ದೇವೇಗೌಡ್ರು ಡಮ್ಮಿ ಕ್ಯಾಂಡಿಡೇಟ್ ಹಾಕೋ ಬದ್ಲು ಸುಮ್ನೆ ಇದ್ದಿದ್ರೇ ದೊಡ್ಡವರಾಗ್ತಿದ್ರು

 

ಪಿ. ತ್ಯಾಗರಾಜ್

ಮಾಜಿ ಪ್ರಧಾನಿ ದೇವೇಗೌಡರು ವಿಧಾನಸಭೆ ಮರುಚುನಾವಣೆ ಸಂಬಂಧ ನುಡಿದಂತೆ ನಡೆಯದೇ ಯಡವಟ್ಟು ಮಾಡಿಕೊಂಡಿದ್ದಾರೆ.

ಮೊದಲಿಗೆ ಅವರು ಮೂರೂ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದಿದ್ದರು. ಆಮೇಲೆ ಕಾಂಗ್ರೆಸ್ ಆಂತರಿಕ ಬೆಳವಣಿಗೆಗಳನ್ನು ಜೆಡಿಎಸ್ ಪರ ಸದ್ಬಳಕೆ ಮಾಡಿಕೊಳ್ಳಲು ಯತ್ನಿಸಿದರು. ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್, ನಂತರ ಭೈರತಿ ಸುರೇಶ್ ಅವರನ್ನೇ ಸೆಳೆದು ಕಣಕ್ಕಿಳಿಸಲು ನೋಡಿದರು. ಆದರೆ ನಿರೀಕ್ಷೆಗಳೆಲ್ಲ ಸುಳ್ಳಾಗಿ ಹತಾಶೆಗೆ ಬಿದ್ದ ಗೌಡರ ಮನಸ್ಥಿತಿಯನ್ನು ಅವರದೇ ಪಕ್ಷದ ನಾಯಕರು ದಾರಿ ತಪ್ಪಿಸಿದ ಪರಿಣಾಮ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಇದರಿಂದ ಗೌಡರಾಗಲಿ, ಅವರ ಪಕ್ಷವಾಗಲಿ ಗಳಿಸುವುದಕ್ಕಿಂತ ಕಳೆದುಕೊಳ್ಳಲಿರುವುದೇ ಹೆಚ್ಚು.

ಮಾತೆತ್ತಿದರೆ ಸಾಕು ಗೌಡರು ಮತ್ತು ಅವರ ಪಕ್ಷದವರು ಮುಸ್ಲಿಂ ಸಮುದಾಯದ ಹಿತಾಸಕ್ತಿ ಗುತ್ತಿಗೆ ತೆಗೆದುಕೊಂಡವರಂತೆ ಆಡುತ್ತಿದ್ದರು. ಗೌಡರಂತು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವುದಕ್ಕೆ ಬಯಸುವುದಾಗಿ ಘೋಷಿಸಿದ್ದರು. ಆದರೆ ತಮ್ಮ ಅಭ್ಯರ್ಥಿಗಳು ಗೆಲ್ಲುವುದಿರಲಿ, ಗೆಲುವಿನ ಹತ್ತಿರಕ್ಕೂ ಸುಳಿಯಲು ಸಾಧ್ಯವಿಲ್ಲ ಎಂದು ಗೊತ್ತಿದ್ದೂ, ಹೆಬ್ಬಾಳ ಮತ್ತು ಬೀದರ್ ನಲ್ಲಿ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗಳ ವಿರುದ್ಧ ಅದೇ ಕೋಮಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇಲ್ಲಿ ಅವರಿಗೆ ಕಾಂಗ್ರೆಸ್ ಸೋಲಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಆ ಪಕ್ಷದ ಮುಸ್ಲಿಂ ಅಭ್ಯರ್ಥಿಗಳು ಸೋಲಬೇಕು ಎಂಬ ಇರಾದೆ ಇದೆ. ಈ ಇರಾದೆ ವ್ಯಕ್ತಿಗತ ದ್ವೇಷ, ಅಸೂಯೆಯಿಂದ ಒಡಮೂಡಿದೆ. ಇದು ಕಳೆದುಕೊಳ್ಳುವ ಸ್ಥಾನದಲ್ಲಿ ಗೌಡರನ್ನು ನಿಲ್ಲಿಸಿದೆ.

ಈ ಚುನಾವಣೆ ಫಲಿತಾಂಶದಿಂದ ಯಾವುದೇ ರಾಜಕೀಯ ಬದಲಾವಣೆಗಳು ಆಗುವುದಿಲ್ಲ, ಬರೀ ಆರ್ಥಿಕ ಹೊರೆಗಷ್ಟೆ ಸೀಮಿತ ಎಂದು ಗೊತ್ತಿದ್ದೇ ಗೌಡರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿದ್ದುದು.

