ಒಳಮರ್ಮವೇ ರಾಜಕೀಯ ಧರ್ಮವಾದರೆ ನೀತಿ, ನಿಯತ್ತಿಗೆ ಉಳಿಗಾಲವಾದರೂ ಎಲ್ಲಿದೆ..?

author-thyagarajಟ್ರೇಲರೇ ಇಷ್ಟೊಂದು ಗಬ್ಬೆದ್ದು ನಾರುತ್ತಿದೆಯಲ್ಲ, ಇನ್ನು ಮೇನ್ ಸಿನಿಮಾ ಇನ್ನೆಷ್ಟು ಭಯಂಕರ ಇರುತ್ತೋ..?!

ಮೂರು ವಿಧಾನಸಭೆ ಕ್ಷೇತ್ರಗಳ ಮರುಚುನಾವಣೆ ಸಂಬಂಧ ನಡೆದಿರುವ ರಾಜಕೀಯ ನಾಟಕ ಜನರಲ್ಲಿ ಈ ಪ್ರಶ್ನೆ ಮೂಡಿಸಿದೆ. ಮೂವರು ಶಾಸಕರ ಅಕಾಲಿಕ ಮರಣದಿಂದ ತೆರವಾಗಿರುವ ಈ ಕ್ಷೇತ್ರಗಳಲ್ಲಿ ಉಳಿದಿರೋ ಅವಧಿ ಬರೀ ಎರಡೂಕಾಲು ವರ್ಷ. ಇಷ್ಟಕ್ಕೇ ಅಷ್ಟೊಂದು ರಾಜಕೀಯ ಚಿತಾವಣೆಗಳು ನಡೆದಿವೆಯಲ್ಲ, ಇನ್ನು ವಿಧಾನಸಭೆ ಚುನಾವಣೆ ಅದ್ಯಾವ ಪರಿ ಅರಾಜಕತೆಗೆ ಸಾಕ್ಷಿಯಾಗಬಹುದು ಎಂಬ ಆತಂಕ ಅವರದ್ದು.

ಸಮಾಜ ಸೇವೆ ಮಾಡೋದಿಕ್ಕೆ ರಾಜಕೀಯ ಬೇಕು ಅನ್ನುವ ಪ್ರಾಮಾಣಿಕ ಕಾಳಜಿ ಯಾವುದೇ ಪಕ್ಷದಲ್ಲೂ ಇಲ್ಲ. ಬರೀ ವೈಯಕ್ತಿಕ ಲಾಭ-ನಷ್ಟದ ಲೆಕ್ಕಾಚಾರಗಳೇ. ಅದು ಅಭ್ಯರ್ಥಿ ಇರಬಹುದು, ಅವನನ್ನು ಆಯ್ಕೆ ಮಾಡಿದ ನಾಯಕರಿರಬಹುದು. ಎಲ್ಲರಿಗೂ ಸ್ವಂತ ಪ್ರಯೋಜನದ್ದೇ ಚಿಂತೆ, ಚಿಂತನೆ. ಇದರ ಮುಂದೆ ನೈತಿಕತೆ ಧೂಳೀಪಟ. ಹೀಗಾಗಿ ಈ ಚುನಾವಣೆಯಲ್ಲಿ ಬರೀ ಹಣ, ಜಾತಿ, ದ್ವೇಷ, ದ್ರೋಹ, ಕುಯುಕ್ತಿಗಳೇ ವಿಜೃಂಭಿಸುತ್ತಿದ್ದು, ರಾಜಕೀಯ ಕ್ಷೇತ್ರದ ಮತ್ತಷ್ಟು ಕಲ್ಮಶಕ್ಕೆ ಎರಕ ಹೊಯ್ಯುತ್ತಿವೆ.

