ಸಿನಿಮಾದಷ್ಟು ರೋಮ್ಯಾಂಟಿಕ್ ಅಲ್ಲ, ಹಾಗಂತ ಬಸಿರೆಂಬುದು ಭರಿಸಲಾಗದ ನೋವಲ್ಲ

author-shamaಬಸಿರಿನ ಮೂರನೇ ತ್ರೈಮಾಸಿಕ. ಇದು ಕೊನೆಯ ಮೂರು ತಿಂಗಳು (ಏಳರಿಂದ ಒಂಭತ್ತು) ದೈಹಿಕವಾಗಿ ಬಹಳ ಸುಸ್ತಿನ ಹಂತ. ಬಹುತೇಕ ವಾಂತಿಯಂಥ ಕಿರಿಕಿರಿಗಳು ನಿಂತಿದ್ದು ಆಹಾರ ಸೇವನೆಗೆ ತೊಂದರೆ ಇರುವುದಿಲ್ಲ. ಆದರೆ ದೇಹದ ತೂಕವೇ ಬಹಳಷ್ಟು ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಬಸಿರಿನ ಸಮಯದಲ್ಲಿ ಸುಮಾರು ಹತ್ತು ಕೆ.ಜಿಯಷ್ಟು ತೂಕ ಹೆಚ್ಚಾಗುತ್ತದೆ. ಒಬ್ಬೊಬ್ಬರ ದೇಹ ಪ್ರಕೃತಿ, ಅನುವಂಶಿಕ ಗುಣಗಳಿಗನುಸಾರವಾಗಿ ಇದರಲ್ಲಿ ಭಿನ್ನತೆಗಳೂ ಇರುತ್ತಾವೆ. ವಿಶೇಷ ಏನು ಗೊತ್ತಾ ಮಗುವಿನ ತೂಕಕ್ಕೂ ಇದಕ್ಕೂ ಸಂಬಂಧವೇ ಇಲ್ಲದಿರುವುದುಂಟು. ಅಂದರೆ ತಾಯಿಯಾಗುವವಳ ತೂಕ ಹೆಚ್ಚಾದ ತಕ್ಷಣ ಮಗು ಟುಂ ಟುಂ ಆಗಿ ಗುಂಡಗಿರುತ್ತೆ ಅಂತ ಹೇಳೋಕಾಗದು. ಮಗುವಿನ ಸುತ್ತಲೂ ರಕ್ಷಣೆಗಿರುವ ಗರ್ಭ ದ್ರವ, ಪ್ಲಾಸೆಂಟಾ, ಗರ್ಭ ಚೀಲ ಇವೆಲ್ಲದರ ವಜ್ಜೆ ಸೇರಿರುತ್ತದೆ. ಇದು ಒಬ್ಬರಿಂದೊಬ್ಬರಿಗೆ ಭಿನ್ನವಾಗಿರುತ್ತದೆ.

ಭಾವನಾತ್ಮಕವಾಗಿ ಕೂಡ ಇದು ಸೂಕ್ಷ್ಮ ಕಾಲ. ಒಂದೆಡೆ ಇನ್ನೇನು ಮಗುವನ್ನ ತೋಳಿನಲ್ಲಿ ಎತ್ತಿ ಆಡಿಸುವ ಕನಸಾದರೆ ಇನ್ನೊಂದೆಡೆ ಏನೋ ಅವ್ಯಕ್ತ ಭಯ ಕಾಡುತ್ತಿರುತ್ತದೆ. ಮಗುವಿನ ಬೆಳವಣಿಗೆ ಹೆಚ್ಚಾಗುವುದರ ಜತೆಗೇ ಚಲನೆಯೂ ಹೆಚ್ಚಾಗಿರುತ್ತದೆ. ಪುಳಕದ ಜತೆ ಜತೆಗೇ ಆತಂಕ ಕೂಡ ಇರುತ್ತದೆ. ಮಗು ಹುಟ್ಟಿದ ನಂತರ ನೂರಾರು ವಿಷಯಗಳ ಕಡೆ ಗಮನ ಹೋಗುವುದು ಹೌದಾದರೂ ಪ್ರತಿ ಬಸುರಿಯ ಮೊದಲ ಪ್ರಾರ್ಥನೆ ಒಂದೇ. ಮಗುವಿನ ಬಣ್ಣ, ರೂಪ ಹೇಗಾದರೂ ಇರಲಿ, ಹೆಣ್ಣಾಗಲೀ ಗಂಡಾಗಲೀ ತನಗೆ ಯಾವುದೇ ವೈಕಲ್ಯಗಳಿಲ್ಲದ ಮಗು ಜನಿಸಲಿ ಎಂಬುದಷ್ಟೇ.

