ಸುದ್ದಿಸಂತೆ: ಮೊದಲ ಹಂತದಲ್ಲೇ ದಾವಣಗೆರೆ – ಬೆಳಗಾವಿ ಸ್ಮಾರ್ಟ್, ಭಾರತದ ಕ್ರಿಕೆಟ್ ಕಿರಿಯರ ವಿಜಯ, ಇಬ್ಬರು ಮುಖ್ಯಮಂತ್ರಿಗಳ ಸಂಕಷ್ಟ….

‘ಫ್ಲೈಯಿಂಗ್ ಇಂಜಿನಿಯರ್’ ತಂಡದ ದಾವಣಗೆರೆ ಸಮೀಕ್ಷಾ ಚಿತ್ರ

 

ಡಿಜಿಟಲ್ ಕನ್ನಡ ಟೀಮ್

ದಾವಣಗೆರೆ, ಬೆಳಗಾವಿಗೆ ಮೊದಲ ಹಂತದಲ್ಲೇ ಸ್ಮಾರ್ಟ್ ಆಗೋ ಅವಕಾಶ

ಕೇಂದ್ರ ಸರಕಾರ ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಪ್ರಸಿದ್ಧಿಯಾದ ದಾವಣಗೆರೆ ಹಾಗೂ ಕುಂದಾನಗರಿ ಬೆಳಗಾವಿ ಸೇರಿವೆ.

ದೇಶದ 20 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಗುರುತಿಸಲಾಗಿದೆ. ಅದರಲ್ಲಿ ದಾವಣಗೆರೆ, ಬೆಳಗಾವಿ, ತುಮಕೂರು, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ ಪಾಲಿಕೆಗಳೂ ಸೇರಿವೆ. ಮೊದಲ ಹಂತದ ಪ್ರಗತಿ ಅದೃಷ್ಟ ದಾವಣಗೆರೆ ಮತ್ತು ಬೆಳಗಾವಿಗೆ ಸಂದಿದೆ. ಉಳಿದ ನಗರಗಳು ಮುಂದಿನ ವರ್ಷದಿಂದ ಹಂತ, ಹಂತವಾಗಿ ಅಭಿವೃದ್ಧಿ ಆಗಲಿವೆ.

ಸ್ಮಾರ್ಟ್ ಸಿಟಿ ಆಯ್ಕೆಗಾಗಿ ದಾವಣಗೆರೆ ಮತ್ತು ಬೆಳಗಾವಿ ಜಿಲ್ಲಾಡಳಿತ ರೂಪಿಸಿದ್ದ ಯೋಜನೆಗೆ ಕೇಂದ್ರದ ನಗರಾಭಿವೃದ್ಧಿ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿ, ಇವನ್ನು ಮೊದಲ ಹಂತಕ್ಕೆ ಆಯ್ಕೆ ಮಾಡಿದೆ. ಕೇಂದ್ರ ಸರಕಾರ ಈ ಹೊಸ ಸ್ಮಾರ್ಟ್ ಸಿಟಿಗಳಿಗೆ ಮೊದಲ ವರ್ಷ ಇನ್ನೂರು ಕೋಟಿ ರುಪಾಯಿ, ನಂತರ ಪ್ರತಿ ವರ್ಷ ನೂರು ಕೋಟಿ ರುಪಾಯಿ ನೆರವು ಒದಗಿಸುತ್ತದೆ. ರಾಜ್ಯ ಸರ್ಕಾರ ಕೂಡ ಇಷ್ಟೇ ಹಣ ತೊಡಗಿಸಬೇಗಿದೆ.

ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ನಗರಗಳಲ್ಲಿ ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಮತ್ತಿತರ ಮೂಲ ಸೌಕರ್ಯ, ಸುಗಮ ಸಂಚಾರ, ವಿದ್ಯುತ್ ಉಳಿತಾಯ, ಪ್ರಮುಖ ಭಾಗಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಆಟೋಗಳಿಗೆ ಜಿಪಿಎಸ್ ಸಿಸ್ಟಂ ಅಳವಡಿಸುವುದು ಯೋಜನೆ ಮುಖ್ಯಾಂಶ.

 

