ಮೋದಿಯವರು ಹೊಲಾಂಡೆ ಕೈಕುಲುಕಿದ ಕಲ್ಲಿನ ಉದ್ಯಾನದಲ್ಲಿ ನೆಕ್ ಚಾಂದ್ ಎಂಬ ಕಲಾ ಮಾಂತ್ರಿಕನ ಕತೆಯೊಂದಿದೆ… ಒಪ್ಪಿಸಿಕೊಳ್ಳೋಣ!

 

ಚೈತನ್ಯ ಹೆಗಡೆ

ಗಣರಾಜ್ಯೋತ್ಸವದ ಈ ಬಾರಿಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕ್ವಾ ಹೊಲಾಂಡೆ ಭಾರತಕ್ಕೆ ಬಂದಿರುವುದು, ರಕ್ಷಣೆ ಸೇರಿದಂತೆ ಹಲವು ವಲಯಗಳಲ್ಲಿ ಸಹಸ್ರ ಕೋಟಿ ರುಪಾಯಿಗಳ ಒಪ್ಪಂದಕ್ಕೆ ಸಹಿ ಬೀಳುತ್ತಿರುವುದು ಈ ಎಲ್ಲ ವಿವರಗಳನ್ನು ಓದಿಯೇ ಇರುತ್ತೀರಿ. ಇವೆಲ್ಲದರ ನಡುವೆ ವಿದೇಶಿ ಅಭ್ಯಾಗತರ ಆಗಮನವೊಂದು ನಮ್ಮ ನೆಲದಲ್ಲೇ ನಮಗೆಲ್ಲ ಅಪರಿಚಿತ ಎಂಬಂತಿದ್ದ ಮಾನವೀಯ ಅಧ್ಯಾಯವೊಂದನ್ನು ಪರಿಚಯಿಸುವುದಕ್ಕೆ ಕಾರಣವಾಗಿದೆ. ನೆಕ್ ಚಾಂದ್ ಸೈನಿ ಎಂಬ ಹೆಸರೊಂದು ಮೆಲ್ಲಗೆ ನಮ್ಮೆಲ್ಲರ ಕಿವಿಗೆ ಬಡಿದಿದೆ.

ಭಾನುವಾರ ಚಂಡೀಗಢದ ರಾಕ್ ಗಾರ್ಡನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ- ಫ್ರಾನ್ಸ್ ಅಧ್ಯಕ್ಷ ಫ್ರಾಂಕ್ವಾ ಹೊಲಾಂಡೆ ಭೇಟಿ ಆಗುತ್ತಿದ್ದಾಗ, ಭದ್ರತೆಗೆ ನಿಯೋಜನೆಯಾಗಿದ್ದವರು ನೆಕ್ ಚಾಂದ್ ಅವರ ಮಗನನ್ನು ಆಹ್ವಾನ ಪತ್ರವಿದ್ದರೂ ಹೊರಗೆ ಕಳುಹಿಸಿ ಅವಮಾನಿಸಿಬಿಟ್ಟರಂತೆ ಎಂಬ ಸುದ್ದಿಯೊಂದು ಪ್ರಕಟವಾಯಿತು.

ಇದರ ಬೆನ್ನುಹತ್ತಿ ಹೋಗುತ್ತಲೇ ನೆಕ್ ಚಾಂದ್ ಸೈನಿ (15-12-1924 – 12-6-2015) ಎಂಬ ಕಲಾ ಮಾಂತ್ರಿಕನ ಬದುಕಿನ ಪುಟಗಳು ಪಟಪಟಿಸಿದುವು.

rock

ಈ ನೆಕ್ ಚಂಡೀಗಢದಲ್ಲಿ ಸೃಷ್ಟಿಸಿರುವ ಕಲ್ಲಿನ ಉದ್ಯಾನ ಕೇವಲ ಕಲೆಯ ಚರಿತ್ರೆಯನ್ನು ಮಾತ್ರವೇ ಹೊದ್ದಿಲ್ಲ. ಈ ಕಲ್ಲಿನುದ್ಯಾನ ಬದುಕಿನ ಅನನ್ಯ ಆನಂದವೊಂದರ ಹುಡುಕಾಟದ ಕತೆ ಹೇಳುತ್ತದೆ. ಮರುಬಳಕೆಯ ಆದರ್ಶವನ್ನು ಸಾರುತ್ತದೆ. ಜೀವನೋತ್ಸಾಹದ ಪಾಠ ಹೇಳುತ್ತದೆ.

