ಸುದ್ದಿಸಂತೆ: ಶನಿ ದೇಗುಲಕ್ಕೆ ಸ್ತ್ರೀಶಕ್ತಿ ಪ್ರವೇಶಕ್ಕೆ ತಡೆ, ಅಸಹಿಷ್ಣುತೆ ರಾಗ ಬದಲಿಸಿದ ಆಮೀರ್, ಅರುಣಾಚಲದಲ್ಲಿ ರಾಷ್ಟ್ರಪತಿ ಆಳ್ವಿಕೆ, ಭಾರತಕ್ಕೆ ಟಿ20 ಗೆಲುವು

 

ಶನಿ ದೇಗುಲ ಪ್ರವೇಶಕ್ಕೆ ಮಹಿಳೆಯರ ಪಟ್ಟು

ಶನಿ ಸಿಗ್ಣಾಪುರದ ದೇಗುಲದ ಗರ್ಭಗುಡಿಗೆ ಮಹಿಳೆಯರ ಪ್ರವೇಶಕ್ಕಿರುವ ನಿರ್ಬಂಧವನ್ನು ವಿರೋಧಿಸಿ 500 ಮಂದಿ ಮಹಿಳೆಯರ ಗುಂಪೊಂದು ದೇಗುಲ ಪ್ರವೇಶಕ್ಕೆ ಯತ್ನಿಸಿತು. ಪೊಲೀಸರು ಮತ್ತು ಈರಿನವರ ಭಾರೀ ವಿರೋಧ ವ್ಯಕ್ತವಾಗಿದ್ದರಿಂದ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಗಣರಾಜ್ಯೋತ್ಸವದ ದಿನ ತಮ್ಮ ಶಾಂತಿಯುತ ದೇಗುಲ ಪ್ರವೇಶಕ್ಕೆ ಅಡ್ಡಿ ಉಂಟು ಮಾಡಿರೋದು ಅಸಮಾನತೆ ಪ್ರತಿಪಾದಿಸಿ ಸಂವಿಧಾನ ಮೌಲ್ಯವನ್ನು ಧಿಕ್ಕರಿಸಿರುವ ಕ್ರಮ ಅಂತ ಹೋರಾಟಗಾರರು ದೂರಿದ್ದಾರೆ. 500 ವರ್ಷಗಳಿಂದ ಇರುವ ಸಂಪ್ರದಾಯವನ್ನು ಮುರಿಯುವುದಕ್ಕೆ ತಾವು ಅವಕಾಶ ನೀಡುವುದಿಲ್ಲ ಎಂಬುದು ಶನಿ ಸಿಗ್ಣಾಪುರ ಗ್ರಾಮಸ್ಥರು ಮತ್ತು ಆಡಳಿತ ಮಂಡಳಿಯವರ ವಾದ.

ಮಹಾರಾಷ್ಟ್ರ ಮುಖ್ಯಮಂತ್ರಿ ಫಢ್ನವೀಸ್ ಅವರು ಮಹಿಳಾ ಹೋರಾಟಗಾರರು ಮತ್ತು ದೇಗುಲ ಸಮಿತಿ ನಡುವೆ ಮಾತುಕತೆಗೆ ಏರ್ಪಾಡುಮಾಡುವುದಾಗಿ ಹೇಳಿದ್ದಾರೆ.

ಶನಿ ದೇವರು ತಮ್ಮನ್ನೆಲ್ಲ ಕಾಪಾಡುತ್ತಾನೆ ಎಂಬ ನಂಬಿಕೆ ಪೊರೆದುಕೊಂಡುಬಂದಿರುವ ಈ ಊರಿನ 4 ಸಾವಿರ ಮನೆಗಳ ಪೈಕಿ ಯಾವುದಕ್ಕೂ ಬಾಗಿಲುಗಳಿಲ್ಲ. ಬಾಗಿಲುಗಳಿಲ್ಲದ ಊರಲ್ಲಿ ಶನಿ ದೇಗುಲದ ಗರ್ಭಗುಡಿಗೆ ಪ್ರವೇಶಿಸುವುದಕ್ಕೆ ಒತ್ತಾಯಿಸುತ್ತಿರುವ ಮಹಿಳೆಯರ ಗುಂಪು ಸಾಂಪ್ರದಾಯಿಕ ಆಚರಣೆ ಮತ್ತು ಆಧುನಿಕತೆಯ ಸಂಘರ್ಷವನ್ನು ತೆರೆದಿರಿಸಿದೆ.

 

ಅರುಣಾಚಲದಲ್ಲಿ ರಾಷ್ಟ್ರಪತಿ ಆಳ್ವಿಕೆ

ಅರುಣಾಚಲ ಪ್ರದೇಶದ ಸರ್ಕಾರ ಅಲ್ಪಮತಕ್ಕೆ ಇಳಿದಿರುವುದನ್ನು ಪರಿಗಣಿಸಿ, ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವುದಕ್ಕೆ ರಾಷ್ಟ್ರಪತಿಯವರ ಒಪ್ಪಿಗೆ ದೊರೆತಿದೆ.

