ಏರ್ಲಿಫ್ಟ್: ಅಕ್ಷಯರನ್ನು ಹೊಗಳ್ತಾ ನಾವು ಮರೆಯಬಾರದ ರಾಜಾಕೃಷ್ಣ ಮೆನನ್ ಎಂಬ ಪ್ರತಿಭೆ!

ಸೌಮ್ಯ ಸಂದೇಶ್

ಹಿಂದಿ ಚಿತ್ರ ಏರ್ಲಿಫ್ಟ್ ಪ್ರೇಕ್ಷಕರ ಮನಗೆಲ್ಲುವುದಕ್ಕೆ ಯಶಸ್ವಿಯಾಗಿದೆ. ಅಂದಿನ ಸರ್ಕಾರಕ್ಕೆ ಸಲ್ಲಬೇಕಿದ್ದ ಶ್ರೇಯಸ್ಸು ನೀಡುವಲ್ಲಿ ಈ ಚಿತ್ರ ಚೌಕಾಶಿ ಮಾಡಿದೆ ಎಂಬ ಅಪಸ್ವರಗಳ ಹೊರತಾಗಿ, ನಿಜಘಟನೆಗಳನ್ನು ಆಧರಿಸಿದ ಇಂಥ ಕತೆಗಳು ತೆರೆಯ ಮೇಲೆ ಹೆಚ್ಚು ಹೆಚ್ಚು ಬರಲಿ ಎಂಬ ಅಭಿಪ್ರಾಯ ಗಟ್ಟಿಯಾಗಿದೆ.

ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪಾತ್ರ ನಿರ್ವಹಣೆಯನ್ನು ಹೊಗಳುತ್ತಿರುವವರ ಸಂಖ್ಯೆ ಹೆಚ್ಚು. ಅದು ಸೂಕ್ತವೂ ಹೌದು. ಆದರೆ ಇದನ್ನು ಕೇವಲ ‘ಅಕ್ಷಯ್ ಕುಮಾರ್ ಮೂವಿ’ ಅಂತನಿಸಿಬಿಟ್ಟರೆ, ಈ ಒಂದಿಡೀ ಸೃಜನಾತ್ಮಕ ಪ್ರಕ್ರಿಯೆಗೆ ಕಾವುಕೊಟ್ಟು, ಹೊರತಂದ ರಾಜಾಕೃಷ್ಣ ಮೆನನ್ ಎಂಬ ಪ್ರತಿಭಾವಂತ ನಿರ್ದೇಶಕಗೆ ಅವಮಾನಿಸಿದಂತೆ. ಏರ್ಲಿಫ್ಟ್ ನಿರ್ದೇಶಕ ರಾಜಾಕೃಷ್ಣ ಮೆನನ್ ಬಗ್ಗೆ ನಾವು ತಿಳಿಯಬೇಕಿರುವ ಸಂಗತಿಗಳು ಹಲವಿವೆ.

