ನಮಗಷ್ಟೇ ವಿಶೇಷವಲ್ಲ ಜನವರಿ 26ರ ಈ ದಿನ, ಜಗತ್ತಿನಲ್ಲಿ ಎಲ್ಲೆಲ್ಲ ಇದೆ ಗೊತ್ತೇ ನೆನಪುಗಳ ಪಥಸಂಚಲನ?

ಡಿಜಿಟಲ್ ಕನ್ನಡ ಟೀಮ್

ಜನವರಿ 26 ಎಂದೊಡನೆ ಭಾರತದಲ್ಲಿ ಪುಟ್ಟ ಮಗುವೂ ‘ರಿಪಬ್ಲಿಕ್ ಡೇ’ ಎಂದು ನುಲಿಯುತ್ತದೆ. ಈ ದಿನದ ವಿಶೇಷತೆ, ನಾವು ನಮ್ಮದು ಎನ್ನುವುದೆಲ್ಲ ತಿಳಿದ ವಿಷಯವೇ. ಆದರೆ ನಿಮಗೆ ಗೊತ್ತೇ? ವಿಶ್ವದ ಹಲವು ದೇಶಗಳಲ್ಲಿ ಕೂಡ ಜನವರಿ 26 ವಿಶೇಷ ದಿನ! ಹೌದು. ಸರಿಯಾಗೆ ಓದಿದಿರಿ… ಜನವರಿ 26 ಕೇವಲ ನಮಗಷ್ಟೇ ಅಲ್ಲ ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಉಗಾಂಡಾ , ಲ್ಯಾಟಿನ್ ಅಮೆರಿಕದ ಡೊಮಿನಿಕನ್ ರಿಪಬ್ಲಿಕ್ ದೇಶಗಳಲ್ಲಿ ವಿವಿಧ ಕಾರಣಗಳಿಂದ ಈ ದಿನ ವಿಶೇಷವಾಗಿದೆ. ಏನಿದು ಕಾರಣ? ಏನಿದು ಸಮಾಚಾರ? ತಿಳಿದುಕೊಳ್ಳೋಣ ಬನ್ನಿ.

ಆಸ್ಟ್ರೇಲಿಯ : ಫಸ್ಟ್ ಫ್ಲೀಟ್ ( First Fleet ) ಎನ್ನುವುದು ಮೇ ತಿಂಗಳ 13 ನೆ ತಾರೀಕು 1787 ರಲ್ಲಿ ಗ್ರೇಟ್ ಬ್ರಿಟನ್ ನಿಂದ ಹೊರಟ 11 ಹಡಗುಗಳಿಗೆ ಕೊಟ್ಟ ಹೆಸರು. ಹೀಗೆ ಹೊರಟ ಹಡಗುಗಳು 26 ನೆ ಜನವರಿ 1788ರಲ್ಲಿ ಆಸ್ಟ್ರೇಲಿಯದ ನ್ಯೂ ಸೌತ್ ವೇಲ್ಸ್ ನಲ್ಲಿರುವ ಪೋರ್ಟ್ ಜ್ಯಾಕ್ಸನ್ ನಲ್ಲಿ ಬಂದು ಇಳಿಯುತ್ತವೆ. ಹಿಂದೆ ಈ ಹಡಗು ಗಳು ಬಂದು ತಲುಪಿದ ನೆನಕೆಗೆ ಪ್ರತಿ ವರ್ಷ ಆಚರಣೆ ನಡೆಸಲಾಗುತಿತ್ತು. ಈಗ ಇದನ್ನು ‘ಆಸ್ಟ್ರೇಲಿಯ ಡೇ ‘ ಅಥವಾ ‘ನ್ಯಾಷನಲ್ ಡೇ ‘ ಎಂದು ಆಚರಿಸುತ್ತಾರೆ.
ದೇಶದಲ್ಲಿ ಇರುವ ವಿವಿಧತೆಗಳನ್ನು ಒಂದು ಎಂದು ಬಿಂಬಿಸುವ ಹಾಗೂ ವಲಸಿಗರಿಗೆ ಆಸ್ಟ್ರೇಲಿಯ ಪೌರತ್ವ ನೀಡುವ ಅವರನ್ನು ತಮ್ಮ ಸಮಾಜಕ್ಕೆ ಸೇರಿಸಿಕೊಳ್ಳುವ ಕಾರ್ಯಕ್ರಮಗಳು ಜರುಗುತ್ತವೆ.
