ಅಂಡರ್19 ಕ್ರಿಕೆಟ್ ನ ಈ ಹುಡುಗರು ಭಾರತ ತಂಡದ ಭವಿಷ್ಯದ ಸ್ಟಾರ್ ಆದಾರು!

 

ಎಂ. ರವಿತೇಜ

ಭವಿಷ್ಯದ ಸ್ಟಾರ್ ಆಟಗಾರರಿಗೆ ಪ್ರಮುಖ ವೇದಿಕೆಯಾಗಿರುವ ಕಿರಿಯರ ವಿಶ್ವಕಪ್ ಮತ್ತೆ ಬಂದಿದೆ. ಆ ಮೂಲಕ ವಿಶ್ವ ಕ್ರಿಕೆಟ್ಗೆ ಪ್ರತಿಭೆಗಳ ಅನಾವರಣಕ್ಕೆ ಕಣ ರೆಡಿಯಾಗಿದೆ. ಈವರೆಗೂ 3 ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ ಈ ಟೂರ್ನಿಯಿಂದ ಸಾಕಷ್ಟು ತಾರಾ ಆಟಗಾರರನ್ನು ಕಂಡುಕೊಂಡಿದೆ. ಭಾರತ ಗುರುವಾರ ಮೀರ್ಪುರದ ಶೇರೆ ಬಾಂಗ್ಲಾ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಭಾರತ ತಂಡ ಅತ್ಯುತ್ತಮ ಯುವ ಪಡೆಯನ್ನು ಅಖಾಡಕ್ಕೆ ಇಳಿಸಿದ್ದು, ಈ ಪಡೆಯಲ್ಲಿರುವ ಕೆಲವರು ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ. ಭವಿಷ್ಯದಲ್ಲಿ ಟೀಂ ಇಂಡಿಯಾ ಕದ ತಟ್ಟುವ ಎಲ್ಲ ಸಾಮರ್ಥ್ಯ ಈ ಯುವಕರಲ್ಲಿದೆ. ಆ ಪೈಕಿ ಕಲ ಪ್ರಮುಖರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅರ್ಮಾನ್ ಜಾಫರ್: ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಅವರ ಸೋದರ ಸಂಬಂಧಿ ಈ ಅರ್ಮಾನ್ ಜಾಫರ್. ಸುಮಾರು ಕಳೆದ ಒಂದು ವರ್ಷದಲ್ಲಿ ಅರ್ಮಾನ್ ಜಾಫರ್ ಅಂಡರ್ 19 ಮಟ್ಟದಲ್ಲಿನ ಸಾಧನೆ ಗಮನಾರ್ಹವಾಗಿದ್ದು, ಸಹಜವಾಗಿಯೇ ಭಾರತ ಕಿರಿಯರ ತಂಡಕ್ಕೆ ಆಯ್ಕೆಯಾಗಿದ್ದಾರೆ. 19 ವರ್ಷದೊಳಗಿನವರ ಕೂಚ್ ಬೆಹಾರ್ ಟ್ರೋಫಿ ಟೂರ್ನಿಯಲ್ಲಿ ಅರ್ಮಾನ್ ಸತತ ಮೂರು ದ್ವಿಶತಕ ಹಾಗೂ ಸತತ ಮೂರು ಶತಕ ಬಾರಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದರು. ಸ್ಥಿರ ಪ್ರದರ್ಶನ ಇವರ ಪ್ರಮುಖ ಅಸ್ತ್ರವಾಗಿದ್ದು, 2010ರಲ್ಲಿ ಶಾಲಾ ಮಟ್ಟದ ಟೂರ್ನಿಯಲ್ಲಿ ರಿಜ್ವಿಲ್ ಸ್ಪ್ರಿಂಗ್ ಫೀಲ್ಡ್ ಶಾಲೆ ಪರ ಆಕರ್ಷಕ 498 ರನ್ ದಾಖಲಿಸಿ ಖ್ಯಾತಿ ಗಳಿಸಿದ್ದರು. ಅಲ್ಲದೆ ಮುಂಬೈ ತಂಡದ ರಣಜಿ ಟೂರ್ನಿಗೆ ಆಯ್ಕೆಯಾದ ಸಂಭಾವ್ಯರ ಪಟ್ಟಿಯಲ್ಲಿ 17 ವರ್ಷದ ಅರ್ಮಾನ್ ಹೆಸರು ಕಾಣಿಸಿಕೊಂಡಿದ್ದು, ಇದೇ ಪ್ರದರ್ಶನ ಮುಂದುವರಿಸಿದರೇ, ಪ್ರಥಮ ದರ್ಜೆ ಕ್ರಿಕೆಟ್ಗೆ ಸದ್ಯದಲ್ಲೇ ಕಾಲಿಡಲಿದ್ದಾರೆ.

