ಬಲಿತ, ದಲಿತ, ಕಲಿತ ಎಂಬ ವಾದಗಳನ್ನೆಲ್ಲ ಬಿಡಿ, ಒಟ್ಟಾರೆ ಯುವ ಸಮುದಾಯವೇ ಹತಾಶೆಯಿಂದ ಸಾವಿಗೆ ಶರಣಾಗ್ತಿದೆ ನೋಡಿ!

ವೆಂಕಟರೆಡ್ಡಿ

ರೋಹಿತ್ ವೆಮುಲ ಆತ್ಮಹತ್ಯೆ ಪ್ರಾರಂಭದಲ್ಲಿ ದಲಿತರ ತಾರತಮ್ಯ- ಅದರಿಂದಾಗಿ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವಾದಗಳಿಗೆ ಇಂಬು ನೀಡಿತು. ಆದರೆ ಇವತ್ತಿಗೆ ಅನಾವರಣವಾಗಿರುವ ಸತ್ಯಗಳು ಬೇರೆಯವೇ ಆಗಿವೆ. ರೋಹಿತ್ ವೆಮುಲರಿಗೆ ಆ ಮಟ್ಟಿಗಿನ ಹತಾಶೆ ಕಾಡಿದ್ದು ತಮ್ಮ ಸ್ವಂತ ಸಂಗಾತಿಗಳಿಂದ ಆದ ಭ್ರಮ ನಿರಸನವೇ ಹೊರತು ಇತರರ ಶೋಷಣೆ ಅಲ್ಲ ಅಂತ ಅವರ ಆತ್ಮಹತ್ಯೆ ಪತ್ರವೇ ಸಾರಿದೆ. ಅವರ ತಂದೆ, ತಮ್ಮ ಮಗ ಹಿಂದುಳಿದ ವರ್ಗದವನೇ ವಿನಃ ದಲಿತ ಅಲ್ಲ ಹಾಗೂ ಎಲ್ಲರೂ ಆತನ ಸಾವನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದೂ ಆಗಿದೆ. ಆದರೂ ಇದನ್ನು ದಲಿತ ರಾಜಕಾರಣದ ವಿಷಯವಾಗಿಸುವ ಪ್ರಯತ್ನ ಮುಂದುವರಿದುಕೊಂಡಿದೆ.

ಅದಿರಲಿ, ವಾಸ್ತವ ಏನು ಗೊತ್ತೇ? ಜಾತಿ- ಮತಗಳ ಬೇಧವಿಲ್ಲದೇ ಒಂದಿಡೀ ಯುವ ಸಮೂಹ ಖಿನ್ನತೆ- ಹತಾಶೆಗಳಿಂದ ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದನ್ನು ಅಧ್ಯಯನ ವರದಿಗಳು ಸಾರಿ ಸಾರಿ ಹೇಳುತ್ತಿವೆ. ಆದರೆ ಇಲ್ಲೆಲ್ಲೂ ಜಾತಿ ರಾಜಕಾರಣದ ಪ್ರಚೋದನೆ- ಲಾಭಗಳ ಅವಕಾಶ ಇಲ್ಲವಾಗಿರೋದರಿಂದ ಯಾರಿಗೂ ಆ ಬಗ್ಗೆ ತಲೆಕೆಡಿಸಿಕೊಳ್ಳೋಕೆ ಪುರಸೊತ್ತು ಇದ್ದಂತಿಲ್ಲ.

ನಮ್ಮದು ಯುವಭಾರತ ಅಂತ ಹೆಮ್ಮೆಪಟ್ಟುಕೊಳ್ಳುತ್ತಿರುವ ನಾವೆಲ್ಲ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋದ 2014ರ ಅಂಕಿಅಂಶ ಹಾಗೂ ಲಾನ್ಸೆಟ್ ಮೆಡಿಕಲ್ ಜರ್ನಲ್ ವರದಿ ನೀಡುತ್ತಿರುವ ಚಿತ್ರಣವನ್ನುಗಮನಿಸಲೇಬೇಕು.

