ಆಶ್ರಯ ಕೊಟ್ಟ ಯುರೋಪಿಗೆ ವಲಸಿಗರಿಂದ ಸಿಗುತ್ತಿರುವುದು ಲೈಂಗಿಕ ದೌರ್ಜನ್ಯದ ಉಡುಗೊರೆಯೇ?

ಸೌಮ್ಯ ಸಂದೇಶ್

ಸಿರಿಯಾದಲ್ಲಿ ಜಿಹಾದಿಗಳ ಅಟ್ಟಹಾಸ ಮುಗಿಲೆದ್ದು ಮುಸ್ಲಿಂ ಜನಸಂಖ್ಯೆಯದ್ದೇ ಒಂದು ಭಾಗ ಬೃಹತ್ ಸಂಖ್ಯೆಯಲ್ಲಿ ಯುರೋಪಿನ ರಾಷ್ಟ್ರಗಳಿಗೆ ವಲಸೆ ಹೋಗಿ ಬಿಕ್ಕಟ್ಟು ಸೃಷ್ಟಿಯಾಗಿದ್ದು 2015ರ ಅಂತ್ಯಭಾಗದಲ್ಲಿ ನಾವೆಲ್ಲ ಸಾಕ್ಷಿಯಾದ ವಿದ್ಯಮಾನ. ಮಾನವೀಯ ನೆಲೆಯಲ್ಲಿ ಈ ವಲಸಿಗರಿಗೆಲ್ಲ ಯುರೋಪು ಆಶ್ರಯ ನೀಡಬೇಕು ಅಂತೆಲ್ಲ ವಿಚಾರವಾದಿಗಳೆನಿಸಿಕೊಂಡವರು ವಿದ್ವತ್ ಪೂರ್ಣವಾಗಿ ವಾದಿಸಿಬಿಟ್ಟರು. ವಲಸಿಗರು ಬರುತ್ತಿದ್ದ ದೋಣಿಯಲ್ಲಿದ್ದ ಸಿರಿಯಾ ಕಂದ ಯುರೋಪ್ ಸಮುದ್ರ ತೀರದಲ್ಲಿ ಬೊಂಬೆಯಂತೆ ಜೀವರಹಿತನಾಗಿ ಬಿದ್ದಿದ್ದ ಚಿತ್ರಗಳು ಜಗತ್ತಿನ ಅಂತಃಕರಣವನ್ನು ಕಲಕಿದವು. ಆ ಸಂವೇದನೆ ತಪ್ಪಲ್ಲ… ಗಡಿಗಳೆಲ್ಲ ನಾವು ಮಾಡಿಕೊಂಡಿದ್ದು, ಮಾನವತೆಗೆಲ್ಲಿಯ ಗಡಿ? ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡು ಯುರೋಪಿನ ರಾಷ್ಟ್ರಗಳು ಇವರಿಗೆಲ್ಲ ಜಾಗ ಕೊಡಲಿ ಅಂತ ಭಾವನಾತ್ಮಕವಾಗಿ ಮಾತನಾಡಲಾಯಿತು.

ಈ ಯಾವ ಹಂತದಲ್ಲೂ ಶ್ರೀಮಂತಿಕೆಯನ್ನೇ ಹಾಸಿಹೊದ್ದಿರುವ ಅರಬ್ ರಾಷ್ಟ್ರಗಳ ಶೇಖ್ ಗಳಿಗೆ ಇಲ್ಲಿ ಹೊಣೆಗಾರಿಕೆ ಇಲ್ಲವೇ ಎಂಬ ಪ್ರಶ್ನೆ ಬರಲೇ ಇಲ್ಲ. ವಲಸಿಗರನ್ನು ಮಾನವೀಯ ನೆಲೆಯಲ್ಲೇ ಯುರೋಪ್ ರಾಷ್ಟ್ರಗಳಿಗೆ ಬಿಟ್ಟುಕೊಂಡರೂ ಮುಂದೊಮ್ಮೆ ಅದು ಭದ್ರತಾ ಸಮಸ್ಯೆ ಸೃಷ್ಟಿಸದೇ ಎಂಬ ಆತಂಕಗಳನ್ನೆಲ್ಲ ಪಕ್ಕಕ್ಕಿರಿಸಲಾಯಿತು.

