ನಾಳೆಯಿಂದ ಶುರು ಕಿರಿಯರ ಕ್ರಿಕೆಟ್ ವಿಶ್ವಕಪ್, ಸ್ಟಾರ್ ಗಳು ಹುಟ್ಟೋದು ಇಲ್ಲೇ ಕಣ್ರೀ!

ಎಂ. ರವಿತೇಜ

ಬಹುನಿರೀಕ್ಷಿತ ಕಿರಿಯರ ವಿಶ್ವಕಪ್ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಜ.27 ಬುಧವಾರದಿಂದ ಬಾಂಗ್ಲಾದೇಶದಲ್ಲಿ ಈ ಟೂರ್ನಿ ಆರಂಭವಾಗಲಿದೆ. ಈ ಬಾರಿ ಭದ್ರತೆ ಕಾರಣದಿಂದ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹಿಂದೆ ಸರಿದಿದ್ದರೂ, ಆ ಜಾಗಕ್ಕೆ ಐರ್ಲೆಂಡ್ ಕಣಕ್ಕಿಳಿಯಲಿದ್ದು ಒಟ್ಟು 16 ತಂಡಗಳು ಅಖಾಡದಲ್ಲಿ ಸೆಣಸಲಿವೆ. ಈ ಅಂಡರ್ 19 ವಿಶ್ವಕಪ್ ಈಗ ಕಿರಿಯ ಮಟ್ಟದ ಟೂರ್ನಿ ಎಂದು ಲಘುವಾಗಿ ಪರಿಗಣಿಸುವಂತಿಲ್ಲ. ಕಾರಣ ಪ್ರಸಕ್ತ ತಲೆಮಾರಿನ ಕ್ರಿಕೆಟ್ ಆಳುತ್ತಿರುವ ಖ್ಯಾತನಾಮ ಆಟಗಾರರು ಈ ಟೂರ್ನಿಯಿಂದಲೇ ಹೊರಬಂದಿದ್ದು, ಪ್ರತಿ ದೇಶದ ಭವಿಷ್ಯದ ತಾರಾ ಆಟಗಾರರ ಅನ್ವೇಷಣೆಯ ಪ್ರಮುಖ ವೇದಿಕೆ ಇದು. ಬೇಕಾದ್ರೆ ಈ ಹಿಂದಿನ ಟೂರ್ನಿಗಳಿಂದ ಹೊರಹೊಮ್ಮಿ ವಿಶ್ವ ಕ್ರಿಕೆಟ್ ನಲ್ಲಿ ತಮ್ಮದೇ ಹವಾ ಸೃಷ್ಟಿಸಿರುವ ಪ್ರಮುಖ ಆಟಗಾರರ ಮಾಹಿತಿ ಇಲ್ಲಿದೆ ನೋಡಿ.

ವಿರಾಟ್ ಕೊಹ್ಲಿ: ಸದ್ಯ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳನ್ನು ಮುರಿಯುವ ಹಾದಿಯಲ್ಲಿ ಹೊರಟಿರುವವರ ಪೈಕಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. 2008ರ ಆವೃತ್ತಿಯ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸಾರಥ್ಯ ವಹಿಸಿ ತಂಡವನ್ನು ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡಿದ್ದ ಕೊಹ್ಲಿ, ಆ ಟೂರ್ನಿಯಲ್ಲೇ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿದ್ದರು. ಕೊಹ್ಲಿಯ ಸಾಮರ್ಥ್ಯ ಅರಿತ ಆಯ್ಕೆ ಮಂಡಳಿ ಅದೇ ವರ್ಷ ಆಗಸ್ಟ್ ನಲ್ಲಿ ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಿತ್ತು. ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಕೆಲ ಸಮಯದಲ್ಲೇ ತಂಡದ ಭವಿಷ್ಯದ ನಾಯಕ ಎಂಬ ನಿರೀಕ್ಷೆ ಹುಟ್ಟಿಸಿ, ಈಗ ಟೆಸ್ಟ್ ತಂಡದ ನಾಯಕನಾಗಿ ಸದ್ಯಕ್ಕೆ ಯಸ್ವಿಯಾಗಿದ್ದಾರೆ.