ಹೊಲಾಂಡೆಯವರನ್ನು ದೆಹಲಿಯಲ್ಲಲ್ಲದೇ, ಚಂಡೀಗಢದಲ್ಲೇ ಇರಿಸಿ ಸ್ವಾಗತಿಸಿರುವುದಕ್ಕೂ ಕಾರಣವಿದೆ. ಏಕೆಂದರೆ ಸ್ವಾತಂತ್ರ್ಯಾನಂತರ ಚಂಡೀಗಢವೆಂಬ ನಗರ ನಿರ್ಮಾಣವಾಗಿದ್ದೇ ಫ್ರಾನ್ಸ್ ಸಹಯೋಗದಲ್ಲಿ. ಅದು ದೇಶದ ಮೊದಲ ಆಧುನಿಕ ನಗರ. ಹಾಗೆಂದೇ ಫ್ರಾನ್ಸ್ ನ ಪ್ರಖ್ಯಾತ ವಾಸ್ತುಶಾಸ್ತ್ರಜ್ಞ ಲೀ ಕಾರ್ಬ್ಯುಸಿರೊ ನಕ್ಷೆಯಂತೆ ಚಂಡೀಗಢ ನಿರ್ಮಾಣವಾಯಿತು. ಆದರೆ ಹೊಲಾಂಡೆಗೆ ಸ್ವಾಗತ ಸಿಕ್ಕಿದ್ದು ಕಾರ್ಬ್ಯುಸಿರೊ ನಿರ್ಮಿಸಿದ ಯಾವ ಚಾವಣಿಯ ಅಡಿಗೂ ಅಲ್ಲ. ಬದಲಿಗೆ ನೆಕ್ ಚಾಂದ್ ಸೈನಿ ಅವರ ರಾಕ್ ಗಾರ್ಡನ್ ನಲ್ಲಿ.

ಫ್ರಾನ್ಸ್ ಸಹಯೋಗದಲ್ಲಿ ಚಂಡೀಗಢ ನಗರ ವಿನ್ಯಾಸಗೊಳ್ಳುತ್ತಿದ್ದಾಗಲೇ, ದೇಶ ವಿಭಜನೆಯ ಕ್ರೂರ ಆಘಾತದಿಂದ ಸಾವರಿಸಿಕೊಳ್ಳುತ್ತ ಈಗಿನ ಪಾಕಿಸ್ತಾನದ ಶಕರ್ಗಢ ಪ್ರಾಂತ್ಯದಿಂದ ಇಲ್ಲಿಗೆ ಬಂದವರು ನೆಕ್ ಚಾಂದ್. ಇಲ್ಲಿ ಹೇಗೂ ಹೊಸ ನಗರ ನಿರ್ಮಾಣವಾಗುತ್ತಿತ್ತಲ್ಲ; ನೆಕ್ ಚಾಂದ್ ಗೆ ಕೆಲಸವೂ ಸಿಕ್ಕಿತು. ಹಾಗೆಯೇ ಕೆಲಸಗಾರನಾಗಿ ಕಳೆದುಹೋಗಿದ್ದರೆ ಇಲ್ಲೀಗ ನೆನಪಿಸಿಕೊಳ್ಳುವ ಪ್ರಮೇಯವೇ ಇರುತ್ತಿರಲಿಲ್ಲ.

