ಕೊಡುವವರನ್ನೂ, ಸ್ವೀಕರಿಸಿದವರನ್ನೂ ಕಟಕಟೆಯಲ್ಲಿ ನಿಲ್ಲಿಸುವ ಸರ್ಕಾರಿ ಪುರಸ್ಕಾರಗಳು ನಿಜಕ್ಕೂ ಬೇಕೇ?

author-geethaಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗಳು ಪ್ರಕಟಗೊಂಡಿವೆ.

ಯಾವ ರಾಜ್ಯಕ್ಕೆ ಎಷ್ಟು? ಮಹಿಳೆಯರಿಗೆ ಪ್ರಾತಿನಿಧ್ಯ ಕೊಟ್ಟಿದ್ದಾರೆಯೇ? ವಿಜ್ಞಾನಿಗಳಿಗೆ? ಸಾಹಿತಿಗಳಿಗೆ? ಕ್ರೀಡಾ ಜಗತ್ತಿನಲ್ಲಿ ಎಷ್ಟು ಮಂದಿಗೆ ಪ್ರಶಸ್ತಿ ಬಂದಿದೆ? ಮೀಡಿಯಾದಲ್ಲಿ ಕೆಲಸ ಮಾಡುವುವವರಿಗೆ ಎಷ್ಟು? ಅದರಲ್ಲಿ ಪ್ರಿಂಟ್ ಮೀಡಿಯಾಗಿಂತ ಈ ವಿಷುಯಲ್ ಮೀಡಿಯಾ ಹೆಚ್ಚು ಪ್ರಭಾವಶಾಲಿ, ಹಾಗಾಗಿ ಅಲ್ಲಿ ಕೆಲಸ ಮಾಡುವವರಿಗೆ ಪ್ರಶಸ್ತಿಗಳನ್ನು ಕೊಡಬೇಕು. ಸಿನಿಮಾ ಜಗತ್ತು!.. ಬಿಡುವ ಹಾಗೇ ಇಲ್ಲ.. ನಾಲ್ಕೈದಾದರು ಕೊಡಬೇಕು. ಬಾಲಿವುಡ್ ಖ್ಯಾತ ನಟ-ನಟಿಯರಿಗೆ ಕೊಡದಿದ್ದರೆ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಕಳೆಯೇ ಇರುವುದಿಲ್ಲ. ರಾಜಕೀಯದಲ್ಲಿ ಇರುವವರಿಗೆ ಕೊಡಲಾಗುವುದಿಲ್ಲ, ಆದರೆ ಬಿಡುವುದು ಹೇಗೆ? ಸಾಮಾಜಿಕ ಸೇವೆ ಎಂಬ ಛೇದದಡಿ ಅವರಿಗೂ ಪ್ರಶಸ್ತಿ.

ರಾಜ್ಯ ಸರ್ಕಾರಗಳು ಹೆಸರುಗಳನ್ನು ಶಿಫಾರಸ್ಸು ಮಾಡಬೇಕು. ಕೇಂದ್ರ ಸರ್ಕಾರ ರಚಿಸುವ ಕಮಿಟಿ ಕೂತು ಚರ್ಚೆ ಮಾಡಿ ಯಾರು ಯಾರಿಗೆ ಯಾವ ಯಾವ ಪ್ರಶಸ್ತಿ ಕೊಡಬೇಕು ಎಂದು ನಿರ್ಧರಿಸಿ, ಪಿಎಂಓ ಗೆ ಪಟ್ಟಿ ಕಳಿಸಿ, ಒಪ್ಪಿಗೆ ಪಡೆದು ಪ್ರಕಟಿಸುತ್ತದೆ.

