ನ್ಯೂಯಾರ್ಕ್ ಹಿಮಾವೃತ ಎಂಬ ಸುದ್ದಿ ಓದಿಕೊಳ್ಳುತ್ತ, ಗಣರಾಜ್ಯೋತ್ಸವದ ಹೊಸ್ತಿಲಲ್ಲಿ ನಾವು ನೆನಪಿಸಿಕೊಳ್ಳಬೇಕಿರುವ ಸಿಯಾಚಿನ್!

 

ಡಿಜಿಟಲ್ ಕನ್ನಡ ಟೀಮ್

ಅಮೆರಿಕದ ಹಲವು ಪ್ರಾಂತ್ಯಗಳಲ್ಲಿ ಶೀತಗಾಳಿ, ಹಿಮಮಳೆಯ ಅಬ್ಬರ. ಈ ಹಿಮಪರ್ವದ ವಿದ್ಯಮಾನದಲ್ಲಿ ಅಮೆರಿಕದ ಬೇರೆ ಬೇರೆ ರಾಜ್ಯಗಳಲ್ಲಿ ಅಸುನೀಗಿರುವವರ ಸಂಖ್ಯೆ ಲೆಕ್ಕ ಹಾಕಿದಾಗ ಅದು 20ಕ್ಕೆ ಏರಿದೆ.

ನಗರವೆಲ್ಲ ಹಿಮಾವೃತವಾಗಿ ಸುದ್ದಿಯಲ್ಲಿರುವುದೆಂದರೆ ನ್ಯೂಯಾರ್ಕ್. ಈಗ ಅಪ್ಪಳಿಸಿರುವ ಬ್ಲಿಜಾರ್ಡ್ ಎಂಬ ಹಿಮಮಾರುತವು ನ್ಯೂಯಾರ್ಕ್ ನಗರದ ಇತಿಹಾಸದಲ್ಲೇ ಎರಡನೇ ದೊಡ್ಡ ಮಾರುತ. 2006ರಲ್ಲಿ 26.9 ಇಂಚು ಹಿಮ ಬಿದ್ದು ದಾಖಲೆಯಾಗಿತ್ತು. ಈಗಿನ ಹಿಮ ಪ್ರಮಾಣ 26.8 ಇಂಚು.

newyork

ನ್ಯೂಯಾರ್ಕ್ ನ ಹಿಮಬೀದಿಗಳಲ್ಲಿ ಐಸ್ ಪ್ರತಿಮೆಗಳನ್ನು ಕಡಿದು ನಿಲ್ಲಿಸಿರುವುದು, ಹಿಮದಲ್ಲೇ ಆಟ ಇವೆಲ್ಲ ತೊಂದರೆಯ ನಡುವೆಯೂ ಅರಳುವ ಕ್ರಿಯಾಶೀಲತೆಯನ್ನು ಬಿಂಬಿಸುತ್ತವೆ. ಈ ಋತುವಿನಲ್ಲಿ ಚಳಿಯ ದಪ್ಪ ಹೊದಿಕೆಯಡಿ ಬರಲೇಬೇಕು ಎಂಬುದು ನ್ಯೂಯಾರ್ಕ್, ವಾಷಿಂಗ್ಟನ್ ನಂಥ ನಗರಗಳ ವಾಸ್ತವವೇ ಆದರೂ ಹಿರಿಜೀವಗಳ ನಲುಗುವಿಕೆಯನ್ನು ಇಲ್ಲಿಂದಲೇ ಊಹಿಸಬಹುದು. ಅಮೆರಿಕ ಮುಖಿಯಾದ ಸುಮಾರು 3900 ವಿಮಾನಗಳು ಭಾನುವಾರ ರದ್ದಾಗಿದ್ದವು. ಹಿಮಮಳೆಯ ಅಡಿಗಿರುವ ಅನೇಕ ನಗರಗಳಲ್ಲಿ ವಿದ್ಯುತ್ ಕೈಕೊಟ್ಟು ಜನಜೀವನಕ್ಕೆ ಪರಿಪಾಟಲಾಗಿರುವ ವರದಿಯೂ ಇದೆ.

