ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ, ಶುಕ್ರವಾರ ಈ ಚಿತ್ರಗಳನ್ನು ನೋಡುವಾ..

ಡಿಜಿಟಲ್ ಕನ್ನಡ ಟೀಮ್

ಪ್ರತಿ ಬಾರಿ ಚಲನಚಿತ್ರೋತ್ಸವದಲ್ಲಿ ಪ್ರತಿ ಸ್ಕ್ರೀನ್ ನಲ್ಲೂ ದಿನಕ್ಕೆ 4-5 ಸಿನಿಮಾ ಎಂಬಂತೆ ದಿನಕ್ಕೆ ಸುಮಾರು 45-50 ಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಕಳೆದ ಬಾರಿಯವರೆಗೂ ಲೀಡೊ, ಫನ್ ಸಿನಿಮಾ, ಸುಚಿತ್ರ, ಬಾದಾಮಿ ಹೌಸ್ ಹೀಗೆ ವಿವಿಧಕಡೆ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದವು. ಈ ಬಾರಿ ಕೇವಲ ಒರಾಯನ್ ಮಾಲ್ ನ 11 ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಹೆಚ್ಚು ಪ್ರಯಾಣ ಮಾಡುವ ತಲೆ ಬಿಸಿ ಇಲ್ಲವಾಗಿಸಿದೆ. ಶುಕ್ರವಾರ ನೀವು ನೋಡಬಹುದಾದ ಚಿತ್ರಗಳು ಯಾವವು? ಕಥಾ ಸಾರಾಂಶ ಮತ್ತಿತರ ಮಾಹಿತಿ ಮೇರೆಗೆ ನಮ್ಮ ಸಲಹೆ ಇಲ್ಲಿದೆ.

ವಿಕ್ಟೋರಿಯಾ (ಸ್ಕ್ರೀನ್-5, ವರ್ಷ-2015, 138 ನಿಮಿಷ) (ಆರಂಭದ ಸಮಯ: 2.30) (ನಿರ್ದೇಶಕ: ಸೆಬಾಸ್ಟಿಯನ್ ಸ್ಕಿಪ್ಪರ್)

ಜರ್ಮನಿಯ ಈ ಚಿತ್ರ ವಿಶೇಷತೆಯೆಂದರೆ, ಈ ಚಿತ್ರವನ್ನು ಕೇವಲ ಒಂದೇ ಶಾಟ್ ನಲ್ಲಿ ಚಿತ್ರೀಕರಿಸಲಾಗಿದೆ. ಸ್ಪೇನ್ ಮೂಲದ ಹುಡುಗಿಯೊಬ್ಬಳು ಜರ್ಮನಿಗೆ ಆಗಮಿಸಿ ಅಲ್ಲಿನ ಭಾಷೆಯನ್ನು ಗೊತ್ತಿರದೆ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಒಂದು ದಿನ ರಾತ್ರಿಯಲ್ಲಿ ಅಪರಿಚಿತರೊಂದಿಗೆ ತೆರಳಿದಾಗ ಆಕೆ ಎದುರಿಸುವ ಸಮಸ್ಯೆಯ ಸುತ್ತ ಚಿತ್ರದ ಕತೆಯನ್ನು ಹೆಣೆಯಲಾಗಿದೆ. ಈ ಚಿತ್ರ ಕಳೆದ ವರ್ಷ ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಿನಿಮಾಟೋಗ್ರಫಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ದ ಐಡಲ್ (ಸ್ಕ್ರೀನ್-11, ವರ್ಷ-2015, 100 ನಿಮಿಷ) (ಆರಂಭದ ಸಮಯ: 6.20) (ನಿರ್ದೇಶಕ: ಹ್ಯಾನಿ ಅಬು ಅಸಾದ್)

ಪ್ಯಾಲೆಸ್ತಿನ್ ನ ಈ ಚಿತ್ರ ಸಂಗೀತ ಗಾಯಕನ ನಿಜ ಜೀವನವನ್ನಾಧರಿಸಿದೆ. ಗಾಜಾದಿಂದ ನಿರ್ಲಕ್ಷಿಸಲ್ಪಟ್ಟ ಗಾಯಕ ಮೊಹಮದ್ ಅಸಾಫ್, ನಂತರ 2013ರಲ್ಲಿ ಅರಬ್ ಐಡಲ್ ಪ್ರಶಸ್ತಿಯನ್ನು ಗೆದ್ದು ಸಾಧನೆ ಮಾಡುತ್ತಾನೆ. ಈ ನೈಜ ಸಾಧನೆಯ ಹಾದಿಯನ್ನು ತೆರೆಯ ಮೇಲೆ ತರುವ ಪ್ರಯತ್ನ ಇದಾಗಿದೆ. ಈ ಚಿತ್ರ 2015ರ ಟೊರಂಟೊ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ವಿಶೇಷ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು.