ದೇಹದಲ್ಲಿ ತುಂಬಾನೇ ಬದಲಾವಣೆಗಳು ಉಂಟಾಗುವ ಹಂತವಿದು. ಎಲ್ಲಾ ಅಂಗಾಂಗಗಳಲ್ಲೂ ಬದಲಾವಣೆಗಳು ಆಗುತ್ತವೆ. ಕೊಂಚ ಇರುಸು ಮುರುಸು; ಸಣ್ಣಗೊಂದು ಕಿರಿಕಿರಿಯ ಭಾವ ಎಡತಾಕುತ್ತಲೇ ಇರುತ್ತವೆ. ಬಹಳ ಮುಖ್ಯವಾದವುಗಳೆಂದರೆ :

 • ಸ್ತನಗಳ ಗಾತ್ರ ಹಿಗ್ಗುವಿಕೆ: ಹೆರಿಗೆಯ ದಿನಗಳು ಸಮೀಪಿಸುತ್ತಿರುವಂತೆ ಸ್ತನಗಳ ಗಾತ್ರ ಹೆಚ್ಚಾಗುತ್ತದೆ. ಕೆಲವರಿಗೆ ತಿಳಿ ಹಳದಿ ಬಣ್ಣದ ಕೊಲೆಸ್ಟ್ರಂ ಕೊಂಚ ಹೊರ ಸೂಸುವುದೂ ಇರುತ್ತದೆ. ಹೀಗಿದ್ದಲ್ಲಿ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದು ಅವಶ್ಯಕ.
 • ದೇಹಾಕಾರ: ತೂಕ ವ್ಯತ್ಯಯದಿಂದಾಗಿ ದೇಹದ ಆಕಾರವೇ ಪೂರ್ಣ ಬದಲಾದರೂ ಆಶ್ಚರ್ಯವಿಲ್ಲ. ಫಿಗರ್ ಕಾಪಾಡಿಕೊಳ್ಳುವುದಕ್ಕಿದು ಸಮಯವಲ್ಲ. ಅಂದಕ್ಕಿಂತ ಆರೋಗ್ಯಕ್ಕೆ ಹೆಚ್ಚು ಗಮನ ಕೊಡುವುದೇ ಆದ್ಯತೆ ಮತ್ತು ದೇಹಕ್ಕೆ ಹಿತವೆನಿಸುವ ಬಟ್ಟೆ ಧರಿಸುವುದು ಒಳ್ಳೆಯದು.
 • ನೋವುಗಳು: ಬೆನ್ನು, ಸೊಂಟದ ಭಾಗದಲ್ಲಿ ಅಸಾಧ್ಯ ನೋವು ಕಾಣಿಸುವುದುಂಟು. ಮಗುವಿನ ತೂಕ ಹೆಚ್ಚಿ ಪೆಲ್ವಿಕ್ ಮೂಳೆಗಳ ಜಾಯಿಂಟ್^ಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಹಾರ್ಮೋನುಗಳು ಕೆಲಸ ಮಾಡುತ್ತಲೇ ಇರುತ್ತವೆ. ಈ ಪ್ರಕ್ರಿಯೆ ಸೊಂಟ, ಬೆನ್ನಿನ ಮೇಲೆ ಪರಿಣಾಮ ಬೀರುತ್ತಾವೆ. ಬೆನ್ನಿಗೆ ಹಿತವೆನಿಸುವಂಥ ಭಂಗಿಯಲ್ಲಿ ಕೂರುವುದು, ಅವಶ್ಯಕತೆಯಿದ್ದಲ್ಲಿ ಬಿಸಿ ಶಾಖ ಕೊಡುವುದು ಅಥವಾ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡುವುದು ಸ್ವಲ್ಪ ಮಟ್ಟಿನ ಶಮನ ನೀಡುತ್ತವೆ. ಜತೆಗೆ ಎತ್ತರ ಹಿಮ್ಮಡಿಯ ಚಪ್ಪಲಿ ಧರಿಸದಿರುವುದು ಸಹಾಯಕ.
 • ಉಸಿರಾಟದ ತೊಂದರೆಗಳು: ಇವು ಬಹುಪಾಲು ತಪ್ಪಿದ್ದೇ ಅಲ್ಲ. ದೇಹದೊಳಗೆ ಇಷ್ಟಲ್ಲ ನಡೆಯುವಾಗ ಸಹಜವಾಗಿಯೇ ಉಸಿರಾಟದಲ್ಲಿ ಏರುಪೇರಾದೀತು. ತುಂಬಾನೇ ತೊಂದರೆ ಎನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
 • ಎದೆಯುರಿ: ಎದೆಯುರಿ ಅಥವಾ ಅಸಿಡಿಟಿಯಂಥ ಲಕ್ಷಣಗಳು ಸಾಮಾನ್ಯ. ನಿವಾರಣೆಗಾಗಿ ಸಾಕಷ್ಟು ನೀರು, ದ್ರವಾಹಾರ ಸೇವನೆ ಸೂಕ್ತ. ಹುಳಿ ಅಂಶವಿರುವಂಥವು, ಎಣ್ಣೆ ಪದಾರ್ಥಗಳು, ಮಸಾಲೆಯುಕ್ತ ಆಹಾರಗಳನ್ನು ಆದಷ್ಟು ಕಡಿಮೆ ಮಾಡಿದರೆ ಇದನ್ನು ಒಂದು ಮಟ್ಟಿಗೆ ಹಿಡಿತದಲ್ಲಿಡಬಹುದು. ಸುಲಭವೆಂಬ ಕಾರಣಕ್ಕೆ ಆಂಟಾಸಿಡ್ ಗುಳಿಗೆಗಳನ್ನು ತೆಗೆದುಕೊಳ್ಳುವ ಬದಲು ಆಹಾರದ ಮೂಲಕವೇ ನಿರ್ವಹಣೆ ಮಾಡುವುದು ಆರೋಗ್ಯಕರ.