ಇದೀಗ ವಲಸಿಗರ ಸಮಸ್ಯೆಯ ಎರಡನೇ ಅಧ್ಯಾಯ ಮುಖ್ಯವಾಗಿ ಜರ್ಮನಿಯಲ್ಲಿ ತೆರೆದುಕೊಂಡಿದೆ. ಅಲ್ಲಿ ಸ್ಥಳೀಯ ಮಹಿಳೆಯರ ಮೇಲೆ ವಲಸಿಗ ಗಂಡಸರ ಲೈಂಗಿಕ ದೌರ್ಜನ್ಯ, ಹೀಯಾಳಿಕೆ, ನಿಂದನೆ ಅತಿಯಾಗಿ ಹೆಚ್ಚಿದೆ! ಜರ್ಮನಿಯ ಕಲಾನ್ ಎಂಬ ಪ್ರಾಂತ್ಯದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಲಸಿಗರಿಂದ ಸ್ಥಳೀಯ ಮಹಿಳೆಯರ ಮೇಲೆ ಬರೋಬ್ಬರಿ 359 ಲೈಂಗಿಕ ದೌರ್ಜನ್ಯಗಳಾಗಿರುವ ದೂರುಗಳು ದಾಖಲಾಗಿವೆ. ಛೇಡಿಸಿದ್ದು, ಲೂಟಿ ಮಾಡುತ್ತಿರುವುದು ಈ ಎಲ್ಲ ಪ್ರಕರಣಗಳನ್ನು ತೆಗೆದುಕೊಂಡರೆ ದಾಖಲಾಗಿರುವ ಒಟ್ಟೂ ಪ್ರಕರಣಗಳೆಷ್ಟು ಗೊತ್ತೇ? ಬರೋಬ್ಬರಿ 821!

ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಲಸಿಗರು ಒಂದೇ ಬಾರಿ ಮುಗಿಬಿದ್ದು ಸೃಷ್ಟಿಸಿರುವ ವಿಧ್ವಂಸ ಇದಾದ್ದರಿಂದ ವ್ಯಾಪಕವಾಗಿ ವರದಿಯಾಗಿದೆ. ಆದರೆ, ದಿನನಿತ್ಯ ವಲಸಿಗರಿಂದ ಅಸಭ್ಯ ವರ್ತನೆಗಳನ್ನು ಎದುರಿಸುತ್ತಿರುವುದಾಗಿ ಯುರೋಪಿನ ಮಹಿಳೆಯರು ಈಗ ತಮ್ಮ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಲೊಟ್ಟಾ ಎಂಬ 19 ವರ್ಷದ ಯುವತಿ ತನ್ನ ಮೇಲಾದ ಆಕ್ರಮಣವನ್ನು ಹೀಗೆ ವಿವರಿಸಿದ್ದಾಳೆ- ‘ನಾವು ಗೆಳತಿಯರು ನೈಟ್ ಕ್ಲಬ್ ನಿಂದ ಆಚೆ ಬರುತ್ತಿದ್ದಾಗ ‘ವಿದೇಶಿ ಮೂಲ’ದ 20-30 ಮಂದಿ ಎದುರಾಗಿ ನಮ್ಮನ್ನೆಲ್ಲ ಬೇರ್ಪಡಿಸಿದರು. ನಾನು ಏಕಾಂಗಿಯಾದೆ. ಆ ಗುಂಪಿನ ಪ್ರತಿ ಕೈಗಳೂ ನನ್ನ ದೇಹದ ಎಲ್ಲ ಜಾಗಗಳನ್ನೂ ತಡವಿದವು. ನಾನು ಅಸಹಾಯಕಳಾದೆ…’

ಈ ವಲಸಿಗ ಆಕ್ರಮಣಕಾರರನ್ನು ವಿರೋಧಿಸಿದ ಅನೇಕ ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜತೆಗಿದ್ದ ಗೆಳೆಯನನ್ನು ಕ್ರೂರವಾಗಿ ತದುಕಿ, ಆತನ ಸಂಗಾತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣಗಳು ವರದಿಯಾಗಿವೆ.

