ಅಹಂಕಾರ ಉದಾಸೀನಗಳ ಅಧಿಕಾರಸ್ಥ ಭಾರತ, ಪರಮೇಶ್ವರ್ ನಾಯ್ಕ್, ಜಾರ್ಜ್, ಕೇಜ್ರಿವಾಲರಲ್ಲಿ ಕಂಡ 3 ಬಿಂಬಗಳು

 

ಡಿಜಿಟಲ್ ಕನ್ನಡ ಟೀಮ್

 

ನಗರಾಭಿವೃದ್ಧಿ ಸಚಿವರಿಗೆ ಅಭಿವೃದ್ಧಿ ಬಗ್ಗೆ ಪ್ರಶ್ನಿಸೋ ಹಾಗಿಲ್ಲ!

ರಾಜ್ಯದಲ್ಲಿ ಪ್ರಕಟಗೊಂಡ ಇನ್ನೊಂದು ಉಡಾಫೆ ಧೋರಣೆ ಅಂತಂದ್ರೆ ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಅವರದ್ದು. ಇವರು ತಮ್ಮ ಕರೆಗಳನ್ನು ಸ್ವೀಕರಿಸೋದಿಲ್ಲ ಎಂಬ ಪತ್ರಕರ್ತರ ದೂರು ತುಂಬ ಹಳೆಯದ್ದು. ಇದೇ ಪ್ರಶ್ನೆ ಎದುರಾದಾಗ ಸಚಿವರು ಸಿಡಿಮಿಡಿಗೊಂಡ್ರು. ‘ನಿಮ್ಮ ಕರೆ ಸ್ವೀಕರಿಸೋದೇ ಕೆಲಸವಾ? ಯಾವ ಮಾಧ್ಯಮದವರು ಅಂತ ಮೆಸೇಜ್ ಕಳ್ಸಿ. ಪುರಸೊತ್ತಾದಾಗ ಕರೆ ಮಾಡುವೆ’ ಅಂದ್ರು. ಪತ್ರಕರ್ತರು ಹರಟೆಗೋ, ಅವರ ಮನೆ ಕೆಲಸಕ್ಕೋ ಸಚಿವರಿಗೆ ಕರೆ ಮಾಡಿದರೆ ಗರಂ ಆಗೋದರಲ್ಲಿ ನ್ಯಾಯವಿದೆ. ಇರಲಿ, ಮಾಧ್ಯಮದ ಜತೆ ಮಾತನಾಡುವುದಕ್ಕಿಂತ ಕೆಲಸದಲ್ಲಿ ತೊಡಗಿಸಿಕೊಳ್ಳುವುದೇ ಮುಖ್ಯ ಆದ್ಯತೆ ಅಂತಾದರೆ ಅದನ್ನೂ ಮನ್ನಿಸಬಹುದು.

ಆದರೆ, ಅಭಿವೃದ್ಧಿ ಕಾರ್ಯಗಳು ಕುಂಟುತ್ತಿವೆಯಲ್ಲ ಎಂಬ ಪ್ರಶ್ನೆಗೂ ಸಮಜಾಯಿಷಿ ಕೊಡೋದರ ಬದಲು ನಗರಾಭಿವೃದ್ಧಿ ಸಚಿವರು ಸಿಟ್ಟೇ ಸಿಟ್ಟು ತೋರಿದರು. ‘ಸ್ವಂತ ಖರ್ಚಿಂದ ಅಭಿವೃದ್ಧಿ ಮಾಡೋಕಾಗುತ್ತಾ? ಎಲ್ಲವಕ್ಕೂ ನನ್ನನ್ನೇ ಕೇಳಿದ್ರೆ…’ ಎಂಬ ಆಕ್ಷೇಪ ಸಚಿವರದ್ದು. ಬೆಂಗಳೂರಿನ ಅಭಿವೃದ್ಧಿ ಕುಂಠಿತವಾಗಿರುವುದರ ಬಗ್ಗೆ ನಗರಾಭಿವೃದ್ಧಿ ಸಚಿವರನ್ನಲ್ಲದೇ ಇನ್ಯಾರನ್ನು ಕೇಳೋದು? ಬಿಬಿಎಂಪಿಯಲ್ಲೂ ಇವರದ್ದೇ ಮೈತ್ರಿಕೂಟ ಆಡಳಿತದಲ್ಲಿದೆ. ಹೀಗಿದ್ದಾಗಲೂ ಕೈಚೆಲ್ಲುವುದಾದರೆ ಆ ಭಾಗ್ಯಕ್ಕೆ ಸಚಿವರೆಂದೆನಿಸಿಕೊಳ್ಳಬೇಕೇಕೆ, ಅಲ್ವಾ?

