ಏಕ್ ನಾಯಕ್- ಶ್ರೇಷ್ಠ ನಾಯಕ್ ಗುಂಗಿನಿಂದ ಹೊರಬಂದ ಬಿಜೆಪಿ ಅಸ್ಸಾಮಿನಲ್ಲಿ ಸ್ಥಳೀಯ ನಾಯಕನಿಗೆ ಕಟ್ಟಿದೆ ಪಟ್ಟ

 

ಪ್ರವೀಣ್ ಕುಮಾರ್

ಏಪ್ರಿಲ್- ಮೇನಲ್ಲಿ ಅಸ್ಸಾಂ ವಿಧಾನಸಭೆಗೆ ನಡೆಯಲಿರುವ ಚುನಾವಣೆಯನ್ನು ಬಿಜೆಪಿಯ ಪ್ರಾದೇಶಿಕ ನೇತಾರ ಸರ್ಬಾನಂದ ಸೊನೊವಾಲ್ ನೇತೃತ್ವದಲ್ಲಿ ಎದುರಿಸುವುದಾಗಿ ಘೋಷಿಸಿರುವ ಪಕ್ಷ, ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿದೆ.

ದೆಹಲಿಯಲ್ಲಿ ಕೊನೆ ಕ್ಷಣಕ್ಕೆ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿ ಸೋತಿದ್ದು, ಬಿಹಾರದಲ್ಲಿ ಸ್ಥಳೀಯ ನಾಯಕರನ್ನು ಮುನ್ನೆಲೆಗೆ ತರದೇ ಮೋದಿ ಭಾಷಣದ ಮೂಲಕವೇ ಗೆಲ್ಲುವುದಕ್ಕೆ ಹೋಗಿ ಮುಗ್ಗರಿಸಿದ್ದು ಇವೆಲ್ಲವುಗಳಿಂದ ಬಿಜೆಪಿ ಪಾಠ ಕಲಿತಂತಿದೆ. ಕೇಂದ್ರದಲ್ಲಿ ಯುವಜನ ಮತ್ತು ಕ್ರೀಡಾ ಖಾತೆ (ಸ್ವತಂತ್ರ) ಸಚಿವರಾಗಿದ್ದ ಸರ್ಬಾನಂದ ಸೊನೊವಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿರುವುದು ಕೇವಲ ಅಸ್ಸಾಮಿಗೆ ಮಾತ್ರವಲ್ಲದೇ ದೇಶದ ಇತರ ರಾಜ್ಯಗಳಲ್ಲೂಪ್ರಾದೇಶಿಕ ಅಸ್ಮಿತೆಗೆ ಬೆಲೆ ಬರುವ ಆಶಾಭಾವವೊಂದನ್ನು ನೀಡಿದೆ. ಇನ್ನೆರಡು ವರ್ಷಗಳ ನಂತರ ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲೂ ಬಿಜೆಪಿ ಸ್ಥಳೀಯ ಚಹರೆಯನ್ನೇ ಮುಂದುಮಾಡುತ್ತದೆ ಎಂಬ ನಿರೀಕ್ಷೆಯನ್ನೂ ಈ ವಿದ್ಯಮಾನ ಗಟ್ಟಿಗೊಳಿಸಿದೆ.

ನಿಜ. ಲೋಕಸಭೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದಕ್ಕಿಸಿಕೊಡುವಲ್ಲಿ ದೇಶಾದ್ಯಂತ ಕೆಲಸ ಮಾಡಿದ್ದು ನರೇಂದ್ರ ಮೋದಿ ಅವರ ಜನಪ್ರಿಯತೆಯೇ. ಉತ್ತರಪ್ರದೇಶದಂಥ ದೊಡ್ಡ ರಾಜ್ಯದಲ್ಲಿ ಉಳಿದ ಪಕ್ಷಗಳ ಅಸ್ತಿತ್ವವನ್ನೋ ಅಣಕಿಸಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನೆಲ್ಲ ಬಾಚಿಕೊಂಡಿರುವುದಕ್ಕೆ ಅಮಿತ್ ಶಾ ಅವರ ಸಂಘಟನಾ ಚಾತುರ್ಯವೇ ಕಾರಣ. ಹಾಗಂತ ಇದೇ ಸಿದ್ಧಾಂತವನ್ನು ವಿಧಾನಸಭೆಗಳ ಮೇಲೂ ಹೇರಿ, ಎಲ್ಲವನ್ನೂ ದೆಹಲಿಯ ಇಬ್ಬರು ನಾಯಕರ ಅಧೀನಕ್ಕಿಡುವುದನ್ನು ತಾನು ಒಪ್ಪಲಾರೆ ಎಂಬ ಸಂದೇಶವೊಂದನ್ನುಬಿಹಾರ ಚುನಾವಣೆ ಸ್ಪಷ್ಟವಾಗಿ ಸಾರಿತ್ತು.