ದುಡ್ಡಿದ್ದವರಿಗೆ ಟಿಕೆಟ್ ಕೊಟ್ರು ಅಂತ ಪಕ್ಷಗಳ ನಡುವೆ ಪರಸ್ಪರ ವಾಗ್ವಿನಿಮಯ. ಆದರೆ ಈ ರೀತಿ ದೂರೊದಿಕ್ಕೆ ಯಾರಿಗೂ ಯೋಗ್ಯತೆ ಇಲ್ಲ. ಏಕೆಂದರೆ ಎಲ್ರೂ ಮಾಡಿರೋದು ಅದೇ ಕೆಲಸವನ್ನೇ. ಹೆಬ್ಬಾಳದಲ್ಲಿ ಭೈರತಿ ಸುರೇಶ್ ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದರಲ್ಲಿ ದುಡ್ಡಿನ ಶಕ್ತಿ ಅನ್ವೇಷಿಸುವ ಬಿಜೆಪಿಗೆ ದಿವಂಗತ ಜಗದೀಶ್ ಪತ್ನಿ ಲಲಿತಾ ಅವರಿಗೆ ದುಡ್ಡಿಲ್ಲ ಎನ್ನುವ ಕಾರಣಕ್ಕೇ ತಾನು ಟಿಕೆಟ್ ಕೊಡಲಿಲ್ಲ ಅನ್ನೋದು ಮರೆತು ಹೋಗುತ್ತದೆ. ಸಂಭಾವಿತ ಜಗದೀಶ್ ಕ್ಷೇತ್ರದಲ್ಲಿ ಒಂದಷ್ಟು ಹೆಸರು ಮಾಡಿದ್ದರು. ಅವರ ನಿಧನದ ಅನುಕಂಪವೂ ದಂಡಿಯಾಗಿತ್ತು. ನೀವೇ ಅಭ್ಯರ್ಥಿ ಆಗಿ ಅಂದಾಗ ತಮ್ಮ ಬಳಿ ದುಡ್ಡಿಲ್ಲ ಎಂದು ಲತಾ ಅವರು ಪ್ರಾಮಾಣಿಕವಾಗಿ ಹೇಳಿದ್ರು. ಅವರ ಚುನಾವಣೆ ಖರ್ಚು ವಹಿಸಿಕೊಳ್ಳಲಾರದಷ್ಟು ದಾರಿದ್ರ್ಯ ಬಿಜೆಪಿ ನಾಯಕರಿಗೇನೂ ಬಂದಿರಲಿಲ್ಲ. ಆದರೆ ಆ ಕೆಲಸ ಮಾಡಲಿಲ್ಲ. ಬೀದರ್ ನಲ್ಲಿ ದುಡ್ಡಿದೆ ಅನ್ನೋ ಕಾರಣಕ್ಕೇ ದಿವಂಗತ ಗುರುಪಾದಪ್ಪ ನಾಗಮಾರಪಲ್ಲಿ ಪುತ್ರ ಸೂರ್ಯಕಾಂತ್ ಗೆ ಟಿಕೆಟ್ ಆಫರ್ ಮಾಡಿದ್ದರು. ಅವರು ನಿಲ್ಲಲ್ಲ ಅಂದಿದ್ದಕ್ಕೇ ಪ್ರಕಾಶ್ ಖಂಡ್ರೆ ಅವರಿಗೆ ಕೊಟ್ಟಿದೆ. ದೇವದುರ್ಗದಲ್ಲಿ ಎರಡು ಸಾರಿ ಸೋತಿರೋ ಶಿವನಗೌಡ ನಾಯಕ್ ಗೇ ಟಿಕೆಟ್ ಕೊಟ್ಟಿರೋದೂ ಅದೇ ಕಾರಣಕ್ಕೆ. ಅನ್ಯಪಕ್ಷಗಳ ಮೇಲೆ ಅರೋಪ ತಪ್ಪಲ್ಲ. ಆದರೆ ಅದಕ್ಕೆ ಮುಂಚೆ ತಮ್ಮ ತಟ್ಟೇಲಿ ಏನು ಬಿದ್ದಿದೆ ಅನ್ನೋದನ್ನು ನೋಡಿಕೊಳ್ಳಬೇಕಾಗುತ್ತದೆ.