ಜರ್ಮನಿಯೊಂದೇ ಇವತ್ತಿಗೂ ದಿನಂಪ್ರತಿ ಸರಾಸರಿ 3200 ವಲಸಿಗರನ್ನು ಒಳಬಿಟ್ಟುಕೊಳ್ಳುತ್ತಿದೆ. ಪ್ರತಿಯಾಗಿ ಅವರಿಗೆ ಸಿಗ್ತಿರೋದೇನು..? ಇಷ್ಟಾಗಿಯೂ ಕ್ರೂರ ವ್ಯಂಗ್ಯ ಏನ್ ಗೊತ್ತಾ? ಮಹಿಳೆಯರ ಈ ನೋವಿಗೆ ಪ್ರತಿಯಾಗಿ ಅಲ್ಲೂ ಒಂದು ಸೆಕ್ಯುಲರ್ ಮಾದರಿಯ ತುಷ್ಟೀಕರಣದ ಪ್ರತಿವಾದ ಹುಟ್ಟಿಕೊಂಡಿದೆ!

‘ವಲಸಿಗರಿಗೆ ಯುರೋಪಿನ ಸಂಸ್ಕೃತಿ ಹೊಸದು. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರದ್ದೇ ತಪ್ಪು. ಅವರೇಕೆ ವಲಸಿಗರನ್ನು ಉದ್ರೇಕಿಸುವಂತೆ ಅಷ್ಟು ಸ್ವಚ್ಛಂದ ಉಡುಗೆ ತೊಡಬೇಕು? ವಲಸಿಗರನ್ನು ನಿಜಕ್ಕೂ ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳುವ ಯೋಚನೆ ಇದ್ದರೆ ಮೊದಲು ಯುರೋಪ್ ನಲ್ಲಿ ಆಲ್ಕೋಹಾಲ್ ಬ್ಯಾನ್ ಆಗ್ಬೇಕು. ಸಿಂಹದ ಮುಂದೆ ಮಾಂಸ ತೆರೆದಿಟ್ಟರೆ ಅದು ತಿನ್ನದೇ ಇರುತ್ಯೇ’ ಅಂತ ಸಮರ್ಥಿಸಿಕೊಂಡಿದೆ ಯುರೋಪ್ ನಲ್ಲಿ ಸಕ್ರಿಯವಾಗಿರುವ ಮುಸ್ಲಿಂ ಸ್ಟರ್ನ್ ಎಂಬ ಗುಂಪು.

ಕಲಾನ್ ಪ್ರಾಂತ್ಯದಲ್ಲೇ ಇರುವ ಮುಸ್ಲಿಂ ಪುರೋಹಿತ ಇಮಾಮ್ ಸಮಿ ಅಬಿ ಯುಸುಫ್ ಇಂಥದೇ ಹೇಳಿಕೆ ಕೊಟ್ಟು, ನಂತರ ವಿವಾದವಾದಾಗ ಹಾಗೆ ಹೇಳಿರಲಿಲ್ಲ ಎಂದ. ಆತನ ಪ್ರಕಾರ, ‘ಯುರೋಪಿನ ಮಹಿಳೆಯರು ಹೊಸ ವರ್ಷಾಚರಣೆಗೆ ಪೂರ್ತಿ ಮೈಮುಚ್ಚುವ ಉಡುಗೆ ಹಾಕಿಕೊಂಡು, ಸುಗಂಧ ಪೂಸದೇ ಹೋಗಿರುತ್ತಿದ್ದರೆ ಯಾವ ವಲಸಿಗನೂ ದಾಳಿ ಮಾಡುತ್ತಿರಲಿಲ್ಲ.’

