ಬೇಕೇ ಬೇಕು ಸ್ತ್ರೀ ಸಮಾನತೆ; ಶಬರಿಮಲೈ, ಶನಿ ಸಿಂಗಣಾಪುರಗಳಲ್ಲಿ ಮಾತ್ರವಲ್ಲ.. ಹಾಜಿ ಅಲಿ ದರ್ಗಾದ ಒಳಮನೆಯಲ್ಲೂ..!

ಪ್ರವೀಣ್ ಕುಮಾರ್

ಮಹಿಳೆಯರ ಪ್ರವೇಶ ನಿರ್ಬಂಧದ ಸಂಬಂಧ ಶಬರಿಮಲೈ ದೇವಸ್ಥಾನ ಸುದ್ದಿಯಾದ ಬೆನ್ನಲ್ಲೇ, ಮಹಾರಾಷ್ಟ್ರದ ಶನಿ ಸಿಂಗಣಾಪುರವೂ ಸುದ್ದಿಯಲ್ಲಿದೆ.

ಶನಿ ಸಿಂಗಣಾಪುರದ ಗರ್ಭಗುಡಿಯನ್ನು ಮಹಿಳೆಯರು ಪ್ರವೇಶಿಸುವಂತಿಲ್ಲ ಎಂಬುದು ಅಲ್ಲಿ ಪಾಲನೆಯಾಗುತ್ತಿರುವ ಸಂಪ್ರದಾಯ. ಗಣರಾಜ್ಯೋತ್ಸವ ದಿನದಂದು ರಣರಾಗಿಣಿ ಭೂಮಾತಾ ಬ್ರಿಗೇಡ್ ನ 500 ಮಹಿಳಾ ಕಾರ್ಯಕರ್ತರು, ಸಿಂಗಣಾಪುರದಿಂದ 70 ಕಿ.ಮೀ ದೂರದ ಹಳ್ಳಿಯಿಂದ ಪ್ರಯಾಣ ಆರಂಭಿಸಿ ಸಿಂಗಣಾಪುರ ದೇಗುಲ ಪ್ರವೇಶಕ್ಕೆ ಯತ್ನಿಸಿದರು. 17 ಕಿ. ಮೀ. ದೂರದಲ್ಲೇ ಅವರನ್ನು ಪೊಲೀಸರು ಪ್ರತಿಬಂಧಿಸಿದರು. ‘ನಾವು ದೇಗುಲದೊಳಗೆ ಪ್ರವೇಶಿಸಲು ಇಚ್ಛಿಸಿದ್ದು ದೇವರನ್ನು ಪ್ರಾರ್ಥಿಸುವುದಕ್ಕೆ. ಇದು ಹೇಗೆ ನಿಯಮಬಾಹಿರವಾಗುತ್ತದೆ? ಲಿಂಗಾಧಾರಿತವಾಗಿ ತಾರತಮ್ಯ ಮಾಡಿ ಅಂತ ಯಾವ ಪವಿತ್ರ ಗ್ರಂಥ ಹೇಳಿದೆ?’ ಅನ್ನೋದು ಬ್ರಿಗೇಡ್ ನೇತೃತ್ವ ವಹಿಸಿರುವ ತೃಪ್ತಿ ದೇಸಾಯಿ ಸವಾಲು. ಯಾವುದೇ ದೇವಾಲಯದಲ್ಲಿ ಮಹಿಳೆಯರನ್ನು ಪ್ರತಿಬಂಧಿಸುವ ಕ್ರಮ ಕೊನೆಗೊಳ್ಳಬೇಕು, ದೇವರ ಕಣ್ಣಲ್ಲಿ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಪ್ರಾರ್ಥಿಸುವ ಹಕ್ಕು ಇದೆ ಅಂತ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಸಹ ಸಮರ್ಥಿಸಿದ್ದಾರೆ.

ಸಂಪ್ರದಾಯದ ಪರ ಇರುವವರು, ‘ಅಷ್ಟು ವರ್ಷಗಳಿಂದ ಬೆಳೆದುಬಂದ ನಂಬಿಕೆ- ಶ್ರದ್ಧೆ ಅರ್ಥಹೀನವೇ? ನಂಬಿಕೆ ವಿಚಾರದಲ್ಲಿ ಕಾನೂನನ್ನು ಎಳೆದು ತರಬೇಡಿ’ ಎನ್ನುತ್ತಾರೆ. ಆದರೆ, ಸಂಪ್ರದಾಯ ಎಂಬುದೂ ಆಯಾಯ ಕಾಲಕ್ಕೆ ಪರಿಷ್ಕರಣೆಯಾಗಬೇಕಿರುವ ಸಂಗತಿಯೇ ತಾನೇ? ಇವತ್ತಿನ ಕಾಲಘಟ್ಟದಲ್ಲಿ ದೇವಾಲಯಕ್ಕೆ ಮಹಿಳೆಯರನ್ನು ನಿರ್ಬಂಧಿಸುವುದು ಅರ್ಥಹೀನ ಸಂಗತಿ. ಇದು ಸಮಾನತೆ- ಸ್ವಾಭಿಮಾನದ ಪ್ರಶ್ನೆ. ಸಂವಿಧಾನ ನೀಡಿರುವ ಸಮಾನತೆ ಹಕ್ಕಿನ ಉಲ್ಲಂಘನೆ ಎನ್ನುವುದು ಆಧುನಿಕ ವಾದ.