  • ಎನ್ ಸಿ ಬಿ ಆರ್ ವರದಿಯ ಪ್ರಕಾರ 2014ರ ಆತ್ಮಹತ್ಯೆಗಳ ಪ್ರಮಾಣದಲ್ಲಿ ಶೇ 41 ರಷ್ಟು ಜನ 14 ರಿಂದ 30 ವರ್ಷದ ಯುವಜನರೇ ಇದ್ದಾರೆ. ಇದನ್ನೂ ಒಳಗೊಂಡಂತೆ ಶೇ 74 ರಷ್ಟು ಮಂದಿ 14 ರಿಂದ 45 ವರ್ಷದವರು, ಶೇ 18 ರಷ್ಟು ಜನ 45 ರಿಂದ 60 ಮತ್ತು 60 ವರ್ಷಕ್ಕೂ ಮೇಲ್ಪಟ್ಟವರು ಶೇ 7.4 ರಷ್ಟು ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಒಟ್ಟಾರೆ ಸಾವಿನ ಪ್ರಮಾಣದಲ್ಲಿ ಆತ್ಮಹತ್ಯೆಯ ಪ್ರಮಾಣವೇ ಹೆಚ್ಚು. 2010 ರಿಂದ 2013 ರ ವರದಿಯಲ್ಲಿ ಶೇ 18 ರಷ್ಟು ಸಾವು ಆತ್ಮಹತ್ಯೆ ಪ್ರಕರಣಗಳಾದರೆ ಶೇ 13.7 ರಷ್ಟು ಸಾವು ವಾಹನ ಅಪಘಾತಗಳಿಂದ ಸಂಭವಿಸಿವೆ. ಇನ್ನುಳಿದ ಸಾವು ಅಪಘಾತದ ಗಾಯಗಳಿಗೆ ತುತ್ತಾಗಿ, ಮತ್ತೆ ಕೆಲವು ಹೃದಯ ಮತ್ತು ಅಜೀರ್ಣ ಸಂಬಂಧಿ ಕಾಯಿಲೆಗಳಿಂದ ಆಗಿವೆ. 15 ರಿಂದ 30 ವರ್ಷದ ವಯೋಮಾನದ ಮಹಿಳೆಯರ ಆತ್ಮಹತ್ಯೆ ಪ್ರಮಾಣ ಶೇ 22 ರಷ್ಪಿದ್ದರೆ, ಪುರುಷರ ಪ್ರಮಾಣ ಶೇ 15 ರಷ್ಟಿದೆ.

  • ಲಾನ್ಸೆಟ್ ಮೆಡಿಕಲ್ ಜರ್ನಲ್ ವರದಿಯಲ್ಲಿ ಆತ್ಮಹತ್ಯೆ ಪ್ರಮಾಣದಲ್ಲಿ 15 ರಿಂದ 29 ವರ್ಷದ ಯುವಕರ ಗುಂಪೇ ದೊಡ್ಡದು ಎಂದಿದೆ. ಈ ಗುಂಪಿನಲ್ಲಿ ದಕ್ಷಿಣ ಭಾರತದ ಯುವಕರೂ ಮುಂಚೂಣಿಯಲ್ಲಿದ್ದಾರೆ.
  • ವಿಶ್ವ ಆರೋಗ್ಯ ಸಂಸ್ಥೆಯ ವರದಿ ಅನ್ವಯ ಪ್ರಪಂಚದ್ಯಾಂತ ಪ್ರತಿ ವರ್ಷ ಸರಾಸರಿ 10 ಲಕ್ಷ ಮಂದಿ ಆತ್ಮಹತ್ಯೆಯ ದಾರಿಗೆ ಜಾರಿದ್ದಾರೆ. ಇದು ಪ್ರತಿ ಲಕ್ಷಕ್ಕೆ 14 ಮಂದಿ ಆತ್ಮಹತ್ಯೆ ಪ್ರಮಾಣ ಇದ್ದು, ವಿಶ್ವದ 700 ಕೋಟಿ ಜನಸಂಖ್ಯೆಗೆ ಲೆಕ್ಕ ಹಾಕಿದರೆ ಇದೊಂದು ಆತಂಕದ ವಿಷಯವಾಗಲಿದೆ. 2010ರಲ್ಲಿ ಅಮೆರಿಕದಲ್ಲಿ 37790 ಮಂದಿ ಆತ್ಮಹತ್ಯೆಗೆ ಶರಣಾಗಿದ್ದು 1 ಲಕ್ಷಕ್ಕೆ 12.2 ಸರಾಸರಿ ಪ್ರಮಾಣ ದಾಖಲಾಗಿದೆ. ಭಾರತದಲ್ಲಿ 2001-13 ರಿಂದ 2010 ರ ವರೆಗೆ ಅಂದಾಜು 187000 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು ಒಂದು ಲಕ್ಷ ಜನಸಂಖ್ಯೆಯಲ್ಲಿ16 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

