ನನ್ ಹತ್ರ ಇರೋದೆ ನಾಲ್ಕು ಡ್ರೆಸ್ ಅಂತ ಬೇಜಾರಾಗಿರೋರೆಲ್ಲ ಗಮನಿಸಿ, ಫೇಸ್ಬುಕ್ ಯಜಮಾನನ ಹತ್ತಿರವೂ ಇರೋದು ಅಷ್ಟೇ!

 

ಸೌಮ್ಯ ಸಂದೇಶ್

ವೀಕೆಂಡ್ ಎದುರಿಗಿದೆ. ನಮ್ಮಲ್ಲಿ ಹಲವರಿಗಾದರೂ ಒಂದಿಷ್ಟು ಉಡುಪು ಖರೀದಿಸುವ ಉಮೇದಿರುತ್ತದೆ. ರೇಟು ಹೆಚ್ಚಾಗೋಯ್ತು ಅನ್ನೋದರಿಂದ ಹಿಡಿದು, ಥತ್… ಡಿಫರೆಂಟು ಡಿಸೈನೇ ಸಿಗ್ತಿಲ್ಲ ಎನ್ನುವವರೆಗೆ ಹಲವು ಕಿರಿಕಿರಿಗಳು ಇಲ್ಲಿ ಕಾಡುತ್ತವೆ.

ಈ ಯುವ ಜಮಾನಾಕ್ಕಂತೂ ಸ್ಟೈಲ್ ವಿಚಾರದಲ್ಲಿ ತೃಪ್ತಿ ಕಡಿಮೆಯೇ. ಒಂದು ಹೊಸದು ಎಂಬ ಸಂಭ್ರಮದಲ್ಲಿರುವಾಗಲೇ ಇನ್ನೊಂದು ನಮೂನೆ ವೇಷಭೂಷಣ ಕಣ್ಸೆಳೆದು ಖರೀದಿಗೆ ಪ್ರೇರೇಪಿಸುತ್ತದೆ. ಹೀಗಾಗಿ ಬಟ್ಟೆಯ ಕಪಾಟಿನಲ್ಲಿ ವಸ್ತ್ರ ತುಂಬಿಸಿಕೊಂಡಷ್ಟೂ ಕಡಿಮೆಯೇ. ವೃತ್ತಿ ಮತ್ತು ವ್ಯಕ್ತಿತ್ವದ ಯಶಸ್ಸಿನಲ್ಲಿ ಡ್ರೆಸ್ಸಿಂಗ್ ತುಂಬ ಮಹತ್ವದ ಪಾತ್ರ ವಹಿಸುತ್ತದೆ ಅಂತ ಮ್ಯಾನೇಜ್ ಮೆಂಟ ದಿಗ್ದರ್ಶಕರೆಲ್ಲ ಉಪನ್ಯಾಸ ಮಾಡೋ ಕಾಲ ಇದು.

ಇವೆಲ್ಲವೂ ಹೌದಾಗಿರಬಹುದು. ಆದರೆ ನೀಟಾಗಿ ಡ್ರೆಸ್ ಮಾಡೋದಂದ್ರೆ ಥರ ಥರದ ಸ್ಟೈಲುಗಳ ಅನುಕರಣೆಯೇ ಆಗಬೇಕಿಲ್ಲ ಅನ್ನೋದನ್ನು ಫೇಸ್ಬುಕ್ ಯಜಮಾನ ಮಾರ್ಕ್ ಜುಕರ್ಬರ್ಗ್ ಸಾರುತ್ತಿದ್ದಾರೆ. ಕೋಟ್ಯಂತರ ಬಿಲಿಯನ್ ಡಾಲರ್ ಗಳ ವಹಿವಾಟು ನಡೆಸುತ್ತ, ಜಗತ್ತಿನ ಜಾಲಿಗರಿಗೆ, ಯುವ ಸಮೂಹಕ್ಕೆಲ್ಲ ಆದರ್ಶವಾಗಿರುವ ಜುಕರ್ಬರ್ಗ್, ಬಟ್ಟೆ ವಿಚಾರದಲ್ಲಿ ಅಗ್ದೀ ಸಿಂಪಲ್ಲು. ಯಾವತ್ತೂ ಬೂದುಬಣ್ಣದ ಟೀ ಶರ್ಟ್ ಮತ್ತು ಜೀನ್ಸ್ ನಲ್ಲೇ ಕಾಣಿಸಿಕೊಳ್ಳುವ ಆತ, ಮೊನ್ನೆ ತನ್ನ ಬಟ್ಟೆ ಕಪಾಟನ್ನು ಜಗತ್ತಿನೆದುರು ತೆರೆದಿರಿಸಿದ್ದಾನೆ. ಎರಡೇ ಬಣ್ಣದ ಡಜನ್ ಡಜನ್ ಟೀ ಶರ್ಟ್ ಗಳಷ್ಟೇ ಜುಕರ್ಬರ್ಗ್ ಉಡುಪು ಸಾಮ್ರಾಜ್ಯ ಎಂಬುದು ಈ ಮೂಲಕ ಖಾತ್ರಿಯಾಗಿದೆ.