ಖಂಡಿತ… ಇವತ್ತು ಪಾಲಿಸುವ ನಿಯಮಗಳು ಈಗಿನ ಕಾಲಘಟ್ಟಕ್ಕೆ, ಇವತ್ತಿನ ಸಂವಿಧಾನಕ್ಕೆ ಅನುಗುಣವಾಗಿರಬೇಕು.

ಆದರೆ…..

ಹೀಗೆ ನಂಬಿಕೆ- ಸಂಪ್ರದಾಯಗಳ ವಿಚಾರದಲ್ಲಿ ಕಾನೂನು ತನ್ನ ನಿರ್ದೇಶನ ನೀಡುವುದಕ್ಕೆ ಮುಂದಾಗುವುದಾದರೆ ಅಲ್ಲೂ ಸಮಾನತೆ ಇರಬೇಕಾಗುತ್ತದೆ. ಜಾತಿ- ಮತಗಳ ಪರಿಗಣನೆ ಇಲ್ಲದೇ ಎಲ್ಲ ಬಗೆಯ ನಿರ್ಬಂಧಗಳನ್ನೂ ಇವತ್ತಿನ ಸಮಾನತೆಯ ವ್ಯಾಖ್ಯೆಗೆ ಸರಿಹೊಂದುವಂತೆ ಸಡಿಲಿಸಬೇಕಾಗುತ್ತದೆ.

ಹಾಜಿ ಅಲಿ ದರ್ಗಾ, ಮುಂಬೈ… ಹೌದು. ಮುಂಬೈನ ಈ ಪ್ರಖ್ಯಾತ ದರ್ಗಾದ ಒಳಮನೆಗೆ ಮಹಿಳೆಯರಿಗೆ ನಿರ್ಬಂಧವಿದೆ. ಇದನ್ನು ವಿರೋಧಿಸಿ ದರ್ಗಾದ ಟ್ರಸ್ಟ್ ವಿರುದ್ಧ ಮುಸ್ಲಿಂ ಮಹಿಳೆಯರ ಗುಂಪು ಕಾನೂನು ಸಮರದಲ್ಲಿ ತೊಡಗಿಸಿಕೊಂಡಿದೆ. ಮತ ಬೇರೆ ಇರಬಹುದು, ಆದರೆ ಇಲ್ಲಿ ಕೇಳಿಬರುತ್ತಿರುವ ಪ್ರತಿರೋಧದ ವಾದವೂ ಶಬರಿಮಲೈ ವಿದ್ಯಮಾನದೊಂದಿಗೆ ಹೊಂದುವಂಥದ್ದೇ ಆಗಿದೆ. ಹಾಜಿ ಅಲಿ ದರ್ಗಾ ಎನ್ನುವುದು ಸೂಫಿ ಸಂತ ಪೀರ್ ಹಾಜಿ ಅಲಿ ಶಾ ಬುಖಾರಿ ಅವರ ಗೋರಿಯನ್ನು ಹೊಂದಿದೆ. ಹೀಗೆಲ್ಲ ಗೋರಿ ಹತ್ತಿರ ಮಹಿಳೆಯರನ್ನು ಬಿಟ್ಟುಕೊಳ್ಳುವುದು ಇಸ್ಲಾಮಿಗೆ ವಿರುದ್ಧ ಅಂತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು ಕೋಪಗೊಂಡಿದ್ದಾರೆ. ‘ದರ್ಗಾದ ಗರ್ಭಗುಡಿಗೆ ಮಹಿಳೆಯರ ಪ್ರವೇಶ ನಿರ್ಬಂಧವು ಅವರ ಹಿತಾಸಕ್ತಿಗೆ ಅನುಗುಣವಾಗಿಯೇ ಇದೆ. ಈ ಬಗ್ಗೆ ನಾವು ಟ್ರಸ್ಟಿಗಳೆಲ್ಲ ಸೇರಿ ಒಮ್ಮತದ ನಿರ್ಣಯಕ್ಕೆ ಬಂದಿದ್ದೇವೆ. ಸಂವಿಧಾನದ 26ನೇ ವಿಧಿ ಪ್ರಕಾರ ಧಾರ್ಮಿಕ ವಿಚಾರಗಳಲ್ಲಿ ತನ್ನದೇ ನಿರ್ಣಯ ಕೈಗೊಳ್ಳುವುದು ಟ್ರಸ್ಟ್ ನ ಮೂಲಭೂತ ಹಕ್ಕಾಗಿರುತ್ತದೆ. ಇದಕ್ಕೆ ಮೂರನೆಯವರ ಮಧ್ಯಪ್ರವೇಶ ಸಾಧುವಲ್ಲ’ ಅಂತ ಹೈಕೋರ್ಟ್ ಗೆ ತನ್ನ ಪ್ರತಿಕ್ರಿಯೆಯನ್ನು ದಾಖಲಿಸಿದೆ ಹಾಜಿ ಅಲಿ ದರ್ಗಾದ ಟ್ರಸ್ಟ್.

