ಸಿನಿಮೋತ್ಸವದಲ್ಲಿರಬೇಕಾದ್ದು ಅದ್ದೂರಿತನವೇ ಅಥವಾ ಅಧ್ಯಯನವೇ ?

N S Shridharamurthy

ಎನ್.ಎಸ್.ಶ್ರೀಧರ ಮೂರ್ತಿ

‘ಜನವರಿ 28, 2016ರಂದು ಸಂಜೆ 5.30ಕ್ಕೆ ವಿಧಾನ ಸೌಧದ ಪೂರ್ವ ದ್ವಾರದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಉದ್ಘಾಟನೆ’. ಭಾಗವಹಿಸುವವರ ಪಟ್ಟಿಯಲ್ಲಿರುವ ಹೆಸರುಗಳು ಜಯಾ ಬಚ್ಚನ್, ಸಂಜಯ್ ಲೀಲಾ ಬನ್ಸಾರಿ, ಗುಲ್ಜಾರ್, ಅಶೋಕ್ ಅಮೃತರಾಜ್, ಅಪರ್ಣ ಸೇನ್.. ಇದೆಲ್ಲವೂ 8ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಿತ್ರೋತ್ಸವದ ಕುರಿತ ಪತ್ರಿಕಾ ಪ್ರಕಟಣೆಯ ಮೊದಲ ಸಾಲಿನಲ್ಲೇ ಇರುವ ಹೈಲೈಟ್.. ಒಂದು ವರ್ಷದ ವಿರಾಮ ಬಿಟ್ಟರೆ ನಿರಂತರವಾಗಿ ನಡೆಯುತ್ತಾ ಬಂದಿರುವ ಬೆಂಗಳೂರು ಸಿನಿಮೋತ್ಸವಕ್ಕೆ ಜಾಗತಿಕ ಮನ್ನಣೆ ದೊರಕುತ್ತಿದೆ. ಅದರ ಜೊತೆಗೆ ಅದು ಅಧ್ಯಯನಶೀಲತೆಯಿಂದ ಅದ್ದೂರಿತನದ ಕಡೆಗೆ ಸಾಗುತ್ತಿದೆಯೆ ಎನ್ನುವ ಆತಂಕವನ್ನೂ ಹುಟ್ಟು ಹಾಕಿದೆ.

ಸಿನಿಮೋತ್ಸವದಲ್ಲಿ ಅದ್ದೂರಿತನ ಇದ್ದರೆ ತಪ್ಪೇನು ಎನ್ನುವ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಚಿತ್ರೋತ್ಸವಗಳ ಉದ್ದೇಶ ಸಿನಿಮಾ ಮಾಧ್ಯಮದ ಕುರಿತು ಹೊಸ ಅರಿವನ್ನು ಹುಟ್ಟು ಹಾಕುವುದು. ಅದಕ್ಕೆ ಜನಪ್ರಿಯತೆಯ ಆಯಾಮ ಬಂದರೆ ಮೂಲ ಉದ್ದೇಶದಿಂದಲೇ ದೂರ ಸರಿದಂತೆ. ಶತದಿನೋತ್ಸವದ ಬಾಕ್ಸ್ ಆಫೀಸ್ ಲೆಕ್ಕಾಚಾರ, ಗ್ಲಾಮರ್‍ನ ಬರಾಟೆಯ ನೆರಳು ಇಲ್ಲಿಯೂ ಬಿದ್ದರೆ ಅಧ್ಯಯನ ನೆಲೆಗಳೇ ದೂರವಾಗುತ್ತವೆ ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸಬೇಕು. ಉತ್ಸಾಹ ಮೂಲ ಉದ್ದೇಶಕ್ಕೆ ಭಂಗ ತರಬಾರದಲ್ಲವೆ?

