ಆನೆಯಲ್ಲಿ ಹೋಗಿದ್ದ ಮಾನವನ್ನು ಅಡಿಕೆಯಲ್ಲಿ ತಂದ ಭಾರತ, ಆಸಿಸ್ ವಿರುದ್ಧ ಟ್ವೆಂಟಿ-20 ಕ್ಲೀನ್ ಸ್ವೀಪ್

ಡಿಜಿಟಲ್ ಕನ್ನಡ ಟೀಮ್

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅಂತ ಗಾದೆ ಮಾತಿದೆ. ಆದರೆ ನಮ್ಮ ಭಾರತ ಕ್ರಿಕೆಟ್ ತಂಡ ಆನೆಯಲ್ಲಿ ಹೋಗಿದ್ದ ಮಾನವನ್ನ ಅಡಿಕೆಯಲ್ಲಿ ತಂದಿದೆ.

ಆಸ್ಟ್ರೇಲಿಯ ವಿರುದ್ದ ಏಕದಿನ ಸರಣಿಯಲ್ಲಿ ಕಳೆದು ಹೋಗಿದ್ದ ಮಾನವನ್ನ ಇದೀಗ ಟ್ವೆಂಟಿ-20 ಕ್ರಿಕೆಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ತಂದುಕೊಟ್ಟಿದೆ. ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಕೊನೇ ಎಸೆತದಲ್ಲಿ ರೋಚಕ ಗೆಲವು ಸಾಧನೆ ಐಸಿಸಿ ಟಿ20 ರಾಂಕ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಕಾಂಗರೂ ನೆಲದಲ್ಲಿ ಅತಿ ದೊಡ್ಡ 198 ರನ್ ಮೊತ್ತ ಬೆನ್ನತ್ತಿದ ಧೋನಿ ಪಡೆ, ಕಡೇ ಎಸೆತದಲ್ಲಿ ವಿಜಯ ದಕ್ಕಿಸಿಕೊಂಡಿದೆ. ಈ ಗೆಲವು ಭಾರತ ತಂಡ ಮುಂದೆ ಆಡಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿ, ಐಸಿಸಿ ವಿಶ್ವ ಟೂರ್ನಿ ಚಾಂಪಿಯನ್ ಷಿಪ್ ಹಾಗೂ ಬಾಂಗ್ಲಾದಲ್ಲಿ ನಡೆಯುವ ಏಷ್ಯಾಕಪ್ ಸರಣಿಗೆ ಭಾರೀ ವಿಶ್ವಾಸ ತಂದಿದೆ.

ಭಾನುವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಗಳ ಅಂತರದಲ್ಲಿ ಆತಿಥೇಯರನ್ನು ಬಗ್ಗು ಬಡಿಯಿತು. ಆ ಮೂಲಕ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್ ಗಳಲ್ಲಿ 5 ವಿಕೆಟ್ ಗೆ 197 ರನ್ ದಾಖಲಿಸಿತು. ಈ ಮೊತ್ತವನ್ನು ಹಿಂಬಾಲಿಸಿದ ಭಾರತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿ ಜಯ ಸಾಧಿಸಿತು.

ಆಸ್ಟ್ರೇಲಿಯಾ ಪರ ಶೇನ್ ವಾಟ್ಸನ್ ಅಜೇಯ 124 ರನ್ ದಾಖಲಿಸಿದರೂ ಶತಕದ ಆಟ ವ್ಯರ್ಥವಾಯಿತು.

ಭಾರತ ತಂಡದ ಪರ ರೊಹಿತ್ 52, ಕೊಹ್ಲಿ 50, ರೈನಾ ಅಜೇಯ 49 ರನ್ ದಾಖಲಿಸಿದರು. ಶೇನ್ ವ್ಯಾಟ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಪಂದ್ಯದ ಪ್ರಮುಖ ಅಂಕಿ ಅಂಶಗಳು

ಮೊದಲ ಬಾರಿಗೆ 140 ವರ್ಷಗಳ ಇತಿಹಾಸದಲ್ಲಿ ಆಸ್ಟ್ರೇಲಿಯಾ ತವರಿನಲ್ಲಿ ಕ್ಲೀನ್ ಸ್ವೀಪ್ ಸೋಲನುಭವಿಸಿದೆ.

 ಅಂತಾರಾಷ್ಟ್ರೀಯ ಕ್ರಿಕೆಟ್ ಮೂರೂ ಮಾದರಿಯಲ್ಲೂ ಶತಕ ದಾಖಲಿಸಿದ ಮೊದಲ ಆಸ್ಟ್ರೇಲಿಯಾ ಆಟಗಾರನಾದ ಶೇನ್ ವಾಟ್ಸನ್, ವಿಶ್ವದ 10ನೇ ಆಟಗಾರ.

 ಟಿ20 ಕ್ರಿಕೆಟ್ ನಲ್ಲಿ 1000 ರನ್ ಗಡಿ ಪೂರೈಸಿದ 3ನೇ ಭಾರತೀಯ ಆಟಗಾರನಾದ ರೋಹಿತ್ ಶರ್ಮಾ.

Leave a Reply