ವಿತ್ತ ಪ್ರಪಂಚದ ಈ ರಾಜನ್, ಮೋದಿ ವಿರೋಧಿಯೇನು?

authors-rangaswamyಇನ್ನೇನು ಕೇಂದ್ರ ಬಜೆಟ್ ಹತ್ತಿರದಲ್ಲಿದೆ. ಇಂಥ ಸಮಯದಲ್ಲಿ ಶುಕ್ರವಾರ, ಸಿ ಡಿ ದೇಶಮುಖ್ ಸ್ಮಾರಕ ಉಪನ್ಯಾಸ ನೀಡುತ್ತ ಆರ್ಬಿಐ ಗವರ್ನರ್ ರಘುರಾಮ ರಾಜನ್ ಎಚ್ಚರಿಸಿದ್ದಾರೆ- ‘ಆರ್ಥಿಕ ದರ ಸಾಧಿಸಿ ತೋರಿಸಬೇಕು ಎಂಬ ಒತ್ತಡಕ್ಕೆ ಬಿದ್ದು ನಾವು ಸಾಲದ ಇಟ್ಟಿಗೆ ಮೇಲೆ ಬೆಳವಣಿಗೆ ಸಾಧಿಸೋಕೆ ಹೋಗಬಾರದು. ಜಾಗತಿಕ ಅರ್ಥವ್ಯವಸ್ಥೆ ತಲ್ಲಣಿಸುತ್ತಿರುವ ಸಂದರ್ಭದಲ್ಲಿ ನಮ್ಮ ಶಕ್ತಿ ಇರುವುದೇ ಸಮಗ್ರ ಆರ್ಥಿಕತೆಯ ನಿರ್ವಹಣೆಯಲ್ಲಿ.’

ಹೌದು. ಆರ್ಬಿಐ ಗವರ್ನರ್ ರಘುರಾಮ ರಾಜನ್ ಅವರು ಯಾವತ್ತೂ ಸರ್ಕಾರದ ಯೆಸ್ ಗೆ ತಮ್ಮ ಯೆಸ್ ಸೇರಿಸಿ ಕೆಲಸ ಮುಗಿಸುವವರಲ್ಲ. ಹಾಗೆಂದೇ ಕೆಲವರಲ್ಲಿ ಇವರ ಬಗ್ಗೆ ಆಕ್ಷೇಪವೊಂದಿದೆ. ರಾಜನ್ ಅವರು ಮೋದಿ ಸರ್ಕಾರದ ವಿರೋಧಿಯಾ ಅಂತ. ಇದಕ್ಕೆ ಉತ್ತರ ಹುಡುಕಿಕೊಳ್ಳಬೇಕಿದ್ದರೆ, ಕೇವಲ ನಾಲ್ಕು ಹೇಳಿಕೆಗಳನ್ನು ಮುಂದಿರಿಸಿಕೊಂಡು ಅಳೆಯದೇ ಅವರ ವೃತ್ತಿಜೀವನದ ಬಗ್ಗೆ ಗಮನವಹಿಸಬೇಕಾಗುತ್ತದೆ.

ಜೇಮ್ಸ್ ಬಾಂಡ್ ಆಫ್ ಬ್ಯಾಂಕಿಂಗ , ಚೆನ್ನೈ ಎಕ್ಸ್ಪ್ರೆಸ್ ಆಫ್ ಮಾರ್ಕೆಟ್ಸ್,  ವಿತ್ತ ಜಗತ್ತಿನಲ್ಲಿಇವರ ಹೆಸರು ಈ ರೀತಿ ಚಾಲನೆಯಲ್ಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದ 23ನೆ ಗವರ್ನರ್. ಈ ಹುದ್ದೆ ಪಡೆದ ಅತಿ ಚಿಕ್ಕ ಪ್ರಾಯದ ವ್ಯಕ್ತಿ. 2013ರ ಸೆಪ್ಟೆಂಬರ್ ತಿಂಗಳಲ್ಲಿಆರ್ಬಿಐ ಗವರ್ನರ್ ಹುದ್ದೆಗೇರಿದ ಈತ, ಚಲನಚಿತ್ರ ಗಳಲ್ಲಿ ಹೀರೋ ಗಳು ಮಾಡುವ ಕೆಲಸ ನಿಜ ಜೀವನದಲ್ಲಿ ಮಾಡಿದ್ದಾರೆ. ಜಗತ್ತಿನ ಹಣಕಾಸು ನಿಯಮ ಗಳಿಗೆ ಗಳಿಗೆಗೆ ಬದಲಾಗುತ್ತೆ. ಬದಲಾದ ಪರಿಸ್ಥಿತಿಗೆ ಭಾರತದಂತ ಬೃಹತ್ ದೇಶವನ್ನು ಒಗ್ಗಿಸಿ ಮುನ್ನೆಡೆಸುವುದು ಸುಲಭದ ಮಾತಲ್ಲ. ಅದು ಗೊತ್ತಿದ್ದೇ ವಿತ್ತ ವಲಯದಲ್ಲಿ ಈತನನ್ನು ರಾಕ್ ಸ್ಟಾರ್ ರಾಜನ್ ಎಂದೂ ಕೂಡ ಕರೆಯಲಾಗುತ್ತೆ.