ಆದರೆ ಯಾವಾಗ ಭೈರತಿ ಸುರೇಶ್ ಪರ ಸಿದ್ದರಾಮಯ್ಯ ಹಾಗೂ ಮೊಮ್ಮಗ ರೆಹಮಾನ್ ಷರೀಫ್ ಪರ ಜಾಫರ್ ಷರೀಫ್ ಟಿಕೆಟ್ ಆಖಾಡಕ್ಕೆ ಇಳಿದರೋ ಆಗ ಗೌಡರು ಮತ್ತು ಕುಮಾರಸ್ವಾಮಿಯ ‘ರಾಜಕೀಯ ಆಸಕ್ತಿ’ ಕೆರಳಿ ನಿಂತಿತು. ಮೊಮ್ಮಗನಿಗೆ ಕಾಂಗ್ರೆಸ್ ಟಿಕೆಟ್ ಡೌಟಾದಾಗ ಜೆಡಿಎಸ್ ಟಿಕೆಟ್ ಕೊಡಿಸಲು ಷರೀಫರು ಕುಮಾರಸ್ವಾಮಿ ಮತ್ತು ಗೌಡರ ಜತೆ ಒಂದು ಸುತ್ತು ಮಾತುಕತೆಯನ್ನೂ ನಡೆಸಿದ್ದರು. ಆದರೆ ಲೆಕ್ಕಾಚಾರ ಉಲ್ಟಾ ಆಗಿ ರೆಹಮಾನ್ ಗೇ ಕಾಂಗ್ರೆಸ್ ಟಿಕೆಟ್ ಸಿಕ್ಕಿಬಿಟ್ಟಿತು. ದಿಲ್ಲಿ ಸಂಪರ್ಕದಿಂದ ಇದರ ಸುಳಿವು ಸಿಕ್ಕಿದ್ದ ಗೌಡರು ಅಷ್ಟೊತ್ತಿಗಾಗಲೇ ಭಟ್ಟಂಗಿಗಳು ಹುಡುಕಿ ತಂದ ಇಸ್ಮಾಯಿಲ್ ಷರೀಫ್ ಎಂಬುವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿಬಿಟ್ಟರು. ಇದಾದ ನಂತರ ಗೌಡರಿಗೆ ಉಲ್ಟಾ ಹೊಡೆದ ಜಾಫರ್, ‘ನಾವೇನು ಗೌಡರ ಹತ್ತಿರ ಹೋಗಿಲ್ಲ, ಚುನಾವಣೆಗೆ ಅವರ ಪಕ್ಷದ ನೆರವು ಕೇಳಲ್ಲ. ನಮಗೆ ಅದರ ಅಗತ್ಯ ಇಲ್ಲ’ ಅಂತಂದರು.

ಗೌಡರಿಗೆ ಜಾಫರ್ ಷರೀಫರ ವರಸೆ ಗೊತ್ತಿರದೇ ಏನಿರಲಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಟಿಕೆಟ್ ಸಿಗದೇ ಹೋದಾಗ ಮೈಸೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಗೌಡರನ್ನು ನಂಬಿಸಿದ್ದ ಷರೀಫರು ಕೊನೆಗೇ ಯಾರ ಕೈಗೂ ಸಿಗದೆ ಮೆಕ್ಕಾ ಯಾತ್ರೆ ಕೈಗೊಂಡಿದ್ದರು. ರಾಜಕೀಯ ಚಾಣಾಕ್ಷ ಗೌಡರಿಗೆ ಷರೀಫರು ಇದೀಗ ಎರಡನೇ ಬಾರಿ ಹಲ್ವಾ ತಿನ್ನಿಸಿದ್ದಾರೆ.