ಪ್ರತಿ ಚಿತ್ರೋತ್ಸವದಲ್ಲಿಯೂ ಚಿತ್ರ ರಂಗದ ಮಂದಿ ಭಾಗವಹಿಸುವುದಿಲ್ಲ ಎನ್ನುವ ಪ್ರಶ್ನೆ ಬರುತ್ತದೆ. ಅವರನ್ನು ಕರೆ ತರಲು ಪ್ರಯತ್ನಗಳು ನಡೆಯುತ್ತವೆ, ಅದಕ್ಕಾಗಿ ಈ ವರ್ಷ ಉದ್ಯಮಕ್ಕೆ ರಜೆಯನ್ನೂ ಘೋಷಿಸಲಾಗಿದೆ. ಇಲ್ಲಿಯೂ ಚಿತ್ರರಂಗದ ಮಂದಿ ಎಂದಾಗ ನಟ ನಟಿಯರನ್ನೇ ಲೆಕ್ಕಕ್ಕೆ ಹಿಡಿಯಲಾಗುತ್ತಿದೆ. ಇದೂ ಕೂಡ ಮೂಲ ಆಶಯಕ್ಕೆ ವಿರುದ್ಧವಾದದ್ದು. ಈ  ನಟ ನಟಿಯರ ಜನಪ್ರಿಯತೆಗೂ, ಅವರು ಬಯಸುವ ರಂಗು ರಂಗಿನ ಲೋಕಕ್ಕೂ  ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಿತ್ರಗಳ ಆಶಯಕ್ಕೂ ಅಗಾಧ ವ್ಯತ್ಯಾಸವಿರುತ್ತದೆ. ನಿಜವಾಗಿಯೂ ಭಾಗವಹಿಸಬೇಕಾದವರು ನಿರ್ದೇಶಕರು ಮತ್ತು ನಿರ್ಮಾಪಕರು. ನನ್ನ ಅನುಭವದಲ್ಲಿ ಹೊಸ ಪೀಳಿಗೆಯ ಪ್ರಮುಖ ನಿರ್ದೇಶಕರಾದ ಬಿ.ಸುರೇಶ್, ಗಿರಿರಾಜ್, ವೆಂಕಟಾಚಲ, ಮನಸೂರೆ, ಸುಮನಾ ಕಿತ್ತೂರು ನಿರಂತರವಾಗಿ ಭಾಗವಹಿಸುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ, ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳು ಬರುವುದು ಸಹಜವಾದಂತೆ ಚಿತ್ರೋತ್ಸವಗಳಿಗೆ ಸಿನಿಮಾ ಮಂದಿ ಸಹಜವಾಗಿಯೇ ಬರಬೇಕು. ಹಾಗೆ ಬರದಿದ್ದರೆ ನಷ್ಟ ಅವರದೇ ಎಂದು ಗಟ್ಟಿಧ್ವನಿಯಲ್ಲೇ ಹೇಳಬೇಕು.