ದ ಸೆಕೆಂಡ್ ಮದರ್ (ಸ್ಕ್ರೀನ್-05, ವರ್ಷ-2015, 112 ನಿಮಿಷ) (ಆರಂಭದ ಸಮಯ: 6.10) (ನಿರ್ದೇಶಕ: ಅನಾ ಮುಯ್ಲೆರ್ಟ್)

ಬ್ರೆಜಿಲ್ ನ ಈ ಚಿತ್ರ ಹೆಸರೇ ಹೇಳುವಂತೆ ಒಬ್ಬ ಮಹಿಳೆ ತನ್ನ ತಾಯಿತನವನ್ನು ತೋರುವ ರೀತಿ, ಆಕೆಗೆ ಎದುರಾಗುವ ಪರೀಕ್ಷೆಯನ್ನು ಅತ್ಯುತ್ತಮ ರೀತಿಯಲ್ಲಿ ಹೆಣೆಯಲಾಗಿದೆ. ವಾಲ್ ಎಂಬಾಕೆ ತನ್ನ ಮಗಳಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸಾವ್ ಪೊಲೊಗೆ ತೆರಳಿ ಅಲ್ಲಿ ಮನೆ ಕೆಲಸಕ್ಕಾಗಿ ಸೇರಿ ತನ್ನ ಮಗಳನ್ನು ಬೇರೆಡೆ ಇಟ್ಟು ಸಾಕುತ್ತಾಳೆ. ಆಕೆ ತಾನು ಮಾಡುವ ಕೆಲಸದ ಮನೆಯಲ್ಲಿ ಒಡೆಯರ ಮಗಳನ್ನು ತನ್ನ ಮಗಳಂತೆ ಬೆಳೆಸುತ್ತಾಳೆ.

ಮ್ಯಾಜಿಕ್ ಮೆನ್ (ಸ್ಕ್ರೀನ್-04, ವರ್ಷ-2014, 100 ನಿಮಿಷ) (ಆರಂಭದ ಸಮಯ: 11.50) (ನಿರ್ದೇಶಕ: ಗಯ್ ನಟ್ಟಿವ್)

ಇಸ್ರೆಲ್ ನ ಈ ಸಿನಿಮಾ ಇತ್ತೀಚೆಗೆ ಗ್ರೀಸ್ ನಲ್ಲಿ ಉದ್ಭವಿಸಿದ ಆರ್ಥಿಕ ಮುಗ್ಗಟ್ಟಿನ ಸನ್ನಿವೇಶದಲ್ಲಿ ಚಿತ್ರದ ಮುಖ್ಯ ಪಾತ್ರವಾದ ವ್ಯಕ್ತಿ, ಎರಡನೇ ವಿಶ್ವ ಯುದ್ಧದಲ್ಲಿನ ಮಾರಣ ಹೋಮದಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿಯೊಬ್ಬ ಗ್ರೀಸ್ ಗೆ ಮರಳಿ ತನ್ನ ಸೂರನ್ನು ಹುಡಿಕಿಕೊಳ್ಳುವ ಹಂತದಲ್ಲಿ ತಾನು ನಡೆಸುವ ಪರದಾಟಕ್ಕೆ ಹೋಲಿಕೆ ಮಾಡುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಇತರೆ ಪ್ರಮುಖ ಚಿತ್ರಗಳು: ಲೈವ್ (ಸ್ಕ್ರೀನ್-08, 97 ನಿಮಿಷ) (ಆರಂಭದ ಸಮಯ: 12.15), ಫ್ರಾಂಕೊಫೊನಿಯಾ (ಸ್ಕ್ರೀನ್-10, 90 ನಿಮಿಷ) (ಆರಂಭದ ಸಮಯ: 08.30), ಅಂಡರ್ ಎಲೆಕ್ಟ್ರಿಕ್ ಕ್ಲೌಡ್ (ಸ್ಕ್ರೀನ್-10, 138 ನಿಮಿಷ) (ಆರಂಭದ ಸಮಯ: 03.10)

Leave a Reply