ನ್ಯೂಯಾರ್ಕ್ ನ ಹಿಮ ನಗರಿಯನ್ನು ಚಿತ್ರಗಳಲ್ಲಿ ಕಣ್ತುಂಬಿಸಿಕೊಳ್ಳುತ್ತಲೇ…. ನಾವು ಅರಿವಿಗೆ ತಂದುಕೊಳ್ಳಬೇಕಾದ ನಮ್ಮದೇ ನೆಲದ ಚಿತ್ರ ಮಾತ್ರ ಬೇರೆಯದೇ. ನಾಳೆ ಗಣರಾಜ್ಯೋತ್ಸವ. ತೀರ ಸಂಭ್ರಮಿಸದೇ ಎಚ್ಚರದ ಸ್ಥಿತಿಯಲ್ಲೇ ಇರಬೇಕಾದದ್ದು ಇತ್ತೀಚಿನ ಉಗ್ರದಾಳಿಗಳಿಂದ ದೇಶಕ್ಕೆ ಒದಗಿರುವ ಸ್ಥಿತಿ. ನಮ್ಮ ನಗರಗಳ ಮೇಲೆಲ್ಲ ರಾಷ್ಟ್ರೀಯ ಭದ್ರತೆಯ ಹೊಣೆ ಹೊತ್ತಿರುವವರು ಕಣ್ಣಿಟ್ಟಿದ್ದಾರೆ, ಅವರಿಗೆ ಸಲಾಂ.

ಅಂತೆಯೇ… ಭಾರತೀಯ ಸೇನೆಯ ಅಸೀಮ ಸಾಹಸಿಗಳು ಅದೋ ಅಲ್ಲಿ ಭಾರತದ ಅತಿ ತಣ್ಣಗಿನ ನೆತ್ತಿ ಕಾಯುತ್ತಿದ್ದಾರೆ… ಈ ಹೊತ್ತಿಗೆ ಸುಮಾರು ಮೈನಸ್ 55 ಡಿಗ್ರಿ ಸೆಲ್ಶಿಯಸ್ ಗೆ ಇಳಿದಿರುವ ಸಿಯಾಚಿನ್ ಎಂಬ ಅತಿ ದುರ್ಗಮ ಹಿಮಪದರವನ್ನು ನಮ್ಮ ಯೋಧರು ಕಾಯ್ತಿದಾರೆ ಅನ್ನೋದನ್ನು ಈ ಕ್ಷಣದಲ್ಲಿ ನೆನಪಿಸಿಕೊಳ್ಳೋಣ! ಗಣರಾಜ್ಯೋತ್ಸವ, ನ್ಯೂಯಾರ್ಕಿನ ಹಿಮಬೀದಿ ಇಂಥ ಎಲ್ಲ ಸುದ್ದಿಚೂರುಗಳನ್ನು ಪ್ರಾಸ್ತಾವಿಕವಾಗಿ ಬಳಸಿಕೊಂಡಾದರೂ ಸರಿಯೇ ಸಿಯಾಚಿನ್ ಯೋಧರನ್ನು ನೆನಪಿಸಿಕೊಳ್ಳುವುದಕ್ಕೆ ನೆಪಗಳನ್ನು ಹುಡುಕಿಕೊಳ್ಳೋಣ ಬನ್ನಿ.

siachin2

ಮಿಲಿಟರಿ ಕಾರ್ಯತಂತ್ರ ದೃಷ್ಟಿಯಿಂದ ತುಂಬ ಪ್ರಮುಖವೆನಿಸಿರುವ ಸಿಯಾಚಿನ್ ಹಿಮಪದರದ ಮೇಲೆ 1984ರಲ್ಲಿ ಭಾರತವು ಕಬ್ಜಾ ಸಾಧಿಸಿತು. ಅವತ್ತಿನಿಂದ ಈವರೆಗೆ 869 ಯೋಧರು ಮೃತರಾಗಿದ್ದಾರೆ. ವೈರಿಗಳ ಆಕ್ರಮಣದಿಂದಲ್ಲ… ವಾತಾವರಣ ವೈಪರೀತ್ಯದಿಂದ!

