ಸರ್ಕಾರದ ಪಾತ್ರ ಕಡೆಗಣಿಸಿತೇ ಏರ್ಲಿಫ್ಟ್? ಏನು ಸರ್ಕಾರದ ಪರ ಪಾಯಿಂಟ್?

 

ಡಿಜಿಟಲ್ ಕನ್ನಡ ಟೀಮ್

ಜನಪ್ರಿಯತೆ ಗಳಿಸಿ ಗಳಿಕೆಯಲ್ಲಿ ಮುನ್ನುಗ್ಗುತ್ತಿರುವ ಹಿಂದಿ ಚಿತ್ರ ಏರ್ಲಿಫ್ಟ್, ಅವತ್ತಿನ ಸರ್ಕಾರಕ್ಕೆ ಸಲ್ಲಬೇಕಿದ್ದ ಶ್ರೇಯಸ್ಸನ್ನು ನೀಡದೇ ಹೋಯ್ತಾ? ಹಾಗೊಂದು ಚರ್ಚೆ ರಾಜತಾಂತ್ರಿಕ ವಲಯದಲ್ಲಿ ಶುರುವಾಗಿದೆ.

ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು, ‘ಇದೊಂದು ಚಿತ್ರವಾಗಿರುವುದರಿಂದ ಕಲಾತ್ಮಕ ಸ್ವಾತಂತ್ರ್ಯವನ್ನು ತೆಗೆದುಕೊಂಡಿದೆ. ಹೀಗಾಗಿ 1990ರಲ್ಲಿ ನಡೆದ ಘಟನೆಗಳ ವಾಸ್ತವಕ್ಕೆ ಹತ್ತಿರದ ಚಿತ್ರಣ ಇದಲ್ಲ’ ಎಂದಿದ್ದಾರೆ. ಮಾಜಿ ರಾಜತಾಂತ್ರಿಕ ಅಧಿಕಾರಿ ನಿರುಪಮಾ ರಾವ್ ಅವರಂತೂ ಟ್ವಿಟರ್ ನಲ್ಲಿ ಕಟುವಾದ ಪ್ರತಿರೋಧವನ್ನೇ ದಾಖಲಿಸಿದ್ದಾರೆ. 1990-91ರ ಸಮರದಲ್ಲಿ ವಿದೇಶ ವ್ಯವಹಾರಗಳ ಸಚಿವಾಲಯದ ಪಾತ್ರದ ಕುರಿತು ಏರ್ಲಿಫ್ಟ್ ತಂಡಕ್ಕೆ ಅಧ್ಯಯನದ ಕೊರತೆ ಢಾಳಾಗಿದೆ ಎಂದೇ ಅವರು ಆಕ್ರೋಶ ಹೊರಹಾಕಿದ್ದಾರೆ.

ಚಿತ್ರ ನೋಡಿದರೆ, ಭಾರತೀಯರನ್ನು ರಕ್ಷಿಸುವುದರಲ್ಲಿ ಸರ್ಕಾರದ ಪಾತ್ರ ನಗಣ್ಯವಾಗಿತ್ತು ಹಾಗೂ ಉದ್ಯಮಿಯ ಪ್ರಯತ್ನದಿಂದಲೇ ಜನರು ಹೊರಬರಲು ಸಾಧ್ಯವಾಯಿತು ಎಂಬಂತೆ ಇದೆ. ಆದರೆ 1.77 ಲಕ್ಷ ಭಾರತೀಯರನ್ನು ಯಾರೋ ಒಂದಿಬ್ಬರು ಉದ್ಯಮಿಗಳು ರಕ್ಷಿಸಿ ತರಲಾದೀತೇ? ಇಲ್ಲಿ ಸರ್ಕಾರದ ಪಾತ್ರವೂ ಗಣನೀಯವಾಗಿತ್ತು ಎಂಬುದು ರಾಜತಾಂತ್ರಿಕ ವಲಯದ ಅಭಿಪ್ರಾಯ. ‘ನೈಜ ಘಟನೆ ಸುತ್ತಲಿನ ಕಾಲ್ಪನಿಕ ಸೃಷ್ಟಿ ಇದು ಎಂದು ಮೊದಲೇ ಹೇಳಿದ್ದೇವೆ. ಕಟ್ಯಾಲ್ ಪಾತ್ರಸೃಷ್ಟಿಯ ಸುತ್ತ ಹೆಣೆದ ಕತೆ ಇದು. ಇನ್ನು ನಿಜ ಯಾವುದೆಂಬ ಬಗ್ಗೆ ಭಿನ್ನ ಅಭಿಪ್ರಾಯಗಳು ಇದ್ದೇ ಇವೆ’ ಅನ್ನೋದು ಚಿತ್ರದ ನಿರ್ದೇಶಕ ರಾಜಾಕೃಷ್ಣ ಮೆನನ್ ಪ್ರತಿಕ್ರಿಯೆ.