ಇನ್ನು ಕಾಂಗ್ರೆಸ್ ನ ಎಚ್.ಎಂ. ರೇವಣ್ಣನವರ ಕತೆ. ಮಾಗಡಿಯಲ್ಲಿ ಬಾಲಕೃಷ್ಣ ಅವರ ರಾಜಕೀಯ ಹೊಡೆತ ತಾಳಲಾರದೇ ಹೆಬ್ಬಾಳಕ್ಕೆ ವಲಸೆ ಬಂದಿರುವ ರೇವಣ್ಣ, ಇದೀಗ ಪರವೊರಿನ ಭೈರತಿ ಸುರೇಶ್ ಗೆ ಟಿಕೆಟ್ ಕೊಟ್ಟಿರೋದು ಪರಮ ಅನ್ಯಾಯ ಅಂತ ಚಂಡಿ ಹಿಡಿದ ಮಗು ಥರಾ ಗೋಳಾಡುತ್ತಿದ್ದಾರೆ. ಹಾಗೇ ನೋಡಿದರೆ ಜಾತಿ ಮತ್ತು ದುಡಿನ ಕಾರಣಕ್ಕೆ ರಿಯಲ್ ಎಸ್ಟೇಟ್ ಕುಳಗಳಾದ ಎಂಟಿಬಿ ನಾಗರಾಜ್, ವರ್ತೂರು ಪ್ರಕಾಶ್, ಆರ್. ಶಂಕರ್, ಭೈರತಿ ಬಸವರಾಜ್, ಸುರೇಶ್ ಅವರನ್ನೆಲ್ಲ ಪಕ್ಷಕ್ಕೆ ಕರೆದುಕೊಂಡು ಬಂದು, ವೀರಪ್ಪ ಮೊಯಿಲಿ, ಎಸ್.ಎಂ. ಕೃಷ್ಣ, ಧರ್ಮಸಿಂಗ್, ಸಿದ್ದರಾಮಯ್ಯ ಮತ್ತಿತರ ಮುಖಂಡರ ಪರಿಚಯ ಮಾಡಿಸಿದವರು ಇದೇ ರೇವಣ್ಣ. ಆಗೆಲ್ಲ ಅವರಿಂದ ರೇವಣ್ಣ ಕೂಡ ಉಪಕೃತರಾಗಿದ್ದಾರೆ. ಮುಂದೆ ಅವರೆಲ್ಲ ಹಣದ ಶಕ್ತಿಯಿಂದ ನಾಯಕರ ಸಂಪರ್ಕ ಗಟ್ಟಿಮಾಡಿಕೊಂಡು ಇದೀಗ ರೇವಣ್ಣನವರಿಗೇ ‘ವಿಶ್ವರೂಪ ದರ್ಶನ’ ಕೊಟ್ಟಿದ್ದಾರೆ. ರೇವಣ್ಣ ಇದನ್ನ ನೋಡಲಾಗದೆ ಬಾಯಿಬಾಯಿ ಬಡಿದುಕೊಂಡು ತಿರುಗುತ್ತಿದ್ದಾರೆ.