ನೆಕ್ ಚಾಂದ್ ಅವರ ಮನಸ್ಸಿನಲ್ಲಿ ಸುಕ್ರಾನಿ ಎಂಬ ದೈವಿಕ ಸಾಮ್ರಾಜ್ಯದ ಕಲ್ಪನೆಯೊಂದು ಗರಿಗೆದರಿತ್ತು. ಇದನ್ನು ಸಾಕಾರಗೊಳಿಸುವುದಕ್ಕೆ ತಮ್ಮ ಬಿಡುವಿನ ಸಮಯ ಎತ್ತಿಟ್ಟ ನೆಕ್ ಚಾಂದ್, ಹತ್ತಿರದಲ್ಲಿದ್ದ ಅರಣ್ಯ ಪ್ರದೇಶಕ್ಕೆ ತೆರಳಿ, ಅಲ್ಲಿನ ಸುಖ್ನಾ ಸರೋವರದ ಪ್ರದೇಶವನ್ನು ಆಯ್ಕೆ ಮಾಡಿಕೊಂಡರು. 1902ರಲ್ಲೇ ಸಂರಕ್ಷಿತ ಪ್ರದೇಶ ಎಂದು ಘೋಷಣೆಗೊಂಡಿದ್ದ ಆ ಅರಣ್ಯಪ್ರಾಂತ್ಯದಲ್ಲಿ ಯಾವುದೇ ಕಾಮಗಾರಿ ನಡೆಸುವಂತಿರಲಿಲ್ಲ. ಹೀಗಾಗಿ ಅಲ್ಲಿ ನೆಕ್ ಚಾಂದ್ ಪ್ರವೇಶವೇ ಕಾನೂನುಬಾಹಿರ! ಆ ಸಮಯಕ್ಕೆ ಅವನ್ನೆಲ್ಲ ಗಮನಿಸುತ್ತಿರಲಿಕ್ಕೆ ಯಾರಿಗಿತ್ತು ಪುರಸೊತ್ತು? ಸರಿ, ನೆಕ್ ಚಾಂದ್ ತಮ್ಮ ಕಲಾ ಸಾಮ್ರಾಜ್ಯ ಕೆತ್ತುವುದಕ್ಕೆ- ಕಟ್ಟುವುದಕ್ಕೆ ಶುರುವಿಟ್ಟುಕೊಂಡರು. ಚಂಡೀಗಢವನ್ನು ಆಧುನಿಕವಾಗಿ ಕಟ್ಟಬೇಕು ಅಂತ ಹಳೆಯ ಕಟ್ಟಡಗಳನ್ನೆಲ್ಲ ಒಡೆಯಲಾಗುತ್ತಿತ್ತು. ಈ ತ್ಯಾಜ್ಯಗಳನ್ನೇ ಎತ್ತಿಟ್ಟುಕೊಂಡು ತಮ್ಮ ಸುಕ್ರಾನಿ ಸಾಮ್ರಾಜ್ಯಕ್ಕೆ ಅಡಿಪಾಯವನ್ನಾಗಿಸಿದರು ನೆಕ್ ಚಾಂದ್. ಎಷ್ಟೆಂದರೂ ದೇಶವಿಭಜನೆಯಲ್ಲಿ ಬದುಕನ್ನು ನೆಲಸಮಗೊಳಿಸಿಕೊಂಡವರು ಇವರಲ್ಲವೇ? ಹೀಗಾಗಿ ಮರುಬಳಕೆ, ಮರು ನಿರ್ಮಾಣಗಳ ಅಗತ್ಯ ಎದೆಯಲ್ಲಿಳಿದುಬಿಟ್ಟಿತ್ತೆಂದು ತೋರುತ್ತದೆ. ಹೀಗೆಯೇ ಏಕಾಂಗಿಯಾಗಿ, ಜಗತ್ತಿನ ಪರಿವೆಯೇ ಇಲ್ಲದೇ 18 ವರ್ಷಗಳ ಕಾಲ ಕಾಡಿನಲ್ಲಿ ‘ಅಕ್ರಮ ಕಾಮಗಾರಿ’ ಮಾಡಿಕೊಂಡಿದ್ದರು ನೆಕ್ ಚಾಂದ್.