—–

ಲಾನ್ಸೆಟ್ ಅಧ್ಯಯನ ವರದಿ ಎದುರಿಗೆ ಇರಿಸಿಕೊಂಡು ಈ ಆತ್ಮಹತ್ಯೆ ಪ್ರವೃತ್ತಿಗೆ ತಜ್ಞರು ಗುರುತಿಸುತ್ತಿರುವ ಕಾರಣಗಳು ಇಲ್ಲಿವೆ. ಇಲ್ಲೆಲ್ಲೂ ಜಾತಿ ರಾಜಕಾರಣ ಮಾಡುವುದಕ್ಕೆ ಅವಕಾಶವಿಲ್ಲ.

  • ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಆಕಾಂಕ್ಷೆಗಳು ಹೆಚ್ಚಾಗುತ್ತಿವೆ. ಅಂದುಕೊಂಡಿದ್ದನ್ನು ಸಾಧಿಸಲು ಆಗದಿದ್ದಾಗ ಕಾಡುವ ಖಿನ್ನತೆಯ ತೀವ್ರತೆಯೂ ಅಧಿಕ. ಇವೇ ಯುವಕರನ್ನು ಬದುಕು ಕೊನೆಗೊಳಿಸಿಕೊಳ್ಳಲು ಪ್ರೇರೇಪಿಸುತ್ತಿವೆ.
  • ಇವತ್ತಿನ ಜಗತ್ತು ಆರ್ಥಿಕತೆಯಲ್ಲೇ ಎಲ್ಲವನ್ನೂ ಅಳೆಯುತ್ತಿದೆ. ಇಲ್ಲಿ ನಿರೀಕ್ಷಿತ ಪ್ರಗತಿ ಆಗದಿದ್ದಾಗ ಬದುಕಿನ ಬಗ್ಗೆ ಬೇಸರ.
  • ಒಂದೆಡೆ ಆಧುನಿಕ ಸಲಕರಣೆಗಳು, ಪರಿಕರಗಳನ್ನು ಉಪಯೋಗಿಸುತ್ತ ಯುವ ಸಮೂಹ ಕುಟುಂಬ ವ್ಯವಸ್ಥೆಯಿಂದ ಅಂತರ ಹೆಚ್ಚಿಸಿಕೊಳ್ಳುತ್ತಿದೆ. ಇನ್ನೊಂದೆಡೆ ಖಿನ್ನತೆ, ಮಾನಸಿಕ ದೌರ್ಬಲ್ಯಗಳಿಗೆ ಆಪ್ತ ಸಲಹೆ ನೀಡುವ ವ್ಯವಸ್ಥೆ ಭಾರತದ ಶೈಕ್ಷಣಿಕ ಸಂಸ್ಥೆಗಳಲ್ಲಿ ಗಟ್ಟಿಯಾಗಿಲ್ಲ.
  • ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಯುವಕರೆನೂ ಅವಿದ್ಯಾವಂತರಲ್ಲ, ಕಿತ್ತು ತಿನ್ನುವ ಬಡತನದಿಂದ ಬಂದವರೂ ಹೆಚ್ಚಿಲ್ಲ.

ಜಾತಿಯ ಶೋಷಣೆಗಳು ದೇಶದಲ್ಲಿಲ್ಲ ಎಂಬ ವಾದ ಇದಲ್ಲ. ಆದರೆ ಎಲ್ಲ ದಲಿತ ಯುವಕರ ಆತ್ಮಹತ್ಯೆಯಲ್ಲೂ ಅದೇ ಅಂಶ ಕೆಲಸ ಮಾಡುತ್ತಿದೆ ಅಂತ ವಾದಿಸೋದು ರಾಜಕೀಯ ಹುನ್ನಾರ ಅಷ್ಟೆ. ಭಾರತದ ಕಲಿತ, ಬಲಿತ, ದಲಿತ ಯುವಕರೆಲ್ಲರಿಗೂ ಹತಾಶೆಯಿಂದ ಪಾರು ಮಾಡಬೇಕಾದ ಕೌನ್ಸೆಲಿಂಗ್ ಅರ್ಜೆಂಟಾಗಿ ಬೇಕಾಗಿದೆ.

Leave a Reply