ಇನ್ನು ಕಾಂಗ್ರೆಸ್ ‘ವಾನಪ್ರಸ್ಥ’ ನಾಯಕ ಜಾಫರ್ ಷರೀಫ್. ಹಾಗೇ ಗಮನಿಸಿ ನೋಡಿ. ಈ ಚುನಾವಣೆಗಳು ಬಂದಾಗ ಮಾತ್ರ ಈ ಜಾಫರ್ ಷರೀಫ್ ತಮಗೋ, ತಮ್ಮ ಮೊಮ್ಮಗನಿಗೋ ಟಿಕೆಟ್ ಕೇಳಿಕೊಂಡು ಒಂದಷ್ಟು ಗಲಾಟೆ ಎಬ್ಬಿಸುತ್ತಾರೆ. ಚುನಾವಣೆ ಮುಗಿಯುತ್ತಿದ್ದಂತೆ ಮೌನನಿದ್ದೆಗೆ ಜಾರುತ್ತಾರೆ. ಪಕ್ಷದ ಅಂಗಳ, ಚಟುವಟಿಕೆಯಿಂದ ದೂರ ಉಳಿಯುತ್ತಾರೆ. ಮತ್ತೆ ಜಾಫರ್ ಷರೀಫರ ಧ್ವನಿ ಕೇಳಿಸುತ್ತಿದೆ ಅಂದರೆ ಆಗ ಯಾವುದೋ ಚುನಾವಣೆ ಬಂದಿದೆ, ಅ ಧ್ವನಿಯಲ್ಲಿ ಟಿಕೆಟ್ ಬೇಡಿಕೆ ಪ್ರತಿಧ್ವನಿಸುತ್ತಿದೆ ಅಂತಲೇ ಅರ್ಥ. ಜತೆಗೆ ಮಾಜಿ ಪ್ರಧಾನಿ ದೇವೇಗೌಡರ ಜತೆಗಿನ ಸ್ನೇಹ ಮುಂದಿಟ್ಟು ಬ್ಲಾಕ್ ಮೇಲ್ ರಾಜಕೀಯ ಮಾಡೋದು ಬೇರೆ. ಈ ಇಳಿವಯಸ್ಸಿನಲ್ಲಿ ಇವೆಲ್ಲ ಬೇಕೇ ಇವರಿಗೇ. ಗೌಡರು,  ಶಾಮನೂರು ಶಿವಶಂಕರಪ್ಪ ಅವರಂಥವರನ್ನು ಕರೆದುಕೊಂಡು ಎಲ್ಲಾದರೂ ಟೂರ್ ಹೋಗೋದು ಬಿಟ್ಟು ಇನ್ನು ರಾಜಕೀಯ ಮಾಡಬೇಕೇ? ಅಧಿಕಾರಕ್ಕಾಗಿ ಹಪಾಹಪಿಸಬೇಕೇ?