ಅವರಿಗೆ ಕೊಟ್ಟಿದ್ದು ಯಾಕೆ?  ಇವರಿಗೆ ಕೊಡಲಿಲ್ಲವೇಕೆ?, ಪದ್ಮಶ್ರೀ ಕಡಿಮೆಯಾಯಿತು ಪದ್ಮಭೂಷಣವಾದರೂ ಕೊಡಬೇಕಿತ್ತು, ಮಹಿಳೆಯರ ಪ್ರಾತಿನಿಧ್ಯವಿಲ್ಲ, ನಮ್ಮ ರಾಜ್ಯಕ್ಕೆ ಸಾಕಷ್ಟು ಕೊಟ್ಟಿಲ್ಲ.. ಸಿನಿಮಾರಂಗ ಅಂದರೆ ಬಾಲಿವುಡ್ ಮಾತ್ರವೇ?..  ಇವರ್ಯಾರಿಗೊ ಸಮಾಜ ಸೇವೆ ಮಾಡಿದ್ದಾರೆ ಎಂದು ಪ್ರಶಸ್ತಿ ಕೊಟ್ಟಿದ್ದಾರೆ.. ಯಾವ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂಬುದೇ ಗೊತ್ತಿಲ್ಲವಲ್ಲ.. ಹೀಗೇ ವ್ಯಂಗ್ಯ ಟೀಕೆ ಟಿಪ್ಪಣಿ ಪ್ರಶಸ್ತಿ ಪ್ರಕಟಿಸಿದ ಹಿನ್ನೆಲೆಯಲ್ಲಿ ವ್ಯಕ್ತವಾಗುವುದು ಮಾಮೂಲು. ಮರೆತಿದ್ದೆ ಯಾವ ಜಾತಿಗೆ ಎಷ್ಟು?.. OBC, SC, ST, ಮುಸ್ಲಿಮರು.. ಅವರನ್ನೆಲ್ಲಾ ಪರಿಗಣಿಸಿದ್ದಾರೆಯೆ?..

ಮುಗಿಯುವುದೇ ಇಲ್ಲ.. ಪ್ರಜಾತಂತ್ರದಲ್ಲಿ, ವಾಕ್ ಸ್ವಾತಂತ್ರ್ಯ ಇರುವ ನಮ್ಮ ನಾಡಿನಲ್ಲಿ ಮುಗಿಯಬಾರದು ಕೂಡ. ಐದು ವರ್ಷಗಳ ಹಿಂದಷ್ಟೇ, ‘ಈ ಪ್ರಶಸ್ತಿಗಳು ರಾಜಕೀಯ ದುರುದ್ದೇಶದಿಂದ ಕೂಡಿದೆ.. ಪ್ರಶಸ್ತಿಗಳಿಗೆ ಬೆಲೆಯೇ ಇಲ್ಲ.. ಪ್ರಶಸ್ತಿ ಪಡೆದವರು ಆಡಳಿತ ಪಕ್ಷದ ಮುಖವಾಣಿಗಳು, ಛೇಲಾಗಳು’..  ಎಂದು ಹೇಳಿದ ಖ್ಯಾತನಾಮರೊಬ್ಬರು ಈ ವರ್ಷ ಅವರಿಗೆ ಪ್ರಶಸ್ತಿ ಬಂದ ತಕ್ಷಣ, ‘ಇದು ನನ್ನ ಜೀವನದ ಅತ್ಯಮೂಲ್ಯ ಪ್ರಶಸ್ತಿ.. ನಾನೇ ಧನ್ಯ.. ನನ್ನ ಸೇವೆಗೆ ದೊರೆತ ಪ್ರತಿಫಲ’ ಎಂದು ಧನ್ಯತಾಭಾವ ವ್ಯಕ್ಯ ಪಡಿಸಿದ್ದಾರೆ.

‘ಪ್ರಶಸ್ತಿ ಬರಲಿಲ್ಲ.. ಬಂದಿದ್ದರೆ ತಿರಸ್ಕರಿಸಬಹುದಿತ್ತು.. ಇನ್ನೆಂಟು ತಿಂಗಳು ಬಿಟ್ಟು ಹಿಂತಿರುಗಿಸಬಹುದಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು ಒಂದು ವರ್ಗಕ್ಕೆ ಸೇರಿದ ಸಾಹಿತಿಯೊಬ್ಬರು.

‘ಆ ಪಕ್ಷಕ್ಕೆ ಆ ಉದ್ಯಮಿಯಿಂದ ಕೋಟಿ ಕೋಟಿ ರೂಪಾಯಿಗಳು ಸಂದಿವೆ. ಹಾಗಾಗಿ ಅವರ ತಂದೆಗೆ ಈಗ ಪ್ರಶಸ್ತಿ.’  ಎಂದು ಮತ್ತೊಬ್ಬರು.

ಇದೆಲ್ಲಾ ನೋಡಿ, ಕೇಳಿ, ಓದಿ ತಲೆ ಚಿಟ್ಟುಕಟ್ಟಿ ಹೋಗಿದೆ. ನಮ್ಮ ತೆರಿಗೆ ಹಣದಿಂದ ಕೊಡ ಮಾಡುವ ಈ ಪ್ರಶಸ್ತಿಗಳು ಬೇಕೇ? ಕೊಡಬೇಕೇ? ತೆಗೆದು ಕೊಳ್ಳಬೇಕೆ? ನಿಲ್ಲಿಸಬಾರದೇಕೆ?