  • ಕೇರಳದ ತ್ರಿಶೂರಿನಲ್ಲಿ ಜನಿಸಿದ ಮೆನನ್, ಬೆಂಗಳೂರು ಹುಡುಗನೇ ಅಂತ ನಾವು ಹೆಮ್ಮೆಪಟ್ಟುಕೊಳ್ಳಬಹುದು. ಏಕೆಂದರೆ ಬೆಂಗಳೂರಿನ ಕ್ರೈಸ್ತ ಕಾಲೇಜಿನಲ್ಲಿ ರಸಾಯನಶಾಸ್ತ್ರ ಪದವೀಧರ ಈ ಮೆನನ್.
  • ಇವತ್ತು ಕಣ್ತುಂಬಿಕೊಳ್ಳುತ್ತಿರುವ ಏರ್ಲಿಫ್ಟ್ ಚಿತ್ರಕ್ಕೆ ಮೆನನ್ ಚಿತ್ರಕತೆಯ ತಯಾರಿ ಶುರು ಮಾಡಿದ್ದು 2005ರಲ್ಲೇ! ಅಷ್ಟಾಗಿ ಮಾಹಿತಿಗಳೇ ಇಲ್ಲದ 1990ರ ಕುವೈತ್ ಪಲ್ಲಟದಲ್ಲಿ ಭಾರತೀಯರ ಗೋಳಿನ ಅಧ್ಯಾಯವನ್ನು ತಾವು ತಿಳಿಯುವುದಕ್ಕೆ ಅನುಕೂಲವಾಗಿದ್ದು ಕೇರಳ ಮೂಲದವನಾಗಿದ್ದರಿಂದ ಎಂದಿದ್ದಾರೆ ಮೆನನ್. ಕೇರಳದ ಬಹಳಷ್ಟು ಮಂದಿ ಕುವೈತ್ ಸಂಕಷ್ಟದಲ್ಲಿ ಸಿಲುಕಿಕೊಂಡು, ಏರ್ಲಿಫ್ಟ್ ನಿಂದಾಗಿ ಭಾರತಕ್ಕೆ ಮರಳಿದವರು. ಆ ಸಂದರ್ಭದಲ್ಲಿ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದ ಮೆನನ್ ನೆಂಟರೊಬ್ಬರಿಂದ ಹಲವು ಮಾಹಿತಿಗಳು ದೊರೆತವಂತೆ. ಇದನ್ನೇ ಆಧಾರವಾಗಿಟ್ಟುಕೊಂಡು ಹಲವು ಸಂತ್ರಸ್ತರನ್ನು ಭೇಟಿಯಾಗಿ, ಮಾತನಾಡಿಸಿ ರಂಜಿತ್ ಕಟ್ಯಾಲ್ ಎಂಬ ಉದ್ಯಮಿ ಪಾತ್ರ ಕೆತ್ತಿದರು ಮೆನನ್. ಚಿತ್ರ ನೈಜ ಘಟನೆಗಳನ್ನು ಆಧರಿಸಿದ್ದರೂ ಈ ಪಾತ್ರ ಕಾಲ್ಪನಿಕ ಎಂದು ಮೊದಲೇ ಸ್ಪಷ್ಟಪಡಿಸಿದ್ದಾರೆ ಮೆನನ್.
  • 44ರ ಹರೆಯದ ಮೆನನ್ ಮೊದಲು ಜಾಹೀರಾತು ರಂಗದಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದರು. 1993ರಲ್ಲಿ ವೃತ್ತಿಯ ಭಾಗವಾಗಿಯೇ ಮುಂಬೈಗೆ ಹೋಗಿ ನೆಲೆಸಿದಾಗ ಚಿತ್ರರಂಗದ ಸಂಪರ್ಕ ಸಿಕ್ಕಿತು. 2003ರಲ್ಲಿ ‘ಬಸ್ ಯೂಂ ಹೀ’ ಎಂಬ ಚಿತ್ರ ನಿರ್ದೇಶಿಸಿದರು. ಮೊದಲು ಸ್ವಾಗತಿಸಿದ್ದೇ ದಯನೀಯ ಸೋಲು! 2009ರಲ್ಲಿ ‘ಬಾರಹ ಆಣಾ’ ಅಂತ ಮತ್ತೊಂದು ಕಾಮಿಡಿ ಚಿತ್ರ ಮಾಡಿದರು. ಬೃಹತ್ ಅಲ್ಲದಿದ್ದರೂ ಸ್ವಲ್ಪಮಟ್ಟದ ಸಾಫಲ್ಯ ಇಲ್ಲಿ ಸಿಕ್ಕಿತು.
  • 1990ರಲ್ಲಿ ಕುವೈತ್ ಮೇಲೆ ಇರಾಕ್ ದಾಳಿಯ ಚಿತ್ರಣ ನೀಡುವ ಈ ಸಿನಿಮಾವನ್ನು 50 ದಿನಗಳ ಅವಧಿಯಲ್ಲಿ, ಕುವೈತ್ ಚಹರೆಯನ್ನೇ ಹೋಲುವ ದುಬೈ ಹೊರವಲಯದ ನಗರದಲ್ಲಿ ಚಿತ್ರಿಸಲಾಗಿದೆ. ಆ ಕಾಲದ ಟೈಮ್ ಲೈನ್ ಗೆ ಸರಿಹೋಗುವಂತೆ ಹೇಗೆ ಚಿತ್ರೀಕರಣ ನಡೆಸಬೇಕು ಎಂದು ಯೋಜನೆ ರೂಪಿಸಿಕೊಳ್ಳುವುದಕ್ಕೇ 8 ತಿಂಗಳು ಬೇಕಾಯಿತೆಂದಿದ್ದಾರೆ ಮೆನನ್.
  • ದೇಶಪ್ರೇಮದ ಇಂಥ ಕತೆಗಳನ್ನುಹೇಳಬೇಕಿರುವ ಅವಶ್ಯವಿದೆ ಅಂತಾರೆ ಮೆನನ್. ‘ನಾನು ನಿಂಗೆ ಮೊದ್ಲೆ ಹೇಳಿರಲಿಲ್ವಾ… ಇಲ್ಲೆಲ್ಲ ಏನೂ ಚೇಂಜಾಗಲ್ಲ ಎಂದು ಹೇಳುವ ಸಿನಿಕತೆಯೇ ನಮ್ಮನ್ನು ಆವರಿಸಿಕೊಳ್ತಿದೆ. ಅಷ್ಟು ಸಿನಿಕರಾಗದೇ ನಮ್ಮ ದೇಶದ ಯಶಸ್ಸಿನ ಕತೆಗಳನ್ನು ಸಂಭ್ರಮಿಸಬೇಕಿದೆ. ಧಾರ್ಮಿಕ ಅಸಹಿಷ್ಣುತೆ ಇತ್ಯಾದಿಗಳೆಲ್ಲ ಮೇಲ್ಮಟ್ಟದಲ್ಲಿ ಬುದ್ಧಿಜೀವಿಗಳು ಮಾಡಿಕೊಂಡಿರೋ ಚರ್ಚೆ. ಅಸ್ತಿತ್ವದ ಪ್ರಶ್ನೆ ಬಂದಾಗ ಅಲ್ಲಿ ಜಾತಿ- ಧರ್ಮಗಳೆಲ್ಲ ಇರೋದಿಲ್ಲ ಅಂತಲೇ ಚಿತ್ರದ ಮೂಲಕ ಹೇಳುತ್ತಿದ್ದೇವೆ’ ಅನ್ನೋದು ಸಂದರ್ಶನವೊಂದರಲ್ಲಿ ಮೆನನ್ ಹೇಳಿದ ಮಾತು.