ಜೆಡಿಎಸ್ ಕತೆ ನೋಡೋಣ. ಕಣಕ್ಕಿಳಿಸೋಣ ಅಂದ್ರೆ ಅವರಿಗೆ ಅಭ್ಯರ್ಥಿಗಳೇ ಗತಿ ಇಲ್ಲ. ಯಾರನ್ನಾದ್ರೂ ಅಭ್ಯರ್ಥಿ ಮಾಡೋಣ ಅಂದ್ರೆ ಇವರೇ ಕೈಯಿಂದ ಕಾಸು ಹಾಕಿ ಚುನಾವಣೆ ಎದುರಿಸಬೇಕು. ಹಂಗೆಲ್ಲ ದುಡ್ಡು ಹಾಕೋದು ನಾಯಕರ ಜಾಯಮಾನವಲ್ಲ. ಹಾಗೆಂದು ಸುಮ್ಮನೆ ಕೂರುವಂತಿಲ್ಲ. ಕಾಲಿ ಡಬ್ಬದಲ್ಲಿ ಕಲ್ಲು ಹಾಕಿ ಅಲ್ಲಾಡಿಸುತ್ತಿದ್ದಾರೆ. ಪಕ್ಷದ ಹೆಸರಾದರೂ ಸೌಂಡ್ ಆಗಲಿ ಆಂತ. ದೇವದುರ್ಗದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಕರಿಯಮ್ಮ ಕ್ಯಾಂಡಿಡೇಟು. ಹೆಬ್ಬಾಳ, ಬೀದರ್ ನಲ್ಲಿ ಈ ಕ್ಷಣದವರೆಗೂ ಉಹುಂ, ಯಾರ ಹೆಸರೂ ಇಲ್ಲ. ಹೆಬ್ಬಾಳದಲ್ಲಿ ಯಾವುದೇ ಕ್ಯಾಂಡಿಡೇಟ್ ಹಾಕ್ಬೇಡಣ್ಣಾ ಅಂತ ಭೈರತಿ ಸುರೇಶ್, ಯಾರಾದ್ರೂ ಮುಸ್ಲಿಂ ಕ್ಯಾಂಡಿಡೇಟ್ ಹಾಕಿ, ಅನುಕೂಲ ಮಾಡಿಕೊಡಿ ಅಂತ ಬಿಜೆಪಿ ನಾಯಕರು ಕುಮಾರಸ್ವಾಮಿಯವರಿಗೆ ‘ಮನವಿ’ ಸಲ್ಲಿಸಿದ್ದಾರೆ. ಇಲ್ಲಿ ಒಕ್ಕಲಿಗರು, ನಂತರ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬೇರೆ-ಬೇರೆ ಸ್ವರೂಪದ ಒಳರಾಜಕೀಯ ಇದೆ. ಭೈರತಿ ಸುರೇಶ್ ಗೆದ್ದರೆ ಕ್ಷೇತ್ರ ಕೈ ತಪ್ಪಿ ಹೋಗುತ್ತದೆ ಅನ್ನುವ ಭಯ ಕಾಂಗ್ರೆಸ್ ನಲ್ಲಿ  ರೇವಣ್ಣನವರಿಗಿದ್ದರೆ, ಬಿಜೆಪಿಯಲ್ಲಿ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರಿಗೂ ಇದೆ. ಈಗೇನೋ ಕೋರ್ಟು, ಕೇಸು ಅನ್ನುವ ಕಾರಣಕ್ಕೆ ಸುಬ್ರಹ್ಮಣ್ಯ ನಾಯ್ಡು ಅವರು ಕಣಕ್ಕಿಳಿದಿಲ್ಲ. ಕುಟುಂಬದವರನ್ನೂ ಕಣಕ್ಕಿಳಿಸಿಲ್ಲ. ಆದರೆ ಮುಂದಿನ ಚುನಾವಣೆ ಹೊತ್ತಿಗೆ ತಮಗಾಗಲಿ, ತಾವು ಹೇಳಿದವರಿಗಾಗಲಿ ಟಿಕೆಟ್ ಕೊಡಬೇಕು ಎನ್ನುವ ಷರತ್ತನ್ನು ಪಕ್ಷದ ಮುಖಂಡರಿಗೆ ಹಾಕಿಯೇ, ವೈ. ನಾರಾಯಣಸ್ವಾಮಿಯವರಿಗೆ ಟಿಕೆಟ್ ಫೈನಲೈಸ್ ಮಾಡಿಸಿದ್ದಾರೆ. ಹೀಗಾಗಿ ಜೆಡಿಎಸ್ ಒಳಬೆಂಬಲಕ್ಕೆ ಎರಡೂ ಪಕ್ಷದಲ್ಲೂ ಭಾರೀ ‘ಬೇಡಿಕೆ’ ಇದೆ. ಕುಮಾರಸ್ವಾಮಿ ಅವರ ಕೃಪಾಕಟಾಕ್ಷ ಯಾರ ಮೇಲೋ ನೋಡಬೇಕು.

ಈ ಚುನಾವಣೇಲಿ ಗೆಲ್ಲುವುದರಿಂದ ಅಥವಾ ಸೋಲುವುದರಿಂದ ಅಧಿಕಾರ ರಾಜಕೀಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಹೀಗಾಗಿ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ ಎಂದು ದೇವೇಗೌಡರು ಎಷ್ಟೇ ಹೇಳಿಕೊಂಡಿರಬಹುದು. ಆದರೆ ಪಕ್ಷಕ್ಕೆ ಅಭ್ಯರ್ಥಿಗಳು ಇಲ್ಲ, ಯಾರನ್ನಾದರೂ ಕಣಕ್ಕಿಳಿಸುವ ಮನಶಕ್ತಿಯೂ ನಾಯಕರಿಗಿಲ್ಲ ಎಂಬುದು ಅಷ್ಟೇ ಸತ್ಯ. ಎಲ್ಲಕ್ಕಿಂತ ಮಿಗಿಲಾಗಿ ಈ ನಕಾರಾತ್ಮಕ ಅಂಶವನ್ನೇ ಲಾಭದಾಯಕವಾಗಿ ಬಳಸಲು ತಂತ್ರಗಾರಿಕೆ ಎಣೆಯಲಾಗುತ್ತಿದೆ ಎಂಬುದು ಈ ಸತ್ಯವನ್ನು ಮೀರಿಸಿದ ಮತ್ತೊಂದು ಸತ್ಯ.