ಏನಿದು? ಈತನಿಗಿಂತ ಹಿಂದೆ 22 ರಿಸರ್ವ್ ಬ್ಯಾಂಕ್ ಗವರ್ನರ್ ಗಳು ಬಂದರು. ಅವರೆಲ್ಲರೂ ಮಹಾನ್ ಬುದ್ಧಿವಂತರೇ. ಆಗೆಲ್ಲಾ ಇಲ್ಲದ ಹೈಪ್ ಈತನಿಗೇಕೆ? ಯಾರು ಮಾಡದ್ದನ್ನು ಏನು ಮಾಡಿದ?  RBI  ಕೆಲಸ ರೆಪೋ ರೇಟ್ ಸಮಸ್ಥಿತಿಯಲ್ಲಿಡುವುದು, ಮಾರುಕಟ್ಟೆ ಯ ಬದಲಾವಣೆಗೆ ತಕ್ಕಂತೆ ರೇಟ್ ಹೊಂದಿಸುವುದು, ಇನಫ್ಲೇಶನ್ , ಡಿಫ್ಲೆಶನ್ ಎಂಬ ಎರಡು ಅಲುಗಿನ ಕತ್ತಿಯ ಮೇಲೆ ಸವಾರಿ ಮಾಡುವುದು , ಇವೆಲ್ಲಾ ಲಾಗಾಯ್ತಿನಿಂದ ಇದ್ದದ್ದೇ , ಹೊಸತೇನು? ಹೀಗೆ ನೂರಾರು ಪ್ರಶ್ನೆ ನಮ್ಮಲ್ಲಿ ಹುಟ್ಟುತ್ತೆ. ನಿಮಗೆ ಟಿ .ಎನ್ . ಶೇಷನ್ ನೆನಪಿರಬಹುದು. ಎಲೆಕ್ಷನ್ ಕಮಿಷನ್ ನ ಅಧ್ಯಕ್ಷರಾಗಿ ಇವರು ಬರುವ ಮೊದಲು ಹೀಗೊಂದು ಹುದ್ದೆ ಇದೆ ಎನ್ನುವುದೇ ಜನ ಸಾಮಾನ್ಯನಿಗೆ ತಿಳಿದಿರಲಿಲ್ಲ. ವ್ಯಕ್ತಿ ಭಿನ್ನವಾಗುವುದು ಹುದ್ದೆಯಿಂದಲ್ಲ, ನಡತೆಯಿಂದ. ರಾಜನ್ ಆ ರೀತಿ ಏನು ಮಾಡಿದರು, ಅವರಿಗೇಕೆ ಇಂಥ ಸಮ್ಮಾನ ತಿಳಿಯುವ ಮೊದಲು, ಆತನ ಬಾಲ್ಯ , ವಿದ್ಯಾಭ್ಯಾಸ, ಆರ್ಬಿಐ ಗವರ್ನರ್ ಹುದ್ದೆಗೂ ಮುಂಚೆ ಏನ್ಮಾಡ್ತ ಇದ್ದರು ಒಂದಷ್ಟು ತಿಳಿಯೋಣ.