ಸರ್ಕಾರ ಕೊಡುವ ಈ ಪ್ರಶಸ್ತಿಗಳು ರಾಜಕೀಯ ಪ್ರೇರಿತವಾಗಿದ್ದರೇ… ತೆಗೆದುಕೊಂಡವರಿಗೂ (if he/she is most deserving) ಅವಮಾನವಲ್ಲವೇ ? ಪ್ರಶಸ್ತಿಗಳಿಗೆ ನಿಜವಾಗಿ ಅರ್ಹರಾಗಿದ್ದವರೂ ಕಣ್ಣು ಕಣ್ಣು ಬಿಡಬೇಕು.. ನಾವ್ಯಾರ ಕೈಕಾಲು ಕಟ್ಟಲಿಲ್ಲ ಎಂದು ಹೇಳಿಕೊಳ್ಳಬೇಕು.. ನೋಡುವ ನನ್ನಂಥ ಸಾಮಾನ್ಯರು ‘ಅವರು ಹೀಗೇ ಎಂದು ಗೊತ್ತಿರಲಿಲ್ಲ.. ಅವರು ಆ ಪಕ್ಷದ ಹಿತೈಷಿಗಳು.. ಇಲ್ಲದಿದ್ದರೆ ಪ್ರಶಸ್ತಿ ಹೇಗೆ ಬರುತ್ತಿತ್ತು’ ಎಂದು ಮಾತಾಡಿ ಅವರ ಮುಖಕ್ಕೆ ಒಂದು ಪಕ್ಷದ, ಒಂದು ನೀತಿಯ ರಂಗು ಬಳಿಯುತ್ತೇವೆ.

ಹಿಂದೆ ರಾಜಮಹಾರಾಜರ ಕಾಲದಲ್ಲಿ ಪ್ರಶಸ್ತಿಗಳು, ಬಿರುದು, ಬಾವುಲಿಗಳನ್ನು ರಾಜರು, ಚಕ್ರವರ್ತಿಗಳು ಕೊಡುತ್ತಿದ್ದರು. ರಾಜನನ್ನು ಸ್ತುತಿಸಿ ಬರೆದರೆ ಇಷ್ಟು ಲಕ್ಷ ವರಹಗಳು, ಬಿರುದುಗಳನ್ನು ಕೊಟ್ಟು ಸನ್ಮಾನಿಸುತ್ತಿದ್ದರು.

ಇಂಗ್ಲಿಷರು ಆಳಲು ಶುರುಮಾಡಿದಾಗ Knighthood, Sir ಎಂಬ ಬಿರುದು, ಮನೆ, ಜಮೀನು ಇತ್ಯಾದಿಗಳನ್ನು ಅವರು ವಿಕ್ಟೋರಿಯ ರಾಣಿಯ ಹೆಸರಿನಲ್ಲಿ ಕೊಟ್ಟರು.

ನಮ್ಮ ರಾಷ್ಟ್ರಗೀತೆ ಕೂಡ ಇಂಗ್ಲೆಂಡಿನ ಸಾರ್ವಭೌಮನಿಗೆ ನಮನ ಪೂರಕವಾಗಿ ಬರೆದ ಗೀತೆ ಎಂದು ಕೂಡ ಹೇಳುವವರಿದ್ದಾರೆ.

ಈಗ ಸ್ವಾತಂತ್ರ್ಯ ಪಡೆದು, ಗಣರಾಜ್ಯವಾಗಿ ಪ್ರಜಾತಂತ್ರ ವ್ಯವಸ್ಥೆಯನ್ನು ತನ್ನದಾಗಿಸಿಕೊಂಡಿರುವ ನಮ್ಮ ದೇಶದಲ್ಲಿ ಈ ಪ್ರಶಸ್ತಿಗಳನ್ನು ಅಧಿಕಾರರೂಢ ಸರ್ಕಾರ ಕೊಡುವುದನ್ನು ನಿಲ್ಲಿಸಬಾರದೇಕೆ? ಜನರಿಂದ ಆರಿಸಲ್ಪಟ್ಟ ಸರ್ಕಾರ, ಆ ಸರ್ಕಾರದಿಂದ ನೇಮಿಸಲ್ಪಟ್ಟ ಸಮಿತಿ.. ಹಾಗಾಗಿ ಆ ಸಮಿತಿ ಆರಿಸಿ ವಿತರಿಸುವ ಪ್ರಶಸ್ತಿ ಜನಪ್ರಶಸ್ತಿ ಎಂದು ನಿರ್ಧರಿಸಬೇಕೆ? ಪ್ರಶಸ್ತಿ ಕೊಟ್ಟವರಿಗೆ, ಪ್ರಶಸ್ತಿ ಪಡೆದವರಿಗೆ.. ಇಬ್ಬರಿಗೂ ಗೌರವ ತರದ ಈ ಪ್ರಶಸ್ತಿಗಳನ್ನು ನಿಲ್ಲಿಸಬಾರದೇಕೆ?