ರಾಜಾ ಕೃಷ್ಣ ಮೆನನ್ ಅವರಂಥ ಅಧ್ಯಯನಶೀಲ ನಿರ್ದೇಶಕರನ್ನು ಪ್ರಶಂಸಿಸುವ ಗುಣ ಬೆಳೆಸಿಕೊಂಡಾಗ ಮಾತ್ರವೇ ಇಂಥ ಸೃಜನಶೀಲ ಪ್ರಯತ್ನಗಳನ್ನು ಹೆಚ್ಚು ಕಾಣುವುದಕ್ಕೆ ಸಾಧ್ಯವಾಗುತ್ತದೆ. ಏರ್ಲಿಫ್ಟ್ ನಂಥ ಚಿತ್ರವೊಂದನ್ನು ಕಟ್ಟಬೇಕಿದ್ದರೆ ಅಲ್ಲಿ ನಿರ್ದೇಶಕನ ಮಾನಸಿಕ ಶ್ರಮ ಅಗಾಧವಾಗಿರುತ್ತದೆ. ಅವನ್ನೆಲ್ಲ ಗಮನಿಸಿ ಗೌರವಿಸುವ ಜಾಯಮಾನ ಬೆಳೆದರಷ್ಟೇ ಹೊಸ ಅಚ್ಚರಿಗಳು ನಮ್ಮ ಪಾಲಿಗೆ ಸಿಗುತ್ತವೆ.

Leave a Reply