ಜನವರಿ 25ಕ್ಕೆ ಜುಕರ್ಬರ್ಗ್ ಹಾಕಿರುವ ಆಸಕ್ತಿದಾಯಕ ಪೋಸ್ಟ್ ಇದು. ಮಗಳು ಹುಟ್ಟಿದ ನಂತರ ಎರಡು ತಿಂಗಳು ರಜೆ ತಗೊಂಡಿದ್ದೆ. ಈಗ ಆಫೀಸಿಗೆ ಹೋಗ್ಬೇಕು, ಯಾವ ಬಟ್ಟೆ ಹಾಕ್ಲಿ ಎಂಬ ಗೊಂದಲ ಅಂತ ಜುಕರ್ಬರ್ಗ್ ಬರೆದುಕೊಂಡಿದ್ದಾರೆ. ಯೂನಿಫಾರ್ಮ್ ತೋರಿಸುತ್ತ ಯಾವ್ದು ಚೆಂದ ಅಂತ ತಲೆಕೆಡಿಸಿಕೊಂಡಂತಿದೆ ಜುಕರ್ಬರ್ಗ್ ವರಸೆ.

mark1

ಅದೇಕೇ ಒಂದೇ ರೀತಿ ಬಟ್ಟೆ ಹಾಕ್ತೀರಿ ಅಂತ ಈ ಹಿಂದೆಯೇ ಜುಕರ್ಬರ್ಗ್ ಗೆ ಪ್ರಶ್ನೆ ಎದುರಾಗಿತ್ತು. ಈ ಮಹಾನುಭಾವ ಅದಕ್ಕೆ ಹಿಂಗೆ ಉತ್ರ ಕೊಟ್ಟಿದ್ದ- ‘ಮನಶ್ಶಾಸ್ತ್ರದ ಪ್ರಕಾರ ಒಂದು ವಿಷಯ ಸಾಬೀತಾಗಿದೆ. ಅದೆಂದರೆ- ಯಾವ ಧಿರಿಸು ತೊಡಲಿ, ಎಲ್ಲಿ ಊಟ ಮಾಡಲಿ ಅಂತೆಲ್ಲ ನಾವು ತಲೆಕೆಡಿಸಿಕೊಳ್ಳುವ ಚಿಕ್ಕಚಿಕ್ಕ ಸಂಗತಿಗಳು ನಿಜಕ್ಕೂ ನಮ್ಮ ಮಿದುಳಿನ ಮೇಲೆ ಭಾರ ಹೇರಿ ಅಷ್ಟರಮಟ್ಟಿಗೆ ಸುಸ್ತಾಗಿಸುತ್ತವೆ. ನಾನು ಕೋಟ್ಯಂತರ ಜನರ ಆಶೋತ್ತರಗಳಿಗೆ ಸ್ಪಂದಿಸಬಹುದಾದ ಅದೃಷ್ಟದ ಜಾಗದಲ್ಲಿದ್ದೇನೆ. ಹೀಗಾಗಿ ಬಟ್ಟೆಯ ಆಯ್ಕೆಯಲ್ಲಿ ಸಮಯ ವ್ಯಯಿಸುವುದು ನನ್ನ ಪಾಲಿಗೆ ಅರ್ಥಹೀನ. ಆ ಯೋಚನೆಗಳಿಗೆ ಮನಸ್ಸಿನಲ್ಲಿ ಜಾಗ ನೀಡುವುದಕ್ಕೆ ಬದಲು, ಸೃಜನಶೀಲತೆಯಲ್ಲೇ ಇನ್ನಷ್ಟು ತೊಡಗಿಸಿಕೊಳ್ಳಬಹುದು.’

ನನ್ ಹತ್ರ ಇರೋದೆ ನಾಲ್ಕು ಜೊತೆ ಬಟ್ಟೆ ಅಂತ ಯಾರೂ ಕುಗ್ಗಬೇಕಿಲ್ಲ. ಈ ಕೋಟ್ಯಧಿಪತಿಯನ್ನು ನೋಡಿ ಸಮಾಧಾನಿಸಿಕೊಳ್ಳಬಹುದು. ಇರುವ ನಾಲ್ಕು ಬಟ್ಟೆಗಳನ್ನೇ ನೀಟಾಗಿ ಇಟ್ಟುಕೊಂಡು ಜಗತ್ತಿನ ಇನ್ನಿತರ ಸುಂದರ ಸಂಗತಿಗಳ ಬಗ್ಗೆ ಯೋಚಿಸುವುದಕ್ಕೆ ಮನಸ್ಸು ಫ್ರೀ ಮಾಡ್ಕೋಬಹ್ದು. ಏನಂತೀರಾ?

Leave a Reply