 • ಊತಗಳು: ಬೆಳೆಯುತ್ತಿರುವ ಮಗು, ಅದಕ್ಕನುಗುಣವಾಗಿ ಹಿಗ್ಗುವ ಗರ್ಭಕೋಶ ನರಗಳು, ರಕ್ತನಾಳಗಳ ಮೇಲೆ ನಿರಂತರ ಒತ್ತಡ ಹಾಕುತ್ತಲೇ ಇರುತ್ತವೆ. ಕಾಲು, ಕೈಗಳಲ್ಲಿ ನೀರು ತುಂಬಿಕೊಂಡಂತಾಗಿ ಊತ ಬರುವುದು ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಸಾಧ್ಯವಾದಷ್ಟೂ ಬೇರೆ ಬೇರೆ ಭಂಗಿಯಲ್ಲಿ ಕೂರುವುದು, ಹಿತ ಮಿತವಾದ ವ್ಯಾಯಾಮ ಸ್ವಲ್ಪ ಸಹಕಾರಿ. ಇನ್ನುಳಿದಂತೆ ಇದಕ್ಕಾಗಿ ಚಿಂತೆಯೂ ಬೇಡ; ಔಷಧಿಯೂ ಬೇಡ. ಹೆರಿಗೆಯಾಗಿ ವಾರದೊಳಗೆ ಇವೆಲ್ಲ ನೀವು ಹೇಳದಿದ್ದರೂ ತಾನಾಗಿಯೇ ಹೋಗುತ್ತವೆ.
 • ವೆರಿಕೋಸ್ ಮತ್ತು ಮೂಲವ್ಯಾಧಿ : ರಕ್ತನಾಳಗಳ ಊತವಾಗಿ ನೀಲಿ ಮಿಶ್ರಿತ ಕೆಂಪು ಬಣ್ಣದ ಗೆರೆಗಳು ಚರ್ಮದಡಿಯಲ್ಲಿ, ಸಾಮಾನ್ಯವಾಗಿ ತೊಡೆಗಳಲ್ಲಿ (varicose veins) ಕಾಣಿಸಿಕೊಳ್ಳುತ್ತವೆ. ಜತೆಗೇ ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದು, ಮಲಬದ್ಧತೆಗಳಿಂದಾಗಿ ಕೆಲವೊಮ್ಮೆ ಮೂಲವ್ಯಾಧಿ ಕೂಡ ಕಾಣಿಸಿಕೊಳ್ಳಬಹುದು. ಇದು ಕೆಲವರಿಗೆ ಹೆರಿಗೆಯ ನಂತರ ತಂತಾನೇ ಗುಣವಾಗುತ್ತವೆ. ಕೆಲವರಲ್ಲಿ ನಂತರವೂ ಹಾಗೇ ಮುಂದುವರಿಯುವ ಸಾಧ್ಯತೆಯೂ ಇರುತ್ತದೆ. ಸಾಕಷ್ಟು ನೀರು ಕುಡಿಯುವುದು ಈ ಮೂಲಕ ಮಲಬದ್ಧತೆ ತಡೆಯುವುದರಿಂದ ಹೀಗಾಗದಂತೆ ತಡೆಯಬಹುದು.
 • ಆಗ್ಗಿಂದಾಗ್ಗೆ ಮೂತ್ರ ವಿಸರ್ಜನೆ: ಏನೇ ಮಾಡಿದರೂ ಇದು ತಡೆಗಟ್ಟಲಾಗದ ಪ್ರಕ್ರಿಯೆ. ಆದ್ದರಿಂದ ಇದರ ಬಗ್ಗೆ ಏನೂ ಚಿಂತಿಸದೇ ಇದಕ್ಕೆ ಹೊಂದಿಕೊಳ್ಳುವುದು ಬಹಳ ಸುಲಭೋಪಾಯ. ಹಾಗಂತ ಸ್ವಚ್ಛತೆಯಿಲ್ಲದ ಶೌಚಾಲಯವನ್ನು ಸುತರಾಂ ಬಳಸ ಕೂಡದು. ಈ ಸಮಯದಲ್ಲಿ ಮೂತ್ರನಾಳಕ್ಕೆ ಅಥವಾ ಯೋನಿ ಸೋಂಕು ತಗುಲಿದಲ್ಲಿ ಬಹಳ ಕಷ್ಟ. ಸ್ವಚ್ಛತೆ ಮೊದಲ ಆದ್ಯತೆಯಾಗಬೇಕು. ಹಾಗೊಂದು ವೇಳೆ ಸೋಂಕು ಉಂಟಾದಲ್ಲಿ ನಿರ್ಲಕ್ಷಿಸದೇ ತಕ್ಷಣ ಚಿಕಿತ್ಸೆ ತೆಗೆದುಕೊಳ್ಳಲೇ ಬೇಕು. ಇಲ್ಲದೇ ಹೋದರೆ ಇದು ಮಗುವಿಗೇ ತೊಂದರೆ ತರುವ ಸಾದ್ಯತೆಗಳೂ ಇವೆ.
 • ಯೋನಿ ಸ್ರಾವ : ಕೆಲವೊಮ್ಮೆ ಬಿಳಿಸೆರಗಿನಂಥ ಯೋನಿ ಸ್ರಾವ ಆಗುವುದು ಕೆಲವರಲ್ಲಿ ಸಾಮಾನ್ಯ. ಇದು ನಿರಂತರ ಇದ್ದಲ್ಲಿ, ವಾಸನೆಯಿಂದ ಕೂಡಿದ್ದಲ್ಲಿ ಹಾಗೂ ತುರಿಕೆ ಅಥವಾ ಇನ್ನಾವುದೇ ಲಕ್ಷಣಗಳಿದ್ದಲ್ಲಿ ನಿರ್ಲಕ್ಷ್ಯ ಬೇಡ.

