ಸುದ್ದಿಸಂತೆ: ಈ ದಿನಾಂತ್ಯ ಸಮಯದಲಿ ನೀವಿಷ್ಟು ತಿಳಿದರೆ ಸಾಕು

ಬಿಜೆಪಿ ಮೆಂಬರ್ ಶಿಪ್ ಕಡತಕ್ಕೆ ಚಂದ್ರ ಬೋಸ್

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಸೋದರ ಮೊಮ್ಮಗ ಚಂದ್ರ ಬೋಸ್ ಅವರು ಭಾರತೀಯ ಜನತಾ ಪಕ್ಷ ( ಬಿಜೆಪಿ) ಕ್ಕೆ ಸೇರ್ಪಡೆಯಾಗುವುದಾಗಿ ಸೋಮವಾರ ಘೋಷಿಸಿದ್ದಾರೆ. ಪಕ್ಷದ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಹರಾವತ್ ನಲ್ಲಿ ನಡೆಯವ ಸಾರ್ವಜನಿಕ ಸಮಾವೇಶಲ್ಲಿ ಸೇರ್ಪಡೆಗೊಂಡಿದ್ದಾರೆ.

ರಾಜಕೀಯ ಪಕ್ಷಕ್ಕೆ ಸೇರುತ್ತಿರುವುದು ನನ್ನ ವೈಯಕ್ತಿಕ ವಿಷಯ ಎಂದಿರುವ ಬೋಸ್, ಬಿಜೆಪಿ ಪಕ್ಷ ನೇತಾಜಿ ಅವರ ಆದರ್ಶಗಳನ್ನು ಪಾಲಿಸುತ್ತಿದೆ. ವಿವೇಕಾನಂದ- ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಚಿಂತನೆಗಳನ್ನು ಮುಖ್ಯವಾಹಿನಿಗೆ ತರಬೇಕಿರುವುದರಿಂದ ಇದಕ್ಕೆ ಬಿಜೆಪಿಯೇ ಸೂಕ್ತ ವೇದಿಕೆಯಾಗಿರುವುದರಿಂದ ಈ ನಿರ್ಧಾರ ಎಂದಿದ್ದಾರೆ.

ಚಂದ್ರ ಬೋಸ್ ಈ ಹಿಂದೆ ಟಾಟಾ ಸ್ಟೀಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಈಗ ತನ್ನ ಪತ್ನಿಯೊಂದಿಗೆ ಕೊಲ್ಕತ್ತಾದಲ್ಲಿ ವಾಸವಾಗಿದ್ದಾರೆ.

ಫ್ರಾನ್ಸ್ ಜತೆ ಒಪ್ಪಂದಗಳದ್ದೇ ಪಥಸಂಚಲನ!

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಆತಿಥಿಯಾಗಿ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೋಲಾಂಡ್ ಅವರು ಭಾರತದೊಂದಿಗೆ 36 ರಫಾಲ್ ಫೈಟರ್ ಜೆಟ್ ಗಳ ಖರೀದಿ ಸೇರಿ ಒಟ್ಟು 13 ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಸೋಮವಾರ ಸಹಿಮಾಡಿದ್ದಾರೆ.

ದ್ವಿರಾಷ್ಟಗಳ ನಡುವಿನ ಸಭೆಯಲ್ಲಿ ಆಹಾರ ಸುರಕ್ಷತೆ, ಉತ್ತಮ ಆಡಳಿತ, ರೈಲ್ವೆ ಇಲಾಖೆ, ಪರಮಾಣು ಶಕ್ತಿ, ಕಡಲ ಸಹಕಾರ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಿರುವ ಬಗ್ಗೆ ನಾಯಕರು ಘೋಷಿಸಿದ್ದಾರೆ. ಫ್ರಾನ್ಸ್ ಹಣಕಾಸು ಸಚಿವ ಮಿಚೆಲ್ ಸಫೀನ್ ರವರು ಮಾತನಾಡಿ ಭಾರತದಲ್ಲಿ 67000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಾಗುವುದೆಂದು ತಿಳಿಸಿದರು.

ಅರುಣಾಚಲದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಸಜ್ಜಾದ ಕೇಂದ್ರ, ತೀವ್ರ ಪ್ರತಿರೋಧ

ಕಾಂಗ್ರೆಸ್ ಆಡಳಿತದ ಅರುಣಾಚಲ ಪ್ರದೇಶ ರಾಜ್ಯಕ್ಕೆ ರಾಷ್ಟಪತಿ ಆಳ್ವಿಕೆ ಹೇರಲು ಕೇಂದ್ರ ಸಚಿವ ಸಂಪುಟದ ಶಿಫಾರಸು ಮಾಡಿರುವುದು ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ರಾಜಕೀಯ ಪ್ರತಿರೋಧ ಹೆಚ್ಚಾಗುತ್ತಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ಬಗ್ಗೆ ಕೇಂದ್ರದಿಂದ ಹೆಚ್ಚಿನ ವಿವರಣೆ ಕೇಳಿದ್ದಾರೆ.