ತಕ್ಷಣ ಗೌಡರು ಕಾಂಗ್ರೆಸ್ ಟಿಕೆಟ್ ವಂಚಿತ ಭೈರತಿ ಸುರೇಶ್ ಅವರನ್ನೇ ಜೆಡಿಎಸ್ ನಿಂದ ಕಣಕ್ಕಿಳಿಸಲು ಯತ್ನಿಸಿದರು. 2012 ರ ವಿಧಾನ ಪರಿಷತ್ ಚುನಾವಣೆ ಸಂದರ್ಭ ಕುಮಾರಸ್ವಾಮಿಯವರಿಗೆ ಭೈರತಿ ಸುರೇಶ್ ಸಂಪರ್ಕ ಕಲ್ಪಿಸಿದ್ದ ಜೆಡಿಎಸ್ ಶಾಸಕ ಚಿಕ್ಕನಾಯಕನಹಳ್ಳಿಯ ಸುರೇಶ್ ಬಾಬು ಮೂಲಕವೇ ಕೇಳಿಯೂ ಕೇಳಿಸಿದರು, ‘ಬನ್ನಿ ನಮ್ಮ ಪಕ್ಷದಿಂದ ನಿಲ್ಲಿ’ ಅಂತ. ಭೈರತಿ ಸುರೇಶ್ ಬಳಿ ದುಡ್ಡುಕಾಸು ಹೇರಳವಾಗಿದೆ. ಈಗಿನ ಚುನಾವಣೆಗೆ, ಮುಂದೆ ಬರುವ ಚುನಾವಣೆಗಳಿಗೆ ಸಹಾಯ ಆಗ್ತದೆ ಅಂತ ಎಣಿಸಿದ್ದರು. ಆದರೆ ಸಿದ್ದರಾಮಯ್ಯ ಮೇಲಿನ ನಿಷ್ಠೆಗೆ ಬದ್ದರಾದ ಸುರೇಶ್ ಇದಕ್ಕೆ ಒಪ್ಪಲಿಲ್ಲ. ಇದು ಗೌಡರ ನಿರಾಶೆ ಮತ್ತು ಹತಾಶೆಗೆ ಕಾರಣವಾಯಿತು.

ಹಾಗೆಂದು ಹೆಬ್ಬಾಳದಲ್ಲಿ ಇವರು ನಿಲ್ಲಿಸಿರುವ ಕ್ಯಾಂಡಿಡೇಟ್ ಇಸ್ಮಾಯಿಲ್ ಷರೀಫ್ ಸಮರ್ಥರೇನಲ್ಲ. ಅವರೊಬ್ಬ ರೌಡಿಶೀಟರ್. ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಆರೋಪದ ಮೇರೆಗೆ ಜೈಲಿಗೂ ಹೋಗಿ ಬಂದಿದ್ದಾರೆ. ಇಂತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬದಲು ಸುಮ್ಮನಿದ್ದಿದ್ದರೂ ಆಗುತ್ತಿತ್ತು. ಹೆಬ್ಬಾಳದಲ್ಲಿ ಒಕ್ಕಲಿಗರ ನಂತರ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮತ್ತೊಬ್ಬ ಮುಸ್ಲಿಂ ಅಭ್ಯರ್ಥಿ ಕಣದಲ್ಲಿದ್ದರೆ ಮತಗಳು ವಿಭಜನೆ ಆಗಿ ಬಿಜೆಪಿಗೆ ಅನುಕೂಲವಾಗುತ್ತದೆ. ರೆಹಮಾನ್ ಷರೀಫ್ ಸೋಲಿಸಬಹುದು, ಜಾಫರ್ ಗೆ ಪಾಠ ಕಲಿಸಬಹುದು ಅನ್ನೋದು ಗೌಡರ ಲೆಕ್ಕಾಚಾರ ಇರಬಹುದು. ಆದರೆ ಈಗಾಗಲೇ ಕ್ಷೇತ್ರದಲ್ಲಿರುವ ನಲ್ವತ್ತಕ್ಕೂ ಹೆಚ್ಚು ಮಸೀದಿಗಳ ಮೌಲ್ವಿಗಳು ಒಕ್ಕೊರಲಿನಿಂದ ರೆಹಮಾನ್ ಷರೀಫ್ ಪರ ನಿಂತಿದ್ದಾರೆ. ಅಷ್ಟೇ ಅಲ್ಲ ನಾಮಪತ್ರ ವಾಪಸ್ಸು ತೆಗೆದುಕೊಳ್ಳುವಂತೆ ಇಸ್ಮಾಯಿಲ್ ಷರೀಫ್ ಮನವೊಲಿಸಲು ಯತ್ನಿಸುತ್ತಿದ್ದಾರೆ. ‘ನೀನಂತೂ ಗೆಲ್ಲುವುದಿಲ್ಲ. ಈ ಬಾರಿ ಬಿಟ್ಟರೆ ಮುಂದೆ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದಾಗಲಿ, ಗೆಲ್ಲುವ ಅವಕಾಶವಾಗಲಿ ಕಷ್ಟ. ಹೀಗಾಗಿ ರೆಹಮಾನ್ ಗೆಲುವಿನಲ್ಲಿ ಸಮುದಾಯದ ಗೆಲುವು ಕಾಣೋಣ’ ಎಂದು ಒತ್ತಡ ಹೇರುತ್ತಿದ್ದಾರೆ.

ಅದೇ ರೀತಿ ಗೌಡರು ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ವಿರುದ್ಧ ಕಣಕ್ಕಿಳಿಸಿರುವ ಮತ್ತೊಬ್ಬ ಮುಸ್ಲಿಂ ಅಭ್ಯರ್ಥಿ ಮಹಮದ್ ಅಯಾಜ್ ಖಾನ್ ಕೂಡ ಡಮ್ಮಿಯೇ. ಅವರೂ ಗೆಲ್ಲುವುದಿಲ್ಲ.

