ಭೈರತಿ ಬದಲು ರೆಹಮಾನ್ ಗೆ ಟಿಕೆಟ್, ಖರ್ಗೆ-ಷರೀಫ್ ಮೇಲುಗೈ, ಕುತೂಹಲ ಮೂಡಿಸಿರುವ ಸಿದ್ದರಾಮಯ್ಯ ಹಿನ್ನಡೆ!

ಡಿಜಿಟಲ್ ಕನ್ನಡ ಟೀಮ್

ಹಠಾತ್ ಬೆಳವಣಿಗೆಯಲ್ಲಿ ಬೆಂಗಳೂರು ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಮರುಚುನಾವಣೆ ಕಾಂಗ್ರೆಸ್ ಟಿಕೆಟ್ ಹಿರಿಯ ನಾಯಕ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಪಾಲಾಗಿದ್ದು, ಭೈರತಿ ಸುರೇಶ್ ಕಣಕ್ಕಿಳಿಸಲು ಶತಾಯಗತಾಯ ಯತ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದೆ.

ಹೆಬ್ಬಾಳಕ್ಕೆ ವಿಧಾನ ಪರಿಷತ್ ಹಾಲಿ ಸದಸ್ಯ ಭೈರತಿ ಸುರೇಶ್ ಹಾಗೂ ರೆಹಮಾನ್ ಷರೀಫ್ ಈ ಎರಡು ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಹೈಕಮಾಂಡ್ ಮಂಗಳವಾರ ಸಂಜೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರೆಹಮಾನ್ ಷರೀಫ್ ಹೆಸರನ್ನು ಅಂತಿಮಗೊಳಿಸಿದೆ. ಬೀದರ್ ಕ್ಷೇತ್ರದಲ್ಲಿ ರಹೀಂ ಖಾನ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಮರುಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳ ಪೈಕಿ ಎರಡು ಕಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಂತಾಗಿದೆ.

ಸಿದ್ದರಾಮಯ್ಯ ಬೆಂಬಲಿತ ಭೈರತಿ ಸುರೇಶ್ ಅವರಿಗೆ ಟಿಕೆಟ್ ತಪ್ಪಿಸಲು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ. ಹರಿಪ್ರಸಾದ್, ಆಸ್ಕರ್ ಫರ್ನಾಂಡಿಸ್ ಹಾಗೂ ಜಾಫರ್ ಷರೀಫ್ ನಡೆಸಿದ ಸಂಘಟಿತ ಯತ್ನ ಕೊನೆಗೂ ಫಲ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡುಮುಕ್ಕಾಲು ವರ್ಷದ ನಂತರ ಇದೇ ಮೊದಲ ಬಾರಿಗೆ ಹೈಕಮಾಂಡ್ ತಮ್ಮ ಮಾತು ತಳ್ಳಿಹಾಕಿರುವುದರಿಂದ ಸಿದ್ದರಾಮಯ್ಯನವರು ಭಾರೀ ಮುಜುಗರಕ್ಕೆ ಒಳಗಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿರುವ ತಮ್ಮ ಮೊಮ್ಮಗನಿಗೇ ಟಿಕೆಟ್ ನೀಡಬೇಕು. ಇನ್ನೊಂದು ಟಿಕೆಟ್ ಗಾಗಿ ಒತ್ತಾಯ ಮಾಡುವುದಿಲ್ಲ. ಪಕ್ಷಕ್ಕೆ ತಾವು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಬೇಕು. ಜೀವನ ಸಂಧ್ಯಾಕಾಲದಲ್ಲಿರುವ ತಮಗೆ ನೋವು ಕೊಡಬೇಡಿ ಎಂದು ಷರೀಫ್ ಅವರು ಹಿಡಿದ ವರಾತಕ್ಕೆ ಹೈಕಮಾಂಡ್ ಅಂತಿಮವಾಗಿ ಕರಗಿದೆ. ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ಅಹಮದ್ ಪಟೇಲ್ ಅವರ ಮನವೊಲಿಸುವಲ್ಲಿ ಷರೀಫ್ ಅವರಿಗೆ ಖರ್ಗೆ, ಹರಿಪ್ರಸಾದ್, ಆಸ್ಕರ್ ಸಾಥ್ ನೀಡಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ರೆಹಮಾನ್ ಷರೀಫ್ ಅಭ್ಯರ್ಥಿ ಆಗಿದ್ದಾರೆ.