ಕಥೆ ಕಾದಂಬರಿಗಳಲ್ಲಿ ವಿವರಿಸಿದ ಹಾಗೆ, ಸಿನೆಮಾಗಳಲ್ಲಿ ತೋರಿಸಿದಷ್ಟು ರಮಣೀಯವಲ್ಲ ಬಸಿರು. ಹಾಗಂತ “ಅಯ್ಯೋ ಇಷ್ಟೆಲ್ಲಾ ಅನುಭವಿಸಬೇಕೇ” ಅಳುವುದೂ ತರವಲ್ಲ. ಬದುಕಿನೊಂದು ಹಂತವಿದು. ನಲಿವು ನೋವು ಎರಡೂ ಮಿಳಿತವಾಗಿರುವ ಒಂದೇ ಒಂದು ಸಮಯವೆಂದರೆ ಬಸಿರು. ಅದನ್ನು ಎಷ್ಟು ಸಾಧ್ಯವಾಗಿಸುತ್ತೋ ಅಷ್ಟು ಹಗುರಾಗಿಸುವುದು ನಮ್ಮ ಕೈಯಲ್ಲಿದೆ. ಎಲ್ಲವೂ ಹೊಸ ಅನುಭವವೇ ಎಂದು ಸ್ವೀಕರಿಸಿದರೆ ಪ್ರತಿ ಘಳಿಗೆ ಅಮೃತ ಘಳಿಗೆ.

2 COMMENTS

 1. ಆರೋಗ್ಯ ವಿಜ್ಞಾನದಲ್ಲಿ ಹೇಳಬೇಕಾದ ವಿಚಾರಗಳನ್ನು ಆಪ್ತವಾಗಿ ಹೇಳುವ ಸೂಕ್ಷ್ಮತೆ ನಿಮ್ಮ ಭಾಷೆಯಲ್ಲಿದೆ. ಈ ಲೇಖನಗಳ ಮಾಲೆ ಪುಸ್ತಕದ ರೂಪದಲ್ಲಿ ಬಂದು ಬಹಳಷ್ಟು ಜನರ ಉಪಯೋಗಕ್ಕೆ ಲಭಿಸಲಿ.

 2. ನಿಮ್ಮ ಹಾರೈಕೆಗೆ ಖುಷಿ. ನಿಮ್ಮ ಆಶಯ ಈಡೇರಲೆಂಬುದು ನನ್ನಾಸೆ ಕೂಡ

Leave a Reply