ದಿಲ್ಲಿಯಲ್ಲಿ ಸಿದ್ದರಾಮಯ್ಯ ತಲೆ ಕಾಯುತ್ತಿದ್ದ ಹರಿಪ್ರಸಾದ್ ಈಗ ವಿಮುಖ ಆಗಿರುವುದಾದರೂ ಏಕೆ..?

ಡಿಜಿಟಲ್ ಕನ್ನಡ ವಿಶೇಷ

ಮಹಾಭಾರತದಲ್ಲಿ ಶ್ರೀಕೃಷ್ಣ ಸದಾ ಅರ್ಜುನನ ತಲೆ ಕಾಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕದಿಂದ ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಸುತ್ತಿರುವ ಬಿ.ಕೆ. ಹರಿಪ್ರಸಾದ್ ರಕ್ಷಣಾ ಗೋಡೆಯಾಗಿದ್ದರು. ಆದರೆ ಇತ್ತೀಚೆಗೆ ಇವರಿಬ್ಬರ ಸಂಬಂಧ ಹಳಸಿ ಹೋಗಿರುವುದೇ ಹೆಬ್ಬಾಳ ಅಭ್ಯರ್ಥಿ ಆಯ್ಕೆ ಸಂಬಂಧ ಸಿದ್ದರಾಮಯ್ಯ ಮುಖಭಂಗ ಕಾರಣಗಳಲ್ಲಿ ಪ್ರಮುಖವಾಗಿದೆ.

ನಿಜ, ಸಿದ್ದರಾಮಯ್ಯನವರು ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಬಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆದಾಗಿನಿಂದಲೂ ಪಕ್ಷದೊಳಗೇ ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸಿಗರು ಎಂಬ ವಿಭಜನೆ ಢಾಳಾಗಿ ವಿಜೃಂಭಿಸುತ್ತಿತ್ತು. ಕಳೆದ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ನೇತೃತ್ವ, ಸಂಪುಟ ರಚನೆ-ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ – ಹೀಗೆ ಪ್ರತಿ ಸಂದರ್ಭದ ಸಿದ್ದರಾಮಯ್ಯನವರ ಪ್ರತಿ ನಡೆಯಲ್ಲೂ ಮೂಲ ಕಾಂಗ್ರೆಸ್ಸಿಗರು ಹುಳುಕುಗಳನ್ನು ಹುಡುಕುತ್ತಿದ್ದರು, ಹೆಕ್ಕಿ ತೋರಿಸುತ್ತಿದ್ದರು.

ಅಧಿಕಾರ ಹಂಚಿಕೆಯ ಪ್ರತಿ ಹಂತದಲ್ಲೂ ಸಿದ್ದರಾಮಯ್ಯನವರು ಜನತಾ ಪರಿವಾರದಿಂದ ವಲಸೆ ಬಂದಿರುವವರಿಗೆ ಮಣೆ ಹಾಕುತ್ತಿದ್ದಾರೆ. ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತಿದ್ದಾರೆ. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಸಮುದಾಯಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಮೇಲ್ವರ್ಗದವರನ್ನು ತುಚ್ಛವಾಗಿ ಕಾಣುತ್ತಿದ್ದಾರೆ ಎಂಬ ಕೂಗು ಪಕ್ಷದೊಳಗೆ ಪದೇ ಪದೇ ಕೇಳಿಬರುತ್ತಿತ್ತು. ಕೆಲವು ಹಿರಿಯ ನಾಯಕರು ಈ ಬಗ್ಗೆ ಸೋನಿಯಾ ಗಾಂಧಿ ಸೇರಿದಂತೆ ಪಕ್ಷ ವರಿಷ್ಠರ ಬಳಿ ದೂರು ಕೊಂಡೊಯ್ದಿದ್ದರು. ಆಗೆಲ್ಲ ವರಿಷ್ಠ ಮಟ್ಟದಲ್ಲಿ ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಆಡಿದವರು, ಅವರ ತಲೆ ಕಾಯ್ದವರು ಇದೇ ಹರಿಪ್ರಸಾದ್.