ಪ್ರಶಸ್ತಿಗಳು ಗೌರವವನ್ನು ತಂದುಕೊಡಬೇಕು. ಅದು ಆಗುತ್ತಿಲ್ಲ. ಈ ವರ್ಷವೆಂದಲ್ಲ, ಈ ಪಕ್ಷವೆಂದಲ್ಲ. ಪ್ರತೀ ಭಾರಿಯೂ ಇದೇ ಕಥೆ ಅರ್ಹರಾಗಿ ಪ್ರಶಸ್ತಿ ಪಡೆದುಕೊಂಡವರಿಗೆ ಮುಜುಗುರ.. ಅಥವಾ ಆಪಾದಿಸಿದಂತೆ ಅದನ್ನು ಕೊಂಡುಕೊಂಡಿದ್ದರೆ ಅಥವಾ ಬಾಲಹಿಡಿದು ಪಡೆದುಕೊಂಡಿದ್ದರೆ ಆ ಪ್ರಶಸ್ತಿಗಳಿಗೆ ಬೆಲೆಯಿಲ್ಲ.

ಬೆಲೆಯಿಲ್ಲದ್ದು ಬೇಕಿಲ್ಲ. ಪದ್ಮ ಪ್ರಶಸ್ತಿಗಳು ಅನ್ನುವುದರ ಬದಲು ಸೂರ್ಯಕಾಂತಿ ಪ್ರಶಸ್ತಿ ಅನ್ನಲಿ.  ಸೂರ್ಯ ಇದ್ದೆಡೆಗೆ ತಿರುಗುವ ಸೂರ್ಯಕಾಂತಿ ಹೂವಿನಂತೆ ಅಧಿಕಾರರೂಢ ಪಕ್ಷದೆಡೆಗೆ ತಿರುಗಿ ಪ್ರಶಸ್ತಿ ಪಡೆಯುವುದರಿಂದ ಪ್ರಶಸ್ತಿಯ ಹೆಸರು ಬದಲಿಸುವುದು ಒಳಿತು. ಮುಂದೆ ಅದನ್ನು ಒಂದು ಅಸ್ತ್ರದಂತೆ ಹಿಂತಿರುಗಿಸುತ್ತಾರೆ ಅಂದರೆ ಆ ಪ್ರಶಸ್ತಿಗೆ ಅವರು ಅರ್ಹರಾಗಿರಲಿಲ್ಲವೇನೋ ಎಂಬ ಅನುಮಾನ ಸಹಜ.

ನಾನು ರಚಿಸಿದ ಕೃತಿ ಉತ್ತಮವಾಗಿತ್ತು ಎಂದು ಕೊಟ್ಟ ಪ್ರಶಸ್ತಿ ಆ ಕೃತಿ ವಿಚಾರಕಷ್ಟೇ ಸೀಮಿತ. ಆದನ್ನು ಇನ್ಯಾವುದನ್ನೊ ವಿರೋಧಿಸಲು ಬಳಸಿಕೊಳ್ಳಬಾರದಷ್ಟೇ.

ಈ ಪ್ರಶಸ್ತಿಗಳು ಜನಸಾಮಾನ್ಯರ ಒಲವು, ಪ್ರೀತಿ, ಗೌರವವನ್ನು ಕಳೆದುಕೊಂಡಿದೆ. ಜನರ ಮತದಿಂದ ಪ್ರಶಸ್ತಿ ಕೊಡುವಂತ ಹೊಸ ಮಾದರಿಯನ್ನು ನಾವು ರೂಪಿಸಬೇಕಾಗಿದೆ ಅಥವಾ ಸುಮ್ಮನೆ ಇರಬೇಕು.

Leave a Reply