ಹೆಲ್ಮೆಟ್ ಹಾಕಿದ್ರೆ ಪೆಟ್ಟಿನ ಸಾಧ್ಯತೆ ಕಡಿಮೆ, ಆದ್ರೆ ಅಪಘಾತಕ್ಕೆ ಪ್ರೇರೇಪಿಸೋ ಸಾಹಸಗಳ ಸಾಧ್ಯತೆ ಹೆಚ್ಚು!

ಡಿಜಿಟಲ್ ಕನ್ನಡ ಟೀಮ್

ಹೆಲ್ಮೆಟ್ ಕಡ್ಡಾಯ ಈಗ ನಮ್ಮ ನಡುವೆ ಚರ್ಚೆಯಲ್ಲಿರುವ, ಬದುಕನ್ನು ಪ್ರಭಾವಿಸುತ್ತಿರೋ ಸಂಗತಿ. ಹಿಂದೆ ಕುಳಿತವರಿಗೂ ಹೆಲ್ಮೆಟ್ ಕಡ್ಡಾಯ ಮಾಡಿರೋದು ಕಿರಿಕಿರಿ ಸಂಗತಿ ಅಂತ ಕೆಲವರು, ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ನಿಯಮಗಳನ್ನು ನಾವು ಸ್ವಾಗತಿಸಬೇಕು ಅಂತ ಇನ್ನು ಕೆಲವರು ಹೀಗೆಲ್ಲ ಚರ್ಚೆಗಳು ಸಾಮಾನ್ಯ.

ಇಂಗ್ಲೆಂಡ್ ನ ಯುನಿವರ್ಸಿಟಿ ಆಫ್ ಬಾತ್ ನ ಸಂಶೋಧಕರು, ಬೈಸಿಕಲ್ ಚಾಲನೆಯಲ್ಲಿ ಹೆಲ್ಮೆಟ್ ಬಳಸುವವರನ್ನು ಕೇಂದ್ರವಾಗಿರಿಸಿಕೊಂಡು ಅವರ ವರ್ತನೆಯ ಅಧ್ಯಯನವೊಂದನ್ನು ಮಾಡಿದ್ದಾರೆ. ಇಲ್ಲಿ ಕೌತುಕದ ಫಲಿತಾಂಶವೊಂದು ಬಂದಿದೆ. ಸಂಶೋಧಕರು ಹೇಳುತ್ತಿರೋದೇನಂದ್ರೆ.. ‘ಸಂಚಾರ ಸಂದರ್ಭದಲ್ಲಿ ಹೆಲ್ಮೆಟ್ ಅಥವಾ ಇನ್ಯಾವುದೇ ಜೀವರಕ್ಷಕ ಉಡುಪುಗಳು ಸುರಕ್ಷತೆ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ ಇವುಗಳನ್ನು ಧರಿಸಿದವರಲ್ಲಿ ಸುರಕ್ಷತೆಯ ಬಗ್ಗೆ ಹುಟ್ಟುವ ಅತಿ ವಿಶ್ವಾಸದಿಂದಾಗಿ ಹುಚ್ಚಾಪಟ್ಟೆ ರಿಸ್ಕ್ ತೆಗೆದುಕೊಳ್ಳುವ ವರ್ತನೆ ಜಾಹೀರಾಗಿದೆ. ಅರ್ಥಾತ್, ಹೆಂಗಂದ್ರೂ ಹೆಲ್ಮೆಟ್ ಹಾಕಿದ್ದೇನಲ್ಲ ಬಿಡು ಅಂತ ಅಪಘಾತಕ್ಕೆ ಅನುವು ಮಾಡಿಕೊಡುವ ಇನ್ನಷ್ಟು, ಮತ್ತಷ್ಟು ಸಾಧ್ಯತೆಗಳನ್ನು ಮೈಮೇಲೆ ಎಳೆದುಕೊಳ್ಳುವ ಮನಸ್ಥಿತಿಯನ್ನು ತಮ್ಮ ಪ್ರಯೋಗಗಳಲ್ಲಿ ಜನ ತೋರಿಸಿದ್ದಾರೆ.’

