ಕ್ಷಮಿಸಿ..ತಮಿಳುನಾಡಿನ 3 ವಿದ್ಯಾರ್ಥಿನಿಯರ ಆತ್ಮಹತ್ಯೆ ನಮ್ಮಲ್ಲಿ ಆಕ್ರೋಶ ಹುಟ್ಟಿಸಲ್ಲ, ಏಕಂದ್ರೆ ವೆಮುಲಗಿದ್ದ ಐಡೆಂಟಿಟಿ ಇವರಿಗಿಲ್ಲ!

 

ಪ್ರವೀಣ್ ಕುಮಾರ್

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಎಸ್ ವಿ ಎಸ್ ಯೋಗ ವೈದ್ಯಕೀಯ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

18 ವರ್ಷದ ಇ ಶರಣ್ಯ, ವಿ. ಪ್ರಿಯಾಂಕ, ಟಿ. ಮೊನಿಷಾ (19) ಈ ಮೂವರು ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಅತಿಯಾದ ಶುಲ್ಕ ಸಂಗ್ರಹ ಮತ್ತು ಹಿಂಸೆ ನೀಡುತ್ತಿತ್ತು ಅಂತ ಆರೋಪಿಸಿ, ತಮ್ಮ ಆತ್ಮಹತ್ಯೆ ಪತ್ರದಲ್ಲಿ ಕಾಲೇಜಿನ ಅಧ್ಯಕ್ಷ ವಾಸುಕಿ ಸುಬ್ರಮಣಿಯನ್ ಅವರನ್ನೇ ಸಾವಿಗೆ ನೇರ ಹೊಣೆಗಾರರನ್ನಾಗಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಬರೆದಿಟ್ಟ ಆತ್ಮಹತ್ಯೆ ಪತ್ರದಲ್ಲಿ ಕೆಲವೇ ಶಬ್ದಗಳಲ್ಲಿ ಅವರ ನೋವು ವ್ಯಕ್ತವಾಗಿದೆ. ‘ಇಂಡಿಯನ್ ಎಕ್ಸ್ ಪ್ರೆಸ್’ ಪ್ರಕಟಿಸಿರುವ ಆತ್ಮಹತ್ಯೆ ಪತ್ರ ಹೀಗಿದೆ-

ಶರಣ್ಯ, ಮೊನಿಷಾ, ಪ್ರಿಯಾಂಕಾ… ನಾವು ಎಸ್ ವಿಎಸ್ ನ್ಯಾಚುರೋಪಥಿ ವೈದ್ಯ ಕಾಲೇಜಿನ ವಿದ್ಯಾರ್ಥಿಗಳು. ಈ ಕಾಲೇಜು ಭಾರಿ ಮೊತ್ತದ ಶುಲ್ಕ ವಸೂಲು ಮಾಡುತ್ತಿದೆ. ಆದರೆ ಎಲ್ಲ ಶುಲ್ಕವನ್ನೂ ನೀಡಿದ ನಂತರ ಯಾವ ಪಾವತಿಯನ್ನೂ ಕೊಡಲಾಗುತ್ತಿಲ್ಲ. ಇವರು ವಸೂಲು ಮಾಡುವ ಶುಲ್ಕಕ್ಕೆ ಪ್ರತಿಯಾಗಿ ಸೂಕ್ತ ತರಬೇತು ಸಿಗುತ್ತಿಲ್ಲ. ನಮಗೆ ಕಲಿಸುವುದಕ್ಕೆ ಉಪನ್ಯಾಸಕರೇ ಇಲ್ಲ. ಈ ಬಗ್ಗೆ ಹಲವು ಬಾರಿ ದೂರು ನೀಡಿದೆವು. ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಇಲ್ಲಿ ಸೇರಿದಾಗಿನಿಂದ ಅಧ್ಯಯನಕ್ಕಿಂತ ಹೆಚ್ಚಾಗಿ ಕೆಲಸದಲ್ಲೇ ಇರುವಂತಾಗಿದೆ. ನಾವು ಅಧ್ಯಯನಕ್ಕೆ ಸೇರಿದಾಗಿನಿಂದ ನಮ್ಮ ಕುಟುಂಬಗಳ ಮೇಲೆ ಇನ್ನಿಲ್ಲದ ಒತ್ತಡ ಬಿದ್ದಿದೆ. ಈ ಕಾಲೇಜಿನ ಅಧ್ಯಕ್ಷ ವಾಸುಕಿ, ನಮ್ಮನ್ನು ಯಾವಾಗಲೂ ಕ್ರಿಮಿನಲ್ ಗಳೆಂದೇ ಕರೆಯುತ್ತಾರೆ. ಈ ಕಾಲೇಜಿನಲ್ಲಿ ನಾವು ಕಷ್ಟ ಅನುಭವಿಸುತ್ತಲೇ ಬಂದಿದ್ದೇವೆ. ಕೊನೆಪಕ್ಷ ಈಗಲಾದರೂ ಕ್ರಮ ತೆಗೆದುಕೊಳ್ಳಿ.

