ಕಮಲ ನಿಷ್ಠರಿಗೆಲ್ಲ ಒಲಿಯಿತೇ ಪದ್ಮ? ಚರ್ಚೆಯಲಿ ಬಿಸಿಯಾಯ್ತು ಸಾಮಾಜಿಕ ಮಾಧ್ಯಮ

ಡಿಜಿಟಲ್ ಕನ್ನಡ ಟೀಮ್

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಸೇರಿದಂತೆ ಬಾಲಿವುಡ್ ನಟರಿಗೆ, ಮಾಧ್ಯಮದವರಿಗೆ, ರಾಜಕೀಯ ಧುರಿಣರಿಗೆ, ಸಮಾಜದ ಗಣ್ಯರಿಗೆ ಮತ್ತು ಕ್ರೀಡಾ ಸಾಧಕರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದೆ. ದೇಶದ ವಿವಿಧ ಕ್ಷೇತ್ರಗಳ 112 ಸಾಧಕರಿಗೆ ಈ ಬಾರಿಯ ಪದ್ಮ ಪುರಸ್ಕಾರ ಗೌರವ ದೊರೆತಿದೆ.

ಪದ್ಮಭೂಷಣ ಪುರಸ್ಕತ ಸಾಧಕರು: ಮಾಜಿ ಸಿಎಜಿ ವಿನೋದ್ ರಾಯ್, ಬಾಲಿವುಡ್ ನಟ ಅನುಪಮ್ ಖೇರ್, ಗಾಯಕ ಉದಿತ್ ನಾರಾಯಣ್, ಕ್ರೀಡಾಪಟುಗಳಾದ ಸೈನಾ ನೆಹ್ವಾಲ್, ಸಾನಿಯಾ ಮಿರ್ಜಾ, ಮತ್ತು ಬೆನ್ನಟ್ ಕೊಲ್ಮನ್ ಕಂಪನಿಯ ಇಂದು ಜೈನ್, ಯು ಎಸ್ ನ ಭಾರತದ ಮಾಜಿ ರಾಯಭಾರಿ ರಾರ್ಬಟ್ ಡಿ ಬ್ಲಾಕ್ ವೆಲ್.

ಪದ್ಮವಿಭೂಷಣ ಪುರಸ್ಕತ ಸಾಧಕರು: ನಟ ರಜಿನಿಕಾಂತ್, ಇಟಿವಿ ಸಮೂಹ ಸಂಸ್ಥೆಗಳ ಸ್ಥಾಪಕ  ರಾಮೋಜಿರಾವ್, ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಜಗಮೋಹನ್, ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ, ರಿಲಾಯನ್ಸ್ ಇಂಡಸ್ಟ್ರೀಸ್ ಸ್ಥಾಪಕ ಧೀರೂಭಾಯಿ ಅಂಭಾನಿ (ಮರಣೋತ್ತರ).

ಪದ್ಮಶ್ರೀ ಪುರಸ್ಕತ ಸಾಧಕರು: ಹಿರಿಯ ವಕೀಲ ಉಜ್ವಲ್ ನಿಕಮ್, ನಟರಾದ ಅಜಯ್ ದೇವಗನ್, ಪ್ರಿಯಾಂಕ ಚೋಪ್ರಾ, ನಿರ್ದೇಶಕ ಎಸ್ ಎಸ್ ರಾಜಮೌಳಿ, ಭೊಜುಪುರಿ ಭಾಷೆಯ ಗಾಯಕಿ ಮಾಲಿನಿ ಅವಸ್ಥಿ ಅವರ ಈ ಗೌರವಕ್ಕೆ ಪಾತ್ರರಾದ ಪ್ರಮುಖರು.