ಹೀಗಾಗಿ….

ಈಗ ಸಮಾನತೆ ಮತ್ತು ಸ್ವಾಭಿಮಾನದ ನೆಲೆಯಲ್ಲಿ ಎದ್ದಿರುವ ದೇಗುಲ ಪ್ರವೇಶದ ಒತ್ತಾಯ ಸ್ವಾಗತಾರ್ಹ- ಸಮರ್ಥನೀಯ. ಆದರೆ, ಸರ್ಕಾರವೋ- ಕಾನೂನು ವ್ಯವಸ್ಥೆಯೋ ಈಗಿರುವ ಸಂಪ್ರದಾಯಗಳನ್ನು ಸಮಾನತೆ ವ್ಯಾಖ್ಯೆಗೆ ಅನುಗುಣವಾಗಿ ಬದಲಾಯಿಸಲು ಮುಂದಾಗುವಾಗ, ಅಂಥ ಅನುಷ್ಠಾನಗಳು ಎಲ್ಲರಿಗೂ ಸಮಾನವಾಗಿರಬೇಕು. ಅದು ದೇವಾಲಯಕ್ಕೂ ಅನ್ವಯಿಸಬೇಕು, ದರ್ಗಾಕ್ಕೂ ಅನ್ವಯವಾಗಬೇಕು. ರಾಜಕೀಯ ಪಕ್ಷಗಳೂ ಈ ಬಗ್ಗೆ ಮಾತಾಡುವಾಗ ಒಂದು ಪ್ರಕರಣದಲ್ಲಿ ಸುಧಾರಣೆಯ ರಾಗ ಹಾಡಿ, ಇನ್ನೊಂದು ಮತದ ವಿಷಯದಲ್ಲಿ ‘ಅಲ್ಪಸಂಖ್ಯಾತರ ಭಾವನೆ’, ‘ಧಾರ್ಮಿಕ ಭಾವನೆ ಕೆರಳಿದರೆ ಶಾಂತಿ- ಸುವ್ಯವಸ್ಥೆ ಕೆಟ್ಟುಬಿಡುತ್ತದೆ’ ಎಂದೆಲ್ಲ ಬೇರೆಯದೇ ಧಾಟಿಯಲ್ಲಿ ಮಾತನಾಡಬಾರದು.

ಈ ಬಗ್ಗೆ ಗೀತಾ ಬಿ. ಯು. ದಾಖಲಿಸಿದ್ದ ಅಭಿಪ್ರಾಯವನ್ನೂ ಓದಿ.

ಇಷ್ಟವಾಗ್ತಿದೆಯೇ ಸುದ್ದಿಯ ಸೀಳುನೋಟ? ಹಾಗಾದ್ರೆ ಈ ಲಿಂಕಿನಲ್ಲಿ ಡಿಜಿಟಲ್ ಕನ್ನಡ ಆ್ಯಪ್ ಡೌನ್ಲೋಡ್ ಮಾಡ್ಕೋಳಿ.

1 COMMENT

  1. Great going ಡಿಜಿಟಲ್ ಕನ್ನಡ! On this article I want to say just one thing, ಸಮಾನತೆ ಅನ್ನೋದನ್ನ ಮೊದಲು ಗಂಡಸರು ಅವರವರ ಮನೆಯಿಂದ ಶುರುಮಾಡಿದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೆ?!! ಮೊದಲು ಮನೆಯಲ್ಲಿ ನಮ್ಮ ತಾಯಿಗೆ,ತಂಗಿಗೆ ಸಮಾನತೆ ಕೊಡೋಣ ಆಮೇಲೆ ಹೊರಗಿನವರ ಬಗ್ಗೆ ಯೋಚಿಸೋಣ ಅಲ್ಲವೇ? Article ಓದೋದಕ್ಕೆ ಚೆನ್ನಾಗಿದೆ.

Leave a Reply