ಆದರೆ ಅಲ್ಲಿನ ಆಡಳಿತಾರೂಢ ಕಾಂಗ್ರೆಸ್, ಕೇಂದ್ರದ ಈ ನಿರ್ಣಯದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಅಸಹಿಷ್ಣು ಭಾರತವಾ…? ನಾನ್ಯಾವಾಗ ಹಂಗಂದೇ ಅಂತ ಕೇಳ್ತಿದಾರೆ ಆಮೀರ್!

ಆಮೀರ್ ಖಾನ್ ಮತ್ತೆ ಗಜನಿ ಆಗಿದ್ದಾರೆ. ಏನದು, ಗಜನಿ ಚಿತ್ರದ ಎರಡನೇ ಭಾಗ ಬರ್ತಿದೆಯೇ ಅಂತ ಕೇಳಬೇಡಿ. ‘ತಾವು ಭಾರತ ಅಸಹಿಷ್ಣು ಎಂದು ಹೇಳಿರಲೇ ಇಲ್ಲ. ತಾವಾಗಲೀ ತಮ್ಮ ಹೆಂಡತಿಯಾಗಲಿ ದೇಶ ಬಿಟ್ಟು ಹೋಗುವ ಮಾತೇ ಆಡಿರಲಿಲ್ಲ. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಲಾಗಿರುವುದರಿಂದ ಈ ಬಗ್ಗೆ ಕೋಪಗೊಂಡಿರುವವರ ಮನಸ್ಸು ತಮಗೆ ಅರ್ಥವಾಗಿದೆ. ನಾನು ಅವರ ಜಾಗದಲ್ಲಿದ್ರೂ ಹಾಗೇ ಮಾಡ್ತಿದ್ದೆ’ ಎಂದಿದ್ದಾರೆ. ಶಾರುಖ್ ಖಾನ್ ಅಸಹಿಷ್ಣು ರಾಗ ಹಾಡಿದ್ದರಿಂದ ಅವರ ಇತ್ತೀಚಿನ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶ ಸಾಧಿಸಲಿಲ್ಲ. ದಂಗಲ್ ಚಿತ್ರದ ಬಿಡುಗಡೆ ಎದುರಿಗಿರುವಾಗ ಆಮೀರ್ ಖಾನ್ ಅಸಹಿಷ್ಣು ರಾಗವನ್ನು ಮರೆಸುವುದಕ್ಕೆ ಯತ್ನಿಸುತ್ತಿದ್ದಾರೆಯೇ ಎನಿಸುತ್ತಿದೆ.

 

ಏಕದಿನ ಸೋಲಿನ ನೆರಳಿಂದ ಹೊರಬಂದ ಭಾರತ, ಟಿ20 ಪ್ರಥಮ ಪಂದ್ಯ ವಿಜೇತ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲೇ ಆಸಿಸ್ ವಿರುದ್ಧ ಭಾರತ 37 ರನ್ ಗಳ ಭರ್ಜರಿ ಗೆಲುವು ಪಡೆದಿದೆ. ಈ ಮೂಲಕ ಕಳೆದ ಏಕ ದಿನ ಸರಣಿ ಸೋಲಿಗೆ ಪ್ರತಿಕಾರವಾಗಿ ಉತ್ತಮ ಆರಂಭ ಪಡೆದು ಕೊಂಡಿದೆ.

ಮೊದಲು ಬ್ಯಾಟಿಂಗ್ ಇಳಿದ ಭಾರತ ರೋಹಿತ್ ಶರ್ಮಾ 31 ರನ್, ವಿರಾಟ್ ಕೋಹ್ಲಿ ಅಜೇಯ 90 ರನ್, ಸುರೇಶ್ ರೈನ್ 41 ರನ್ ಮತ್ತು ನಾಯಕ ಧೋನಿ 11 ರನ್ ಗಳ ಆಟ ಭಾರತ ನಿಗದಿತ ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಷಕ್ಕೆ 188 ರನ್ ಗಳ ಬೃಹತ್ ಗುರಿಯನ್ನು ಅಸಿಸ್ ಗೆ ನೀಡಿತು. ಭಾರತದ ಬ್ಯಾಟ್ಸ್ ಮನ್ ಗಳನ್ನು ಆಸಿಸ್ ನ ಬೌಲರ್ ಗಳು ಧವನ್ ವಿಕೆಟ್ ಪಡೆದು ಆರಂಭಿಕ ಆಘಾತ ನೀಡಿದರೂ ರನ್ ಗಳಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

ಭಾರತ ನೀಡಿದ್ದ ಗುರಿಯನ್ನು ಬೆನ್ನು ಹತ್ತಿದ ಅಸಿಸ್ ತಂಡ ಅರೋನ್ ಪಿನ್ಚ್ 44 ರನ್ , ಡೇವಿಡ್ ವಾರ್ನಾರ್ 17 ರನ್, ಸ್ಟೀವನ್ ಸ್ಮಿತ್ 21, ಕ್ರೀಸ್ ಲ್ಯಾನ್ 17 ರನ್ ಗಳಿಸಿದ್ದು ಬಿಟ್ಟರೇ ಉಳಿದರು ಪೆವಿಲಿಯನ್ ಪೆರೇಡ್ ನಡೆಸಿದರು. ಅಂತಿಮವಾಗಿ 19.3 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಗಳನ್ನು ಕಳೆದು ಕೊಂಡು 151 ರನ್ ಗಳನಷ್ಟೇ ಗಳಿಸಲು ಸಾಧ್ಯವಾಯಿತು.