ಹೀಗೆ ಪದ್ಮ ಪುರಸ್ಕಾರ ಘೋಷಣೆಯಾಗುತ್ತಲೇ ಟ್ವಿಟರ್ ನಲ್ಲಿ ‘ಭಕ್ತರಿಗೆ ಪದ್ಮ ಪುರಸ್ಕಾರ’ (#PadmaAwards4Bhakt) ಎಂಬುದು ಟ್ರೆಂಡ್ ವಿಷಯವಾಗಿ ಚರ್ಚೆಯಾಯಿತು. ಬಿಜೆಪಿ ಸರ್ಕಾರದ ಪ್ರಶಂಸಕರಿಗೇ ಹೆಚ್ಚಾಗಿ ಪದ್ಮ ಪುರಸ್ಕಾರ ಸಂದಿದೆ ಎಂಬುದು ಟೀಕಾಕಾರರ ವಾದ. ಕೇಂದ್ರ ಸರ್ಕಾರದ ವಿರುದ್ಧ ಅಸಹಿಷ್ಣುತೆ ಆರೋಪವನ್ನು ಮುಂಚೂಣಿಯಲ್ಲಿ ನಿಂತು ವಿರೋಧಿಸಿದ ಅನುಪಮ್ ಖೇರ್ ಅವರಿಗೆ ಪ್ರಶಸ್ತಿ ಸಂದಿದೆ. ಮೋದಿ ಸರ್ಕಾರ ಬಂದರೆ ಡಾಲರ್ ವಿರುದ್ಧ ರುಪಾಯಿ ಮೌಲ್ಯ 40 ರುಪಾಯಿಗೆ ಬರುತ್ತದೆ ಎಂದು ಟ್ವೀಟ್ ಮಾಡಿದ್ದ ರವಿಶಂಕರ್ ಗುರೂಜಿ ಅವರಿಗೆ ಪುರಸ್ಕರಿಸಲಾಗಿದೆ ಎಂಬ ವ್ಯಂಗ್ಯಗಳೆಲ್ಲ ಸಾಮಾಜಿಕ ಮಾಧ್ಯಮದಲ್ಲಿ ತೇಲಾಡಿದವು.

padma1

ಆದರೆ, ಇದೇ ಮಾಧ್ಯಮದಲ್ಲಿ ಈ ವಾದಗಳಿಗೆ ಪ್ರತಿವಾದ ಮಂಡಿಸಿರುವ ಸಮರ್ಥಕರು ಪ್ರಶಸ್ತಿ ಪಟ್ಟಿಯಲ್ಲಿರುವ ಯಾರಿಗಾದರೂ ಪ್ರತಿಭೆ ಇಲ್ಲದ ಉದಾಹರಣೆ ಇದ್ದರೆ ಹೇಳಿ ಅಂತ ತಿರುಗೇಟೂ ಕೊಟ್ಟಿದ್ದಾರೆ. ಸೈನಾ, ಸಾನಿಯಾ ಇವರನ್ನೆಲ್ಲ ನಿರ್ದಿಷ್ಟ ರಾಜಕೀಯ ಗುಂಪಿನಲ್ಲಿ ಗುರುತಿಸುವುದಕ್ಕೆ ಆಗುತ್ತದೆಯೇ ಎಂಬ ಪ್ರತಿಪ್ರಶ್ನೆಗಳೂ ಬಂದಿವೆ.

ಹಿಂದೊಮ್ಮೆ ಪದ್ಮ ಪ್ರಶಸ್ತಿಗಳೂ ಸೇರಿದಂತೆ ಎಲ್ಲ ಅವಾರ್ಡುಗಳೂ ಮೌಲ್ಯ ಕಳೆದುಕೊಂಡಿವೆ ಎಂದು ಟ್ವೀಟಿಸಿದ್ದ ಅನುಪಮ್ ಖೇರ್ ಅವರ ನಿಲುವು ಬದಲಾಯಿತೇ ಅಂತಲೂ ಕೆಲವು ಟ್ವೀಟಿಗರು ಪ್ರಶ್ನಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಪರ- ವಿರೋಧ ಸಮರ ಜಾರಿಯಲ್ಲಿದೆ.

Leave a Reply