ಜಾಗತೀಕರಣದ ಈ ದಿನಗಳಲ್ಲಿ ಬೆಂಗಳೂರಿಗೆ ಜಗತ್ತಿನ ಸಿನಿಮಾಗಳು ಬರುವುದರಿಂದ ‘ವಿವಿಧ ದೇಶಗಳ ಸಂಸ್ಕೃತಿಯ ಪರಿಚಯವಾಗುತ್ತದೆ’ಎನ್ನುವ ಮಾತು ಪ್ರತಿವರ್ಷವೂ ಕೇಳಿ ಬರುತ್ತದೆ. ಚಿತ್ರೋತ್ಸವ ನಡೆಸುವುದೇ ಇದಕ್ಕಾಗಿ ಎನ್ನುವ ವಿವರಣೆಯನ್ನೂ ನಾವು ಕೇಳುತ್ತೇವೆ.  ಇಂತಹ ಪರಿಚಯವನ್ನು ಅಂಗೈನಲ್ಲಿರುವ ಮೊಬೈಲೇ ಈಗ ಸೊಗಸಾಗಿ ಮಾಡಬಲ್ಲದು. ಜೊತೆಗೆ ಸಿನಿಮಾದ ಉದ್ದೇಶವೇ ಪ್ರಾದೇಶಿಕತೆಯನ್ನು ಮೀರಿ ಜಾಗತಿಕವಾಗುವುದು. ‘ಸಿನಿಮಾವನ್ನು ವಿಶ್ವಭಾಷೆ’ ಎಂದು ಕರೆಯುವುದು ಈ ನೆಲೆಯಲ್ಲಿಯೇ. ಅದು ಕೇವಲ ಒಂದು ಪ್ರದೇಶದ ಜೀವನ ವಿವರವನ್ನು ತೋರಿಸುವದಕ್ಕೆ ಸೀಮಿತವಾದರೆ ಸಾಧ್ಯತೆಗಳನ್ನೇ ಸೀಮಿತಗೊಳಿಸಿಕೊಂಡಂತೆ. ಅದರ ಬದಲು ತಾಂತ್ರಿಕತೆಯ ಅಬ್ಬರದ ಈ ದಿನಗಳಲ್ಲಿ ಸಿನಿಮಾದ ನುಡಿಗಟ್ಟುಗಳನ್ನು ಕಲಿಯಲು ಸಿನಿಮೋತ್ಸವ ವೇದಿಕೆ ಆಗಬೇಕು. ಅದಕ್ಕೆ ಚಿಕ್ಕ ಪ್ರಮಾಣದ ಅಧ್ಯಯನ ಕೂಟಗಳು, ವಿದೇಶಿ ಪ್ರತಿನಿಧಿಗಳೊಂದಿಗೆ ಮಾತುಕತೆಗಳು ಆಯೋಜನೆಯಾಗಬೇಕು. ಉಪನ್ಯಾಸಗಳಿಂದ ನನ್ನ ಮಟ್ಟಿಗೆ ಹೆಚ್ಚೇನು ಪ್ರಯೋಜನವಿಲ್ಲ. ಇದರ ಜೊತೆಗೆ ವಿದೇಶಕ್ಕೂ ಕನ್ನಡದ ಗುಣವನ್ನು ತಲುಪಿಸುವ ಕೆಲಸವನ್ನು ಚಿತ್ರೋತ್ಸವ ಮಾಡಬೇಕು. ಅದಕ್ಕೆ ಬೆಂಗಳೂರು ಚಿತ್ರೋತ್ಸವ ಬಿಟ್ಟರೆ ಇನ್ನೆಲ್ಲೂ ವೇದಿಕೆ ಸಿಕ್ಕಲಾರದು.

ಗಿರೀಶ್ ಕಾಸರವಳ್ಳಿ ಕನ್ನಡದ ಹೆಮ್ಮೆಯ ನಿರ್ದೇಶಕರು ನಿಜ. ಅವರ ಚಿತ್ರಗಳ ಅಧ್ಯಯನ ಹಿಂದಿನ ಚಿತ್ರೋತ್ಸವದಲ್ಲಿ ನಡೆದಿದೆ. ಅವರಿಗಿಂತಲೂ ಮುಂಚೆಯೇ ನಿರ್ದೇಶನ ಆರಂಭಿಸಿದ ಸಿದ್ದಲಿಂಗಯ್ಯ, ಕೆ.ಎಸ್.ಎಲ್.ಸ್ವಾಮಿ, ಗೀತಪ್ರಿಯ ಅವರ ಬಗ್ಗೆ ಈಗ ಶ್ರದ್ಧಾಂಜಲಿ ಸಲ್ಲಿಸುವ ಬದಲು ಅವರಿದ್ದಾಗಲೇ ಅಧ್ಯಯನ ನಡೆಸಿದ್ದರೆ ಅದು ಅರ್ಥಪೂರ್ಣವೂ ಆಗಬಹುದಾಗಿತ್ತು. ಹಾಗೆ ಮುಂಬರುವ ದಿನಗಳಲ್ಲಿ ರಾಜೇಂದ್ರ ಸಿಂಗ್(ಬಾಬು), ಟಿ.ಎಸ್.ನಾಗಾಭರಣ ಅವರಂತಹವರ ಚಿತ್ರಗಳ ಅಧ್ಯಯನಕ್ಕೆ ಚಲನಚಿತ್ರೋತ್ಸವ ವೇದಿಕೆ ಆಗಬೇಕಾಗಿದೆ. ತಾತ್ವಿಕವಾಗಿ ಕೂಡ ಸಂಸ್ಕೃತಿಯ ಆಚರಣೆಗಳನ್ನು ಪ್ರಶ್ನಿಸುವ ಚಿತ್ರಗಳಿಗೆ ಮನ್ನಣೆ ನಿರಂತರವಾಗಿ ದೊರಕುತ್ತಲೇ ಬಂದಿದೆ. ಸಂಸ್ಕಾರ, ಘಟಶ್ರಾದ್ಧ, ಗ್ರಹಣ, ಫಣಿಯಮ್ಮದಂತಹ ಚಿತ್ರಗಳಿಗೆ ದೊರತೆ ಮನ್ನಣೆ ಹಿಂದೆ ಈ ಸಾಂಸ್ಕೃತಿಕ ರಾಜಕೀಯದ ಹಸ್ತ ಕೂಡ ಇದೆ. ಈ ವರ್ಷ ಆರಂಭಿಕ ಚಿತ್ರವಾಗಿ ಪ್ರದರ್ಶಿತವಾಗುತ್ತಿರುವ ‘ತಿಥಿ’ಯ ಹಿಂದೆ ಈ ಅಂಶ ಕಾಣಿಸಿದೆ. ಇಂತಹ ಕಡೆ ತಾತ್ವಿಕವಾಗಿ ಕ್ರಮೇಣವಾಗಿಯಾದರೂ ಒಂದು ಸಮತೋಲನ ದೊರಕುವುದು ಅಗತ್ಯ.