ಯುವರಾಜ್ ಸಿಂಗ್: ಹೌದು, ಕಿರಿಯರ ವಿಶ್ವಕಪ್ ನಿಂದ ಭಾರತಕ್ಕೆ ಸಿಕ್ಕ ಮತ್ತೊಂದು ಕ್ರಿಕೆಟ್ ತಾರೆ ಯುವರಾಜ್ ಸಿಂಗ್. ಭಾರತ ತಂಡ ಮೊದಲ ಬಾರಿಗೆ ಗೆದ್ದ 2000ದ ಕಿರಿಯರ ವಿಶ್ವಕಪ್ ನಲ್ಲಿ ಆಲ್ರೌಂಡ್ ಪ್ರದರ್ಶನದ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ ಯುವರಾಜ್, ಅದೇ ವರ್ಷ ಕೀನ್ಯಾದಲ್ಲಿ ನಡೆದ ಐಸಿಸಿ ನಾಕೌಟ್ (ಮಿನಿ ವಿಶ್ವಕಪ್ ಎಂದೇ ಖ್ಯಾತಿ) ಟೂರ್ನಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. ನಂತರ ತಮ್ಮ ಸಾಮರ್ಥ್ಯದಿಂದ 2007ರ ಚೊಚ್ಚಲ ಟಿ20ಯಲ್ಲಿ ಇಂಗ್ಲೆಂಡ್ ವಿರುದ್ಧ ಓವರ್ ಒಂದರಲ್ಲಿ 6 ಸಿಕ್ಸರ್ ಸೇರಿದಂತೆ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿ, ವಿಶ್ವ ದಾಖಲೆ ನಿರ್ಮಿಸಿದರು. ನಂತರ 2011ರ ವಿಶ್ವಕಪ್ ನಲ್ಲಿ ಕ್ಯಾನ್ಸರ್ ಬಳಲಿಕೆಯ ನಡುವೆಯೂ ಅದ್ಭುತ ಪ್ರದರ್ಶನ ನೀಡಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು ಪ್ರಮುಖ ಕಾರಣವಾದರು. ಆಲ್ರೌಂಡ್ ಪ್ರದರ್ಶನದಿಂದ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಗ್ರೇಮ್ ಸ್ಮಿತ್: ದಕ್ಷಿಣ ಆಫ್ರಿಕಾ ತಂಡದ ಈವರೆಗಿನ ಟೆಸ್ಟ್ ತಂಡದ ಶ್ರೇಷ್ಠ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿರುವ ಗ್ರೇಮ್ ಸ್ಮಿತ್ ವಿಶ್ವ ಕ್ರಿಕೆಟ್ ಗೆ ಪರಿಚಯವಾಗಿದ್ದು, ಇದೇ ಅಂಡರ್ 19 ವಿಶ್ವಕಪ್ ನಿಂದ. 2003ರಲ್ಲಿ ತವರಿನಲ್ಲೇ ನಡೆದ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಕೆಟ್ಟ ಪ್ರದರ್ಶನ ನೀಡಿದ್ದರಿಂದ ಆಗಿನ ನಾಯಕ ಶಾನ್ ಪೊಲಕ್ ನಾಯಕತ್ವ ಸ್ಥಾನದಿಂದ ಕೆಳಗಿಳಿದರು. ಆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದ ಸ್ಮಿತ್ ತಂಡದ ನಾಯಕತ್ವ ವಹಿಸಿಕೊಂಡರು. ನಂತರ ಸುಮಾರು 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಹರಿಣಗಳನ್ನು ಮುನ್ನಡೆಸಿದ್ದು, 53 ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ ಜಯ ಸಾಧಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ ತಂಡವನ್ನು ಟೆಸ್ಟ್ ನಲ್ಲಿ ನಂಬರ್ ಒನ್ ಪಟ್ಟಕ್ಕೆ ಕರೆದೊಯ್ದರು.

ಕ್ರಿಸ್ ಗೇಲ್: ಪ್ರಸಕ್ತ ವಿಶ್ವ ಕ್ರಿಕೆಟ್ ದೈತ್ಯ ಆಟಗಾರರಲ್ಲಿ ಗೇಲ್ ಪ್ರಮುಖರು. ಕ್ರಿಕೆಟ್ ಮೂರೂ ಮಾದರಿಯಲ್ಲಿ ತಮ್ಮದೇ ಆದ ಬ್ಯಾಟಿಂಗ್ ಶೈಲಿಯಿಂದ ವಿಶ್ವ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿರುವ ಗೇಲ್ ಅವರು ತಮ್ಮ ಪ್ರತಿಭೆ ತೋರಲು ವೇದಿಕೆಯಾಗಿದ್ದು ಇದೇ ಕಿರಿಯರ ವಿಶ್ವಕಪ್. 1998ರ ಕಿರಿಯರ ವಿಶ್ವಕಪ್ ನಲ್ಲಿ ಗೇಲ್ ಕೇವಲ 7 ಪಂದ್ಯಗಳಿಂದ 364 ರನ್ ಬಾರಿಸಿ ಎಲ್ಲರ ಗಮನ ಸೆಳೆದರು. ಈಗ ಟಿ20 ಮಾದರಿಯಲ್ಲಿ ಸಾಧ್ಯವಾಗುವ ಎಲ್ಲ ದಾಖಲೆಗಳನ್ನು ನಿರ್ಮಿಸಿ ಬೌಲರ್ ಪಾಲಿಗೆ ಸಿಂಹ ಸ್ವಪ್ನವಾಗಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ಬಾರಿ ತ್ರಿಶತಕ ದಾಖಲಿಸಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ಖ್ಯಾತಿಯನ್ನು ಪಡೆದಿದ್ದಾರೆ. 2012ರ ಟಿ20 ವಿಶ್ವಕಪ್ ಚಾಂಪಿಯನ್ ಆದ ವೆಸ್ಟ್ ಇಂಡೀಸ್ ತಂಡದ ಸದಸ್ಯನಾಗಿದ್ದಾರೆ. ಅಲ್ಲದೆ ಮೂರೂ ಮಾದರಿಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿದ ಮೊದಲ ಆಟಗಾರನಾಗಿದ್ದಾರೆ.