ಇದೇ ಕಾರಣಕ್ಕೇ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಆದರೆ ಈ ವಾಸುಕಿ ನಮ್ಮ ಸಾವಿನ ನಂತರ ನಾವೆಲ್ಲ ವ್ಯಕ್ತಿತ್ವ ಇಲ್ಲದವರಾಗಿದ್ದೆವು ಅಂತ ದೂಷಿಸಬಹುದು. ನಾವು ಹೀಗೆ ಮಾಡಿಕೊಳ್ಳುತ್ತಿರುವುದೇ ಕಾಲೇಜಿನ ವಿರುದ್ಧ ಕ್ರಮ ಜರುಗಲಿ ಎಂದು. ಹೀಗಾಗಿ ನಮ್ಮಬಗ್ಗೆ ವಾಸುಕಿ ಕೆಟ್ಟದಾಗಿ ಮಾತನಾಡಿದರೆ ನಂಬಬೇಡಿ. ನಾವಿನ್ನೂ ಎರಡನೇ ವರ್ಷ ಸಹ ಪಾಸಾಗಿಲ್ಲ. ಆಗಲೇ 6 ಲಕ್ಷ ಶುಲ್ಕ ಕೇಳುತ್ತಿದ್ದಾರೆ. ಇವೆಲ್ಲವನ್ನೂ ಸ್ಥಿಮಿತ ಬುದ್ಧಿಯಲ್ಲೇ ಬರೆದಿದ್ದೇವೆ.

ನಿಮ್ಮ

ವಿ. ಪ್ರಿಯಾಂಕ

ಇ. ಶರಣ್ಯ

ಟಿ. ಮೊನಿಷಾ

ಈಗ ಹೇಳಿ. ಈ ವಿದ್ಯಾರ್ಥಿನಿಯರ ಆತ್ಮಹತ್ಯೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬಾರದೇ? ರೋಹಿತ್ ವೆಮುಲ ವಿಚಾರದಲ್ಲಿ ಎದ್ದ ಆಕ್ರೋಶ ಇಲ್ಲೇಕಿಲ್ಲ? ಕಟು ವಾಸ್ತವ ಇಷ್ಟೇ… ಇಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ಹಾಕುವುದಕ್ಕೆ, ಪರ- ವಿರೋಧದ ಸೈದ್ಧಾಂತಿಕ ಚರ್ಚೆಗಳನ್ನು ಮಾಡುವುದಕ್ಕೆ ಜಾಗವಿಲ್ಲದಾಗಿದೆ. ತಾವು ಆತ್ಮಹತ್ಯೆ ಮಾಡಿಕೊಂಡಿರುವುದು ಏಕೆ ಎಂಬುದನ್ನು ಈ ಹತಭಾಗ್ಯ ವಿದ್ಯಾರ್ಥಿನಿಯರು ಸ್ಪಷ್ಟವಾಗಿ ಉಲ್ಲೇಖಿಸಿಬಿಟ್ಟಿದ್ದಾರಲ್ಲ? ಯಾವ ರಾಜಕೀಯ ಪಕ್ಷಗಳಿಗೂ ಈ ಮೂವರು ವಿದ್ಯಾರ್ಥಿನಿಯರಿಗೆ ಶೋಷಣೆಯಾಗಿದೆ, ಇವರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ ಅಂತ ಅನ್ನಿಸುವುದೇ ಇಲ್ಲ. ಈ ಬಗ್ಗೆ ತನಿಖೆಯಾಗಲಿ ಅಂತ ಯಾವ ವಿದ್ಯಾರ್ಥಿ ಸಂಘಟನೆಗಳೂ ಟೆಂಟ್ ಹಾಕಿ ಪ್ರತಿಭಟನೆ ಮಾಡುವುದಿಲ್ಲ. ಏಕೆಂದರೆ ಇವರು ಅಂಥ ಯಾವ ವಿದ್ಯಾರ್ಥಿ ಸಂಘಟನೆಗಳ ಸದಸ್ಯತ್ವವನ್ನೂ ಪಡೆದವರಲ್ಲ.