ಬೆಂಗಳೂರು ಚಿತ್ರೋತ್ಸವದ ಗುಣಾತ್ಮಕತೆಗೆ ಮುಖ್ಯಕಾರಣ ಜಾಗತಿಕ ಚಿತ್ರಜಗತ್ತಿನ ಸಂಪರ್ಕ ಪಡೆದ ಗಿರೀಶ್ ಕಾಸರವಳ್ಳಿ, ನರಹರಿ ರಾವ್, ಎನ್.ವಿದ್ಯಾಶಂಕರ್ ಅವರಂತವರು ಕಲಾತ್ಮಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವುದು. ಇದರ ಪೂರ್ಣ ಪ್ರಯೋಜನ ಪಡೆಯುವುದರ ಕಡೆಗೆ ಮುಂದಿನ ದಿನಗಳು ಸಾಗ ಬೇಕು. ಈ ವರ್ಷ ಇರಾನಿನ ಜಾಫರ್ ಪಹಾನಿ ಚೀನಾದ ಜಿಯಾ ಝಾಂಗ್‍ಕೆ, ಜಪಾನಿನ ಹೋ ಸಿಯಾವೋ ಸಿಯಾನ್, ಟರ್ಕಿಯ ಯಮಿನ್ ಆಲ್ಫರ್, ಫ್ರಾನ್ಸಿನ ಜಾಕ್ಸ್ ಆಡಿಯಾರ್ಡ್, ಜರ್ಮನಿಯ ಕ್ರಿಶ್ಚಿಯನ್ ಪೆಝೋಲ್ಡ್, ಇಟಲಿಯ ನಾನಿ ಮೊರೆಟ್ಟಿ ಅವರ ಚಿತ್ರಗಳು ಪ್ರದರ್ಶಿತವಾಗಲಿವೆ. ಭಾರತದ ಮೃಣಾಲ್ ಸೇನ್ ಮತ್ತು ಅಡೂರ್ ಗೋಪಾಲಕೃಷ್ಣ ಅವರ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮಹತ್ವ ಸಿಗಬೇಕಾಗಿದ್ದು ಈ ಅಂಶಗಳಿಗೆ ಹೊರತು ಆದ್ದೂರಿತನಕ್ಕಲ್ಲ.

(ಲೇಖಕರು ಹಿರಿಯ ಪತ್ರಕರ್ತರು. ಸಿನಿಮಾ ಸಂಬಂಧಿ ಬರಹಗಳ ಮೂಲಕವೇ ಹೆಚ್ಚು ಪರಿಚಿತರು.)

Leave a Reply