿರಲಿಲ್ಲ. ಮರುದಿನವೇ ಉಗ್ರರು ನಡೆಸಿದ ದಾಳಿಯಲ್ಲಿ 7 ಸೈನಿಕರು ಸಾವನ್ನಪ್ಪಿದ್ದರು. ಎನ್ ಐಎ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿ, ಅವರ ವಿಚಾರಣೆ ನಡೆಸಿತ್ತು. ಯಾವುದೇ ಸುಳಿವು ಸಿಗದ ಕಾರಣ, ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿತ್ತು.

ಕೊಲ್ಕತ್ತಾ ಹಿಟ್ ಅಂಡ್ ರನ್ ಆರೋಪಿ ತಪ್ಪೊಪ್ಪಿಗೆ

ಕೊಲ್ಕತ್ತಾ ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕ ಮೊಹ್ಮದ್ ಸೊಹ್ರಬ್ ಪುತ್ರ ಸಾಂಬಿಯಾ ಸೊಹ್ರಬ್ ತಲೆ ಮರೆಸಿಕೊಂಡಿದ್ದುದು ಹಳೇ ಸುದ್ದಿ. ಈಗ ಪೊಲೀಸರ ವಶದಲ್ಲಿರುವ ಆರೋಪಿ ಸಾಂಬಿಯಾ ತಪ್ಪೊಪ್ಪಿಕೊಂಡಿದ್ದಾನೆ. ಹಲವು ಸುತ್ತಿನ ವಿಚಾರಣೆಯಲ್ಲಿ ಪೊಲೀಸರಿಗೆ ವಿಭಿನ್ನ ಗೊಂದಲದ ಹೇಳಿಕೆಗಳನ್ನು ನೀಡಿದ್ದ. ಆದರೆ ಕೆಲವು ದಾಖಲೆಗಳನ್ನು ಮುಂದಿಟ್ಟಾಗ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಗಣರಾಜ್ಯೋತ್ಸವದ ಪೆರೇಡ್ ಗಾಗಿ ಸಾರ್ವಜನಿಕ  ಪ್ರವೇಶ ನಿರ್ಬಂಧದ ರೇಡ್ ರೋಡ್ ಗಣರಾಜ್ಯೋತ್ಸವ ಪೆರೇಡ್ ತಾಲೀಮು ನಡೆಸುತ್ತಿದ್ದ  ಐಎಎಫ್ ಅಧಿಕಾರಿ ಅಭಿಮನ್ಯು ಗೌಡ್ ಅವರ ಮೇಲೆ ಆರೋಪಿ ಕಾರು ಹರಿಸಿ, ಸಾವಿಗೆ ಕಾರಣನಾಗಿದ್ದ.

Leave a Reply