ಇದನ್ನು ವಾರಗಟ್ಟಲೇ ವಿವಾದವಾಗಿ ಎಳೆಯುವುದಕ್ಕೆ ನಮಗೆ ಅರ್ಥಾತ್ ಮಾಧ್ಯಮಗಳಿಗೆ ಸಹ ಸ್ಕೋಪ್ ಇಲ್ಲ. ಏಕೆಂದರೆ ಆ ನಿರ್ದಿಷ್ಟ ಕಾಲೇಜಿನ ವಿರುದ್ಧ, ಅಧ್ಯಕ್ಷನ ವಿರುದ್ಧ ತನಿಖೆಗೆ ಆಗ್ರಹಿಸುವುದಕ್ಕೆ ಮಾತ್ರವೇ ಅವಕಾಶವಿದೆ. ಸ್ಮೃತಿ ಇರಾನಿ ರಾಜೀನಾಮೆ ಕೊಡಲಿ ಎನ್ನುವುದಕ್ಕೆ, ಮೋದಿ ಪ್ರತಿಕೃತಿ ದಹಿಸುವುದಕ್ಕೆ ಇಲ್ಲಿ ಕಾರಣಗಳು ಸಿಗುತ್ತಿಲ್ಲವಲ್ಲ?! ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್, ಯೆಚೂರಿ, ಓವೈಸಿ ಯಾರೂ ಈ ಕಾಲೇಜು ಆವರಣಕ್ಕೆ ಭೇಟಿ ಕೊಡಲ್ಲ. ಏಕೆಂದರೆ ಸದ್ಯಕ್ಕಂತೂ ಈ ವಿದ್ಯಾರ್ಥಿನಿಯರ ಆತ್ಮಹತ್ಯೆಯಲ್ಲಿ ಜಾತಿ ವಾಸನೆಗಳನ್ನು, ಮತಬ್ಯಾಂಕನ್ನು ಗ್ರಹಿಸುವುದಕ್ಕೆ ಆಗುತ್ತಿಲ್ಲ.

ಸ್ಸಾರಿ ಸಹೋದರಿಯರೇ… ನೀವು ಯಾವ ಜಾತಿ ಸಂಘಟನೆಯ ಸದಸ್ಯರೂ ಅಲ್ಲ, ಯಾವ ವಿದ್ಯಾರ್ಥಿ ಕೂಟಗಳೂ ನಿಮ್ಮ ಬೆನ್ನಿಗಿಲ್ಲ, ನಾವು ಇಂಥ ಜಾತಿಯವರಾಗಿರೋದ್ರಿಂದ್ಲೇ ಶೋಷಿಸಲಾಯಿತು ಅಂತಲೂ ಪತ್ರ ಬರೆದಿಟ್ಟಿಲ್ಲ… ಇಂಥ ಯಾವ ಐಡೆಂಟಿಟಿಗಳೂ ಇಲ್ಲದ ನಿಮ್ಮ ಸಾವು ಈ ಸಂವೇದನಾಶೂನ್ಯ ವ್ಯವಸ್ಥೆಯನ್ನು ತುಸು ಅಲ್ಲಾಡಿಸೋದೂ ಅನುಮಾನವೇ… ಛೇ..

1 COMMENT

 1. “ಕೈಲಾಗದವರು ಮೈ ಪರಚಿಕೊಂಡರು” ಎಂಬಂತೆ ನಾವುಗಳು ಈ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮಗಳ ಆಕ್ರೋಶವನ್ನು ಈ “ಸಂವೇದನಾಶೂನ್ಯ ವ್ಯವಸ್ಥೆಯ” ವಿರುಧ್ಧ ವ್ಯಕ್ತಪಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೇವಲ ನೊಂದವರಿಗೆ ಕಣ್ಣಿರು ಸುರಿಸುತ್ತಾ, ಅವರ ಆತ್ಮಕ್ಕೆ ಶಾಂತಿಸಿಗಲೆಂದು ಹಾರೈಸುತ್ತಾ ಕುಳಿತುಕೋಡಿರುತ್ತೇವೆ.