ಕಿರಿಯರ ಶುಭಾರಂಭ

ಬಾಂಗ್ಲಾದೇಶದ ಮೀರ್ಪುರದ ಶೇರೆ ಬಾಂಗ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂಡರ್ 19 ವಿಶ್ವಕಪ್ ಡಿ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ದುರ್ಬಲ ಐರ್ಲೆಂಡ್ ವಿರುದ್ಧ ಸೆಣಸಿದ ಭಾರತ ಕಿರಿಯರ ತಂಡ 79 ರನ್ ಗಳಿಂದ ಜಯಿಸಿತು. ಟಾಸ್ ಗೆದ್ದ ಐರ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 268 ರನ್ ಕಲೆ ಹಾಕಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಐರ್ಲೆಂಡ್ 49.1 ಓವರ್ ಗಳಲ್ಲಿ 189 ರನ್ ದಾಖಲಿಸಿ ಆಲೌಟ್ ಆಯಿತು. ಭಾರತ ತಂಡದ ಪರ ಸರ್ಫರಾಜ್ ಖಾನ್ 74, ವಾಶಿಂಗ್ಟನ್ ಸುಂದರ್ 62 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡಿದರು. ಇನ್ನು ಬೌಲಿಂಗ್ ನಲ್ಲಿ ರಾಹುಲ್ ಬಾತಮ್ 15ಕ್ಕೆ 3 ಗಮನ ಸೆಳೆದರು. ಐರ್ಲೆಂಡ್ ಪರ ಲೊರ್ಕಾನ್ ಟಕರ್ 57, ವಿಲಿಯಮ್ 58 ರನ್ ದಾಖಲಿಸಿದರು. ಬೌಲಿಂಗ್ ನಲ್ಲಿ ಜೊಶುವಾ 52ಕ್ಕೆ 3 ಮತ್ತು ರೊರಿ 35ಕ್ಕೆ 3 ಉತ್ತಮ ಪ್ರದರ್ಶನ ನೀಡಿದರು. ಭಾರತದ ಸರ್ಫರಾಜ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪೇಸ್ಹಿಂಗೀಸ್ ಮಣಿಸಿದ ಸಾನಿಯಾ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಕ್ರೊವೆಶಿಯಾದ ಜತೆಗಾರ ಇವಾನ್ ಡೊಡಿಗ್, ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ ನಲ್ಲಿ ಉಪಾಂತ್ಯ ಸುತ್ತಿಗೆ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಜೋಡಿ, ತನ್ನ ಮಹಿಳಾ ಡಬಲ್ಸ್ ಜತೆಗಾರ್ತಿ ಮಾರ್ಟಿನಾ ಹಿಂಗೀಸ್ ಮತ್ತು ಭಾರತದವರೇ ಆದ ಲಿಯಾಂಡರ್ ಪೇಸ್ ಜೋಡಿಯನ್ನು 7-6(7-1), 6-3 ನೇರ ಸೆಟ್ ಗಳಿಂದ ಮಣಿಸಿತು. ಈ ಜೋಡಿ ಮುಂದಿನ ಪಂದ್ಯದಲ್ಲಿ ಐದನೇ ಶ್ರೇಯಾಂಕಿತ ಎಲೆನಾ ವೆಸ್ನಿನಾ ಮತ್ತು ಬ್ರೂನೊ ಸೊರೆಸ್ ಜೋಡಿಯನ್ನು ಎದುರಿಸಲಿದೆ.7-6(1) 6-37-6(1) 6-3

ಸೋತ ಫೆಡರರ್, ಫೈನಲ್ ಪ್ರವೇಶಿಸಿದ ಜೊಕೊವಿಚ್

ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಆಸ್ಟ್ರೇಲಿಯಾ ಓಪನ್ ನಲ್ಲಿ ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಕಳೆದ ಬಾರಿಯ ಚಾಂಪಿಯನ್ ಹಾಗೂ ವಿಶ್ವದ ನಂಬರ್ ಒನ್ ಆಟಗಾರನಾಗಿರುವ ಜೊಕೊವಿಚ್ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ಅವರನ್ನು 6-1, 6-2, 3-6, 6-3 ಸೆಟ್ ಗಳಿಂದ ಪರಾಭವಗೊಳಿಸಿದರು. ಜೊಕೊವಿಚ್ ಅಂತಿಮ ಸುತ್ತಿನಲ್ಲಿ ಆ್ಯಂಡಿ ಮರ್ರೆ ಮತ್ತು ಮಿಲೊಸ್ ರೊನಿಕ್ ನಡುವಣ 2ನೇ ಉಪಾಂತ್ಯದಲ್ಲಿ ಗೆದ್ದವರ ವಿರುದ್ಧ ಸೆಣಸಲಿದ್ದಾರೆ. ಆ ಮೂಲಕ ಜೊಕೊವಿಚ್ 6ನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.

ಮುಖ್ಯಮಂತ್ರಿಗಳಿಬ್ಬರಿಗೆ ಶುರುವಾಯ್ತು ಬಿಸಿ

ಕೇರಳದ ಮುಖ್ಯಮಂತ್ರಿ ಉಮನ್ ಚಾಂಡಿ ವಿರುದ್ಧ ಸೋಲಾರ್ ಹಗರಣ ಸಂಬಂಧ ಪ್ರಕರಣ ದಾಖಲಿಸುವುದಕ್ಕೆ ನ್ಯಾಯಾಲಯ ಒಪ್ಪಿಗೆ ಕೊಟ್ಟಿದೆ. ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್, ಬುಧವಾರ ನ್ಯಾಯಾಂಗ ತನಿಖಾ ಸಮಿತಿ ಎದುರು ಹಾಜರಾಗಿ- ಚಾಂಡಿ ತಮ್ಮ ಕಚೇರಿ ಉದ್ಯೋಗಿ ಮುಖಾಂತರ 7 ಕೋಟಿ ರುಪಾಯಿ ಲಂಚ ಕೇಳಿದ್ದರು. ಆ ಪೈಕಿ 1.90 ಕೋಟಿ ರುಪಾಯಿಗಳನ್ನು ತಾವು ಎರಡು ಕಂತುಗಳಲ್ಲಿ ಕೊಟ್ಟಿದ್ದಾಗಿ ಹೇಳಿದ್ದರು. ಆರೋಪಗಳನ್ನು ಅಲ್ಲಗೆಳೆದಿರುವ ಉಮನ್ ಚಾಂಡಿ, ರಾಜೀನಾಮೆ ಸಾಧ್ಯತೆ ತಳ್ಳಿ ಹಾಕಿದ್ದಾರೆ.

ಇನ್ನೊಂದೆಡೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಅನುಮತಿ ಕೋರಿ ಸುಬ್ರಮಣಿಯನ್ ಸ್ವಾಮಿಯವರು ಲೆಫ್ಟಿನೆಂಟ್ ಗೌರ್ನರ್ ಅವರಿಗೆ ಪತ್ರ ಬರೆದಿದ್ದಾರೆ.

Leave a Reply