ಹಿಂದುಳಿದ ವರ್ಗಕ್ಕೆ ಸೇರಿದ ಹರಿಪ್ರಸಾದ್ ಕೂಡ ಒಂದು ಕಾಲದಲ್ಲಿ ಪಕ್ಷದೊಳಗೆ ಮೇಲ್ವರ್ಗದವರಿಂದ ಶೋಷಿತರಾದವರೇ. ಕರ್ನಾಟಕ ರಾಜಕೀಯದಲ್ಲಿ ತಲೆ ಎತ್ತಲು ಅವಕಾಶ ಮಾಡಿಕೊಡದೇ, ದಿಲ್ಲಿಯಲ್ಲೇ ಅವರನ್ನು ಕಟ್ಟಿಹಾಕಿದ್ದರು. ಆದರೆ ಈ ಸವಾಲನ್ನು ಹರಿಪ್ರಸಾದ್ ದಿಲ್ಲಿ ಮಟ್ಟದಲ್ಲಿ ತಮ್ಮ ಶಕ್ತಿವರ್ಧನೆಗೆ, ಅಲ್ಲಿನ ನಾಯಕರಾಗಲು ಬಳಸಿಕೊಂಡರು. ಒಂದು ಮಟ್ಟಿಗೆ ಪ್ರಭಾವ ಬೀರುವ ಹಂತಕ್ಕೂ ಬೆಳೆದರು. ಇಂಥ ಸಂದರ್ಭದಲ್ಲೇ ‘ಆಹಿಂದ’ ಝಂಡಾ ಹಿಡಿದಿದ್ದ ಸಿದ್ದರಾಮಯ್ಯನವರನ್ನು ಪಕ್ಷಕ್ಕೆ ಕರೆತರುವ ಮಾಜಿ ಸಂಸದ ಎಚ್.ವಿಶ್ವನಾಥ್, ಮಾಜಿ ಸಚಿವ ಎಚ್.ಎಂ. ರೇವಣ್ಣ ಯತ್ನಕ್ಕೆ ನೀರೆರದರು, ಬಂದ ನಂತರ ಪೋಷಿಸಿದರು. ಆಗೆಲ್ಲ ಕಾಂಗ್ರೆಸ್ ನಾಯಕರಾಗಿ ಸಿದ್ದರಾಮಯ್ಯ ಬೆಳವಣಿಗೆಯಲ್ಲಿ ವಿಶ್ವನಾಥ್, ರೇವಣ್ಣನವರ ಜಾತಿಪ್ರೇಮ ಕೆಲಸ ಮಾಡಿದ್ದರೆ, ಹರಿಪ್ರಸಾದ್ ಅವರಿಗೆ ‘ಅಹಿಂದ’ ವಾದ ಪ್ರೇರಣೆಯಾಗಿತ್ತು. ಹೀಗಾಗಿ ರಾಜ್ಯದ ಮುಖಂಡರು ಸಿದ್ದರಾಮಯ್ಯ ವಿರುದ್ಧ ದಿಲ್ಲಿಗೆ ತಂದ ದೂರುಗಳು ವರಿಷ್ಠರ ಈ ಕಿವಿ ತೂರಿ ಆ ಕಿವಿಯಿಂದ ಹೊರಹೋಗುವಂತೆ ನೋಡಿಕೊಳ್ಳುತ್ತಿದ್ದರು. ಅದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಇರಲಿ, ಲೋಕಸಭೆಯಲ್ಲಿ ಪಕ್ಷನಾಯಕ ಮಲ್ಲಿಕಾರ್ಜುವ ಖರ್ಗೆ ಅವರಿರಲಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇರಲಿ, ಎಂ.ವಿ. ರಾಜಶೇಖರನ್ ಇರಲಿ ಯಾರೇ ಅಸ್ತ್ರ ಪ್ರಯೋಗಿಸಿದರೂ ಹರಿಪ್ರಸಾದ್ ಅಲ್ಲಿ ಗುರಾಣಿಯಾಗಿರುತ್ತಿದ್ದರು.

ಆದರೆ ಅಧಿಕಾರ ಹಿಡಿದ ನಂತರ ಸಿದ್ದರಾಮಯ್ಯನವರ ಸುತ್ತ ಕೋಟೆ ಕಟ್ಟಿದ ಅವರ ಆಪ್ತರು, ಅದರಲ್ಲೂ ವಿಶೇಷವಾಗಿ ಜನತಾ ಪರಿವಾರ ಮೂಲದವರು ಆ ಕೋಟೆಯೊಳಗೇ ಬೇರೆಯವರನ್ನು ಬಿಡಗೊಡಲಿಲ್ಲ. ಪಕ್ಷಕ್ಕೆ ಕರೆತಂದ ವಿಶ್ವನಾಥ್, ರೇವಣ್ಣ ಅವರಂಥವರಿಗೂ ಸಿದ್ದರಾಮಯ್ಯನವರು ‘ದುಬಾರಿ’ ಎನಿಸಿಬಿಟ್ಟರು. ಅದು ಅವರಿಬ್ಬರ ಮುನಿಸಿಗೂ ಕಾರಣವಾಗಿತ್ತು.

ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯನವರು ತಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ, ಅನರ್ಹರಿಗೆ, ಭಟ್ಟಂಗಿಗಳಿಗೆ ಆದ್ಯತೆ ಕೊಟ್ಟಿದ್ದಾರೆ, ಪಕ್ಷ ನಿಷ್ಠರು ನಿಕೃಷ್ಟರಾಗಿದ್ದಾರೆ ಎಂದು ಹರಿಪ್ರಸಾದ್ ಅವರಿಗೂ ಅನಿಸಲು ಶುರುವಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಹರಿಪ್ರಸಾದ್ ಹೇಳಿದವರಿಗೆಲ್ಲ ಟಿಕೆಟ್ ಕೊಡಲಿಲ್ಲ. ವಿಧಾನ ಪರಿಷತ್ ಚುನಾವಣೆ, ನಿಗಮ-ಮಂಡಳಿಗಳ ನೇಮಕದಲ್ಲೂ ಅವರ ಮಾತಿಗೆ ಕಿಮ್ಮತ್ತು ಸಿಗಲಿಲ್ಲ. ಇದು ಅವರಿಗೆ ಕೋಪ, ಹತಾಶೆ, ಪಶ್ಚಾತ್ತಾಪ ಒಟ್ಟೊಟ್ಟಿಗೆ ತಂತು. ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಂತೂ ಸಿಎಂ ವಿರುದ್ಧವಾಗಿಯೇ ಬಹಿರಂಗ ಹೇಳಿಕೆ ಕೊಟ್ಟುಬಿಟ್ಟರು. ಅಷ್ಟರ ಮಟ್ಟಿಗೆ ಅವರು ರೋಸಿ ಹೋಗಿದ್ದರು.

ಈ ಮಧ್ಯೆ ಬಂದ ಮೂರು ವಿಧಾನಸಭೆ ಕ್ಷೇತ್ರಗಳ ಮರುಚುನಾವಣೆ ಪೈಕಿ ಹೆಬ್ಬಾಳ ಅಭ್ಯರ್ಥಿ ಆಯ್ಕೆಯಲ್ಲಿ ಸಿಎಂ ಪ್ರತಿಷ್ಠೆ ಪಣಕ್ಕೆ ಬಿತ್ತು. ಒಂದು ಕಡೆ ಎಚ್.ಎಂ. ರೇವಣ್ಣ, ಮತ್ತೊಂದು ಕಡೆ ಹಿರಿಯ ನಾಯಕ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್. ಆದರೆ ಹೈಕಮಾಂಡ್ ಅಂತಿಮಗೊಳಿಸುವ ಮೊದಲೇ ಭೈರತಿ ಸುರೇಶ್ ಅಭ್ಯರ್ಥಿ ಎಂದು ಸಿಎಂ ಘೋಷಣೆ ಮಾಡಿಬಿಟ್ಟಿದ್ದರು. ಇದನ್ನೇ ಅವರಿಗೆ ಪಾಠ ಕಲಿಸಲು ದಾಳ ಮಾಡಿಕೊಂಡ ಖರ್ಗೆ, ಷರೀಫ್, ಆಸ್ಕರ್, ಕೃಷ್ಣ, ಮೊಯಿಲಿ ಜತೆ ಹರಿಪ್ರಸಾದ್ ಕೂಡ ಕೈ ಜೋಡಿಸಿದರು. ಅವರು ಈ ಬಾರಿ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲಬಾರದು, ಸಣ್ಣ ಪ್ರಯತ್ನ ಕೂಡ ಮಾಡಬಾರದು ಎಂದು ತೀರ್ಮಾನಿಸಿಬಿಟ್ಟರು. ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಪರ ಮಾತಾಡಲು ಒಬ್ಬ ನಾಯಕನೂ ಇಲ್ಲದ ಕಾರಣ ಭೈರತಿ ಸುರೇಶ್ ಅಭ್ಯರ್ಥಿ ಆಸೆ ಕನಸಾಗಿಯೇ ಉಳಿದಿದೆ. ಸಿದ್ದರಾಮಯ್ಯನವರ ಮುಖ ಕಪ್ಪಿಟ್ಟಿದೆ.

ಇಷ್ಟವಾಗ್ತಿದೆಯೇ ಸುದ್ದಿಯ ಸೀಳುನೋಟ? ಹಾಗಾದ್ರೆ ಈ ಕೆಂಪುಸಾಲು ಕ್ಲಿಕ್ಕಿಸಿ, ಡಿಜಿಟಲ್ ಕನ್ನಡ ಆ್ಯಪ್ ಡೌನ್ಲೋಡ್ ಮಾಡ್ಕೋಳಿ.

Leave a Reply