ಅಸ್ಸಾಮಿನಲ್ಲಿ ಸೊನೊವಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿರೋದು ಸಹಜ ನ್ಯಾಯವೇ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಅಲ್ಲಿ ಬಿಜೆಪಿಯನ್ನು ಮುನ್ನಡೆಸಿದವರು ಇವರೇ. ಅಸ್ಸಾಮಿನ 14 ಸ್ಥಾನಗಳ ಪೈಕಿ ಬಿಜೆಪಿ ಏಳನ್ನು ಗೆದ್ದರೆ, ಕಾಂಗ್ರೆಸ್ ಅತಿ ಹೀನಾಯ ಪ್ರದರ್ಶನ ತೋರಿ 3 ಸ್ಥಾನಗಳಿಗೆ ಸೀಮಿತವಾಯಿತು. ಇದೀಗ 126 ಸ್ಥಾನಗಳ ವಿಧಾನಸಭೆಯಲ್ಲಿ ಸೊನೊವಾಲ್ ಬಿಜೆಪಿಗೆ ಎಷ್ಟು ಸ್ಥಾನ ದೊರಕಿಸಿಕೊಡುತ್ತಾರೆ ಎಂಬುದರ ಮೇಲೆ ಅವರ ಸಾಮರ್ಥ್ಯ ನಿರ್ಧಾರವಾಗುತ್ತದೆ.

ಸೊನೊವಾಲ್ ಬಿಜೆಪಿ ಸೇರಿದ್ದು 2011ರಲ್ಲಿ. ಅದಕ್ಕೂ ಮೊದಲು ಅವರು ಅಸೊಮ್ ಗಣ ಪರಿಷತ್ ನಲ್ಲಿದ್ದರು. 53ರ ಹರೆಯದ ಸೊನೊವಾಲ್ ರಾಜಕೀಯ ಪ್ರವೇಶಿಸಿದ್ದು ಆಲ್ ಅಸ್ಸಾಮ್ ಸ್ಟೂಡೆಂಟ್ ಯೂನಿಯನ್ ಇಲ್ಲಿ ವಿದ್ಯಾರ್ಥಿ ನಾಯಕರಾಗಿ ರೂಪುಗೊಂಡು.

ಸಂಸತ್ತು ಜಾರಿಗೆ ತಂದಿದ್ದ 1983ರ ಅಕ್ರಮ ವಲಸಿಗರ ಕಾಯ್ದೆಯ ಲೋಪಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಹೋರಾಡಿದವರು ಸೊನೊವಾಲ್. ಇವರ ಅರ್ಜಿ ಪುರಸ್ಕರಿಸಿ 2005ರಲ್ಲಿ ಆ ಕಾಯ್ದೆಯನ್ನು ಸುಪ್ರೀಂಕೋರ್ಟ್ ಅಸಿಂಧುಗೊಳಿಸಿತು.

ಹೀಗೆ ಹೋರಾಟ- ಸಂಘಟನೆಗಳಲ್ಲಿ ಬೆಳೆದುಬಂದವರಿಗೆ ಪ್ರಾದೇಶಿಕ ನಾಯಕತ್ವದ ಮನ್ನಣೆ ಎಲ್ಲ ಪಕ್ಷಗಳಲ್ಲಿ ಸಿಗಲೇಬೇಕು. ಕೇಂದ್ರದಲ್ಲಿರುವವರು ಎಷ್ಟೇ ಜನಪ್ರಿಯ, ಸಕ್ಷಮ ನಾಯಕರೇ ಆಗಿದ್ದರೂ ಪ್ರಾದೇಶಿಕ ಆಶೋತ್ತರಗಳನ್ನೂ ದೆಹಲಿಯಿಂದ ನಿರ್ದೇಶಿಸುತ್ತೇವೆ ಎಂಬ ಕಲ್ಪನೆ ಸರಿಯಲ್ಲ. ಆ ನಿಟ್ಟಿನಲ್ಲಿ ಬಿಜೆಪಿ ಅಸ್ಸಾಮಿನಲ್ಲಿ ಇಟ್ಟಿರುವ ಹೆಜ್ಜೆಯನ್ನು ಇತರ ರಾಜ್ಯಗಳಲ್ಲೂ ಅನುಸರಿಸುವ ಸಾಧ್ಯತೆ ಇದೆ.

ಇಷ್ಟವಾಗ್ತಿದೆಯೇ ಸುದ್ದಿಯ ಸೀಳುನೋಟ? ಹಾಗಾದ್ರೆ ಈ ಲಿಂಕಿನಲ್ಲಿ ಡಿಜಿಟಲ್ ಕನ್ನಡ ಆ್ಯಪ್ ಡೌನ್ಲೋಡ್ ಮಾಡ್ಕೋಳಿ.

Leave a Reply