ಆಸಿಸ್ ಬ್ಯಾಟ್ಸ್ ಮೆನ್ ಗಳ ಮೇಲೆ ಭಾರತದ ಬೌಲರ್ ಗಳು ಹಿಡಿತ ಸಾಧಿಸಿದರು. ಯುವ ಪ್ರತಿಭೆ ಜಾಸ್ ಪ್ರೀಂಟ್ ಭೂಮ್ ರಾಹ್ 3.3 ಓವರ್ ಗಳಲ್ಲಿ 23 ರನ್ ನೀಡಿ ಅಮೂಲ್ಯ 3 ವಿಕೆಟ್ ಗಳನ್ನು ಪಡೆದರು. ಉಳಿದಂತೆ ಅಶ್ವಿನ್, ಆರ್ ಜಡೇಜಾ, ಹಾರ್ದಿಕ್ ಪಾಂಡೆ ತಲಾ 2 ವಿಕೆಟ್ ಮತ್ತು ನೆಹ್ರಾ 1 ವಿಕೆಟ್ ಪಡೆದರು.

ಎರಡನೆಯ ಟಿ20 ಪಂದ್ಯ ಜನವರಿ 29 ರಂದು ನಡೆಯಲಿದೆ.

———–

ಗಣರಾಜ್ಯೋತ್ಸವದ ಅಂಗವಾಗಿ ನ್ಯಾಷನಲ್ ಬುಕ್ ಟ್ರಸ್ಟ್, ವೀರಗಾಥಾ ಎಂಬ ಚಿತ್ರಸರಣಿಯ ಪುಸ್ತಕವನ್ನು ಬಿಡುಗಡೆ ಮಾಡಿದೆ. ದೇಶದ ಪರಮೋಚ್ಛ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರ ಪಡೆದಿರುವ ಯೋಧರ ಚಿತ್ರಕತೆ ಚರಿತ್ರೆಯನ್ನು ಮಕ್ಕಳಿಗೆ ತಲುಪಿಸೋದು ಇದರ ಉದ್ದೇಶ. ಪತ್ರಕರ್ತ ಗೌರವ್ ಸಾವಂತ್ ನಿರೂಪಣೆಯ ಪುಸ್ತಕವನ್ನು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಲೋಕಾರ್ಪಣೆ ಮಾಡಿದ್ದಾರೆ. ಸದ್ಯಕ್ಕೆ ಐವರು ಹೀರೋಗಳ ಕತೆ ಪುಸ್ತಕಗಳು ಬಂದಿವೆ. ಎಲ್ಲ 21 ಪರಮವೀರ ಚಕ್ರ ಪುರಸ್ಕೃತರ ಜೀವನಗಾಥೆಯನ್ನೂ ಕಾಮಿಕ್ ರೂಪದಲ್ಲಿ ತರುವ ಉದ್ದೇಶವಿದೆ.
ಗಣರಾಜ್ಯೋತ್ಸವದ ಅಂಗವಾಗಿ ನ್ಯಾಷನಲ್ ಬುಕ್ ಟ್ರಸ್ಟ್, ವೀರಗಾಥಾ ಎಂಬ ಚಿತ್ರಸರಣಿಯ ಪುಸ್ತಕವನ್ನು ಬಿಡುಗಡೆ ಮಾಡಿದೆ. ದೇಶದ ಪರಮೋಚ್ಛ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರ ಪಡೆದಿರುವ ಯೋಧರ ಚಿತ್ರಕತೆ ಚರಿತ್ರೆಯನ್ನು ಮಕ್ಕಳಿಗೆ ತಲುಪಿಸೋದು ಇದರ ಉದ್ದೇಶ. ಪತ್ರಕರ್ತ ಗೌರವ್ ಸಾವಂತ್ ನಿರೂಪಣೆಯ ಪುಸ್ತಕವನ್ನು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಲೋಕಾರ್ಪಣೆ ಮಾಡಿದ್ದಾರೆ. ಸದ್ಯಕ್ಕೆ ಐವರು ಹೀರೋಗಳ ಕತೆ ಪುಸ್ತಕಗಳು ಬಂದಿವೆ. ಎಲ್ಲ 21 ಪರಮವೀರ ಚಕ್ರ ಪುರಸ್ಕೃತರ ಜೀವನಗಾಥೆಯನ್ನೂ ಕಾಮಿಕ್ ರೂಪದಲ್ಲಿ ತರುವ ಉದ್ದೇಶವಿದೆ.

Leave a Reply