ಸುದ್ದಿಸಂತೆ: ಬೆಂಗ್ಳೂರಲ್ಲಿ GIM ಜುಮ್, ದಿಲ್ಲಿ ವಿದ್ಯಾರ್ಥಿಗಳ ಮೇಲೆ ಗೂಂಡಾಯಿಸಮ್, 11 ಮಂದಿ ಸಮುದ್ರಪಾಲು

 

ಡಿಜಿಟಲ್ ಕನ್ನಡ ಟೀಮ್

3 ಲಕ್ಷ ಕೋಟಿ ರುಪಾಯಿ ಬಂಡವಾಳ ಆಕರ್ಷಣೆ ಗುರಿಯ ಜಿಮ್ ಗೆ ಬೆಂಗಳೂರು ಸಜ್ಜು

ಎರಡೂವರೆ ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಮೂರು ಲಕ್ಷ ಕೋಟಿ ರುಪಾಯಿ ಬಂಡವಾಳ ಆಕರ್ಷಣೆ ಗುರಿ ಹೊಂದಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ (ಜಿಮ್) ಬೆಂಗಳೂರಿನಲ್ಲಿ ಬುಧವಾರದಿಂದ ಚಾಲನೆ ಸಿಗಲಿದೆ.

ವಿಶ್ವದ ನಾನಾ ಮೂಲೆಗಳಿಂದ 3700 ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಸಾವಿರಕ್ಕೂ ಹೆಚ್ಚು ಪ್ರದರ್ಶನಕಾರರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಉದ್ದೇಶಿತ ಮೂರು ಲಕ್ಷ ಕೋಟಿ ರುಪಾಯಿ ಬಂಡವಾಳದ ಪೈಕಿ 1.30 ಲಕ್ಷ ಕೋಟಿ ಹೂಡಲು ಉದ್ದಿಮೆದಾರರು ಈಗಾಗಲೇ ರಾಜ್ಯ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ.

ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದ ಬೇರೆ-ಬೇರೆ ಭಾಗಗಳಲ್ಲಿ ಉದ್ದಿಮೆಗಳು ಆರಂಭವಾಗಲಿವೆ. ಇದಕ್ಕಾಗಿ 26,500 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು, ಭೂಬ್ಯಾಂಕ್ ನಲ್ಲಿ ಇಡಲಾಗಿದೆ. ಉದ್ದಿಮೆಗೆ ಭೂಮಿ ನೀಡುವ ರೈತರ ಮಕ್ಕಳಿಗೆ ಸಂಬಂಧಪಟ್ಟ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಲಾಗುವುದು. ಸರೋಜಿನಿ ಮಹಿಷಿ ವರದಿ ಶಿಫಾರಸ್ಸು ಅನ್ವಯ ಕನ್ನಡಿಗರಿಗೆ ಉದ್ಯೋಗ ಆದ್ಯತೆ ಸೂತ್ರ ಪಾಲಿಸಲಾಗುವುದು. ಬೆಂಗಳೂರು ನಗರ ಹಾಗೂ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು. ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸಲು ಹೊರವಲಯದಲ್ಲಿ 11,500 ಕೋಟಿ ರುಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಗುರಿ ಹೊಂದಿದ್ದು, ಇದರ ಹೊಣೆ ವಹಿಸಿಕೊಳ್ಳಲು ಕೇಂದ್ರ ಭೂ ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮಕ್ಷಮದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‍ಜೇಟ್ಲಿ ಸಮಾವೇಶವನ್ನು ಹಾಗೂ ಪ್ರದರ್ಶನ ಕೇಂದ್ರವನ್ನು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸುವರು. ಕೇಂದ್ರದ ಹಲವು ಇಲಾಖೆಗಳ ಸಚಿವರು ಭಾಗವಹಿಸುವರು.

ದೆಹಲಿ ಪ್ರತಿಭಟನಾ ನಿರತರ ಮೇಲೆ ದಾಳಿ ಮಾಡಿದವರು ಯಾರು?

ದೆಹಲಿಯಲ್ಲಿ ಆರೆಸ್ಸೆಸ್ ಕಚೇರಿ ಎದುರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಿಂಸಾತ್ಮಕ ಬಲ ಪ್ರಯೋಗಿಸಿರುವ ದೃಶ್ಯ ಸೋಮವಾರ ಮಾಧ್ಯಮಗಳಲ್ಲಿ ಬಿತ್ತರಗೊಂಡಿದೆ. ಈ ಸಂದರ್ಭದಲ್ಲಿ ಆರೆಸ್ಸೆಸ್- ಬಿಜೆಪಿಗೆ ಸೇರಿದ ವ್ಯಕ್ತಿಗಳ ಖಾಸಗಿ ಸೇನೆಯನ್ನು ಬಳಸಿಕೊಂಡು ಪೊಲೀಸರು ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗಿಸಿದ್ದಾರೆ ಎಂಬುದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲರ ಆರೋಪ.

ರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರಗೊಳ್ಲುತ್ತಿರುವ ದೃಶ್ಯಗಳನ್ನು ನೋಡಿದರೆ ಅಲ್ಲಿ ಪೊಲೀಸರೊಂದಿಗೆ ಬೇರೆ ವ್ಯಕ್ತಿಗಳೂ ಸೇರಿಕೊಂಡು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವುದು ಸ್ಪಷ್ಟವಾಗಿ ತೋರುತ್ತಿದೆ. ಮಹಿಳೆಯರ ಮೇಲೂ ಹಲ್ಲೆ ನಡೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ, ಆಪ್ ಸರ್ಕಾರ ಆರೋಪಿಸುತ್ತಿರುವಂತೆ ಇವರು ಆರೆಸ್ಸೆಸ್- ಬಿಜೆಪಿಗೆ ಸೇರಿದವರಾ ಎಂಬ ಬಗ್ಗೆ ಖಚಿತವಾಗಿ ಹೇಳುವುದಕ್ಕೆ ಸಾಕ್ಷ್ಯಗಳಿಲ್ಲ. ಅಂದಹಾಗೆ, ರೋಹಿತ್ ವೆಮುಲ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸುವಂತೆ ಆರೆಸ್ಸೆಸ್ ಒತ್ತಡ ಹೇರಲಿ ಅಂತ ಆಗ್ರಹಿಸಿ ಈ ಪ್ರತಿಭಟನಾಕಾರರು ದೆಹಲಿಯ ಆರೆಸ್ಸೆಸ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು.

11 ವಿದ್ಯಾರ್ಥಿಗಳು ಸಮುದ್ರ ಪಾಲು

ಪುಣೆಯ ಇನಾಮ್ದಾರ್ ಕಾಲೇಜಿನ 11 ವಿದ್ಯಾರ್ಥಿಗಳು ರಾಯಗಡದ ಮುರುದ್ ಸಮುದ್ರ ತೀರದಲ್ಲಿ ಅಲೆಗಳಿಗೆ ಸಿಕ್ಕು ಮೃತರಾಗಿದ್ದಾರೆ. ದುರ್ಘಟನೆಯಲ್ಲಿ ಎಂಟು ಹುಡುಗಿಯರು, ಮೂವರು ಹುಡುಗರು ಮಡತಪಟ್ಟಿದ್ದಾರೆ. ತಂಡದಲ್ಲಿದ್ದವರ ಪೈಕಿ ಇನ್ನೂ ಕೆಲವರು ನಾಪತ್ತೆಯಾಗಿದ್ದು, ಅವರೂ ನೀರುಪಾಲಾಗಿರಬಹುದಾ ಎಂಬ ಅನುಮಾನಗಳಿವೆ.

Leave a Reply