ಆಗಿನ ವಿ. ಪಿ. ಸಿಂಗ್ ಸರ್ಕಾರದಲ್ಲಿ ದೂರಸಂಪರ್ಕ ಸಚಿವರಾಗಿದ್ದ ಕೆಪಿ ಉನ್ನಿಕೃಷ್ಣನ್ ಅವರು ‘ಹಿಂದುಸ್ತಾನ್ ಟೈಮ್ಸ್’ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಸರ್ಕಾರದ ಪ್ರಯತ್ನದ ಪರವಾದ ಕೆಲ ಆಸಕ್ತಿಕರ ಅಂಶ ಬಿಚ್ಚಿಟ್ಟಿದ್ದಾರೆ.

  • ಬಗ್ದಾದ್ ಹೊರವಲಯದಲ್ಲಾದ ಸದ್ದಾಂ ಹುಸೇನ್ ಜತೆಗಿನ ಮಾತುಕತೆಯಲ್ಲಿ ಆತ ಭಾರತಕ್ಕೆ ನೀಡಿದ್ದ ಭರವಸೆ, ‘ನಾನು ಕಾಶ್ಮೀರ ವಿವಾದದ ಸಂದರ್ಭದಲ್ಲೇ ಭಾರತವನ್ನು ಬೆಂಬಲಿಸಿದ್ದೇನೆ. ನಿಮ್ಮ ಜನರ ಬಗ್ಗೆ ನನಗೆ ಯಾವತ್ತೂ ಅನುಕಂಪವಿದೆ.’
  • ಕುವೈತ್ ನ ಕೆಲವು ಶ್ರೀಮಂತ ಪಂಜಾಬಿ ಉದ್ಯಮಿಗಳನ್ನು ವಿಶೇಷ ವಿಮಾನದಲ್ಲಿ ಕುವೈತ್ ನಿಂದ ಪಾರು ಮಾಡಿ ತಂದಾಗ ಆಗಿನ ವಿದೇಶ ಮಂತ್ರಿ ಐ. ಕೆ. ಗುಜ್ರಾಲ್ ವಿರುದ್ಧ ಟೀಕೆಗಳು ಕೇಳಿಬಂದವು.
  • ಚೆನ್ನೈ ಮತ್ತು ಬೆಂಗಳೂರಿನಲ್ಲಿ ನಿಷ್ಕ್ರಿಯವಾಗಿ ನಿಂತಿದ್ದ 20 ವಿಮಾನಗಳನ್ನು ಕಾರ್ಯಾಚರಣೆಗೆ ಬಳಸುವ ನಿರ್ಧಾರ ಕೈಗೊಳ್ಳಲಾಯಿತು. ಹಿಂದಿನ ಸರ್ಕಾರದ ಏರ್ ಬಸ್ ಒಪ್ಪಂದವನ್ನು ತನಿಖೆಗೆ ಒಳಪಡಿಸಿದ್ದರಿಂದ ಅವಕ್ಕೆ ಅಂಥ ಸ್ಥಿತಿ ಒದಗಿತ್ತು. ಹತ್ತೆ ದಿನಗಳಲ್ಲಿ ಈ ವಿಮಾನಗಳನ್ನು ಹಾರಾಟಕ್ಕೆ ಸಿದ್ಧಪಡಿಸಲಾಯಿತು.

Leave a Reply