ವಾಶಿಂಗ್ಟನ್ ಸುಂದರ್ : ಅತಿ ಚಿಕ್ಕ ವಯಸ್ಸಿನಲ್ಲೇ ವಿಶೇಷ ಆಟಗಾರ ಎಂದು ಗುರುತಿಸಿಕೊಂಡಿರುವ ವಾಶಿಂಗ್ಟನ್ ಸುಂದರ್, ತಮ್ಮ 13ನೇ ವಯಸ್ಸಿನಲ್ಲಿ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಫಸ್ಟ್ ಡಿವಿಷನ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಈಗ 16 ವರ್ಷದ ಸುಂದರ್ ಈ ಮಟ್ಟದ ಟೂರ್ನಿಯಲ್ಲಿ ಆಡಬಲ್ಲ ಸಾಮರ್ಥ್ಯ ತೋರಿದ್ದಾರೆ. ಆರಂಭಿಕ ಬ್ಯಾಟ್ಸ್ ಮನ್ ಆಗಿರುವ ಸುಂದರ್ ಇತ್ತೀಚೆಗೆ ಶ್ರೀಲಂಕಾ ಹಾಗೂ ಇಂಗ್ಲೆಂಡ್ ವಿರುದ್ಧದ ತ್ರಿಕೋನ ಏಕದಿನ ಸರಣಿಯಲ್ಲಿ ಗಮನ ಸೆಳೆದಿದ್ದರು. ಅಲ್ಲದೆ ಫೈನಲ್ ನಲ್ಲಿ ಅರ್ಧಶತಕ ದಾಖಲಿಸಿ ಗೆಲವಿನ ರೂವಾರಿಯಾಗಿದ್ದರು. ಚಿಕ್ಕ ವಯಸ್ಸಿನ ಹಿನ್ನೆಲೆಯಲ್ಲಿ ವಾಶಿಂಗ್ಟನ್ ಕೇವಲ ಈ ಬಾರಿಯ ಅಂಡರ್ 19 ವಿಶ್ವಕಪ್ ಮಾತ್ರವಲ್ಲದೇ, 2018ರ ಕಿರಿಯರ ವಿಶ್ವಕಪ್ ನಲ್ಲೂ ಆಡುವ ಸಾಧ್ಯತೆ ಹೊಂದಿದ್ದಾರೆ. ಇನ್ನು ಆಫ್ ಬ್ರೇಕ್ ಮೂಲಕ ಅರೆಕಾಲಿಕ ಬೌಲರ್ ಆಗಿಯೂ ಪಾತ್ರ ನಿರ್ವಹಿಸಬಲ್ಲ ಸುಂದರ್ ಬಾಂಗ್ಲಾದೇಶದಲ್ಲಿ ಭಾರತ ತಂಡಕ್ಕೆ ಪ್ರಯೋಜನಕಾರಿಯಾಗಲಿದ್ದಾರೆ.

ಆವೇಶ್ ಖಾನ್: ಭಾರತದ ಯಾವುದೇ ತಂಡವನ್ನು ತೆಗೆದುಕೊಂಡರೂ ಬ್ಯಾಟ್ಸ್ ಮನ್ ಗಳದ್ದೇ ಪ್ರಾಬಲ್ಯ ಹೆಚ್ಚು. ಇನ್ನು ಆರಂಭಿಕ ಹಂತದಲ್ಲಿ ಸಾಕಷ್ಟು ಭರವಸೆ ಮೂಡಿಸುವ ಬೌಲರ್ ಗಳು ನಂತರ ನಾಪತ್ತೆಯಾಗುತ್ತಾರೆ. ಈಗ ಈ ಯುವ ತಂಡದಲ್ಲಿ ಮಧ್ಯಪ್ರದೇಶ ಮೂಲದ ಆವೇಶ್ ಖಾನ್ ಬೌಲರ್ ಆಗಿ ಭರವಸೆ ಮೂಡಿಸಿರುವ ಪ್ರತಿಭೆ. ಈ ಆಟಗಾರ ಉಳಿದವರ ಸಾಲಿನಲ್ಲಿ ಸೇರದಿದ್ದರೆ ಸಾಕು. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 6 ಓವರ್ ಗಳಲ್ಲಿ 4 ರನ್ ನೀಡಿ 4 ವಿಕೆಟ್ ಕಬಳಿಸಿದ ಆವೇಶ್ ಖಾನ್ ಭಾರತ ತಂಡದ ಬೌಲಿಂಗ್ ಅಸ್ತ್ರವಾಗಿದ್ದಾರೆ. ಮಧ್ಯಪ್ರದೇಶ ತಂಡದ ಪರ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪದಾರ್ಪಣೆ ಮಾಡಿರುವ ಆವೇಶ್, 5 ಪಂದ್ಯಗಳಿಂದ 15 ವಿಕೆಟ್ ಕಬಳಿಸಿದ್ದಾರೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇವರ ಮೇಲಿದೆ.