ತಮ್ಮ ಈ ಅಧ್ಯಯನವು ಬೈಸಿಕಲ್ ಸವಾರರು ಹೆಲ್ಮೆಟ್ ಧರಿಸುವ ಅವಶ್ಯವಿಲ್ಲ ಎಂದೇನೂ ಸಾಧಿಸಲು ಹೊರಟಿಲ್ಲ, ಅಲ್ಲದೇ ಯಾವುದೇ ಸುರಕ್ಷಾ ಕ್ರಮ ಅಳವಡಿಸಿಕೊಳ್ಳೋದು ಬೇಡ ಅಂತಲೂ ನಾವು ಸಾರುತ್ತಿಲ್ಲ. ಆದರೆ, ಸುರಕ್ಷಾ ಕ್ರಮವಿದ್ದವರು ಇನ್ನಷ್ಟು ರಿಸ್ಕ್ ಗೆ ಒಡ್ಡಿಕೊಳ್ಳುತ್ತಿದ್ದಾರೆ ಎಂಬುದನ್ನಷ್ಟೇ ನಾವು ದೃಢಪಡಿಸುತ್ತಿದ್ದೇವೆ ಅಂತ ಬಾತ್ ವಿವಿಯ ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

ಬಹುಶಃ, ಬೈಕ್ ಸವಾರಿಯಲ್ಲಿ ಇಬ್ಬರಿಗೂ ಹೆಲ್ಮೆಟ್ ಕಡ್ಡಾಯವೆಂಬ ನಮ್ಮ ಕಾಯ್ದೆಯನ್ನೂ ಇದೇ ಎಚ್ಚರಿಕೆಯಲ್ಲೇ ತೆಗೆದುಕೊಳ್ಳಬೇಕೇನೋ. ಸುರಕ್ಷತೆ ದೃಷ್ಟಿಯಿಂದ ಇಬ್ಬರೂ ಶಿರಸ್ತ್ರಾಣ ಧರಿಸಬೇಕೆಂಬ ನಿಯಮ ಒಳ್ಳೆಯದೇ. ಆದರೆ ಹೆಲ್ಮೆಟ್ ಹಾಕಿದ್ದೀವಿ ಎಂದಮಾತ್ರಕ್ಕೆ ನಮ್ಮ ರಸ್ತೆಗುಂಡಿಗಳನ್ನೆಲ್ಲ ಜಯಿಸುವ ಬಲವೇನೂ ನಮಗೆ ಒಲಿದುಬಿಡೋದಿಲ್ಲ. ಬದುಕಲ್ಲಿ ರಿಸ್ಕ್ ತಗೋಬೇಕು ಸರಿ. ಆದ್ರೆ ಹೆಲ್ಮೆಟ್ ಹಾಕಿದೀವಿ ಎಂಬ ಕಾರಣಕ್ಕೆ ರಸ್ತೆ ಮೇಲೆ ಮಾತ್ರ ರಿಸ್ಕ್ ತಗೋಬೇಡಿ!

1 COMMENT

  1. ಬಹುಶಃ, ಬೈಕ್ ಸವಾರಿಯಲ್ಲಿ ಇಬ್ಬರಿಗೂ ಹೆಲ್ಮೆಟ್ ಕಡ್ಡಾಯವೆಂಬ ನಮ್ಮ ಕಾಯ್ದೆಯನ್ನೂ ಇದೇ ಎಚ್ಚರಿಕೆಯಲ್ಲೇ ತೆಗೆದುಕೊಳ್ಳಬೇಕೇನೋ. ಸುರಕ್ಷತೆ ದೃಷ್ಟಿಯಿಂದ ಇಬ್ಬರೂ ಶಿರಸ್ತ್ರಾಣ ಧರಿಸಬೇಕೆಂಬ ನಿಯಮ ಒಳ್ಳೆಯದೇ. ಆದರೆ ಹೆಲ್ಮೆಟ್ ಹಾಕಿದ್ದೀವಿ ಎಂದಮಾತ್ರಕ್ಕೆ ನಮ್ಮ ರಸ್ತೆಗುಂಡಿಗಳನ್ನೆಲ್ಲ ಜಯಿಸುವ ಬಲವೇನೂ ನಮಗೆ ಒಲಿದುಬಿಡೋದಿಲ್ಲ. ಬದುಕಲ್ಲಿ ರಿಸ್ಕ್ ತಗೋಬೇಕು ಸರಿ. ಆದ್ರೆ ಹೆಲ್ಮೆಟ್ ಹಾಕಿದೀವಿ ಎಂಬ ಕಾರಣಕ್ಕೆ ರಸ್ತೆ ಮೇಲೆ ಮಾತ್ರ ರಿಸ್ಕ್ ತಗೋಬೇಡಿ!…. ಈ ಮೇಲಿನ ಮಾತುಗಳು ಅಕ್ಷರಸ್ಯ ಸತ್ಯವಾಗಿದ್ದು ಏಕೆ ನಮ್ಮ ನಾಯಕರು…ಯೋಚಿಸಲಿಲ್ಲ…..

Leave a Reply