  ವ್ಯವಸ್ತೆ ಬದಲಾವಣೆಗೆ ಈಗ ಬೇಕಿರುವುದು “ಕ್ರಾಂತಿ” ಮಾತ್ರ. ಇದರಿಂದಲಷ್ಟೆ ಬದಲಾವಣೆ ಸಾಧ್ಯ.
  ನನ್ನ ಈ ಕವನ ಎಲ್ಲವನ್ನು ತಿಳಿಹೇಳುತ್ತದೆ.

  ಬಾಂಧವ್ಯ

  ಅನಿಸುತಿದೆ ನನಗೆ ಇಂದು;
  ಬಾಂಧವ್ಯ-ಬೆಸುಗೆಗಳಿಗೆ ಭಾವವಿಲ್ಲೆಂದು!
  ತಲೆಮಾರುಗಳ ಸಂಬಂಧ ಹಳಿ ತಪ್ಪುತಿದೆ;
  ಹಳೇಬೇರು-ಹೊಸಚಿಗುರ ವಾತ್ಸಲ್ಯವಳಿಸುತಿದೆ!
  ಸುಪ್ತ-ನಿರ್ಲಿಪ್ತ ಭಾವನೆಗಳ ಬೇಲಿ ಬೆಳೆಯುತಿದೆ…

  ಚಿಂತನೆಗೆ ಸಮಯವಿಲ್ಲ;
  ಕೇಳುವ ವ್ಯವಧಾನವಿಲ್ಲ:
  ಎಲ್ಲದರೊಳು ಅನುಮಾನ;
  ಎಲ್ಲರೊಳು ಅಸಮಧಾನ,
  ಮಾನವಕುಲವಾಗುತಿದೆ ಅತಿ ಸಾಮಾನ್ಯ!

  ತಾಯಿ ಮಮತೆಗೆ ಬೆಲೆ ಕಟ್ಟಿದ; ಪ್ರೀತಿ ಕಾಣದ ಸಂಬಂಧ,
  ತಂದೆ ಋಣಕೆ ವ್ಯಾವಹಾರಿಕ ಅನುಬಂಧ!

  ನಾಗರೀಕತೆಯ ಸೋಗಿನಲಿ,
  ನವೀನತೆಯ ಸೊಬಗಿನಲಿ,
  ಭವ್ಯತೆಯ ಸೊಗಡಿನಲಿ,
  ಶ್ರೀಮಂತಿಕೆಯ ಅಮಲಿನಲಿ,
  ಅಧಿಕಾರದ ಅಹಃಮಿನಲಿ,
  ಅಭದ್ರತೆಯ ಅಳುಕಿನಲಿ,
  ಮುಖವಾಡಗಳ ಮುಗುಳ್ನಗುವಿನಲಿ!

  ಅಳಿಸುತಿದೆ ಅನುಬಂಧ;
  ಸವೆಯುತಿದೆ ಸಂಬಂಧ;
  ಅನಿಚ್ಛಿತತೆಯ ಆಕ್ರಂದ;
  ನಿರ್ಲಿಪ್ತತೆಯ ನಿರ್ಬಂಧ…

  ಮಮತೆಯೆಂಬ ಬಂಧನದ ದೀವಟಿಗೆಗೆ,
  ವಾತ್ಸಲ್ಯದಾ ತೈಲವನೆರೆದು ಬೆಳಗಿದ;
  ತಲೆಮಾರುಗಳ ಸಂಬಂಧ;
  ಸ್ವಾಭಿಮಾನದ ಅಂಧಃತೆಯಲಿ ಮಸುಕುತಿದೆ…
  ತಾನೆ ಕಟ್ಟಿದ ಅಮಾನವೀಯತೆಯ ಗೋರಿ!
  ನಡುವೆ ಹುಡುಕುತಿಹ ಬಾಂಧವ್ಯದ ದಾರಿ…

  ಅನಿಸುತಿಹುದು ನಿಮಗೂ ಇಂದು;
  “ತನ್ನವರು, ನನ್ನವರು” ಯಾರೆಂದು?
  ಬಂಧ, ಸಂಬಂಧ, ಅನುಬಂಧ, ಬೆಸುಗೆ, ಭಾOಧವ್ಯಗಳಿಗೆ ಭಾವವಿಲ್ಲೆಂದು.

Leave a Reply