ರಿಕಿ ಭುಯಿ: ಭಾರತ ಬ್ಯಾಟಿಂಗ್ ಮಧ್ಯಮ ಕ್ರಮಾಂಕದ ಭವಿಷ್ಯದ ಆಟಗಾರರ ರೇಸ್ ನಲ್ಲಿರುವ ಪ್ರಮುಖ ಹೆಸರು. 17ನೇ ವಯಸ್ಸಿನಲ್ಲಿ ಆಂಧ್ರ ಪ್ರದೇಶ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ರಿಕಿ, ಈ ವಯಸ್ಸಿನಲ್ಲಿ 13 ಪಂದ್ಯಗಳನ್ನಾಡಿದ್ದಾರೆ. ಲಿಸ್ಟ್ ಎ ಮಾದರಿಯಲ್ಲಿ ಈವರೆಗೂ ಆಡಿರುವ 7 ಇನಿಂಗ್ಸ್ ನಲ್ಲಿ ಶತಕ ಸೇರಿದಂತೆ 158.50 ಸರಾಸರಿಯನ್ನು ಹೊಂದಿದ್ದು, ಗಮನಾರ್ಹ ಸಾಧನೆಯಾಗಿದೆ. ಇನ್ನು 2014ರಲ್ಲಿ ಐಪಿಎಲ್ ಆಟಗಾರರ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಯ್ಕೆಯಾಗಿದ್ದರಾದರೂ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಈ ಬಾರಿಯ ಕಿರಿಯರ ವಿಶ್ವಕಪ್ ನಲ್ಲಿ ಭಾರತದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವೆಂದೇ ರಿಕಿ ಅವರನ್ನು ಪರಿಗಣಿಸಲಾಗಿದೆ.

ಸರ್ಫರಾಜ್ ಖಾನ್:ಸಾಕಷ್ಟು ಜನರಿಗೆ ಈ ಹೆಸರು ಈಗಾಗಲೇ ಪರಿಚಿತ. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡಿದ್ದ ಸರ್ಫರಾಜ್ ಖಾನ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ರಂತಹ ಖ್ಯಾತನಾಮರಿಂದ ಮೆಚ್ಚುಗೆ ಪಡೆದಿದ್ದರು. ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಸ್ಫೋಟಕ ಬ್ಯಾಟಿಂಗ್ ಎಲ್ಲರನ್ನು ಹುಬ್ಬೇರುವಂತೆ ಮಾಡಿತ್ತು. ಈಗ ವಿಶ್ವಕಪ್ ತಂಡದಲ್ಲಿ ಭಾರತದ ಮಧ್ಯಮ ಕ್ರಮಾಂಕಕ್ಕೆ ಒಂದು ಸ್ಫೋಟಕ ಅಸ್ತ್ರವಾಗಿ ಸರ್ಫರಾಜ್ ಖಾನ್ ಪರಿಣಮಿಸಿದ್ದಾರೆ. ತಮ್ಮ 12ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಹ್ಯಾರಿಸ್ ಶೀಲ್ಡ್ ಟೂರ್ನಿಯಲ್ಲಿ ಭರ್ಜರಿ 439 ರನ್ ದಾಖಲಿಸಿ ಸರ್ಫರಾಜ್ ಖಾನ್ ಖ್ಯಾತಿ ಪಡೆದಿದ್ದರು. ಕಳೆದ ಬಾರಿಯ ಕಿರಿಯರ ವಿಶ್ವಕಪ್ ನಲ್ಲಿ ಆಡಿದ್ದ ಸರ್ಫರಾಜ್ 211 ರನ್ ದಾಖಲಿಸಿದ್ದರು. ಈಗ ಸಾಕಷ್ಟು ಹೆಚ್ಚಿನ ಅನುಭವವನ್ನು ತಮ್ಮ ಬೆನ್ನಿಗಿಟ್ಟುಕೊಂಡು ಈ ಬಾರಿ ಮತ್ತೆ ಕಣಕ್ಕಿಳಿಯುತ್ತಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

Leave a Reply