ಆದರೆ, ಇಲ್ಲಿನ ಮೂಲನಿವಾಸಿಗಳಿಗೆ ಇದು ‘ಆಕ್ರಮಣದ ದಿನ’ ಇನ್ವೆಶನ್ ಡೇ  (Invasion Day). ಇವರ ಪ್ರಕಾರ ಈ ದಿನ ಬ್ರಿಟಿಷರಿಂದ ಆಸ್ಟ್ರೇಲಿಯದ ಸಂಸ್ಕೃತಿ ಮೇಲೆ ನಡೆದ ದಾಳಿಯ ದಿನ. ಇತ್ತೀಚಿನ ದಿನಗಳಲ್ಲಿ ಈ ಕೂಗು ಬಹಳ ಪ್ರಬಲವಾಗಿದೆ ಹಾಗು ಹೆಚ್ಚು ಮನ್ನಣೆ ಪಡೆಯುತ್ತಿದೆ.
ಹಾಂಗ್ ಕಾಂಗ್: ಚೀನಾ ದೇಶ ಬ್ರಿಟನ್ ಗೆ ಟೀ ಸರಬರಾಜು ಮಾಡುವ ಪ್ರಮುಖ ರಾಷ್ಟ್ರವಾಗಿತ್ತು. 1800 ರ ಸಮಯದಲ್ಲಿ 3 ಕೋಟಿ ಪೌಂಡ್ ಮೀರಿದ ವ್ಯಾಪಾರ ಕೇವಲ ಟೀ ವ್ಯಪಾರದ್ದು ಎಂದರೆ ಅದರ ಆಗಾಧತೆಯ ಅರಿವು ನಿಮಗಾದೀತು. ಟೀ ನಂತರ ಪಶ್ಚಿಮ ಬಂಗಾಳದಲ್ಲಿ ಓಪಿಯಂ ನ ಅಮಲು ಹತ್ತಿಸಿಕೊಂಡ ಬ್ರಿಟಿಷರು, ಹೇರಳವಾಗಿ ಓಪಿಯಂ ಬೆಳೆಯುತ್ತಿದ್ದ ಚೀನಾ ದೇಶದ ಮೇಲೆ 1839 ರಿಂದ 1847 ರ ವರೆಗೆ ಯುದ್ಧ ನಡೆಸುತ್ತಾರೆ. ಇದು ಚರಿತ್ರೆಯಲ್ಲಿ ಓಪಿಯಂ ವಾರ್ ಎಂದೇ ಪ್ರಸಿದ್ಧಿ ಪಡೆದಿದೆ. ಈ ನಡುವಿನ ಸರಣಿ ಯುದ್ಧಗಳ ನಂತರ 20ನೆ ಜನವರಿ 1841 ರಲ್ಲಿ ಬ್ರಿಟಿಷರು ಹಾಂಗ್ ಕಾಂಗ್ ಅನ್ನು ವಶಪಡಿಸಿಕೊಳ್ಳುತ್ತಾರೆ. ಸರ್ ಎಡ್ವರ್ಡ್ ಬಯಿಚೆರ್ ಜನವರಿ 25, 1841ರಂದು ಇಲ್ಲಿಗೆ ಬರುತ್ತಾನೆ ಮತ್ತು ಜನವರಿ 26, 1841 ರಂದು ಹಾಂಗ್ ಕಾಂಗ್ ಬ್ರಿಟಿಷ್ ವಸಾಹತು ಎಂದು ಘೋಷಿಸುತ್ತಾನೆ. ಇಂದಿಗೂ ಹಾಂಗ್ ಕಾಂಗ್ ನಲ್ಲಿ ಪೋಸ್ಸೇಶನ್ ಸ್ಟ್ರೀಟ್ ನಲ್ಲಿ ಈ ದಿನವನ್ನು ಆಚರಿಸುತ್ತಾರೆ.  ಇತ್ತೀಚಿಗೆ ಹಾಂಗ್ ಕಾಂಗ್ ಬ್ರಿಟಿಷ್ ತೆಕ್ಕೆಯಿಂದ ಮತ್ತೆ ಚೀನಾಕ್ಕೆ ಸೇರಿದ್ದು ಉಲ್ಲೇಖಾರ್ಹ.