ಕಲಾನ್ ನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಯುರೋಪ್, ವಲಸಿಗರನ್ನು ಹೊರಗಟ್ಟುವುದಕ್ಕೆ ಬಳಸಿಕೊಳ್ತಿದೆ ಅಂತ ಆಗಲೇ ಕೂಗುಗಳು ಎದ್ದಿವೆ. ಮಾನವೀಯತೆಯ ಬೋರ್ಡು ಹಿಡಿದು ಬಂದ ವಲಸಿಗರ ಒಂದು ವರ್ಗ ಈಗ ಯುರೋಪಿಗೆ ಏನನ್ನು ತೊಡಬೇಕು, ಹೇಗಿರಬೇಕು ಎಂಬ ಬಗ್ಗೆ ಪಾಠ ಮಾಡ್ತಿದೆ! ಪರಿಸ್ಥಿತಿ ಎಷ್ಟು ಘೋರವಾಗಿದೆ ನೋಡಿ… ಜರ್ಮನ್ ಮಹಿಳೆಯರು ಕೊನೆಪಕ್ಷ ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸುತ್ತಿದ್ದಾರೆ. ಆದರೆ ಸ್ವೀಡನ್ ನಲ್ಲಿ ಕಳೆದ ಒಂದು ವರ್ಷಗಳಿಂದ ಇಂಥ ಬಿಡಿ ಬಿಡಿ ಪ್ರಕರಣಗಳು ನಡೆಯುತ್ತಲೇ ಇದ್ದರೂ ಚರ್ಚೆಯಾಗಿಲ್ಲ, ಏಕಂದ್ರೆ ವಲಸಿಗರನ್ನು ಹೀಗೆಲ್ಲ ವಿರೋಧಿಸುತ್ತಿರುವ ಬಿಳಿಯರು ಜನಾಂಗೀಯ ದ್ವೇಷ ತೋರುತ್ತಿದ್ದಾರೆ ಅಂತ ಜಗತ್ತು ದೂಷಿಸಿಬಿಡಬಹುದೆಂಬ ಭಯವಂತೆ ಅವರಿಗೆ!

immigrant1

ಜರ್ಮನಿ ಪೊಲೀಸರು ಸ್ಥಳೀಯ ಪತ್ರಿಕೆಗಳಿಗೆ ಅನಾಮಧೇಯತೆ ಒತ್ತಾಯದ ಮೇರೆಗೆ ನೀಡಿರುವ ಹೇಳಿಕೆಗಳು ಹೀಗಿವೆ- ‘ಆಲ್ಕೋಹಾಲ್ ಮತ್ತಲ್ಲಿ ಇಲ್ಲಿನ ಯುವಕರೂ ಯುವತಿಯರ ಮೇಲೆ ದೌರ್ಜನ್ಯ ನಡೆಸಿರುವ ಪ್ರಕರಣಗಳು ಖಂಡಿತ ಇವೆ. ಆದರೆ ವಲಸಿಗರ ದಾಳಿಗೆ ಒಂದು ಪ್ಯಾಟರ್ನ್ ಇದೆ. ದೊಡ್ಡ ಸಮಾರಂಭ ನಡೆಯುತ್ತಿರುವಲ್ಲಿ 20-30ರ ಸಂಖ್ಯೆಯಲ್ಲಿ ಗುಂಪು ಕಟ್ಟಿಕೊಂಡು ಬಂದು ಲೈಂಗಿಕ ದೌರ್ಜನ್ಯ ನಡೆಸುವುದು- ಲೂಟಿ ಹೊಡೆಯೋದು ಮಾಡುತ್ತಾರಿವರು.’

ಕಟು ವಾಸ್ತವ ಗಮನಿಸೋದಾದ್ರೆ ಅರಬ್ ಪುರುಷರ ಈ ಜಾಯಮಾನ ಈಜಿಪ್ತ್ ಕ್ರಾಂತಿಯಲ್ಲೇ ಬಹಿರಂಗಗೊಂಡಿದೆ. 2011-12ರ ಅರಬ್ ಸ್ಪ್ರಿಂಗ್ ಜನಸಮೂಹದಲ್ಲಿ ಮಹಿಳೆಯರ ಮೇಲೆ ಇಂಥ ಹಲವು ಪ್ರಕರಣಗಳು ನಡೆದಿದ್ದವು. ವರದಿಗೆ ತೆರಳಿದ್ದ ಸಿಎನ್ ಎನ್ ಪತ್ರಕರ್ತೆಯನ್ನು ಜನಸಮೂಹದ ಮಧ್ಯೆಯೇ ತಾಹೀರ್ ಚೌಕದಲ್ಲಿ ಅತ್ಯಾಚಾರ ಮಾಡಲಾಗಿತ್ತು. ಜನಸಮೂಹದ ನಡುವೆ ಗುಂಪಿನಲ್ಲೇ ಅತ್ಯಾಚಾರ ಮಾಡುವ ಅರಬ್ ಜಗತ್ತಿನ ಕ್ರೂರ ರಿವಾಜಿಗೆ ಕನ್ನಡಿ ಹಿಡಿದ ‘678’ ಎಂಬ ಈಜಿಪ್ತ್ ಚಲನಚಿತ್ರಕ್ಕೆ ಪ್ರಶಸ್ತಿಯೂ ಬಂತು.