ಈ ಎರಡೂ ಕಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಹೋಗಿದ್ದಿದ್ದರೆ ಗೌಡರು ಆ ಸಮುದಾಯದ ಬಗ್ಗೆ ತೋರಿಸಿಕೊಂಡು ಬಂದಿರುವ ಮಮಕಾರವನ್ನು ಮತ್ತಷ್ಟು ಗಟ್ಟಿಯಾಗಿ ಪ್ರತಿಪಾದಿಸಬಹುದಿತ್ತು. ಈಗಲೂ ಈ ಇಬ್ಬರು ಅಭ್ಯರ್ಥಿಗಳನ್ನು ಕಣದಿಂದ ಹಿಂದಕ್ಕೆ ಸರಿಸಿಬಿಟ್ಟರೆ ಅಲ್ಪಸಂಖ್ಯಾತರ ದೃಷ್ಟಿಯಲ್ಲಿ ಗೌಡರು ಇನ್ನಷ್ಟು ದೊಡ್ಡವರಾಗುತ್ತಾರೆ. ಇಲ್ಲದಿದ್ದರೆ ಅವರು ಅಲ್ಪಸಂಖ್ಯಾತರ ಬಗ್ಗೆ ಮಾತಾಡಿದಾಗಲೆಲ್ಲ ಪ್ರಶ್ನಾರ್ಥಕ ಚಿಹ್ನೆ ಅವರನ್ನು ಅಣಕಿಸುತ್ತಿರುತ್ತದೆ.

ವ್ರತ ಕೆಟ್ಟರೂ ಸುಖ ಪಡಬೇಕು ಅನ್ನೋದು ಗಾದೆ. ಆದರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೌಡರು ಈಗ ವ್ರತ ಕೆಟ್ಟಿರುವುದರಿಂದ ಆಗುವ ಲಾಭವಾದರೂ ಏನೂ ಇಲ್ಲ. ಕನಿಷ್ಠ ಪಕ್ಷ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆಯೇ ಅದೂ ಇಲ್ಲ. ಹೋಗಲಿ, ಉಳಿದೆರಡು ಪಕ್ಷಗಳ ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ರಾಜಕೀಯ ಲಾಭವೇನಾದರೂ ಆಗುತ್ತದೆಯೇ ಅದೂ ಇಲ್ಲ. ಆಯಿತು, ಮುಂದಿನ ವಿಧಾನಸಭೆ ಚುನಾವಣೆ ದಿಕ್ಸೂಚಿ ಬರೀತಾರೆಯೇ, ಉಹುಂ ಆಗಲ್ಲ. ಏಕೆಂದರೆ ಅದಕ್ಕೆ ಈ ಚುನಾವಣೆಯಲ್ಲಿ ಗೆಲ್ಲಬೇಕಾಗುತ್ತದೆ. ಈಗ ಮೂರೂ ಕಡೆ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳಿಗೆ ಆ ದಿಕ್ಸೂಚಿ ತೋರಿಸುವುದಿರಲಿ, ಈಗಿನ ಚುನಾವಣೇಲಿ ತಮ್ಮ ಹಣೆಬರಹ ಬರೆದುಕೊಂಡರೇ ಸಾಕಾಗಿದೆ. ಹೀಗಾಗಿ ಜೆಡಿಎಸ್ ಸ್ಪರ್ಧೆ ನೆಪಕ್ಕೆ ಮಾತ್ರ. ಈ ರೀತಿ ನೆಪ ಆಗುವುದರ ಬದಲು ಗೌಡರು ತಮ್ಮ ಒರಿಜಿನಲ್ ಚಿಂತನೆಗೆ ಅನುಗುಣವಾಗಿ ಕ್ಯಾಂಡಿಡೇಟ್ ಗಳನ್ನು ಹಾಕದೇ ಹೋಗಿದ್ದಿದ್ದರೆ, ಮಾತು ತಪ್ಪಿದ ಅಪವಾದದಿಂದಲಾದರೂ ಪಾರಾಗಬಹುದಿತ್ತು.

ಇಷ್ಟವಾಗ್ತಿದೆಯೇ ಸುದ್ದಿಯ ಸೀಳುನೋಟ? ಹಾಗಾದ್ರೆ ಈ ಲಿಂಕಿನಲ್ಲಿ ಡಿಜಿಟಲ್ ಕನ್ನಡ ಆ್ಯಪ್ ಡೌನ್ಲೋಡ್ ಮಾಡ್ಕೋಳಿ.

Leave a Reply