ಪವನ್ ಕುಮಾರ್ ಹೊಸಚಿತ್ರ ಯೂಟರ್ನ್, ಒಂದಿನಿತೂ ಕತೆ ಬಿಟ್ಟುಕೊಡದೇ ಕುತೂಹಲ ಕೆದಕುತ್ತಿರುವ ಟ್ರೈಲರ್

ಡಿಜಿಟಲ್ ಕನ್ನಡ ಟೀಮ್

ಆ ಹುಡುಗಿ ಅಲ್ಯಾಕೆ ಹೋದ್ಲು… ಅದೇನ್ ಕೊಲೆ ಕಂಡ್ಲಾ? ಏನ್ಕತೆ.. ತಿಳಿಬೇಕಾದ್ರೇ ಥಿಯೇಟರ್ ಗೆ ಬರ್ಬೇಕಾಗುತ್ತೆ ಅಂತ ಆಹ್ವಾನಿಸುವ ರೀತಿಯಲ್ಲಿ ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್, ತಮ್ಮ ಹೊಸಚಿತ್ರ ಯೂಟರ್ನ್ ನ ಟ್ರೈಲರ್ ಅನ್ನು ಯೂಟ್ಯೂಬಿನ ತಮ್ಮ ಚಾನೆಲ್ ನಲ್ಲಿ ಬಿಟ್ಟಿದ್ದಾರೆ.

ಪವನ್ ಹೇಳಿಕೊಂಡಂತೆ ಇದೊಂದು ಮಿಸ್ಟರಿ ಥ್ರಿಲ್ಲರ್ ಕಥಾನಕ. ಹೀಗಾಗಿ ಕತೆಯನ್ನು ಹೆಚ್ಚೇನೂ ಬಿಟ್ಟುಕೊಡುವಂತಿಲ್ಲ. ನಾವು ಯಾವತ್ತೂ ನೋಡಿರಬಹುದಾದ ರಸ್ತೆ, ರೂಮು, ಮನೆಗಳನ್ನೇ ಚೆಂದದ ಫ್ರೇಮಿನಲ್ಲಿ ಕೂರಿಸುವ ಕಸುಬು ಪವನ್ ಅವರದ್ದು. ಟ್ರೈಲರ್ ನ ಫ್ಲೈ ಓವರ್, ಡೈನಿಂಗ್ ಟೇಬಲ್ ಮೇಲಿನ ಸೇಬು, ಕೋಣೆಯಲ್ಲಿ ಓಕುಳಿಯಾಗಿರುವ ಬಣ್ಣದ ಬೆಳಕು… ಇವೆಲ್ಲ ಸೀಮಿತ ಪರಿಸರವನ್ನೇ ಬಳಸಿಕೊಂಡು ಯೂಟರ್ನ್, ಸಿನಿಮ್ಯಾಟಿಕ್ ಅನುಭವ ಕಟ್ಟಿಕೊಡುವ ಪ್ರಯತ್ನದಲ್ಲಿದ್ದಂತೆ ಭಾವನೆ ಹುಟ್ಟಿಸುತ್ತಿದೆ. ಸತ್ಯ ಹೆಗಡೆ, ಅದ್ವೈತ ಗುರುಮೂರ್ತಿ, ಸಿದ್ಧಾರ್ಥ ನೂನಿ ಅವರ ಸಹಯೋಗವಿಲ್ಲಿದೆ.

ಲೂಸಿಯಾ ನಂತರ ಪವನ್ ಕುಮಾರ್ ಅವರನ್ನು ಆಸಕ್ತಿಯಿಂದ ಗಮನಿಸುತ್ತಿರುವ ವರ್ಗ ಸ್ವಲ್ಪ ವಿಭಿನ್ನವಾದದ್ದು. ಇಂಗ್ಲಿಷ್ ನ ಜನಪ್ರಿಯ ಚಿತ್ರಗಳನ್ನು ನೋಡಿ, ಈಥರದ್ದು ನಮ್ಮ ಕನ್ನಡದಲ್ಲೇಕಿಲ್ಲ ಎನ್ನುವ ಯುವ ವರ್ಗ. ಹೀಗಾಗಿ ಲೂಸಿಯಾ ಅರ್ಥವೇ ಆಗದ ಚಿತ್ರ ಎಂಬ ಧಾಟಿಯಲ್ಲೇ ಸಾಂಪ್ರದಾಯಿಕ ಮಾಧ್ಯಮದಲ್ಲಿ ಟೀಕೆಗಳೇ ಹೆಚ್ಚು ಪ್ರಕಟಗೊಂಡಿದ್ದವು. ಆದರೆ ಫೇಸ್ಬುಕ್ ನಂಥ ಸಾಮಾಜಿಕ ಮಾಧ್ಯಮದಲ್ಲಿ ಇಂಥ ಚಿತ್ರಗಳು ಬೇಕು ಬೇಕೆನ್ನುವವರ ಹವಾ ಜೋರಿದೆ.

ಈ ವರ್ಗದ ಆಡಿಯೆನ್ಸ್ ಗೆ ಸಿನಿಮಾದಿಂದ ಏನು ಸಿಗಲಿದೆ, ಅಲ್ಲಿ ನೋಡೋಕೇನಿದೆ ಎಂಬ ತಯಾರಿಗಳು ಮೊದಲೇ ತಲೆಗಿಳಿಯಬೇಕು. ಆಗಲೇ ಅವರು ಸಿನಿಮಾ ಚಿತ್ರಮಂದಿರಕ್ಕೆ ಬಂದಾಗ ತಮ್ಮ ವಾರಾಂತ್ಯದ ವೇಳೆಯನ್ನು ಎತ್ತಿಡುತ್ತಾರೆ. ಅದಿಲ್ಲವಾದರೆ ಅವರಿಗೆ ಸ್ಮಾರ್ಟ್ ಫೋನ್ ಒಳಗಿನ ಅಗಾಧ ಮನರಂಜನೆ, ಪ್ರವಾಸ ಸೇರಿದಂತೆ ಹಲವು ಯೋಜನೆಗಳು ಟೈಮ್ ತೆಗೆದುಕೊಂಡುಬಿಟ್ಟಿರುತ್ತವೆ. ಈ ನಾಜೂಕು ವರ್ಗಕ್ಕೆ ಇಷ್ಟವಾಗುವ ನೀಟ್ ನೆಸ್ ಯೂಟರ್ನ್ ನ ಟ್ರೈಲರ್ ನಲ್ಲಿದೆ ಅಂತ ನಿಚ್ಚಳವಾಗಿ ಹೇಳಬಹುದು.

Leave a Reply