ಸಿಯಾಚಿನ್ ಸೇರಿದಂತೆ 14 ಸಾವಿರ ಅಡಿ ಎತ್ತರ ಮೀರಿದ ಜಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆಲ್ಲ ಅಲ್ಲಿನ ವಾತಾವರಣ ತಾಳಿಕೊಳ್ಳುವುದಕ್ಕೆ ಅನುವಾಗುವಂತೆ ವಿಶಿಷ್ಟ ಸೂಟ್ ಒಂದನ್ನು ನೀಡಲಾಗುತ್ತದೆ. ಅದರಲ್ಲಿ 55 ಅವಶ್ಯಕ ಪದಾರ್ಥಗಳಿರುತ್ತವೆ. ಈ ಪೈಕಿ 22 ಪದಾರ್ಥಗಳು ಮರುಬಳಕೆ ಮಾಡಲು ಆಗದಂಥವು. ಮಲಗುವ ಬ್ಯಾಗು, ಟೆಂಟ್ ಇತ್ಯಾದಿ ಒಳಗೊಂಡ ಈ 22 ಪದಾರ್ಥಗಳಲ್ಲಿ 9 ವಸ್ತುಗಳಿಗೆ ನಾವು ಆಮದನ್ನೇ ಅವಲಂಬಿಸಿದ್ದೇವೆ. ಇನ್ನುಳಿದ 33 ವಸ್ತುಗಳ ಪೈಕಿ 11 ಆಮದಾಗುತ್ತವೆ. ವರ್ಷಕ್ಕೆ ಇಂಥ 27 ಸಾವಿರ ಸೂಟ್ ಗಳು ಸೇನೆಗೆ ಬೇಕಾಗುತ್ತವೆ.

ಇತ್ತೀಚಿನ ಹೊಸ ಬೆಳವಣಿಗೆಯಲ್ಲಿ ಹಲವು ಭಾರತೀಯ ಕಂಪನಿಗಳು ಇಂಥ ಸೂಟ್ ಗಳನ್ನು ತಯಾರಿಸಿ ಪರೀಕ್ಷೆಗೆ ಸಲ್ಲಿಸಿವೆ. ಇವನ್ನೆಲ್ಲ ಹಲವು ಸುತ್ತುಗಳ ಪರೀಕ್ಷೆಗೆ ಒಳಪಡಿಸಿ, ಸಕ್ಷಮವಾಗಿವೆ ಎಂದು ಸಾಬೀತಾದಲ್ಲಿ ಮಾತ್ರ ಬಳಕೆಗೆ ಒಪ್ಪಿಕೊಳ್ಳಲಾಗುತ್ತದೆ. ಇವುಗಳ ಗುಣಮಟ್ಟ ಒಪ್ಪಿಗೆಯಾದರೆ ಈ ಸೂಟುಗಳ ನಿರ್ಮಾಣದಲ್ಲಿ ವಿದೇಶಗಳ ಮೇಲೆ ಇರುವ ಅವಲಂಬನೆ, ಅದರಲ್ಲೂ ಚೀನಾದ ಮೇಲಿನ ಅವಲಂಬನೆ ತಗ್ಗುತ್ತದೆ.

ಇಂಥ ಎಲ್ಲ ಸವಾಲುಗಳ ನಡುವೆ, ಊಹೆಗೂ ನಿಲುಕದ ಶೀತದ ತುಂಡಿನಲ್ಲಿ ಪಹರೆ ಜಾರಿಯಲ್ಲಿಟ್ಟಿದ್ದಾರೆ ಭಾರತದ ವೀರಯೋಧರು. ಗಣರಾಜ್ಯೋತ್ಸವದ ಸೆಲ್ಯೂಟ್ ಅವರಿಗಿರಲಿ! ಅಂದಹಾಗೆ, ಜನವರಿ 26ರ ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್, ‘ರೀವೀಲ್ಡ್- ಸಿಯಾಚಿನ್’ ಎಂಬ ಸಾಕ್ಷ್ಯಚಿತ್ರ ಪ್ರದರ್ಶಿಸಲಿದೆ. 21 ಸಾವಿರ ಅಡಿ ಮೇಲಿರುವ ಜಗತ್ತಿನ ಅತಿ ಎತ್ತರದ ಹಾಗೂ ಅತಿ ತಣ್ಣನೆಯ ಯುದ್ಧಭೂಮಿಯಲ್ಲಿ ಭಾರತೀಯ ಯೋಧರ ಅಸೀಮ ಸಾಹಸ ಎಂಥಾದ್ದು ಎಂಬುದನ್ನು ಈ ಚಿತ್ರ ಕಟ್ಟಿಕೊಡಲಿದೆ ಅಂತ ಡಿಸ್ಕವರಿ ಚಾನೆಲ್ ವಕ್ತಾರರು ಹೇಳಿದ್ದಾರೆ. ಮಿಸ್ ಮಾಡ್ಕೋಬೇಡಿ…

Leave a Reply