 

ಪೊಲೀಸ್ ಅಧಿಕಾರಿ ಎತ್ತಂಗಡಿ ಮಾಡಿದ ದರ್ಪ

ನಾವು ಅಧಿಕಾರದಲ್ಲಿದ್ದೇವೆ, ಏನಾದ್ರೂ ಮಾಡಿ ಅರಗಿಸಿಕೊಳ್ತೀವಿ ಏನೀಗ – ಹೀಗೊಂದು ಅಹಂಕಾರ ವಲಯದತ್ತ ಸಾಗುತ್ತಿದ್ದಾರೆ ರಾಜ್ಯ ಕಾಂಗ್ರೆಸ್ ಸಂಪುಟದ ಸಚಿವರು. ಬುಧವಾರ ಸಿದ್ದರಾಮಯ್ಯ ಸಂಪುಟದ ಇಬ್ಬರು ಸಚಿವರ ಅಹಂಕಾರ- ಉದಾಸೀನ ಧೋರಣೆಗಳು ಪ್ರಕಟಗೊಂಡವು.

ಕೂಡ್ಲಗಿ ಉಪವಿಭಾಗದ ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ಎತ್ತಂಗಡಿ ಮಾಡಿಸಿದ್ದು ನಾನೇ ಅಂತ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜಂಬ ಕೊಚ್ಚಿಕೊಂಡಿದ್ದಾರೆ ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ್. ಅದರ ವಿಡಿಯೋ ಕ್ಲಿಪಿಂಗ್ ಹೊರಬಿದ್ದಿದೆ. ಅದರಲ್ಲಿ ಪರಮೇಶ್ವರ ನಾಯ್ಕ್ ಅವರು ತಮ್ಮ ಪೌರುಷಕ್ಕೆ ಕೊಟ್ಟಿರುವ ಕಾರಣವಾದರೂ ಏನು? ಇವರ ಕರೆ ಸ್ವೀಕರಿಸಿದ ಪೊಲೀಸ್ ಅಧಿಕಾರಿ, ಮಧ್ಯದಲ್ಲಿ 42 ಸೆಕೆಂಡ್ ಮಟ್ಟಿಗೆ ಬೇರೆ ಕರೆ ಆಲಿಸುವುದಕ್ಕೆ ಇವರ ಕರೆಯನ್ನು ಕಾಯ್ದಿರಿಸಿಬಿಟ್ಟರಂತೆ. ಇನ್ನೊಮ್ಮೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲವಂತೆ. ಅಂದ್ಮೇಲೆ ಆ ಅಧಿಕಾರಿಯನ್ನು ಯಾಕೆ ಇಟ್ಟುಕೊಳ್ಳಬೇಕು ಅನ್ನೋದು ಸಚಿವರ ವಾದ. ಅದಕ್ಕೂ ಮೀರಿದ ಕೆಟ್ಟ ಸಂದೇಶವೊಂದು ಈ ಪ್ರಕರಣದಲ್ಲಿ ರವಾನೆಯಾಗಿದೆ. ಅದೆಂದರೆ- ಕಾರ್ಯಕರ್ತರು ಪ್ರಕರಣವೊಂದರ ಬಗ್ಗೆ ಸಂದೇಹ ವ್ಯಕ್ತಪಡಿಸಿದಾಗ ತಾನು ಅವರ ಪರ ನಿಲ್ಲುತ್ತೇವೆಯೇ ಹೊರತು ಅಧಿಕಾರಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ- ಅನ್ನೋದು. ಅಂದರೆ ಅಧಿಕಾರಿಗಳಾದವರು ಅಧಿಕಾರರೂಢರಿಗೆ ನಿಷ್ಠೆ ತೋರಬೇಕೆಂಬ ಆಜ್ಞೆ ಸಚಿವರ ಮಾತಲ್ಲಿ ಪ್ರಕಟವಾಗಿದೆ.