ಅಲಸ್ಟೇರ್ ಕುಕ್: ಇಂಗ್ಲೆಂಡ್ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕ ಮತ್ತು ಬ್ಯಾಟ್ಸ್ ಮನ್ ಅಲಸ್ಟೇರ್ ಕುಕ್. 2004ರ ಅಂಡರ್ 19 ವಿಶ್ವಕಪ್ ಇವರ ವೃತ್ತಿ ಜೀವನ ಟರ್ನಿಂಗ್ ಪಾಯಿಂಟ್. ಈ ಟೂರ್ನಿಯಲ್ಲಿ ತಂಡದ ನಾಯಕರಾಗಿದ್ದಲ್ಲದೇ, 7 ಪಂದ್ಯಗಳಿಂದ 383 ರನ್ ದಾಖಲಿಸಿ ಗಮನ ಸೆಳೆದ ಕುಕ್, ತಮ್ಮ 22 ಪ್ರಾಯದ ಸುಮಾರಿನಲ್ಲಿ ಇಂಗ್ಲೆಂಡ್ ತಂಡಕ್ಕೆ ಕಾಲಿಟ್ಟರು. ಆರಂಭದಲ್ಲಿ ಇವರ ಅತ್ಯದ್ಭುತ ಫಾರ್ಮ್ ಮತ್ತು ಬೆಳೆದ ರೀತಿ, ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ ದಾಖಲೆ ಮುರಿಯುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಇಂಗ್ಲೆಂಡ್ ತಂಡದ ನಾಯಕನಾಗಿ ಯಶಸ್ವಿಯಾಗಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಇಂಗ್ಲೆಂಡ್ ಆಟಗಾರ ಎಂಬ ಖ್ಯಾತಿ ಪಡೆಯುವ ಹಾದಿಯಲ್ಲಿದ್ದಾರೆ.

ಇತರೆ ಕೆಲ ಪ್ರಮುಖ ಆಟಗಾರರು: ಶಿಖರ್ ಧವನ್, ರೋಹಿತ್ ಶರ್ಮಾ, ಮೊಹಮದ್ ಕೈಫ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಆರ್.ಪಿ ಸಿಂಗ್, ದಿನೇಶ್ ಕಾರ್ತಿಕ್ (ಭಾರತ), ಹಾಶೀಂ ಆಮ್ಲಾ, ಗ್ರಾಂಟ್ ಎಲಿಯಟ್, ಫಿಲ್ಯಾಂಡರ್ (ದಕ್ಷಿಣ ಆಫ್ರಿಕಾ), ಮರ್ಲಾನ್ ಸ್ಯಾಮುಯೆಲ್ಸ್, ಜೇಸನ್ ಹೊಲ್ಡರ್, ಡ್ವೈನ್ ಬ್ರಾವೊ, ಡಾರೆನ್ ಸಾಮಿ, ಸುನಿಲ್ ನಾರಾಯಣ್, ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್), ಚಿಗುಂಬುರಾ, ಮಸಕಜ, ಟೈಬು (ಜಿಂಬಾಬ್ವೆ), ಜೇಮ್ಸ್ ಫ್ರಾಂಕ್ಲಿನ್, ರಾಸ್ ಟೇಲರ್, ಕೇನ್ ವಿಲಿಯಮ್ಸನ್, ಕೋರೆ ಆ್ಯಡರ್ಸನ್, ಟಿಮ್ ಸೌಥೀ, ಕೈಲ್ ಮಿಲ್ಸ್, (ನ್ಯೂಜಿಲೆಂಡ್), ಇಯಾನ್ ಬೆಲ್, ನಾಸಿರ್ ಹುಸೇನ್, ಗ್ರೇಮ್ ಸ್ವಾನ್, ರವಿ ಬೊಪಾರ, ಇಯಾನ್ ಮೊರ್ಗನ್ (ಇಂಗ್ಲೆಂಡ್), ಅಬ್ದುಲ್ ರಜಾಕ್, ಇಮ್ರಾನ್ ತಾಹೀರ್, ಶೊಹೆಬ್ ಮಲಿಕ್, ಉಮರ್ ಗುಲ್ (ಪಾಕಿಸ್ತಾನ), ಎರಾನ್ ಫಿಂಚ್, ಶಾನ್ ಮಾರ್ಷ್, ಮಿಚೆಲ್ ಜಾನ್ಸನ್, ಶೇನ್ ವಾಟ್ಸನ್, ಜಾರ್ಜ್ ಬೇಯ್ಲಿ (ಆಸ್ಟ್ರೇಲಿಯಾ), ಮೊಹಮದ್ ಅಶ್ರಫುಲ್ (ಬಾಂಗ್ಲಾದೇಶ), ಮ್ಯಾಥ್ಯೂಸ್, ತರಂಗಾ (ಶ್ರೀಲಂಕಾ)

Leave a Reply