ರೇವಣ್ಣನವರದು ಒಳ್ಳೇ ಪೀಕಲಾಟ; ಪ್ರಚಾರಕ್ಕೆ ಹೋದ್ರೆ ಜನ ಬೈಯ್ತಾರೆ, ಮನೇಲಿ ಕೂತ್ರೆ ನಾಯಕರು ಬೈಯ್ತಾರೆ!

Congress Council Election Candidates Dr.G.Parameshwar, HM Revanna, Jayamma, and Bosaraj file the Nomination at Vidhana Soudha in Bengaluru on Monday.

ಡಿಜಿಟಲ್ ಕನ್ನಡ ವಿಶೇಷ

ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು, ಅಷ್ಟಕ್ಕೇ ಸುಮ್ಮನಾಗದೆ ಮರ ಕಡಿದು ಮೈಮೇಲೆ ಹಾಕಿಕೊಂಡರು ಎಂಬಂತಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಭೈರತಿ ಸುರೇಶ್ ವಿರುದ್ಧ ಸೆಡ್ಡು ಹೊಡೆದು ಮೂಲೆ ಸೇರಿರುವ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಪರಿಸ್ಥಿತಿ.

ರೇವಣ್ಣ ಮತ್ತು ಭೈರತಿ ಸುರೇಶ್ ಜಗಳದಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಟಿಕೆಟ್ ಮೂರನೇಯವರ ಪಾಲಾಯಿತು. ಟಿಕೆಟ್ ಪಡೆದ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಪರ ಚುನಾವಣೆ ಪ್ರಚಾರಕ್ಕೆ ಹೋದರೆ ರೇವಣ್ಣ ವಿರುದ್ಧ ಸುರೇಶ್ ಬೆಂಬಲಿಗರು ಧಿಕ್ಕಾರ ಕೂಗುತ್ತಾರೆ. ಹಾಗಂತ ಪ್ರಚಾರಕ್ಕೆ ಹೋಗದೇ ಇದ್ದರೆ ಪಕ್ಷದ ಅಭ್ಯರ್ಥಿ ಸೋಲಿಸಲು ಪಿತೂರಿ ನಡೆಸಿದರು ಅನ್ನುವ ಆರೋಪ ಬರುತ್ತದೆ. ಹೋಗುವಂತೆಯೂ ಇಲ್ಲ. ಸುಮ್ಮನೆ ಇರುವಂತೆಯೂ ಇಲ್ಲ. ಒಳ್ಳೆ ಪೀಕಲಾಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ ರೇವಣ್ಣ.

ಟಿಕೆಟ್ ಗೆ ಫೈಟ್ ಮಾಡಿದ್ರಲ್ಲಿ ತಪ್ಪಿಲ್ಲ. ಆದರೆ ಅದನ್ನ ದಕ್ಕಿಸಿಕೊಳ್ಳದೇ ಹೋದದ್ದು ತಪ್ಪು. ಇವರೂ ತಗೊಳ್ಳಲಿಲ್ಲ. ತಗೊಳ್ಳೋಕೆ ಹೊರಟಿದ್ದ ಸುರೇಶ್ ಗೂ ಬಿಡಲಿಲ್ಲ. ಇಷ್ಟೇ ಆಗಿದಿದ್ದರೆ ಪರವಾಗಿರಲಿಲ್ಲ. ಈ ಪ್ರಕ್ರಿಯೆಯಲ್ಲಿ, ತಾವೇ ಪಕ್ಷಕ್ಕೆ ಕರೆತಂದು ಆರಾಧಿಸಿದ್ದ ಸಿದ್ದರಾಮಯ್ಯನವರ ನಾಯಕತ್ವವನ್ನು ಎದಿರು ಹಾಕಿಕೊಂಡುಬಿಟ್ಟರು. ಟಿಕೆಟ್ ಭೈರತಿಗೇ ಗ್ಯಾರಂಟಿ ಅನ್ನಿಸಿದಾಗ ಲೋಕಸಭೆಯಲ್ಲಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಹೋಗಿ ಫಿಟ್ಟಿಂಗ್ ಇಟ್ಟರು. ಅಲ್ಲಿಂದಾಚೆಗೆ ಶುರುವಾದದ್ದು ವಿವಾದ. ಖರ್ಗೆ ಒಂದು ಹೇಳಿಕೆ ಕೊಟ್ಟರು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಮತ್ತೊಂದು ಹೇಳಿಕೆ ಕೊಟ್ಟರು. ಸಿದ್ದರಾಮಯ್ಯ ಅಪ್ತವಲಯವೇ ಸರಿಯಿಲ್ಲ ಅಂತ ಗೊತ್ತಾದಾಗ ಜಾಫರ್ ಷರೀಫರು ಇನ್ನಿತರ ಹಿರಿಯ ನಾಯಕರೊಡನೆ ತಂತ್ರಗಾರಿಕೆ ನಡೆಸಿ ಮೊಮ್ಮಗನಿಗೆ ಟಿಕೆಟ್ ದಕ್ಕಿಸಿಕೊಂಡು ಬಿಟ್ಟರು.