ದೆಹಲಿ ಪೌರಕಾರ್ಮಿಕರು ಬೀದಿಗೆ, ಕೇಜ್ರಿವಾಲರು ಬೆಂಗಳೂರಿಗೆ

ಬಿಡದ ಕೆಮ್ಮು ಮತ್ತು ಸಕ್ಕರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಬೆಂಗಳೂರಿಗೆ ಬಂದಿದ್ದಾರೆ. ಅತ್ತ, ತಮಗೆ ಕೆಲವು ತಿಂಗಳುಗಳಿಂದ ಸಂಬಳವೇ ಸಿಕ್ಕಿಲ್ಲ ಎಂದು ದೆಹಲಿ ಮುನ್ಸಿಪಲ್ ಕೌನ್ಸಿಲ್ ನ ಸ್ವಚ್ಛತಾ ಕೆಲಸಗಾರರು ಬುಧವಾರ ಬೆಳಗ್ಗೆಯಿಂದ ಮುಖ್ಯಮಂತ್ರಿ ನಿವಾಸದೆದುರು ಪ್ರತಿಭಟನೆ ಆರಂಭಿಸಿದ್ದಾರೆ.

ವರ್ಷದ ಹಿಂದೆ ಕಫ ಮತ್ತು ಸಕ್ಕರೆ ಕಾಯಿಲೆಗೆ ಬೆಂಗಳೂರಿನ ಜಿಂದಾಲ್ ನೈಸರ್ಗಿಕ ಚಿಕಿತ್ಸಾಲಯದಲ್ಲಿ ಆರೈಕೆಗೆ ಒಳಗಾಗಿದ್ದ ಅರವಿಂದ ಕೇಜ್ರಿವಾಲರು, ಮತ್ತೆ ಈಗ ಚಿಕಿತ್ಸೆ ಮೊರೆ ಹೋಗಿದ್ದಾರೆ. ಆರೋಗ್ಯ ಕೈಕೊಟ್ಟಾಗ ಸೂಕ್ತ ಚಿಕಿತ್ಸೆ ಪಡೆಯಲೇಬೇಕು, ಅದನ್ನು ಟೀಕಿಸುವಂತಿಲ್ಲ ಬಿಡಿ. ಆದರೆ, ಜಗತ್ತಿನ ಕೊಂಕುಗಳ ಬಗ್ಗೆ ಎಲ್ಲ ಮಾತನಾಡುವ, ಕಾಳಜಿ ತೋರಿಸುವ ಕೇಜ್ರಿವಾಲ್ ಅವರಿಗೆ ದೆಹಲಿ ಮುನ್ಸಿಪಾಲಿಟಿಯ ನೌಕರರ ಸಂಬಳ ಸರಿಪಡಿಸುವುದಕ್ಕೂ ಆಗದಾಯಿತೇ? ಈಗ ಸ್ವಚ್ಛತಾ ಕೆಲಸಗಾರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕುಳಿತರೆ, ಕೇಜ್ರಿವಾಲರು ಹತ್ತು ದಿನದ ಚಿಕಿತ್ಸೆ ಮುಗಿಸಿಕೊಂಡು ಹೋಗುವಷ್ಟರಲ್ಲಿ ಇಡೀ ದೆಹಲಿಗೇ ಕಫ ಕಟ್ಟಿರುತ್ತದಲ್ಲ ಏನು ಮಾಡೋದು?