ಬೀದರ್ ನಲ್ಲಿ ಮತ್ತೊಂದು ರೀತಿಯ ರಾಜಕೀಯ. ಇಲ್ಲಿ ಯಾವಾಗಲೂ ‘ಅಪವಿತ್ರ ಮೈತ್ರಿ’ಯೇ ವಿಜೃಂಭಿಸುತ್ತದೆ. ಅದರ ರೂವಾರಿ ಧರ್ಮಸಿಂಗ್. ಪ್ರತಿಪಕ್ಷಗಳ ಮುಖಂಡರ ಜತೆ ಒಳರಾಜಕೀಯ ಮಾಡಿಕೊಂಡೇ ತಮ್ಮ ಕುಟುಂಬದ ರಾಜಕೀಯ ಹಿತಾಸಕ್ತಿ ಉಳಿಸಿ, ಪೋಷಿಸಿಕೊಂಡು ಬಂದಿದ್ದಾರೆ. ತಮ್ಮ ಪಕ್ಷದಲ್ಲಿ ಯಾರು ಇರಬೇಕು, ಯಾರು ಇರಬಾರದು ಎಂಬುದನ್ನು ಅವರ ಒಳರಾಜಕೀಯ ನಿರ್ಧರಿಸುತ್ತದೆ. ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಅವರ ಪುತ್ರ ವಿಜಯಸಿಂಗ್ ಪರ ದಿವಂಗತ ಗುರುಪಾದಪ್ಪ ನಾಗಮಾರಪಲ್ಲಿ ಪುತ್ರ ಸೂರ್ಯಕಾಂತ  ನಾಗಮಾರಪಲ್ಲಿ ತಟಸ್ಥರಾಗಿ ಉಳಿಯುವಂತೆ ನೋಡಿಕೊಂಡವರು ಇದೇ ಧರ್ಮಸಿಂಗ್. ಈಗಿನ ಚುನಾವಣೆಯಲ್ಲಿ ಸೂರ್ಯಕಾಂತ್ ಬಿಜೆಪಿ ಕ್ಯಾಂಡಿಡೇಟ್ ಆಗಬೇಕು ಎನ್ನುವುದು ಆ ಪಕ್ಷದ ನಾಯಕರಷ್ಟೇ ಅಭೀಪ್ಸೆ ಧರ್ಮಸಿಂಗ್ ಅವರದ್ದೂ ಆಗಿತ್ತು. ಆದರೆ ತಮ್ಮ ಸಹೋದರ ಉಮಾಕಾಂತ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವುದರಿಂದ ಸಿದ್ದರಾಮಯ್ಯ ಸರಕಾರದ ವಿರುದ್ಧ ಈಜಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ರವಿಕಾಂತ್ ಬಿಜೆಪಿಯಿಂದ ಕಣಕ್ಕಿಳಿಯಲು ನಿರಾಕರಿಸಿಬಿಟ್ಟರು. ಬದಲಿಗೆ ಕಾಂಗ್ರೆಸ್ ಟಿಕೆಟ್ಟಿಗಾಗಿ ಅವರು ನಡೆಸಿದ ಪ್ರಯತ್ನ ಸಾಕಾರಗೊಳ್ಳಲು ಸ್ವತಃ ಧರ್ಮಸಿಂಗ್ ಅವರೇ ಅವಕಾಶ ಕೊಡಲಿಲ್ಲ. ಏಕೆಂದರೆ ಸೂರ್ಯಕಾಂತ್ ಪ್ರತಿಪಕ್ಷದಲ್ಲಿದ್ದು ತಮ್ಮ ಸ್ನೇಹಿತರಾಗಿರಬೇಕೇ ಹೊರತು ಕಾಂಗ್ರೆಸ್ ಗೆ ಬರುವುದರ ಮೂಲಕ ಅಲ್ಲ ಎಂಬುದು ಧರ್ಮಸಿಂಗ್ ಅವರ ಒಳರಾಜಕೀಯದ ಧರ್ಮ ಹಾಗೂ ಮರ್ಮ. ತತ್ಪರಿಣಾವಾಗಿ ಸೂರ್ಯಕಾಂತ  ಚುನಾವಣೆ ರಾಜಕೀಯದಿಂದಲೇ ದೂರ ಉಳಿಯುವಂತಾಗಿದೆ. ತಂದೆ ನಿಧನದ ಅನುಕಂಪದ ರಕ್ಷಣೆ ಪಡೆಯುವ ಇಂಗಿತವೂ ಇಂಗಿ ಹೋಗಿದೆ.

ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಗೆ ಹಿಂದಿನ ಚುನಾವಣೆಯ ಪಕ್ಷ ವಿರೋಧಿ ಚಟುವಟಿಕೆ ಆಪಾದನೆಯೇ ಮೊದಲ ಶತ್ರು. ಜತೆಗೆ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಗುಂಡಪ್ಪ ವಕೀಲ್ ಅವರ ವಿರುದ್ಧ ಕೆಲಸ ಮಾಡುವುದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ. ಧರ್ಮಸಿಂಗ್ ಅವರಂತೂ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆಯಲ್ಲಿಯೇ ಸೂರ್ಯಕಾಂತ್ ಸ್ನೇಹವನ್ನು ಅರಸಿದ್ದಾರೆ. ಅವರ ಒಳಧರ್ಮದ ಮುಂದೆ ರಾಜಕೀಯ ಧರ್ಮ ಸೊರಗಿ, ನೀರಾಗಿದೆ.

ಹೀಗೆ… ನೀವು ಯಾವುದೇ ಕ್ಷೇತ್ರದಲ್ಲಿ, ಯಾವುದೇ ಪಕ್ಷದಲ್ಲಿ ಇಣುಕಿ ನೋಡಿ, ಅಲ್ಲಿ ಕಾಣುವುದು ಬರೀ ಇಂಥದ್ದೇ ಹೊಲಸು ರಾಜಕೀಯ. ಎಲ್ಲೆಡೆ ಬರೀ ಸ್ವಾರ್ಥ, ಕುತಂತ್ರ, ಅವಕಾಶವಾದಗಳೇ ಉರಿಯುತ್ತಿವೆ, ಬೆಳಗುತ್ತಿವೆ. ತತ್ವ-ಸಿದ್ದಾಂತ, ನೀತಿ, ನಿಯತ್ತು ದೀಪದ ಬುಡದ ಕತ್ತಲಿನಂತಾಗಿವೆ. ಪಕ್ಷದ ನಿಷ್ಠಾವಂತರು ಈ ಕತ್ತಲಿನಲ್ಲಿ ಕಳೆದು ಹೋಗಿದ್ದಾರೆ.

ಲಗೋರಿ :  ದರಿದ್ರ ರಾಜಕೀಯ ಇದೆ. ಆದರೆ ರಾಜಕೀಯದಲ್ಲಿ ‘ದಾರಿದ್ರ್ಯ’ ಇಲ್ಲ.

3 COMMENTS

  1. I have been reading your articles from so many days sir. your analysis and writings are god gift to you sir.

    I dont know what to comment on this political inner dealings between parties. dont know where it will reach. But definitely there is an end to every tactics politicians use at the same time they come with new tactics again 🙂

  2. “Dharma” Hagandarenu Sir ?
    eegina rajakeeyadalli “Adhikarave Neeti, Duddige Niyattu” Janasamanyara baduku matra naayipadu!

Leave a Reply