ಕೊನೆಗೊಮ್ಮೆ 1975ರಲ್ಲಿ ಅಧಿಕಾರಿಗಳಿಗೆ ಅರಣ್ಯದಲ್ಲಿ ನಡೆಯುತ್ತಿದ್ದ ಈ ‘ಅಕ್ರಮ ಕೈಚಳಕ’ ಕಣ್ಣಿಗೆ ಬಿದ್ದಿತು. ಆದರೆ ಕಂಡಿದ್ದಾದರೂ ಏನು? ಕಲ್ಲಲ್ಲಿ ಅರಳಿದ ಕುದುರೆಗಳು, ಕಾಲಾಳುಗಳು, ನೃತ್ಯಗೈಯುತ್ತಿರುವ ಬೆಡಗಿಯರು, ರಾಜ ದರ್ಬಾರು…. ಅರಳಿ ನಿಂತಿತ್ತು ಒಂದಿಡೀ ಕಲಾಸಾಮ್ರಾಜ್ಯ! ಮಡಿಕೆ, ಮರಳಿನ ನಿರ್ಮಿತಿ, ಚಂಡೀಗಢ ನಗರದ ಎದೆ ಮೇಲೆ ಒಡೆದು ಬಿದ್ದಿದ್ದ ಬಳೆಗಳು, ಬಾಟಲಿಗಳೆಲ್ಲ ಇಲ್ಲಿ ಕಲೆಯಾಗಿ ಪುನರ್ಜನ್ಮ ತಾಳಿದ್ದವು.

ರೂಲ್ಸ್ ಅಂದ್ರೆ ರೂಲ್ಸ್ ಅಂತ ಇವನ್ನೆಲ್ಲ ಕೆಡವಲು ಹೋದಾಗ ಸಾರ್ವಜನಿಕರು ಅಡ್ಡಬಂದರು. ನೆಕ್ ಚಾಂದ್ ಸೈನಿ ಅವರಿಗೆ ನಗರದ ಜನರ ಪ್ರಶಂಸೆಯ ಮಹಾಪೂರ ಹರಿದುಬಂತು. 1986ರಲ್ಲಿ ಈ ಪ್ರದೇಶವನ್ನು ಸಾರ್ವಜನಿಕ ಸ್ಥಳವನ್ನಾಗಿ ಘೋಷಿಸಲಾಯಿತು. ನೆಕ್ ಚಾಂದ್ ಅವರಿಗೆ ಸರ್ಕಾರದ ವತಿಯಿಂದ ನೌಕರಿ ಕೊಟ್ಟು, ಕಲ್ಲಿನುದ್ಯಾನದ ಕಾರ್ಯವನ್ನು ಸಂಪೂರ್ಣಗೊಳಿಸುವುದಕ್ಕೆ 50 ಮಂದಿ ಸಹಾಯಕರನ್ನು ನೀಡಲಾಯಿತು. ಇವತ್ತಿಗೂ ಚಂಡೀಗಢದ ಆ ಉದ್ಯಾನದಲ್ಲಿ ಇರುವಂಥವೆಲ್ಲ ಮರುಬಳಕೆಯ ವಸ್ತುಗಳಿಂದ ರೂಪುಗೊಂಡಂಥವೇ. 1984ರಲ್ಲಿ ನೆಕ್ ಚಾಂದ್ ಸೈನಿ ಅವರಿಗೆ ಪದ್ಮಶ್ರೀ ಗೌರವ ಸಿಕ್ಕಿತು.

rock4

ಪ್ರತಿನಿತ್ಯ 5000ಕ್ಕೂ ಹೆಚ್ಚು ಮಂದಿಯನ್ನು ಸೆಳೆಯುವ ಚಂಡೀಗಢದ ಕಲ್ಲಿನುದ್ಯಾನ, ತಾಜ್ ಮಹಲ್ ನಂತರ ಅತಿ ಹೆಚ್ಚಿನ ಮಂದಿ ಭೇಟಿ ನೀಡುತ್ತಿರುವ ಸ್ಥಳ ಎನಿಸಿಕೊಂಡಿದೆ.

ಹೀಗೆಲ್ಲ ಗಣ್ಯರು ಬಂದಾಗ ಭಾರತದ ಬೇರೆ ಬೇರೆ ವಿಶಿಷ್ಟ ಸ್ಥಳಗಳಲ್ಲಿ ಅವರನ್ನಿರಿಸಿ ಆದರಿಸುವ ಪದ್ಧತಿ ಒಳ್ಳೆಯದೇ. ಹಾಗಾದರೂ ನಮಗೆ ಭಾರತದ ಅಪಾರ ಶ್ರೀಮಂತಿಕೆಯ ಅರಿವಾಗುತ್ತದೆ.

Leave a Reply