  • ದೆಹಲಿ ಮುನ್ಸಿಪಲ್ ಕೌನ್ಸಿಲ್ ನ 1.5 ಲಕ್ಷ ನೌಕರರ ಬೆಂಬಲ ಹೊಂದಿದೆ ಮೂರು ದಿನಗಳ ಮುಷ್ಕರ. ಅಲ್ಲಿಗೆ ಸ್ಥಳೀಯ ಸಂಸ್ಥೆ ಮಟ್ಟದ ಎಲ್ಲ ನಾಗರಿಕ ಸೇವೆಗಳೂ ಅಲಭ್ಯವಾಗುತ್ತವೆ. ದೆಹಲಿ ಪ್ರತಿದಿನ 9 ಸಾವಿರ ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದಿಸುತ್ತದೆ. ಸ್ವಚ್ಛತಾ ಕೆಲಸಗಾರರೆಲ್ಲ ಕನಿಷ್ಠ ಮೂರು ದಿನ ಪ್ರತಿಭಟನೆ ನಡೆಸಲಿದ್ದಾರೆ. ಅಲ್ಲಿಗೆ ದೆಹಲಿ ಗಲೀಜು ಚಿತ್ರಣ ಕಲ್ಪಿಸಿಕೊಳ್ಳಬಹುದು.
  • ಖಂಡಿತ, ಇದರಲ್ಲಿಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಆಪ್ ಸರ್ಕಾರಕ್ಕೆ ಮಾತ್ರವೇ ದೋಷ ನೀಡಲಾಗುವುದಿಲ್ಲ. ಏಕೆಂದರೆ ಮುನ್ಸಿಪಾಲಿಟಿಯಲ್ಲಿ ಅಧಿಕಾರ ಹಿಡಿದಿರುವುದು ಬಿಜೆಪಿ. ಹಾಗಂತ ಎಲ್ಲವಕ್ಕೂ ಕೇಂದ್ರ ಮತ್ತು ಬಿಜೆಪಿಯನ್ನು ದೂರುತ್ತ ಇದ್ದರಾಯಿತೇ? ಇಷ್ಟೇ ಮಾಡಿ ಅಸಹಾಯಕತೆ- ಹತಾಶೆ ಪ್ರದರ್ಶಿಸಿಕೊಂಡಿರೋದಾದ್ರೆ ಅದಕ್ಕೆ ಮುಖ್ಯಮಂತ್ರಿ ಅಂತ ಏಕನಿಸಿಕೊಳ್ಳಬೇಕು? ಹೋರಾಟಗಾರ- ಕಾರ್ಯಕರ್ತರಾಗಿಯೇ ಮುಂದುವರಿಯಬಹುದು.
  • ಮುಖ್ಯಮಂತ್ರಿಯಾಗಿ ಅಲ್ಲದಿದ್ದರೆ ಹೋರಾಟಗಾರನ ಅವತಾರದಲ್ಲಾದರೂ ಈ ಬಗ್ಗೆ ಕನಿಷ್ಠ ಹೋರಾಟ ಮಾಡಬಹುದಿತ್ತು ಕೇಜ್ರಿವಾಲರು. ಶಾಸಕರಿಗೆ ಬರೋಬ್ಬರಿ 400 ಪರ್ಸೆಂಟ್ ವೇತನ ಹೆಚ್ಚಳದ ನಿರ್ಣಯ ಪಾಸು ಮಾಡಿದ್ದು ಇದೇ ಆಪ್ ಸರ್ಕಾರ. ಪೌರ ಕಾರ್ಮಿಕರಿಗೆ ಸಂಬಳ ಸಂದಾಯವಾಗುವವರೆಗೂ ನಾವು ಇಂಥ ನಿರ್ಣಯ ಕೈಗೊಳ್ಳುವುದಿಲ್ಲ ಎಂಬ ನಿಲುವು ತಾಳಬಹುದಿತ್ತಲ್ಲ? ಸಮ- ಬೆಸ ಸಂಚಾರ ನಿಯಮ ಪ್ರಚಾರಕ್ಕೆ ಅಂತ ಕೋಟ್ಯಂತರ ರುಪಾಯಿಗಳನ್ನು ಜಾಹೀರಾತಿಗೆ ಸುರಿದಿರುವವರಿಗೆ ಮುನ್ಸಿಪಾಲಿಟಿ ನೌಕರರಿಗೆ ಸಂಬಳ ಕೊಡಿಸುವಷ್ಟೂ ಇಚ್ಛಾಶಕ್ತಿ ಇಲ್ಲದೇ ಹೋಯಿತೇ?
  •  ಮೂರು ಭಾಗಗಳಲ್ಲಿಮುನ್ಸಿಪಾಲಿಟಿಯನ್ನು ಒಡೆದಿರೋದೇ ವೆಚ್ಚ ಹೆಚ್ಚುವುದಕ್ಕೆ ಕಾರಣ, ಇದು ಮತ್ತೆ ಏಕತ್ರವಾಗಲಿ ಎಂಬ ಅಭಿಪ್ರಾಯವಿದೆ. ಈ ಬಗ್ಗೆ ತಮ್ಮದೊಂದು ನಿಲುವು ಹೊಂದಿ, ಬಿಜೆಪಿಯ ಮೇಲೂ ಒತ್ತಡ ತರಬಹುದಲ್ಲ? ಹೈದರಾಬಾದ್ ನಲ್ಲಿ ರೋಹಿತ್ ಸಾವನ್ನು ನಗದಾಗಿಸಿಕೊಳ್ಳುವಲ್ಲಿನ ಉತ್ಸಾಹ ಸ್ವಂತ ಕ್ಷೇತ್ರದ ಕಾಳಜಿಗಿರದಿದ್ದರೆ ಹೇಗೆ?

Leave a Reply