ವಲಸಿಗರು ಈ ವರ್ತನೆಯನ್ನು ಯುರೋಪಿಗೂ ತಂದಿದ್ದಾರೆಯೇ ಎಂಬ ಧ್ವನಿಗಳೀಗ ಕ್ಷೀಣವಾಗಿ ಕೇಳುತ್ತಿವೆ. ಏಕೆಂದರೆ ಈ ಪ್ರಶ್ನೆ ಗಟ್ಟಿಯಾಗಿ ಕೇಳಿದರೆ- ಮುಸ್ಲಿಂ ವಿರೋಧಿ, ರೇಸಿಸ್ಟ್, ಕೆಲವು ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಇಟ್ಟುಕೊಂಡು ವಲಸಿಗರನ್ನೇ ಕೆಟ್ಟದಾಗಿ ಬಿಂಬಿಸಲು ಹೊರಟವರು ಎಂಬೆಲ್ಲ ಪ್ರತಿ ಆರೋಪಗಳ ಸುರಿಮಳೆಯನ್ನೇ ಎದುರಿಸಬೇಕಾಗುತ್ತದೆ.

ಈ ನಡುವೆಯೂ ನಿರ್ಭೀತರಾಗಿ ಈ ಬಗ್ಗೆ ಹಲವರು ಪ್ರತಿಕ್ರಿಯೆ ದಾಖಲಿಸುತ್ತಿದ್ದಾರೆ. ಇಂಗ್ಲೆಂಡ್ ನ ಇಂಡಿಪೆಂಡೆಂಟ್ ಪಾರ್ಟಿಯ ನಿಗೆಲ್ ಫರಾಜ್ ನಿರ್ಭಿಡೆಯಿಂದ ಹೀಗೆ ಹೇಳಿದ್ದಾರೆ- ‘ನಾವು ಯುರೋಪ್ ಒಕ್ಕೂಟದಲ್ಲೇ ಇರಬೇಕೆ ಅಂತ ಯೋಚಿಸುವುದಕ್ಕೆ ಕಲಾನ್ ವಿದ್ಯಮಾನ ಕಾರಣ ಒದಗಿಸುತ್ತಿದೆ. ಜಗತ್ತಿಗೆ ಸಹಾಯ ಮಾಡಬೇಕು ಎಂಬ ನೀತಿಯನ್ನು ನಾನೂ ಒಪ್ಪುತ್ತೇನೆ. ಆದರೆ ಅದು ನಮ್ಮ ಪುರುಷ- ಮಹಿಳೆಯರ ಹಿತಾಸಕ್ತಿ ಮೀರಿ ಅಲ್ಲ. ಯಾರು ಬೇಕಾದರೂ ಒಳಗೆ ಬರಲಿ ಎಂಬ ನೀತಿ ಪಾಲಿಸುವ ಮೂಲಕ ಯುರೋಪ್ ದೊಡ್ಡ ತಪ್ಪು ಮಾಡಿದೆ. ಸಾವಿರಾರು ಹಡುಗರು ಸಾರ್ವಜನಿಕವಾಗಿ ಮಹಿಳೆಯರ ಮೇಲೆ ಮುಗಿಬೀಳುತ್ತಿರುವುದು ಬಹುದೊಡ್ಡ ಆಘಾತ’.

Leave a Reply