ಹುಟ್ಟು -ಬಾಲ್ಯ -ವಿದ್ಯಾಭ್ಯಾಸ

ರಘುರಾಮ ಗೋವಿಂದ ರಾಜನ್ ಹುಟ್ಟಿದ್ದು , ಫೆಬ್ರವರಿ 3,  1963 ರಲ್ಲಿ ಮಧ್ಯಪ್ರದೇಶದ ಭೋಪಾಲ್ ನಲ್ಲಿ.  ತಂದೆ IB ( ಇಂಟೆಲ್ಲಿಜೆನ್ಸ್ ಬ್ಯೂರೊ ) ನಲ್ಲಿ ಸೀನಿಯರ್ ಆಫೀಸರ್. ಮೂಲತಃ ತಮಿಳುನಾಡಿಗೆ ಸೇರಿದ ಇವರು ಉದ್ಯೋಗಕ್ಕನುಗುಣವಾಗಿ ಭಾರತದ ಇತರ ರಾಜ್ಯ ನಗರಗಳಲ್ಲಿ ವಾಸಿಸುವಂತೆ ಆಯಿತು. ಹೀಗಾಗಿ ರಘುರಾಮ ರಾಮ ರಾಜನ್ ಜನನ ಮಧ್ಯಪ್ರದೇಶದಲ್ಲಿ, ನಂತರ ವಿಧ್ಯಾಭ್ಯಾಸ ಕೂಡ ತಮಿಳು ನಾಡಿನಿಂದ ದೂರವೇ! ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ತಮ್ಮ ಪ್ರೌಡ ಶಿಕ್ಷಣ ಮುಗಿಸಿದ ರಾಜನ್, 1985ರಲ್ಲಿ ತಮ್ಮ ಪದವಿ ಪಡೆದದ್ದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಡೆಲ್ಲಿ ಇಂದ. ಅದೂ  ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ! ಭಾರತದಂತ ಬೃಹತ್ ದೇಶದ ವಿತ್ತ ಪ್ರಪಂಚದ ಚುಕ್ಕಾಣಿ ಹಿಡಿದಿರುವರು ಒಬ್ಬ ಇಂಜಿನಿಯರ್!

1987 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್ ನಿಂದ ಪಡೆದದ್ದು ಪೋಸ್ಟ್ ಗ್ರಾಜುಯೆಶನ್ ಡಿಪ್ಲೋಮೋ ಪದವಿ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ನಲ್ಲಿ. 1991ರಲ್ಲಿ ಇವರು ಬರೆದ ಮಹಾ ಪ್ರಬಂಧ  Essays on Banking ಮಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT , USA )  ವತಿಯಿಂದ ಪಿಎಚ್ಡಿ ಪದವಿ ದೊರಕಿಸಿ ಕೊಡುತ್ತದೆ.

ಜಯಶ್ರೀ ರಾಜನ್ ಸಹೋದರಿ, ಮುಕುಂದ್ ರಾಜನ್ ಹಾಗು ಶ್ರೀನಿವಾಸ್ ರಾಜನ್ ಸಹೋದರರು. ರಘುರಾಮ ರಾಜನ್ ಬಾಲ್ಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆತ ಓದಿನಲ್ಲಿ ಸದಾ ಮುಂದು.

 ಕೆಲಸ – ಬದುಕು

ರಘುರಾಮ ರಾಜನ್ ವ್ಯಕ್ತಿತ್ವವೇ ಹಾಗೆ. ಸರಿ ಅನ್ನಿಸದ್ದು ಸರಿ, ತಪ್ಪೆನ್ನಿಸಿದ್ದು ತಪ್ಪು ಎಂದು ಮುಲಾಜಿಲ್ಲದೆ ಹೇಳುವುದು. ತನ್ನ ವೃತ್ತಿಯ ಉತ್ತುಂಗದಲ್ಲಿ ಅಮೆರಿಕದಲ್ಲಿ ವಾಸ. ಕೈತುಂಬಾ ಹಣ, ಬಯಸಿದ್ದೆಲ್ಲಾ ಕಾಲ ಬುಡದಲ್ಲಿ ಇರುವಾಗ, ಅಮೆರಿಕದ ವಿತ್ತ ವ್ಯವಸ್ಥೆ ಸರಿ ಇಲ್ಲ, ಹಣಕಾಸು ನಿರ್ವಹಿಸುತ್ತಿರುವ ರೀತಿ ತರವಲ್ಲ ಎಂದು ಹೇಳಿದ ಕೆಲವೇ ಕೆಲವು ಮಂದಿಯಲ್ಲಿ ರಾಜನ್ ಪ್ರಮುಖರು. ವ್ಯವಸ್ಥೆಯ ಭಾಗವಾಗಿದ್ದು ವ್ಯವಸ್ಥೆಯ ಖಂಡಿಸುವುದು, ಅದನ್ನು ಸರಿ ಪಡಿಸಲು ಏನು ಮಾಡಬೇಕು, ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ದೀರ್ಘ ಲೇಖನಗಳ ಬರೆಯುವುದು ಸಾಮಾನ್ಯ ಮಾತಲ್ಲ. ಎಲ್ಲಾ ಒಳ್ಳೆ ಕೆಲಸ ಮಾಡುವರಿಗೆ ವಿಘ್ನ ತಪ್ಪಿದ್ದಲ್ಲ,  ರಘುರಾಮ ರಾಜನ್ ಇದರಿಂದ ಹೊರತಲ್ಲ. ಅದೆಲ್ಲವ ಮೆಟ್ಟಿ ತಮ್ಮ ನಿಲುವಿಗೆ ಬದ್ಧರಾಗಿ ನಿಂತದ್ದು ರಘುರಾಮ ರಾಜನ್ ವೃತ್ತಿ ಜೀವನದ ಮಹಾನ್ ಸಾಧನೆ. ನಿಧಾನವಾಗಿ ಅಮೆರಿಕದ ವಿತ್ತ ವಲಯಕ್ಕೆ ತಮ್ಮ ತಪ್ಪಿನ ಅರಿವಾಯಿತು.  ೨೦೦೮ ರಲ್ಲಿ ಅಮೆರಿಕ ದಿವಾಳಿಯಾಗಲಿದೆ ಎಂದು ನಾಲ್ಕಾರು ವರ್ಷ ಮೊದಲೇ ವಿಶ್ವಕ್ಕೆ ಸಾರಿದ್ದ ರಘುರಾಮ ರಾಜನ್ ವಿಶ್ವದ ಮನೆ ಮಾತಾದರು. ತಮ್ಮ ತರ್ಕ ಬದ್ಧ ವಿಶ್ಲೇಷಣ ಬುದ್ಧಿಯಿಂದ ಸೂಪರ್ ಪವರ್ ಅಮೆರಿಕ ಕೂಡ ತಮ್ಮ ಒಪ್ಪಿ ಹೊಗಳುವುದಕ್ಕೆ ವಿವಶರಾಗಿಸಿದರು.