ಉಗಾಂಡಾ: ಆಫ್ರಿಕಾ ದ ಉಗಾಂಡಾ ದೇಶ ಯುರೋಪಿಯನ್ನರ ವಸಾಹತು ಆಗಿತ್ತು. ನಂತರ ಹಸಿವು, ಬಡತನ, ಸರ್ವಾಧಿಕಾರಿ ಅಮಿನ್ ನ ಕ್ರೂರ ಆಡಳಿತ ಇವೆಲ್ಲವುಗಳಿಂದ ನ್ಯಾಷನಲ್ ರೆಸ್ಸಿಸ್ಟೆನ್ಸ್ ಆರ್ಮಿ ಐದು ವರ್ಷಗಳ ಹೋರಾಟದ ನಂತರ ಜನವರಿ 26 , 1986 ರಂದು ಸ್ವತಂತ್ರವಾಗುತ್ತದೆ. ಇಂದು ಇಲ್ಲಿ ‘ಲಿಬರೇಶನ್ ಡೇ’ ಎಂದು ಆಚರಿಸುತ್ತಾರೆ.
ರಿಪಬ್ಲಿಕ್ ಡೊಮಿನಿಕನ್ : ಹ್ವಾನ್ ಪಾಬ್ಲೋ ದುಹಾರ್ತೆ ದಿಯಾಸ್ (Juan Pablo Duarte Díez)  ನಮ್ಮ ದೇಶಕ್ಕೆ ಗಾಂಧಿ ಹೇಗೋ ಡೊಮಿನಿಕನ್ ರಿಪಬ್ಲಿಕ್ ದೇಶಕ್ಕೆ ಆತ ಹಾಗೆ. ಹೈಟಿ ದೇಶದ ವಶದಲ್ಲಿದ್ದ ಡೊಮಿನಿಕನ್ ದೇಶವನ್ನು ಬಿಡಿಸಿ ಸ್ವತಂತ್ರ ಗೊಳಿಸುವಲ್ಲಿ ಇತನದು ಪ್ರಮುಖ ಪಾತ್ರ.
ಡೊಮಿನಿಕನ್ ಸ್ವತಂತ್ರ ಸಮರದಲ್ಲಿ ಮುಂದೆ ನಿಂತು ಸಮರದ ಉಸ್ತುವಾರಿ ವಹಿಸಿಕೊಂಡಿದ್ದು ಮಾತ್ರವಲ್ಲದೆ ಹಣದ ಸಹಾಯ ಕೂಡ ಮಾಡುತ್ತಾನೆ. ಎಷ್ಟರ ಮಟ್ಟಿಗೆ ಎಂದರೆ ಬಿಡಿಗಾಸು ಇಲ್ಲದೆ ಬಿಕಾರಿಯಾಗುವಷ್ಟು. ಪಾಬ್ಲೋ ಹುಟ್ಟಿದ್ದು ಜನವರಿ 26, 1813. ತನ್ನ ದೇಶದ ಸ್ವಾತಂತ್ರ್ಯಕ್ಕೆ ತನ್ನೆಲ್ಲವನ್ನೂ ಧಾರೆ ಎರೆದ ತನ್ನ ನೆಚ್ಚಿನ ನಾಯಕನ ನೆನಪಿಗಾಗಿ ಇಂದಿಗೂ ದೊಮಿನಿಕನ್ನರು ಜನವರಿ 26ನ್ನು ‘ಎಲ್ ದಿಯಾ ದೇ ದುಹಾರ್ತೆ ‘  (ದುಹಾರ್ತೆಯ ದಿನ) ಎಂದು ಆಚರಿಸುತ್ತಾರೆ.
ಸಮಸ್ತ ಓದುಗರಿಗೆ ಗಣ ರಾಜ್ಯೋತ್ಸವದ ಶುಭಾಶಯಗಳು.

Leave a Reply