ಕೇಂದ್ರದ ಈ ನಿರ್ಧಾರ ಪ್ರಜಾಪ್ರಭುತ್ವವನ್ನೇ ಅಲುಗಾಡಿಸಲು ಹೊರಟಂತಿದೆ ಮತ್ತು ಇದುವೇ “ಅಸಹಿಷ್ಣುತೆಯ ರಾಜಕೀಯ”  ಅಂತ ಕಾಂಗ್ರೆಸ್ ಟೀಕಿಸಿದೆ. ಅಲ್ಲದೇ, ಕೇಂದ್ರದ ನಿರ್ಧಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿಯೂ ಹೇಳಿದೆ.

ಕೇರಳ ಸೋಲಾರ್ ಹಗರಣ, ವಿಚಾರಣೆಗೊಳಗಾದ ಮುಖ್ಯಮಂತ್ರಿ

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ನಡೆಸಿದೆ ಎನ್ನಲಾದ 7 ಕೋಟಿ ರೂಪಾಯಿಗಳ ಸೊಲಾರ್ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಸೋಮವಾರ ನ್ಯಾಯಾಂಗ ತನಿಖಾ ಸಮಿತಿಯ ಮುಂದೆ ಹಾಜರಾಗಿ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಉದ್ಯಮಿಗಳಾದ ಸರೀತಾ ನಾಯರ್ ಮತ್ತು ಬಿಜು ರಾಧಾಕೃಷ್ಣ ಅವರು ಸೋಲಾರ್ ಪ್ಯಾನಲ್ ಅಳವಡಿಸಲು ಸರ್ಕಾರದಿಂದ ಗುತ್ತಿಗೆ ಪಡೆದಿದ್ದರು. ಹಗರಣದಲ್ಲಿ ಚಾಂಡಿ ಅವರ ಪಾತ್ರದ ಇದೆ ಎಂದು ವಿರೋಧ ಪಕ್ಷ ಆರೋಪಿಸಿತ್ತು. ತನಿಖಾ  ಆಯೋಗ ನೀಡಿದ ವರದಿಯಿಂದ ಹಗರಣ ನಡೆದಿರುವುದು ಸಾಬೀತಾಗಿ ಉದ್ಯಮಿಗಳಿಬ್ಬರು ಜೈಲು ಸೇರಿದ್ದಾರೆ.

ಇಂಗ್ಲೆಂಡ್ ಮುಂದಿನ ಗುರಿ ಅಂದಿದಾರೆ ಇಸಿಸ್ ಉಗ್ರರು

ಪ್ಯಾರಿಸ್ ನಲ್ಲಿ ಕಳೆದ ನವೆಂಬರ್ ನಲ್ಲಿ ಸಿರಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ನಡೆಸಿದ 130 ಮಂದಿ ಸಾರ್ವಜನಿಕರ ಶಿರಚ್ಛೇದ ಪ್ರಕರಣ ಪ್ರಪಂಚವನ್ನೇ ಬೆಚ್ಚಿ ಬೀಳಿಸಿತ್ತು. ಆಗ ಫೋಟೋಗಳನ್ನು ಮಾತ್ರ ಬಿಡುಗಡೆಗೊಳಿಸಿದ್ದ ಐಸಿಸ್, ಈಗ ವಿಡಿಯೋವನ್ನು ಬಿಡುಗಡೆಗೊಳಿಸಿ ಕೃತ್ಯದ ಭಯಾನಕ ರೂಪವನ್ನು ತೋರಿಸಿದೆ. ವಿಡಿಯೋದಲ್ಲಿ ದಾಳಿಗೆ ಸಂಬಂಧಿಸಿದ ಹಲವು ಚಿತ್ರಗಳು “ಟಾರ್ಗೆಟ್ ಏರಿಯಾ: ಪ್ಯಾರಿಸ್” ಎಂಬ ತಲೆಬರಹ ಹೊಂದಿವೆ. ಅಲ್ಲದೇ, ತಮ್ಮ ಮುಂದಿನ ದಾಳಿ ಇಂಗ್ಲೆಂಡ್ ಮೇಲೆ ಆಗಲಿದೆ ಅಂತ ಇದೇ ವಿಡಿಯೋದಲ್ಲಿ ಉಗ್ರರು ಬೆದರಿಸಿದ್ದಾರೆ.

ವಿದ್ಯಾರ್ಥಿನಿಯರ ಆತ್ಮಹತ್ಯೆ: ಮೊದಲ ಬಂಧನ

ತಮಿಳುನಾಡು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣದಲ್ಲಿ ಕಾಲೇಜಿನ ಅಧ್ಯಕ್ಷರ ಪುತ್ರನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. 3 ದಿನಗಳ ಹಿಂದೆ ವಿಲ್ಲುಪುರಂ ನ ಎಸ್ ವಿ ಎಸ್ ಯೋಗ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪತ್ರ ಬರೆದು ಮೂವರು ವಿದ್ಯಾರ್ಥಿಗಳು  ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ವಿರೋಧಿಸಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ವಿದ್ಯಾರ್ಥಿನಿಯರ ಕುಟುಂಬದವರಿಗೆ ತಲಾ 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು.

Leave a Reply