ಹುಟ್ಟು ಗುಣ ಸುಟ್ಟರೂ ಹೋಗೋಲ್ಲ ಎನ್ನುತ್ತೆ ಒಂದು ಗಾದೆ.  ರಘುರಾಮ ರಾಜನ್ ಆ ತರಹದ ವ್ಯಕ್ತಿ.  ಸೋನಿಯಾ – ಮನಮೋಹನ್ ಇರಬಹುದು , ಮೋದಿ – ಜೇಟ್ಲಿ ಇರಬಹುದು; ಮತ್ತ್ಯಾವುದೇ ಲಾಭಿ ಇರಬಹುದು… ಇಲ್ಲ ಇದಾವುದಕ್ಕೂ ಸೊಪ್ಪು ಹಾಕುವರಲ್ಲ. ಮಾರ್ಕೆಟ್ ಏನು ಬಯಸುತ್ತೇ ಅದಕ್ಕೆ ತಕ್ಕಂತೆ ಪಾಲಿಸಿಗಳ ಬದಲಾವಣೆ ಹೊರತು ಯಾವುದೊ ಹಿತಾಸಕ್ತಿಯ ಉದ್ಧಾರಕ್ಕಲ್ಲ.

ಪಿಎಚ್ಡಿ ಪದವಿ ಮುಗಿಸಿದ ನಂತರ ಚಿಕಾಗೊ ಯುನಿವರ್ಸಿಟಿ ಯಲ್ಲಿ ಅಸ್ಸಿಸ್ಟಂಟ್ ಪ್ರೊಫೆಸರ್ ಆಗಿ ವೃತ್ತಿ ಜೀವನ ಶುರು. ನಂತರ 1997 ರಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ಸ್ಟಾಕ್ಹೋಂ ಯುನಿವರ್ಸಿಟಿ ಯಲ್ಲಿ ಹುದ್ದೆ. 2003 ರಲ್ಲಿ IMF ( ಇಂಟರ್ನ್ಯಾಷನಲ್ ಮೊನಿಟರಿ ಫಂಡ್ ) ಚೀಫ್ ಎಕನಾಮಿಸ್ಟ್ ಆಗಿ ನೇಮಕ. 2006ರ ಡಿಸೆಂಬರ್ ವರೆಗೆ ಆ ಹುದ್ದೆಯಲ್ಲಿ ಮುಂದುವರಿಕೆ. 2005ರಲ್ಲಿ ಅತ್ಯಂತ ವಿವಾದಾತ್ಮಕ  ಲೇಖನ Has Financial Development Made the World Riskier? ಬರೆಯುತ್ತಾರೆ. ತದನಂತರ ಕೆಲವು ಸಮಯದವರೆಗೆ ಮತ್ತೆ ಶಿಕ್ಷಕ ವೃತ್ತಿ.  2008ರಲ್ಲಿ ಭಾರತ ಸರಕಾರದ ಫೈನಾನ್ಸಿಯಲ್ ಸೆಕ್ಟರ್ ರಿಫಾರ್ಮ್ಸ್ ಕಮಿಟಿಯ ಅಧ್ಯಕ್ಷ. ನಂತರ ಮನಮೋಹನ ಸಿಂಗರಿಗೆ ಆರ್ಥಿಕ ಸಲಹೆಗಾರ. 2013ರ ಸೆಪ್ಟೆಂಬರ್ ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಹುದ್ದೆ. ಹಾಗೆ ನೋಡಿದರೆ ರಾಜನ್ ಸವೆಸಿದ ಹಾದಿ ಸುಗಮವೇನಲ್ಲ. ತಮ್ಮ ನಿಲುವಿಗೆ ಬದ್ಧರಾಗಿ,  ಗಾಳಿ ಬಂದಾಗ ತೂರಿಕೊಳ್ಳದ ಇವರ ಗುಣ ಇಂದು ಅವರನ್ನು ಈ ಮಟ್ಟಕ್ಕೆ ಮುಟ್ಟಿಸಿದೆ.