ಈ ಮಧ್ಯೆ ರೇವಣ್ಣ ಕೆಪಿಸಿಸಿ ಸಭೆಯಲ್ಲಿ ಭೈರತಿ, ಸಿದ್ದರಾಮಯ್ಯ ವಿರುದ್ಧ ಮಾತಾಡಿ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದರು. ವರ್ತೂರು, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್ ಎಲ್ಲರನ್ನೂ ಪಕ್ಷಕ್ಕೆ ಕರೆದುಕೊಂಡು ಬಂದವರು ನೀವೇ ಅಲ್ಲವೇ ಎಂಬ ಪ್ರಶ್ನೆ ತಿರುಗುಬಾಣ ಆದಾಗ ನಿರುತ್ತರರಾದರು. ಈಗಲೂ ಅದೇ ಪರಿಸ್ಥಿತಿ. ಅವರ ಬಳಿ ಪ್ರಶ್ನೆಗಳೂ ಇಲ್ಲ, ಉತ್ತರವೂ ಇಲ್ಲ. ಭೈರತಿ ವಿರುದ್ಧ ಅವರು ಹೋರಾಟ ನಡೆಸಿದ್ದು ಕ್ಷೇತ್ರ ಉಳಿಸಿಕೊಳ್ಳಲು. ಟಿಕೆಟ್ ಗೆ ಮೊದಲೇ ಕ್ಷೇತ್ರದ ಮೇಲೆ ಪ್ರಭಾವ ಬೆಳೆಸಿಕೊಂಡಿದ್ದ ಭೈರತಿಗೆ ಒಮ್ಮೆ ಟಿಕೆಟ್ ಸಿಕ್ಕಿದರೆ ಅದು ಯಾವುದೇ ಕಾರಣಕ್ಕೂ ತಮಗೆ ಮತ್ತೆ ವಾಪಸ್ಸು ಬರುವುದಿಲ್ಲ ಎಂಬುದು ಅವರ ಅಳುಕಾಗಿತ್ತು. ಆದರೆ ಈಗ ಪರಿಸ್ಥಿತಿ ಏನೂ ಬದಲಾಗಿಲ್ಲ. ಕ್ಷೇತ್ರದಲ್ಲಿ ಓಡಾಡುತ್ತಿದ್ದಾಗಲೇ ಭೈರತಿ ಅವರನ್ನು ಕರೆದು ರೇವಣ್ಣ ವಿಚಾರಿಸಿದ್ದರೆ ಗಲಾಟೆ ಇಲ್ಲಿವರೆಗೂ ಹೋಗುತ್ತಿರಲಿಲ್ಲ. ಅದೇ ರೀತಿ ಭೈರತಿ ಕೂಡ ಮೊದಲೇ ರೇವಣ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ವಿವಾದವೇ ಉದ್ಭವವಾಗುತ್ತಿರಲಿಲ್ಲ. ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಆಗಿದೆ. ಟಿಕೆಟ್ ಕಳೆದುಕೊಂಡಿದ್ದರೂ ಭೈರತಿ ಕ್ಷೇತ್ರದ ತುಂಬ ಓಡಾಡುತ್ತಿದ್ದಾರೆ. ರೇವಣ್ಣ ಮನೆಯಲ್ಲಿ ಭಜನೆ ಮಾಡುತ್ತಿದ್ದಾರೆ.

Leave a Reply