ಇನ್ನೊಂದೆಡೆ ಜಾತ್ಯತೀತ ಜನತಾ ದಳ ಕೂಡ ಇಸ್ಮಾಯಿಲ್ ಷರೀಫ್ ಎಂಬುವರನ್ನು ಕಣಕ್ಕಿಳಿಸುವುದಾಗಿ ಮಂಗಳವಾರ ಸಂಜೆ ಘೋಷಿಸಿದೆ. ಈ ಘೋಷಣೆ ಆದ ಕೆಲಹೊತ್ತಿನಲ್ಲೇ ರೆಹಮಾನ್ ಷರೀಫ್ ಹೆಸರು ಪ್ರಕಟಗೊಂಡಿದೆ. ಮುಸ್ಲಿಂ ಮತಗಳು ಜೆಡಿಎಸ್ ಪಾಲಾಗುವುದನ್ನು ತಡೆಯುವ ಉದ್ದೇಶವೂ ಷರೀಫ್ ಗೆ ಟಿಕೆಟ್ ನೀಡಿರುವುದರಲ್ಲಿ ಒಂದಂಶವಾಗಿದೆ. ಇಸ್ಮಾಯಿಲ್ ಷರೀಫ್ ಅವರಿಗೆ ಯಾವುದೇ ಕ್ಷಣದಲ್ಲಿ ಬದಲಾವಣೆಯ ಷರತ್ತು ವಿಧಿಸಿಯೇ ಜೆಡಿಎಸ್ ಟಿಕೆಟ್ ನೀಡಿದೆ. ಜಾಫರ್ ಷರೀಫ್ ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ಆತ್ಮೀಯರಾಗಿದ್ದು, ಜೆಡಿಎಸ್ ನಿಲುವಿನಲ್ಲಿ ಬದಲಾವಣೆ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಈಗ ದೇವೇಗೌಡರ ಮುಂದೆ ಎರಡು ಆಯ್ಕೆಗಳಿವೆ. ಒಂದೊಮ್ಮೆ ಅವರು ಕಣದಲ್ಲಿ ಅಭ್ಯರ್ಥಿಯನ್ನು ಉಳಿಸಿದ್ದೇ ಆದರೆ ಅಲ್ಪಸಂಖ್ಯಾತರ ಮತಗಳು ವಿಭಜನೆ ಆಗಿ, ಹೆಬ್ಬಾಳ ಬಿಜೆಪಿ ಪಾಲಾಗುವ ಸಾಧ್ಯತೆ ಉಂಟು. ಒಂದೊಮ್ಮೆ ಅವರು ತಮ್ಮ ಅಭ್ಯರ್ಥಿಯನ್ನು ಕಣದಲ್ಲಿ ಉಳಿಸದೇ ಹೋದರೆ ಇದರಿಂದ ಷರೀಫ್ ಅವರಿಗೆ ಅನುಕೂಲ ಆಗುತ್ತದೆ. ಷರೀಫ್ ಗೆಲುವು ಅಥವಾ ಸೋಲು ಎರಡರಲ್ಲೂ ದೇವೇಗೌಡರಿಗೆ ಸಿದ್ದರಾಮಯ್ಯನವರ ಸೋಲು ಕಾಣುತ್ತದೆ. ಇದೀಗ ಸುರೇಶ್ ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟರೂ ಪರವಾಗಿಲ್ಲ ಎಂದಿದ್ದ ಮಲ್ಲಿಕಾರ್ಜುನ ಖರ್ಗೆ ಅಂಡ್ ಟೀಮ್ ಹಾಗೂ ಅದೇ ಕಾಲಕ್ಕೆ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಎಚ್.ಎಂ. ರೇವಣ್ಣ ಈಗ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಹೆಬ್ಬಾಳ ಟಿಕೆಟ್ ವಿಚಾರದಲ್ಲಿ ಪ್ರತಿಷ್ಠೆ ಪೈಪೋಟಿಗೆ ಬಿದ್ದಿದ್ದ ಸಿದ್ದರಾಮಯ್ಯನವರ ಹಿನ್ನಡೆ ಹಾಗೂ ಮೂಲ ಕಾಂಗ್ರೆಸ್ಸಿಗರ ಮೇಲುಗೈ ಮುಂದೆ ಯಾವ ರಾಜಕೀಯ ಬೆಳವಣಿಗೆಗಳಿಗೆ ಕಾರಣ ಆಗಬಹುದು ಎಂಬುದು ಕುತೂಹಲ ಕಾಯ್ದಿಟ್ಟಿರುವ ಪ್ರಶ್ನೆ.

Leave a Reply