ಇಂಥ ಸಾಮರ್ಥ್ಯದ ಅರಿವಿರುವುದರಿಂದಲೇ ಪಕ್ಷದೊಳಗಿನವರ ಅಪಸ್ವರದ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ, ರಾಜನ್ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಅಲ್ಲದೇ, ಆರ್ಥಿಕ ನೀತಿ ಕುರಿತು ಆಗಾಗ ಭಿನ್ನ ಅಭಿಪ್ರಾಯಗಳು ಮೈತಳೆಯುತ್ತಿದ್ದರೂ ಉಭಯರಿಗೂ ಪರಸ್ಪರ ಗೌರವವಿದೆ. ‘ಪ್ರಧಾನಿ ಮೋದಿ ನಮ್ಮೆಲ್ಲರಿಗಿಂತ ಮುಂದಿದ್ದಾರೆ. ಅವರ ವಿದೇಶ ಪ್ರವಾಸಗಳಲ್ಲಾದ ಕಾರ್ಯವನ್ನು ಅಧಿಕಾರಿ ವರ್ಗ ಫಾಲೊ ಅಪ್ ಮಾಡಿದ್ದೇ ಹೌದಾದರೆ ಅದ್ಭುತ ಫಲ ಸಿಗುತ್ತದೆ’ ಅಂತ ರಾಜನ್ ಹೇಳಿದ್ದರು. ಮೋದಿಯವರು ರಾಜನ್ ಬಗ್ಗೆ ಮಾತನಾಡುತ್ತ, ‘ರಘುರಾಮ್ ರಾಜನ್ ಕೇವಲ ಎಕಾನಮಿಸ್ಟ್ ಮಾತ್ರವೇ ಅಲ್ಲ. ಅವರೊಳಗೊಬ್ಬ ಅಧ್ಯಾಪಕನಿದ್ದಾನೆ. ಹತ್ತೆಂಟು ಕಡತಗಳನ್ನು ಹರವಿಟ್ಟು ವಿದ್ಯಾರ್ಥಿಗೆ ಪಾಠ ಅರ್ಥ ಮಾಡಿಸುವಂತೆ ನನಗೆ ಮನಗಾಣಿಸುವ ಕುಶಲತೆ ಅವರಲ್ಲಿದೆ’ ಎಂದಿದ್ದರು.

ಈಗ ನೀವೇ ತೂಗಿ ಹೇಳಿ. ಈ ರಾಜನ್, ಮೋದಿ ವಿರೋಧಿಯೇನು?

(ಲೆಕ್ಕ ಪರಿಶೋಧಕರಾಗಿ ಹಲವು ದೇಶಗಳನ್ನು ಸುತ್ತಿರುವ, ಹಣಕಾಸು ಜಗತ್ತನ್ನು ಹತ್ತಿರದಿಂದ ನೋಡಿರುವ ಅನುಭವ ಲೇಖಕರದ್ದು. 15 ವರ್ಷಗಳ ಕಾಲ ಸ್ಪೇನ್ ನಿವಾಸಿಯಾಗಿದ್ದವರು ಈಗ ಬೆಂಗಳೂರಿನಲ್ಲಿ ಪೆಟ್ರಾಬೈಟ್ಸ್ ಎಂಬ ತೈಲಕ್ಕೆ ಸಂಬಂಧಿಸಿದ ಡಾಟಾ ಅನಾಲಿಸಿಸ್ ನವೋದ್ದಿಮೆಯ, ವಹಿವಾಟು ವೃದ್ಧಿಯ (ಬಿಸಿನೆಸ್ ಡಿವಲಪ್ಮೆಂಟ್) ಹೊಣೆ ನಿರ್ವಹಿಸುತ್ತಿದ್ದಾರೆ.)

Leave a Reply